Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅಪೊಸ್ತಲರ ಕೃತ್ಯಗಳು 23 - ಕನ್ನಡ ಸತ್ಯವೇದವು J.V. (BSI)

1 ಆಗ ಪೌಲನು ಹಿರೀಸಭೆಯನ್ನು ದೃಷ್ಟಿಸಿ ನೋಡಿ - ಸಹೋದರರೇ, ನಾನು ಈ ದಿನದವರೆಗೂ ಒಳ್ಳೇ ಮನಸ್ಸಾಕ್ಷಿಯಿಂದ ದೇವರ ಮುಂದೆ ನಡೆದುಕೊಂಡಿದ್ದೇನೆ ಅಂದನು.

2 ಅದಕ್ಕೆ ಮಹಾಯಾಜಕನಾದ ಅನನೀಯನು - ಅವನ ಬಾಯ ಮೇಲೆ ಹೊಡೆಯಿರಿ ಎಂದು ಹತ್ತಿರದಲ್ಲಿ ನಿಂತಿದ್ದವರಿಗೆ ಅಪ್ಪಣೆಕೊಡಲು

3 ಪೌಲನು ಅವನಿಗೆ - ಎಲೈ ಸುಣ್ಣಾ ಹಚ್ಚಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯುವನು. ನೀನು ಧರ್ಮಶಾಸ್ತ್ರಾನುಸಾರವಾಗಿ ನನ್ನ ವಿಚಾರಣೆ ಮಾಡುವದಕ್ಕೆ ಕೂತುಕೊಂಡು ಧರ್ಮಶಾಸ್ತ್ರ ವಿರುದ್ಧವಾಗಿ ನನ್ನನ್ನು ಹೊಡೆಯುವದಕ್ಕೆ ಅಪ್ಪಣೆಕೊಡುತ್ತೀಯೋ? ಅಂದನು.

4 ಹತ್ತರ ನಿಂತಿದ್ದವರು - ದೇವರು ನೇವಿುಸಿದ ಮಹಾಯಾಜಕನನ್ನು ನೀನು ಬೈಯುತ್ತೀಯಾ? ಅನ್ನಲು

5 ಪೌಲನು - ಸಹೋದರರೇ, ಮಹಾಯಾಜಕನೆಂದು ನನಗೆ ತಿಳಿಯಲಿಲ್ಲ. ನಿನ್ನ ಜನರಲ್ಲಿ ಅಧಿಪತಿಯಾಗಿರುವವನ ವಿಷಯವಾಗಿ ಕೆಟ್ಟದ್ದೇನೂ ಆಡಬಾರದೆಂದು ಬರೆದದೆಯಷ್ಟೆ ಅಂದನು.

6 ಸಭೆಯವರಲ್ಲಿ ಒಂದು ಪಾಲು ಸದ್ದುಕಾಯರೂ ಒಂದು ಪಾಲು ಫರಿಸಾಯರೂ ಇರುವದನ್ನು ಪೌಲನು ತಿಳಿದು - ಸಹೋದರರೇ, ನಾನು ಫರಿಸಾಯನು, ಫರಿಸಾಯರ ಮಗನು; ಸತ್ತವರೆದ್ದು ಬರುವರು ಎಂಬ ನಿರೀಕ್ಷೆಯ ವಿಷಯವಾಗಿ ನನ್ನನ್ನು ವಿಚಾರಣೆಮಾಡುತ್ತಾರೆ ಎಂದು ಹಿರೀಸಭೆಯಲ್ಲಿ ಕೂಗಿದನು.

7 ಇದನ್ನು ಅವನು ಹೇಳಿದಾಗ ಫರಿಸಾಯರಿಗೂ ಸದ್ದುಕಾಯರಿಗೂ ಜಗಳ ಹುಟ್ಟಿತು; ಸಭೆಯಲ್ಲಿ ಭೇದವುಂಟಾಯಿತು.

8 ಯಾಕಂದರೆ - ಸತ್ತವರು ಎದ್ದುಬರುವದಿಲ್ಲವೆಂತಲೂ ದೇವದೂತನಾಗಲಿ ದೇಹವಿಲ್ಲದ ಆತ್ಮವಾಗಲಿ ಇಲ್ಲವೆಂತಲೂ ಸದ್ದುಕಾಯರು ಹೇಳುವರು; ಆ ಎರಡೂ ಉಂಟೆಂದು ಫರಿಸಾಯರು ಒಪ್ಪಿಕೊಳ್ಳುವರು.

9 ಆಗ ದೊಡ್ಡ ಕೂಗಾಟವಾಯಿತು. ಫರಿಸಾಯರ ಪಕ್ಷದವರಾದ ಶಾಸ್ತ್ರಿಗಳಲ್ಲಿ ಕೆಲವರು ಎದ್ದು - ಈ ಮನುಷ್ಯನಲ್ಲಿ ನಮಗೆ ಕೆಟ್ಟದ್ದೇನೂ ಕಾಣಬರುವದಿಲ್ಲ; ಆತ್ಮವಾಗಲಿ ದೇವದೂತನಾಗಲಿ ಅವನ ಸಂಗಡ ಮಾತಾಡಿದ್ದರೂ ಮಾತಾಡಿರಬಹುದು ಎಂದು ವಾಗ್ವಾದಮಾಡಿದರು.

10 ಜಗಳವು ಬಹಳವಾದಾಗ ಅವರು ಪೌಲನನ್ನು ಎಳೆದಾಡಿ ಚೂರುಚೂರು ಮಾಡಾರೆಂದು ಸಹಸ್ರಾಧಿಪತಿಯು ಭಯಪಟ್ಟು ಸಿಪಾಯಿಗಳಿಗೆ - ನೀವು ಹೋಗಿ ಅವರ ಮಧ್ಯದಿಂದ ಅವನನ್ನು ಬಲವಂತವಾಗಿ ಹಿಡಿದು ಕೋಟೆಯೊಳಗೆ ತರಬೇಕೆಂದು ಆಜ್ಞೆಕೊಟ್ಟನು.

11 ಆ ದಿನದ ರಾತ್ರಿ ಕರ್ತನು ಪೌಲನ ಬಳಿಯಲ್ಲಿ ನಿಂತುಕೊಂಡು - ಧೈರ್ಯದಿಂದಿರು; ನೀನು ಯೆರೂಸಲೇವಿುನಲ್ಲಿ ನನ್ನ ಸಂಗತಿಯನ್ನೆಲ್ಲಾ ಸಾಕ್ಷಿಯಾಗಿ ಹೇಳಿದಂತೆಯೇ ರೋಮಾಪುರದಲ್ಲಿಯೂ ಸಾಕ್ಷಿಹೇಳಬೇಕಾಗುವದು ಅಂದನು.


ಕೆಲವರು ಪೌಲನನ್ನು ಕೊಲ್ಲುವದಕ್ಕೆ ಶಪಥಮಾಡಲು ಸಹಸ್ರಾಧಿಪತಿಯು ಅವನನ್ನು ಕೈಸರೈಯಕ್ಕೆ ದೇಶಾಧಿಪತಿಯಾದ ಫೇಲಿಕ್ಸನ ಬಳಿಗೆ ಕಳುಹಿಸಿದ್ದು.

12 ಬೆಳಗಾದ ಮೇಲೆ ಯೆಹೂದ್ಯರು ಒಳಸಂಚು ಮಾಡಿ - ನಾವು ಪೌಲನನ್ನು ಕೊಲ್ಲುವ ತನಕ ಅನ್ನಪಾನವೇನೂ ಮುಟ್ಟುವದಿಲ್ಲವೆಂದು ಶಪಥಮಾಡಿಕೊಂಡರು.

13 ಹೀಗೆ ಮಾಡಿದವರು ನಾಲ್ವತ್ತು ಮಂದಿಗಿಂತ ಹೆಚ್ಚಾಗಿದ್ದರು.

14 ಇವರು ಮಹಾಯಾಜಕರ ಮತ್ತು ಸಭೇಹಿರಿಯರ ಬಳಿಗೆ ಹೋಗಿ - ನಾವು ಪೌಲನನ್ನು ಕೊಲ್ಲುವ ತನಕ ಬಾಯಲ್ಲಿ ಏನೂ ಹಾಕುವದಿಲ್ಲವೆಂದು ಕಠಿನ ಶಪಥವನ್ನು ಮಾಡಿಕೊಂಡಿದ್ದೇವೆ.

15 ಆದದರಿಂದ ನೀವು ಸಭೆಯವರ ಸಹಿತ ಸಹಸ್ರಾಧಿಪತಿಯ ಬಳಿಗೆ ಹೋಗಿ ಪೌಲನ ಸಂಗತಿಯನ್ನು ಇನ್ನೂ ಸೂಕ್ಷ್ಮವಾಗಿ ವಿಮರ್ಶೆಮಾಡಬೇಕೆಂದು ನೆವಹೇಳಿ ಅವನನ್ನು ಕೋಟೆಯಿಂದ ನಿಮ್ಮ ಬಳಿಗೆ ಕರೆದುಕೊಂಡು ಬರುವ ಹಾಗೆ ಕೇಳಿಕೊಳ್ಳಬೇಕು. ನಾವಾದರೋ ಅವನು ಹತ್ತರ ಬರುವದಕ್ಕಿಂತ ಮುಂಚೆಯೇ ಅವನನ್ನು ಕೊಲ್ಲುವದಕ್ಕೆ ಸಿದ್ಧವಾಗಿದ್ದೇವೆ ಅಂದರು.

16 ಅವರು ಹೊಂಚಿಕೊಂಡಿರುವದನ್ನು ಪೌಲನ ಸೋದರಳಿಯನು ಕೇಳಿ ಕೋಟೆಯೊಳಗೆ ಬಂದು ಪೌಲನಿಗೆ ತಿಳಿಸಿದನು.

17 ಪೌಲನು ಶತಾಧಿಪತಿಗಳಲ್ಲಿ ಒಬ್ಬನನ್ನು ಕರೆಯಿಸಿ - ಈ ಯೌವನಸ್ಥನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗು; ಅವನಿಗೆ ತಿಳಿಸಬೇಕಾದ ಒಂದು ಮಾತು ಅದೆ ಎಂದು ಹೇಳಿದನು.

18 ಶತಾಧಿಪತಿ ಅವನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗಿ - ಸೆರೆಯವನಾದ ಪೌಲನು ನನ್ನನ್ನು ಕರೆದು ಈ ಯೌವನಸ್ಥನನ್ನು ತಮ್ಮ ಬಳಿಗೆ ಕರೆದುಕೊಂಡು ಹೋಗುವಂತೆ ಬೇಡಿಕೊಂಡನು; ತಮಗೆ ತಿಳಿಸಬೇಕಾದ ಏನೋ ಒಂದು ಮಾತು ಅದೆಯಂತೆ ಎಂಬದಾಗಿ ಹೇಳಲು

19 ಸಹಸ್ರಾಧಿಪತಿಯು ಅವನನ್ನು ಕೈಹಿಡಿದು ಒಂದು ಕಡೆಗೆ ಏಕಾಂತವಾಗಿ ಕರೆದುಕೊಂಡು ಹೋಗಿ - ನೀನು ನನಗೆ ಹೇಳಬೇಕಾದದ್ದು ಏನು? ಎಂದು ಕೇಳಿದನು.

20 ಅವನು - ಯೆಹೂದ್ಯರು ಪೌಲನ ಸಂಗತಿಯನ್ನು ಇನ್ನೂ ಸೂಕ್ಷ್ಮವಾಗಿ ವಿಚಾರಣೆಮಾಡಬೇಕೆಂಬ ನೆವ ಹೇಳಿ ನೀನು ನಾಳೆ ಅವನನ್ನು ಹಿರೀಸಭೆಯ ಬಳಿಗೆ ಕರೆದುಕೊಂಡು ಬರಬೇಕೆಂದು ಕೇಳಿಕೊಳ್ಳುವದಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ.

21 ನೀನು ಅವರ ಮಾತಿಗೆ ಒಡಂಬಡಬೇಡ; ಯಾಕಂದರೆ ನಾಲ್ವತ್ತಕ್ಕಿಂತ ಹೆಚ್ಚು ಮಂದಿ ತಾವು ಅವನನ್ನು ಕೊಲ್ಲುವ ತನಕ ಅನ್ನಪಾನವೇನೂ ಮುಟ್ಟುವದಿಲ್ಲವೆಂದು ಶಪಥವನ್ನು ಮಾಡಿಕೊಂಡು ಅವನಿಗೋಸ್ಕರ ಹೊಂಚುಹಾಕುತ್ತಾ ಇದ್ದಾರೆ. ಈಗ ಅವರು ನಿನ್ನ ಅಪ್ಪಣೆಯನ್ನು ಎದುರುನೋಡುತ್ತಾ ಸಿದ್ಧವಾಗಿದ್ದಾರೆ ಅಂದನು.

22 ಆಗ ಸಹಸ್ರಾಧಿಪತಿಯು ಆ ಯೌವನಸ್ಥನಿಗೆ - ಈ ಸಂಗತಿಗಳನ್ನು ನನಗೆ ಸೂಚಿಸಿದ್ದನ್ನು ನೀನು ಯಾರಿಗೂ ಹೇಳಬೇಡ ಎಂದು ಖಂಡಿತವಾಗಿ ಅಪ್ಪಣೆ ಕೊಟ್ಟು ಅವನನ್ನು ಕಳುಹಿಸಿಬಿಟ್ಟನು.

23 ಆಮೇಲೆ ಅವನು ಶತಾಧಿಪತಿಗಳಲ್ಲಿ ಇಬ್ಬರನ್ನು ಕರೆಯಿಸಿ - ರಾತ್ರಿ ಒಂಭತ್ತು ಘಂಟೆಗೆ ಕೈಸರೈಯದ ತನಕ ಹೋಗುವಂತೆ ಇನ್ನೂರು ಮಂದಿ ಸಿಪಾಯಿಗಳನ್ನೂ ಎಪ್ಪತ್ತು ಮಂದಿ ಸವಾರರನ್ನೂ ಇನ್ನೂರು ಮಂದಿ ಭಲ್ಲೆಯವರನ್ನೂ ಸಿದ್ಧಮಾಡಿರಿ;

24 ಮತ್ತು ಕುದುರೆಗಳನ್ನು ಸಿದ್ಧಮಾಡಿ ಪೌಲನನ್ನು ಹತ್ತಿಸಿ ದೇಶಾಧಿಪತಿಯಾದ ಫೇಲಿಕ್ಸನ ಬಳಿಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕೆಂದು ಹೇಳಿದನು.

25 ಇದಲ್ಲದೆ ಈ ಕೆಳಗಣ ಅಭಿಪ್ರಾಯದ ಒಂದು ಕಾಗದವನ್ನು ಬರೆದನು, ಏನಂದರೆ -

26 ಮಹಾರಾಜರಾಜಶ್ರೀ ದೇಶಾಧಿಪತಿಯಾದ ಫೇಲಿಕ್ಸನಿಗೆ ಕ್ಲೌದ್ಯ ಲೂಸ್ಯನು ಮಾಡುವ ವಂದನೆ.

27 ಯೆಹೂದ್ಯರು ಈ ಮನುಷ್ಯನನ್ನು ಹಿಡಿದು ಕೊಲ್ಲಬೇಕೆಂದಿದ್ದಾಗ ನಾನು ಸಿಪಾಯಿಗಳೊಂದಿಗೆ ಹೋಗಿ ಅವನನ್ನು ರೋಮಾಪುರದ ಹಕ್ಕುದಾರನೆಂದು ತಿಳಿದು ಅವನನ್ನು ತಪ್ಪಿಸಿದೆನು.

28 ಇದಲ್ಲದೆ ಅವನ ಮೇಲೆ ತಪ್ಪು ಹೊರಿಸಿದ ಕಾರಣವನ್ನು ತಿಳಿಯಲಪೇಕ್ಷಿಸಿ ಅವನನ್ನು ಅವರ ಹಿರೀಸಭೆಗೆ ಕರೆದುಕೊಂಡು ಹೋದೆನು.

29 ಅಲ್ಲಿ ಅವರು ತಮ್ಮ ಧರ್ಮಶಾಸ್ತ್ರವಿಷಯಗಳನ್ನು ಹಿಡಿದು ಅವನ ಮೇಲೆ ತಪ್ಪು ಹೊರಿಸಿದರೇ ಹೊರತು ಮರಣ ದಂಡನೆಗಾಗಲಿ ಬೇಡಿಗಾಗಲಿ ಆಧಾರವಾದ ಯಾವ ಅಪರಾಧವನ್ನೂ ಹೊರಿಸಲಿಲ್ಲವೆಂದು ನನಗೆ ಕಂಡುಬಂತು.

30 ಈ ಮನುಷ್ಯನಿಗೆ ವಿರುದ್ಧವಾಗಿ ಒಳಸಂಚು ಹುಟ್ಟಿತೆಂದು ನನಗೆ ತಿಳಿದುಬಂದದರಿಂದ ಕೂಡಲೆ ನಾನು ಅವನನ್ನು ನಿನ್ನ ಬಳಿಗೆ ಕಳುಹಿಸಿ ತಪ್ಪುಹೊರಿಸುವವರಿಗೆ ನಿನ್ನ ಮುಂದೆಯೇ ಅವನಿಗೆ ವಿರುದ್ಧವಾಗಿ ಮಾತಾಡುವ ಹಾಗೆ ಅಪ್ಪಣೆ ಕೊಟ್ಟೆನು ಎಂಬದೇ.

31 ಸಿಪಾಯಿಗಳು ತಮಗೆ ಅಪ್ಪಣೆಯಾದಂತೆ ರಾತ್ರಿ ಕಾಲದಲ್ಲಿ ಪೌಲನನ್ನು ಅಂತಿಪತ್ರಿಗೆ ಕರೆದುಕೊಂಡು ಹೋದರು.

32 ಮರುದಿನ ಅವರು ಸವಾರರನ್ನು ಅವನ ಜೊತೆಯಲ್ಲಿ ಹೋಗುವಂತೆ ಮಾಡಿ ತಾವು ಕೋಟೆಗೆ ಹಿಂತಿರುಗಿ ಬಂದರು.

33 ಸವಾರರು ಕೈಸರೈಯಕ್ಕೆ ಸೇರಿ ದೇಶಾಧಿಪತಿಗೆ ಕಾಗದವನ್ನು ಒಪ್ಪಿಸಿ ಪೌಲನನ್ನು ಅವನ ಮುಂದೆ ನಿಲ್ಲಿಸಿದರು.

34 ದೇಶಾಧಿಪತಿಯು ಆ ಕಾಗದವನ್ನು ಓದಿ ಪೌಲನು ಯಾವ ಸೀಮೆಯವನು? ಎಂದು ಕೇಳಿ ಅವನು ಕಿಲಿಕ್ಯದವನೆಂದು ತಿಳಿದು -

35 ನಿನ್ನ ಮೇಲೆ ತಪ್ಪುಹೊರಿಸುವವರು ಬಂದನಂತರ ನಿನ್ನ ಕಾರ್ಯವನ್ನು ಪೂರ್ಣವಾಗಿ ವಿಚಾರಿಸುತ್ತೇನೆ ಎಂದು ಹೇಳಿ ಅವನನ್ನು ಹೆರೋದನ ಅರಮನೆಯಲ್ಲಿ ಇಟ್ಟು ಕಾಯಬೇಕೆಂಬದಾಗಿ ಅಪ್ಪಣೆಮಾಡಿದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು