ಅಪೊಸ್ತಲರ ಕೃತ್ಯಗಳು 27 - ಕನ್ನಡ ಸತ್ಯವೇದವು J.V. (BSI)ಸೌಲನು ಕೈಸರೈಯದಿಂದ ರೋಮಾಪುರಕ್ಕೆ ಪ್ರಯಾಣ ಮಾಡುತ್ತಿರಲು ಹಡಗು ಮೆಲೀತೆದ್ವೀಪದ ದಡದಲ್ಲಿ ಒಡೆದು ನಾಶವಾದದ್ದು 1 ನಾವು ಸಮುದ್ರಮಾರ್ಗವಾಗಿ ಇತಾಲ್ಯದೇಶಕ್ಕೆ ಹೋಗಬೇಕೆಂದು ತೀರ್ಮಾನವಾದ ಮೇಲೆ ಪೌಲನನ್ನೂ ಬೇರೆ ಕೆಲವು ಸೆರೆಯವರನ್ನೂ ಚಕ್ರವರ್ತಿಯ ಪಟಾಲವಿುಗೆ ಸೇರಿದ ಯೂಲ್ಯನೆಂಬ ಒಬ್ಬ ಶತಾಧಿಪತಿಗೆ ಒಪ್ಪಿಸಿದರು. 2 ಆಗ ಅದ್ರವಿುತ್ತಿಯದಿಂದ ಬಂದು ಆಸ್ಯಸೀಮೆಯ ಕರಾವಳಿಯ ಸ್ಥಳಗಳಿಗೆ ಹೋಗುವದಕ್ಕಿದ್ದ ಒಂದು ಹಡಗನ್ನು ಹತ್ತಿ ಸಮುದ್ರಪ್ರಯಾಣವನ್ನು ಪ್ರಾರಂಭಿಸಿದೆವು. ಮಕೆದೋನ್ಯಕ್ಕೆ ಸೇರಿದ ಥೆಸಲೋನಿಕದ ಅರಿಸ್ತಾರ್ಕನು ನಮ್ಮ ಜೊತೆಯಲ್ಲಿದ್ದನು. 3 ಮರುದಿನ ಸೀದೋನಿಗೆ ಮುಟ್ಟಿದೆವು. ಯೂಲ್ಯನು ಪೌಲನಿಗೆ ದಯೆಯನ್ನು ತೋರಿಸುವವನಾಗಿ ಅವನನ್ನು ಸ್ನೇಹಿತರ ಬಳಿಗೆ ಹೋಗಿ ಸತ್ಕಾರ ಹೊಂದುವದಕ್ಕೆ ಬಿಟ್ಟನು. 4 ಅಲ್ಲಿಂದ ಹೊರಟು ಎದುರು ಗಾಳಿ ಬೀಸುತ್ತಿದ್ದದರಿಂದ ಕುಪ್ರದ್ವೀಪದ ಮರೆಯಲ್ಲಿ ಸಾಗಿ 5 ಕಿಲಿಕ್ಯಕ್ಕೂ ಪಂಫೂಲ್ಯಕ್ಕೂ ಎದುರಾಗಿರುವ ಸಮುದ್ರವನ್ನು ದಾಟಿ ಲುಕೀಯ ಸೀಮೆಯಲ್ಲಿರುವ ಮುರಕ್ಕೆ ಬಂದೆವು. 6 ಅಲ್ಲಿ ಅಲೆಕ್ಸಾಂದ್ರಿಯದಿಂದ ಬಂದು ಇತಾಲ್ಯದೇಶಕ್ಕೆ ಹೋಗುತ್ತಿದ್ದ ಒಂದು ಹಡಗನ್ನು ಶತಾಧಿಪತಿಯು ಕಂಡು ನಮ್ಮನ್ನು ಅದರ ಮೇಲೆ ಹತ್ತಿಸಿದನು. 7 ಅನೇಕ ದಿವಸ ನಿಧಾನವಾಗಿ ಸಾಗುತ್ತಾ ಎಷ್ಟೋ ಪ್ರಯಾಸದಿಂದ ಕ್ನೀದಕ್ಕೆ ಎದುರಾಗಿ ಬಂದಾಗ ಗಾಳಿಯು ನಮ್ಮನ್ನು ಅಲ್ಲಿಗೆ ಮುಟ್ಟಗೊಡಿಸದೆ ಇದ್ದದರಿಂದ ಕ್ರೇತದ್ವೀಪದ ಮರೆಯಲ್ಲಿ ಸಾಗಿ ಸಲ್ಮೋನೆಗೆ ಎದುರಾಗಿ ಬಂದು 8 ಪ್ರಯಾಸದಿಂದ ಆ ದ್ವೀಪದ ಕರಾವಳಿಯನ್ನು ಹಿಡಿದು ಹೋಗಿ ಚಂದರೇವುಗಳೆಂಬ ಸ್ಥಳಕ್ಕೆ ಸೇರಿದೆವು. ಅದರ ಹತ್ತರದಲ್ಲಿ ಲಸಾಯವೆಂಬ ಪಟ್ಟಣವು ಇತ್ತು. 9 ಹೀಗೆ ಬಹುಕಾಲ ಕಳೆದುಹೋಯಿತು; ಮಹಾ ಉಪವಾಸದ ದಿವಸವು ಆಗಿಹೋಗಿತ್ತು. ಈ ಸಂದರ್ಭದಲ್ಲಿ ಸಮುದ್ರಪ್ರಯಾಣ ಮಾಡುವದು ಅಪಾಯಕರವಾಗಿದ್ದದರಿಂದ 10 ಪೌಲನು - ಜನರೇ, ಈ ಪ್ರಯಾಣದಿಂದ ಸರಕಿಗೂ ಹಡಗಿಗೂ ಮಾತ್ರವಲ್ಲದೆ ನಮ್ಮ ಪ್ರಾಣಗಳಿಗೂ ಕಷ್ಟವೂ ಬಹು ನಷ್ಟವೂ ಸಂಭವಿಸುವದೆಂದು ನನಗೆ ತೋರುತ್ತದೆ ಎಂದು ಅವರನ್ನು ಎಚ್ಚರಿಸಿದನು. 11 ಆದರೆ ಪೌಲನು ಹೇಳಿದ ಮಾತುಗಳಿಗಿಂತ ನಾವಿಕನೂ ಹಡಗಿನ ಯಜಮಾನನೂ ಹೇಳಿದ ಮಾತಿಗೆ ಶತಾಧಿಪತಿಯು ಹೆಚ್ಚಾಗಿ ಲಕ್ಷ್ಯಕೊಟ್ಟನು. 12 ಆ ರೇವು ಹಿಮಕಾಲವನ್ನು ಕಳೆಯುವದಕ್ಕೆ ಅನುಕೂಲವಲ್ಲದ್ದರಿಂದ ಅಲ್ಲಿಂದ ಹೊರಟು ಸಾಧ್ಯವಾದರೆ ಹೇಗೂ ಫೊಯಿನಿಕ್ಸ ಊರನ್ನು ಸೇರಿ ಅಲ್ಲೇ ಆ ಹಿಮಕಾಲವನ್ನು ಕಳೆಯಬೇಕೆಂದು ಹೆಚ್ಚು ಜನರು ಆಲೋಚನೆ ಹೇಳಿದರು. ಫೊಯಿನಿಕ್ಸವು ಕ್ರೇತದ್ವೀಪದ ಒಂದು ರೇವು; ಈಶಾನ್ಯ ದಿಕ್ಕಿಗೂ ಆಗ್ನೇಯ ದಿಕ್ಕಿಗೂ ಅಭಿಮುಖವಾಗಿದೆ. 13 ತೆಂಕಣ ಗಾಳಿ ಮೆಲ್ಲಗೆ ಬೀಸಲಾಗಿ ತಮ್ಮ ಉದ್ದೇಶವು ಸಾರ್ಥಕವಾಯಿತೆಂದು ಭಾವಿಸಿ ಲಂಗರ ಎತ್ತಿ ಕ್ರೇತದ್ವೀಪವನ್ನು ಅನುಸರಿಸಿ ತೀರದ ಮಗ್ಗುಲಲ್ಲೇ ಹೋಗುತ್ತಿದ್ದರು. 14 ಸ್ವಲ್ಪ ಹೊತ್ತಿನ ಮೇಲೆ ಆ ದ್ವೀಪದ ಮೇಲಣಿಂದ ಈಶಾನ್ಯಪೂರ್ವವಾಯು ಎಂಬ ಹುಚ್ಚುಗಾಳಿಯು ಹೊಡೆಯಿತು. 15 ಆ ಹೊಡೆತಕ್ಕೆ ಹಡಗು ಸಿಕ್ಕಿಕೊಂಡು ಗಾಳಿಗೆದುರಾಗಿ ನಿಲ್ಲುವದಕ್ಕೆ ಆಗದೆಹೋದದರಿಂದ ಗಾಳಿಗೆ ಆಸ್ಪದಕೊಟ್ಟು ನೂಕಿಸಿಕೊಂಡು ಹೋದೆವು. 16 ಕ್ಲೌಡವೆಂಬ ಒಂದು ಸಣ್ಣ ದ್ವೀಪದ ಮರೆಯಲ್ಲಿ ಹಡಗನ್ನು ನಡಿಸಿಕೊಂಡು ಬಂದ ತರುವಾಯ ಹಡಗಿನ ದೋಣಿಯನ್ನು ಎತ್ತಿ ಭದ್ರಮಾಡಿಕೊಳ್ಳುವದು ನಮಗೆ ಪ್ರಯಾಸವಾಯಿತು. 17 ಅದನ್ನು ಮೇಲಕ್ಕೆ ಎತ್ತಿದ ತರುವಾಯ ಹೊರಜಿಗಳನ್ನು ತೆಗೆದುಕೊಂಡು ಹಡಗಿನ ಕೆಳಭಾಗವನ್ನು ಬಿಗಿದರು. ಆಮೇಲೆ ಸುರ್ತಿಸ್ ಎಂಬ ಕಳ್ಳುಸುಬಿನಲ್ಲಿ ಸಿಕ್ಕಿಬಿದ್ದೇವೆಂದು ಭಯಪಟ್ಟು ಹಾಯಿಯನ್ನು ಸಡಿಲುಮಾಡಿ ನೂಕಿಸಿಕೊಂಡು ಹೋದೆವು. 18 ಗಾಳಿಯು ನಮ್ಮನ್ನು ಅತ್ಯಂತವಾಗಿ ಹೊಯಿದಾಡಿಸಿದ್ದರಿಂದ ಅವರು ಮರುದಿನ ಸರಕನ್ನು ಬಿಸಾಡುತ್ತಿದ್ದರು. 19 ಮೂರನೆಯ ದಿನದಲ್ಲಿ ಹಡಗಿನ ಅಡ್ಡಮರವನ್ನು ತಮ್ಮ ಕೈಯಿಂದಲೇ ಹೊರಗೆ ಎತ್ತಿ ಹಾಕಿದರು. 20 ಅನೇಕ ದಿವಸಗಳ ತನಕ ಸೂರ್ಯನಾಗಲಿ ನಕ್ಷತ್ರಗಳಾಗಲಿ ನಮಗೆ ಕಾಣಿಸದೆ ದೊಡ್ಡ ಬಿರುಗಾಳಿ ನಮ್ಮ ಮೇಲೆ ಹೊಡೆದದ್ದರಿಂದ ತಪ್ಪಿಸಿಕೊಂಡೇವೆಂಬ ಎಲ್ಲಾ ನಿರೀಕ್ಷೆಯು ಅಂದಿನಿಂದ ಕಳೆದುಹೋಯಿತು. 21 ಅವರು ಬಹುಕಾಲ ಊಟವಿಲ್ಲದೆ ಇದ್ದ ಮೇಲೆ ಪೌಲನು ಅವರ ಮಧ್ಯದಲ್ಲಿ ನಿಂತುಕೊಂಡು - ಎಲೈ ಜನರೇ, ನೀವು ಕ್ರೇತದಿಂದ ಹೊರಟು ಈ ಕಷ್ಟನಷ್ಟಗಳಿಗೆ ಗುರಿಯಾಗದಂತೆ ನನ್ನ ಮಾತನ್ನು ಕೇಳಬೇಕಾಗಿತ್ತು. 22 ಈಗಲಾದರೂ ನೀವು ಧೈರ್ಯದಿಂದಿರಬೇಕೆಂದು ನಿಮಗೆ ಬುದ್ಧಿಹೇಳುತ್ತೇನೆ; ಹಡಗು ನಷ್ಟವಾಗುವದೇ ಹೊರತು ನಿಮ್ಮಲ್ಲಿ ಒಬ್ಬರಿಗೂ ಪ್ರಾಣನಷ್ಟವಾಗುವದಿಲ್ಲ. 23 ನಾನು ಯಾರವನಾಗಿದ್ದೇನೋ ಯಾರನ್ನು ಸೇವಿಸುತ್ತೇನೋ ಆ ದೇವರಿಂದ ಬಂದ ಒಬ್ಬ ದೂತನು ಕಳೆದ ರಾತ್ರಿಯಲ್ಲಿ ನನ್ನ ಹತ್ತಿರ ನಿಂತು - 24 ಪೌಲನೇ, ಭಯಪಡಬೇಡ, ನೀನು ಚಕ್ರವರ್ತಿಯ ಮುಂದೆ ನಿಲ್ಲಬೇಕು; ಇದಲ್ಲದೆ ನಿನ್ನ ಸಂಗಡ ಈ ಹಡಗಿನಲ್ಲಿ ಪ್ರಯಾಣಮಾಡುವವರೆಲ್ಲರ ಪ್ರಾಣ ದೇವರು ನಿನ್ನ ಮೇಲಣ ದಯೆಯಿಂದ ಉಳಿಸಿಕೊಟ್ಟಿದ್ದಾನೆಂದು ನನ್ನ ಸಂಗಡ ಹೇಳಿದನು. 25 ಆದದರಿಂದ ಜನರೇ ಧೈರ್ಯವಾಗಿರ್ರಿ. ನನಗೆ ಹೇಳಲ್ಪಟ್ಟ ಪ್ರಕಾರವೇ ಆಗುವದೆಂದು ದೇವರನ್ನು ನಂಬುತ್ತೇನೆ. 26 ಆದರೆ ನಾವು ಯಾವದೋ ಒಂದು ದ್ವೀಪದ ದಡವನ್ನು ತಾಕಬೇಕಾಗಿದೆ ಎಂದು ಹೇಳಿದನು. 27 ಹದಿನಾಲ್ಕನೆಯ ರಾತ್ರಿ ಬಂದ ಮೇಲೆ ನಾವು ಆದ್ರಿಯ ಸಮುದ್ರದಲ್ಲಿ ಅತ್ತ ಇತ್ತ ಬಡಿಸಿಕೊಂಡು ಹೋಗುತ್ತಿರುವಾಗ ಸುಮಾರು ಮಧ್ಯರಾತ್ರಿಯಲ್ಲಿ ನಾವಿಕರು 28 ಒಂದು ದೇಶದ ಹತ್ತಿರ ಬಂದೆವೆಂದು ನೆನಸಿ ಅಳತೇ ಗುಂಡನ್ನು ಇಳಿಸಿ ಇಪ್ಪತ್ತು ಮಾರುದ್ದವೆಂದು ಕಂಡರು. ಸ್ವಲ್ಪ ಹೊತ್ತಿನ ಮೇಲೆ ಅವರು ತಿರಿಗಿ ಅಳತೇ ಗುಂಡನ್ನು ಇಳಿಸಿ ನೋಡಲಾಗಿ ಹದಿನೈದು ಮಾರುದ್ದವೆಂದು ಕಂಡರು. 29 ಬಂಡೇಸ್ಥಳವನ್ನು ತಾಕೇವೆಂದು ಭಯಪಟ್ಟು ಹಡಗಿನ ಹಿಂಭಾಗದಿಂದ ನಾಲ್ಕು ಲಂಗರಗಳನ್ನು ಬಿಟ್ಟು ಯಾವಾಗ ಬೆಳಗಾದೀತು ಎಂದು ಹಾರೈಸುತ್ತಿದ್ದರು. 30 ಆದರೆ ನಾವಿಕರು ಮುಂಭಾಗದಲ್ಲಿ ಲಂಗರಗಳನ್ನು ಹಾಕಬೇಕೆಂಬುವ ನೆವದಿಂದ ದೋಣಿಯನ್ನು ಸಮುದ್ರದಲ್ಲಿ ಇಳಿಸಿ ಹಡಗನ್ನು ಬಿಟ್ಟು ತಪ್ಪಿಸಿಕೊಂಡು ಹೋಗುವದಕ್ಕೆ ಪ್ರಯತ್ನಿಸುತ್ತಿರುವಾಗ 31 ಪೌಲನು ಶತಾಧಿಪತಿಗೂ ಸಿಪಾಯಿಗಳಿಗೂ - ಇವರು ಹಡಗಿನಲ್ಲಿ ನಿಲ್ಲದೆ ಹೋದರೆ ನೀವೂ ಉಳುಕೊಳ್ಳುವದಕ್ಕಾಗುವದಿಲ್ಲವೆಂದು ಹೇಳಿದನು. 32 ಆಗ ಸಿಪಾಯಿಗಳು ದೋಣಿಯ ಹಗ್ಗಗಳನ್ನು ಕತ್ತರಿಸಿ ಅದು ಬಿದ್ದು ಹೋಗುವಂತೆ ಮಾಡಿದರು. 33 ಬೆಳಗಾಗುತ್ತಿರುವಷ್ಟರಲ್ಲಿ ಪೌಲನು ಏನಾದರೂ ಆಹಾರವನ್ನು ತೆಗೆದುಕೊಳ್ಳಬೇಕೆಂದು ಎಲ್ಲರನ್ನು ಬೇಡಿಕೊಳ್ಳುವವನಾಗಿ - ನೀವು ಈಹೊತ್ತಿಗೆ ಹದಿನಾಲ್ಕು ದಿವಸದಿಂದ ಕಾದುಕೊಂಡು ಆಹಾರವೇನೂ ತೆಗೆದುಕೊಳ್ಳದೆ ಉಪವಾಸವಾಗಿಯೇ ಇದ್ದೀರಾದದರಿಂದ 34 ಆಹಾರ ತೆಗೆದುಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಇದು ನಿಮ್ಮ ಪ್ರಾಣ ರಕ್ಷಣೆಗೆ ಅವಶ್ಯ. ನಿಮ್ಮಲ್ಲಿ ಯಾರ ತಲೆಯಿಂದಾದರೂ ಒಂದು ಕೂದಲೂ ಉದುರಿಹೋಗುವದಿಲ್ಲವೆಂದು ಹೇಳಿ 35 ರೊಟ್ಟಿಯನ್ನು ತೆಗೆದುಕೊಂಡು ಎಲ್ಲರ ಮುಂದೆ ದೇವರ ಸ್ತೋತ್ರಮಾಡಿ ಅದನ್ನು ಮುರಿದು ತಿನ್ನುವದಕ್ಕೆ ಪ್ರಾರಂಭಿಸಿದನು. 36 ಆಗ ಎಲ್ಲರು ಧೈರ್ಯತಂದುಕೊಂಡು ತಾವೂ ಆಹಾರವನ್ನು ತೆಗೆದುಕೊಂಡರು. 37 ಆ ಹಡಗಿನಲ್ಲಿದ್ದ ನಾವೆಲ್ಲರು ಇನ್ನೂರ ಎಪ್ಪತ್ತಾರು ಮಂದಿ. 38 ಸಾಕಾದಷ್ಟು ತಿಂದ ಮೇಲೆ ಗೋದಿಯನ್ನು ಸಮುದ್ರಕ್ಕೆ ಚೆಲ್ಲಿ ಹಡಗನ್ನು ಹಗುರ ಮಾಡಿದರು. 39 ಬೆಳಗಾದ ಮೇಲೆ ಆ ದೇಶದ ಗುರುತನ್ನು ತಿಳಿಯದೆ ಉಸುಬಿನ ದಡವುಳ್ಳ ಒಂದು ಕೊಲ್ಲಿಯನ್ನು ನೋಡಿ ಆ ದಡದ ಮೇಲೆ ಹಡಗನ್ನು ನೂಕುವದಕ್ಕೆ ಸಾಧ್ಯವಾದೀತೆಂದು ಯೋಚಿಸಿ 40 ಅವರು ಲಂಗರಗಳನ್ನು ಸರಿದು ಸಮುದ್ರದಲ್ಲೇ ಬಿಟ್ಟು ಚುಕ್ಕಾಣಿಗಳ ಕಟ್ಟುಗಳನ್ನು ಬಿಚ್ಚಿ ದೊಡ್ಡ ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ಆ ದಡಕ್ಕೆ ನಡಿಸುತ್ತಿದ್ದರು. 41 ಆದರೆ ಮಧ್ಯದಲ್ಲಿ ಅವರಿಗೆ ಮರಳುದಿಬ್ಬ ಸಿಕ್ಕಿದಾಗ ಅದಕ್ಕೆ ನಾವೆಯನ್ನು ಹತ್ತಿಸಿದರು. ಮುಂಭಾಗವು ತಗಲಿಕೊಂಡು ಅಲ್ಲಾಡದೆ ನಿಂತಿತು. ಹಿಂಭಾಗವು ತೆರೆಗಳ ಹೊಡೆತದಿಂದ ಒಡೆದುಹೋಗುತ್ತಾ ಬಂತು. 42 ಸೆರೆಯವರಲ್ಲಿ ಕೆಲವರು ಈಜಿ ತಪ್ಪಿಸಿಕೊಂಡಾರೆಂದು ಸಿಪಾಯಿಗಳು ಅವರನ್ನು ಕೊಲ್ಲಬೇಕೆಂಬದಾಗಿ ಆಲೋಚನೆ ಹೇಳಿದರು. 43 ಆದರೆ ಶತಾಧಿಪತಿಯು ಪೌಲನನ್ನು ಉಳಿಸಬೇಕೆಂದು ಅಪೇಕ್ಷಿಸಿ ಅವರ ಆಲೋಚನೆಯನ್ನು ಬೇಡವೆಂದು - ಈಜಬಲ್ಲವರು ಹಡಗಿನಿಂದ ಧುಮುಕಿ ಮೊದಲಾಗಿ ತೀರಕ್ಕೆ ಹೋಗಬೇಕೆಂತಲೂ 44 ವಿುಕ್ಕಾದವರಲ್ಲಿ ಕೆಲವರು ಹಲಿಗೆಗಳ ಮೇಲೆ ಕೆಲವರು ಹಡಗಿನ ತುಂಡುಗಳ ಮೇಲೆ ಹೋಗಬೇಕೆಂತಲೂ ಅಪ್ಪಣೆಕೊಟ್ಟನು. ಈ ರೀತಿಯಿಂದ ಎಲ್ಲರೂ ಸುರಕ್ಷಿತವಾಗಿ ತೀರಕ್ಕೆ ಸೇರಿದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India