Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅಪೊಸ್ತಲರ ಕೃತ್ಯಗಳು 28 - ಕನ್ನಡ ಸತ್ಯವೇದವು J.V. (BSI)


ಮೆಲೀತೆದ್ವೀಪದಲ್ಲಿ ಪೌಲನಿಗೆ ಸಂಭವಿಸಿದ ಅಪಾಯವೂ ಉಂಟಾದ ಸನ್ಮಾನವೂ

1 ನಾವು ದಡಕ್ಕೆ ಸೇರಿದ ಮೇಲೆ ಆ ದ್ವೀಪದ ಹೆಸರು ಮೆಲೀತೆ ಎಂದು ನಮಗೆ ತಿಳಿದುಬಂತು.

2 ಅನ್ಯಭಾಷೆಯವರಾದ ಆ ದ್ವೀಪದವರು ನಮಗೆ ಮಾಡಿದ ಉಪಕಾರವು ಅಷ್ಟಿಷ್ಟಲ್ಲ. ಮಳೆಯು ಆಗಲೇ ಹೊಯ್ಯುತ್ತಿದ್ದರಿಂದಲೂ ಚಳಿಯಾಗಿರುವದರಿಂದಲೂ ಅವರು ಬೆಂಕಿಯನ್ನು ಹೊತ್ತಿಸಿ ನಮ್ಮೆಲ್ಲರನ್ನು ಸೇರಿಸಿಕೊಂಡರು.

3 ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ ಬೆಂಕಿಯ ಮೇಲೆ ಹಾಕಲು ಆ ಕಾವಿನ ದೆಸೆಯಿಂದ ಒಂದು ಹಾವು ಹೊರಗೆ ಬಂದು ಅವನ ಕೈಯನ್ನು ಬಿಗಿಯಾಗಿ ಹಿಡುಕೊಂಡಿತು.

4 ಆ ಜಂತು ಅವನ ಕೈಯಿಂದ ಜೋತಾಡುವದನ್ನು ದ್ವೀಪದವರು ನೋಡಿ - ಈ ಮನುಷ್ಯನು ಕೊಲೆಪಾತಕನೇ ಸರಿ; ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯವು ಇವನನ್ನು ಬದುಕಗೊಡಿಸುವದಿಲ್ಲವೆಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.

5 ಆದರೆ ಪೌಲನು ಆ ಜಂತುವನ್ನು ಬೆಂಕಿಯೊಳಕ್ಕೆ ಝಾಡಿಸಿಬಿಟ್ಟನು; ಅವನಿಗೆ ಏನೂ ಕೇಡಾಗಲಿಲ್ಲ.

6 ಇವನು ಬಾತುಹೋದಾನು ಇಲ್ಲವೆ ಅಕಸ್ಮಾತ್ತಾಗಿ ಸತ್ತುಬಿದ್ದಾನು ಎಂದು ಅವರು ನೋಡಿಕೊಂಡೇ ಇದ್ದರು. ಬಹಳ ಹೊತ್ತು ನೋಡಿಕೊಂಡಿದ್ದ ಮೇಲೆ ಅವನಿಗೆ ವಿಕಾರವೇನೂ ಆಗಿಲ್ಲವೆಂದು ಕಂಡು ಬೇರೆ ಯೋಚನೆಯುಳ್ಳವರಾಗಿ - ಇವನು ಒಬ್ಬ ದೇವರು ಎಂದು ಹೇಳಿಕೊಂಡರು.

7 ಆ ಸ್ಥಳದ ಸಮೀಪದಲ್ಲಿ ದ್ವೀಪದ ಮುಖ್ಯಸ್ಥನಾದ ಪೊಪ್ಲಿಯನೆಂಬವನಿಗೆ ಕೆಲವು ಭೂವಿು ಇತ್ತು. ಅವನು ನಮ್ಮನ್ನು ಸೇರಿಸಿಕೊಂಡು ಮೂರು ದಿವಸ ಆದರದಿಂದ ಸತ್ಕರಿಸಿದನು.

8 ಅವನ ತಂದೆಯು ಜ್ವರದಿಂದಲೂ ರಕ್ತಭೇದಿಯಿಂದಲೂ ಪೀಡಿತನಾಗಿ ಮಲಗಿದ್ದನು. ಪೌಲನು ಅವನ ಬಳಿಗೆ ಹೋಗಿ ದೇವರ ಪ್ರಾರ್ಥನೆ ಮಾಡಿ ಅವನ ಮೇಲೆ ಕೈಗಳನ್ನಿಟ್ಟು ಅವನನ್ನು ವಾಸಿಮಾಡಿದನು.

9 ಇದಾದ ಮೇಲೆ ಆ ದ್ವೀಪದಲ್ಲಿದ್ದ ವಿುಕ್ಕಾದ ರೋಗಿಗಳು ಅವನ ಬಳಿಗೆ ಬಂದು ಸ್ವಸ್ಥರಾದರು.

10 ಅವರು ನಮ್ಮನ್ನು ಬಹಳವಾಗಿ ಸನ್ಮಾನಿಸಿದ್ದಲ್ಲದೆ ನಾವು ಬಿಟ್ಟು ಹೊರಟಾಗ ನಮಗೆ ಅವಶ್ಯವಾದ ಪದಾರ್ಥಗಳನ್ನು ತಂದು ಹಡಗಿನಲ್ಲಿಟ್ಟರು.


ಪೌಲನು ರೋಮಾಪುರಕ್ಕೆ ಸೇರಿ ಅಲ್ಲಿ ಎರಡು ವರುಷ ಸೆರೆಯವನಾಗಿದ್ದು ಕ್ರಿಸ್ತನ ವಿಷಯವಾಗಿ ಉಪದೇಶಮಾಡುತ್ತಾ ಬಂದದ್ದು.

11 ಮೂರು ತಿಂಗಳಾದ ಮೇಲೆ ಅಲೆಕ್ಸಾಂದ್ರಿಯದಿಂದ ಬಂದು ಆ ದ್ವೀಪದಲ್ಲಿ ಹಿಮಕಾಲವನ್ನು ಕಳೆದಿದ್ದ ಒಂದು ಹಡಗನ್ನು ಹತ್ತಿ ಹೊರಟೆವು. ಆ ಹಡಗಿಗೆ ಅಶ್ವಿನೀದೇವತೆಗಳೆಂಬ ಚಿಹ್ನೆ.

12 ನಾವು ಸುರಕೂಸಿಗೆ ಮುಟ್ಟಿ ಅಲ್ಲಿ ಮೂರು ದಿವಸ ನಿಂತೆವು.

13 ಅಲ್ಲಿಂದ ನಾವು ಸುತ್ತಿಕೊಂಡು ಹೋಗಿ ರೇಗಿಯಕ್ಕೆ ಸೇರಿದೆವು. ಒಂದು ದಿನವಾದ ಮೇಲೆ ತೆಂಕಣಗಾಳಿ ಹುಟ್ಟಿದ್ದರಿಂದ ಎರಡನೆಯ ದಿನದಲ್ಲಿ ಪೊತಿಯೋಲಕ್ಕೆ ಬಂದೆವು.

14 ಅಲ್ಲಿ ಕ್ರೈಸ್ತ ಸಹೋದರರು ಸಿಕ್ಕಿದರು. ಅವರು ನಮ್ಮನ್ನು ತಮ್ಮ ಬಳಿಯಲ್ಲಿ ಏಳು ದಿವಸ ಇರಬೇಕೆಂದು ಬೇಡಿಕೊಂಡರು. ತರುವಾಯ ರೋಮಾಪುರಕ್ಕೆ ಬಂದೆವು.

15 ಅಲ್ಲಿದ್ದ ಸಹೋದರರು ನಮ್ಮ ಸಮಾಚಾರವನ್ನು ಕೇಳಿದಾಗ ನಮ್ಮನ್ನು ಎದುರುಗೊಳ್ಳುವದಕ್ಕಾಗಿ ಕೆಲವರು ಅಪ್ಪಿಯಪೇಟೆಯವರೆಗೂ ಕೆಲವರು ತ್ರಿಛತ್ರವೆಂಬ ಸ್ಥಳದವರೆಗೂ ಬಂದರು. ಪೌಲನು ಅವರನ್ನು ನೋಡಿ ದೇವರ ಸ್ತೋತ್ರವನ್ನು ಮಾಡಿ ಧೈರ್ಯಗೊಂಡನು.

16 ನಾವು ರೋಮಾಪುರಕ್ಕೆ ಬಂದ ಮೇಲೆ ಪೌಲನು ತನ್ನನ್ನು ಕಾಯುತ್ತಿದ್ದ ಸಿಪಾಯಿಯೊಂದಿಗೆ ಪ್ರತ್ಯೇಕವಾಗಿರಬಹುದೆಂಬ ಅಪ್ಪಣೆಯನ್ನು ಹೊಂದಿದನು.

17 ಮೂರು ದಿವಸಗಳಾದ ಮೇಲೆ ಪೌಲನು ಯೆಹೂದ್ಯರಲ್ಲಿ ಪ್ರಮುಖರನ್ನು ತನ್ನ ಬಳಿಗೆ ಕರೆಯಿಸಿದನು. ಅವರು ಕೂಡಿದ ಮೇಲೆ ಅವನು ಅವರಿಗೆ - ಸಹೋದರರೇ, ನಾನು ನಮ್ಮ ಜನರಿಗೂ ನಮ್ಮ ಪಿತೃಗಳ ಆಚಾರಗಳಿಗೂ ವಿರುದ್ಧವಾಗಿ ಏನೂ ಮಾಡದವನಾದರೂ ಯೆರೂಸಲೇವಿುನಿಂದ ರೋಮಾಯರ ಕೈಗೆ ಸೆರೆಯವನಾಗಿ ಒಪ್ಪಿಸಲ್ಪಟ್ಟೆನು.

18 ಅವರು ನನ್ನನ್ನು ವಿಚಾರಣೆಮಾಡಿ ನನ್ನಲ್ಲಿ ಮರಣದಂಡನೆಗೆ ಕಾರಣವೇನೂ ಇಲ್ಲದ್ದರಿಂದ ನನ್ನನ್ನು ಬಿಡಿಸಬೇಕೆಂದಿದ್ದರು.

19 ಅದಕ್ಕೆ ಯೆಹೂದ್ಯರು ಅಡ್ಡಮಾತಾಡಿದ್ದರಿಂದ ನಾನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆಂದು ಹೇಳಬೇಕಾಗಿ ಬಂತು. ನನ್ನ ಸ್ವದೇಶದವರ ಮೇಲೆ ದೋಷಾರೋಪಣೆ ಮಾಡಬೇಕೆಂಬ ಅಭಿಪ್ರಾಯದಿಂದ ಅದನ್ನು ಹೇಳಲಿಲ್ಲ.

20 ಈ ಕಾರಣದಿಂದ ನಾನು ನಿಮ್ಮನ್ನು ಕಂಡು ಮಾತಾಡಬೇಕೆಂದು ಕರೆಯಿಸಿದೆನು. ಇಸ್ರಾಯೇಲ್ ಜನರ ನಿರೀಕ್ಷೆಯ ನಿವಿುತ್ತವಾಗಿ ಈ ಬೇಡಿಯಿಂದ ಕಟ್ಟಲ್ಪಟ್ಟಿದ್ದೇನೆ ಎಂದು ಹೇಳಿದನು.

21 ಅವರು ಅವನಿಗೆ - ನಿನ್ನ ವಿಷಯವಾಗಿ ನಮಗೆ ಯೂದಾಯದಿಂದ ಕಾಗದಗಳು ಬರಲಿಲ್ಲ. ಸಹೋದರರಲ್ಲಿ ಒಬ್ಬರೂ ಬಂದು ನಿನ್ನ ವಿಷಯವಾಗಿ ಕೆಟ್ಟದ್ದನ್ನು ತಿಳಿಸಲೂ ಇಲ್ಲ, ಮಾತಾಡಲೂ ಇಲ್ಲ.

22 ಆದರೆ ನಿನ್ನ ಅಭಿಪ್ರಾಯವನ್ನು ನಿನ್ನಿಂದಲೇ ಕೇಳುವದು ನಮಗೆ ಯುಕ್ತವೆಂದು ತೋರುತ್ತದೆ. ಆ ಮತದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತಾಡುತ್ತಾರೆಂಬದೊಂದೇ ನಮಗೆ ಗೊತ್ತದೆ ಅಂದರು.

23 ಅವರು ಅವನಿಗೆ ಒಂದು ದಿವಸವನ್ನು ಗೊತ್ತುಮಾಡಲು ಬಹುಮಂದಿ ಅವನ ಬಿಡಾರದಲ್ಲಿ ಅವನ ಬಳಿಗೆ ಬಂದರು. ಅವನು ಬೆಳಗಿನಿಂದ ಸಾಯಂಕಾಲದವರೆಗೂ ದೇವರ ರಾಜ್ಯವನ್ನು ಕುರಿತು ಪ್ರಮಾಣವಾಗಿ ಸಾಕ್ಷಿಹೇಳುತ್ತಾ ಮೋಶೆಯ ಧರ್ಮಶಾಸ್ತ್ರವನ್ನೂ ಪ್ರವಾದಿಗಳ ಗ್ರಂಥಗಳನ್ನೂ ಆಧಾರಮಾಡಿಕೊಂಡು ಯೇಸುವಿನ ವಿಷಯದಲ್ಲಿ ಅವರನ್ನು ಒಡಂಬಡಿಸುತ್ತಾ ಇದ್ದನು.

24 ಅವನು ಹೇಳಿದ ಮಾತುಗಳಿಗೆ ಕೆಲವರು ಒಪ್ಪಿಕೊಂಡರು; ಕೆಲವರು ನಂಬದೆ ಹೋದರು.

25 ಅವರಲ್ಲಿ ಐಕಮತ್ಯವಿಲ್ಲದೆ ಇರುವಾಗ ಪೌಲನು ಅವರಿಗೆ - ಪವಿತ್ರಾತ್ಮನು ಪ್ರವಾದಿಯಾದ ಯೆಶಾಯನ ಬಾಯಿಂದ

26 ನಿಮ್ಮ ಪಿತೃಗಳಿಗೆ ವಿಹಿತವಾಗಿ ಹೇಳಿದ್ದೇನಂದರೆ - ನೀನು ಈ ಜನರ ಬಳಿಗೆ ಹೋಗಿ ಅವರಿಗೆ - ನೀವು ಕಿವಿಯಿದ್ದು ಕೇಳಿದರೂ ತಿಳುಕೊಳ್ಳುವದೇ ಇಲ್ಲ; ಕಣ್ಣಿದ್ದು ನೋಡಿದರೂ ಕಾಣುವದೇ ಇಲ್ಲ ಎಂಬದಾಗಿ ಹೇಳು.

27 ಯಾಕಂದರೆ ಈ ಜನರ ಹೃದಯವು ಕೊಬ್ಬಿತು; ಇವರ ಕಿವಿ ಮಂದವಾಯಿತು; ಇವರು ಕಣ್ಣು ಮುಚ್ಚಿಕೊಂಡಿದ್ದಾರೆ; ತಾವು ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ ಹೃದಯದಿಂದ ತಿಳಿದು ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದಬಾರದೆಂದು ಮಾಡಿಕೊಂಡಿದ್ದಾರೆ ಎಂಬದೇ.

28 ಆದಕಾರಣ ದೇವರಿಂದಾದ ಈ ರಕ್ಷಣೆಯು ಅನ್ಯಜನರಿಗೆ ಹೇಳಿಕಳುಹಿಸಲ್ಪಟ್ಟಿದೆ ಎಂದು ನಿಮಗೆ ಚೆನ್ನಾಗಿ ತಿಳಿದಿರಲಿ; ಅವರಾದರೂ ಕೇಳುವರು ಎಂದು ಹೇಳಿದನು.

29 ಅವನು ಈ ಮಾತನ್ನು ಹೇಳಿದ ಮೇಲೆ ಅವರು ಹೊರಟುಹೋದರು.

30 ತರುವಾಯ ಅವನು ತಾನೇ ಮಾಡಿಕೊಂಡ ಬಾಡಿಗೆಯ ಮನೆಯಲ್ಲಿ ಪೂರಾ ಎರಡು ವರುಷ ಇದ್ದು ತನ್ನ ಬಳಿಗೆ ಬರುವವರೆಲ್ಲರನ್ನು ಸೇರಿಸಿಕೊಂಡು

31 ಯಾವ ಅಡ್ಡಿಯೂ ಇಲ್ಲದೆ ತುಂಬಾ ಧೈರ್ಯದಿಂದ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸುತ್ತಾ ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ ಉಪದೇಶಮಾಡುತ್ತಾ ಇದ್ದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು