Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅಪೊಸ್ತಲರ ಕೃತ್ಯಗಳು 17 - ಕನ್ನಡ ಸತ್ಯವೇದವು J.V. (BSI)


ಥೆಸಲೋನಿಕದಲ್ಲಿ ಪೌಲನು ಸಭೆಯನ್ನು ಸ್ಥಾಪಿಸಿದ ಮೇಲೆ ಯೆಹೂದ್ಯರು ಅವನನ್ನು ಹೊರಡಿಸಿದ್ದು

1 ಮುಂದೆ ಅವರು ಮಾರ್ಗಹಿಡಿದು ಅಂಫಿಪೊಲಿ ಅಪೊಲೋನ್ಯ ಎಂಬ ಊರುಗಳನ್ನು ದಾಟಿ ಥೆಸಲೋನಿಕಕ್ಕೆ ಬಂದರು. ಅಲ್ಲಿ ಯೆಹೂದ್ಯರದೊಂದು ಸಭಾಮಂದಿರವಿತ್ತು.

2 ಪೌಲನು ತನ್ನ ಪದ್ಧತಿಯ ಪ್ರಕಾರ ಅಲ್ಲಿದ್ದವರ ಬಳಿಗೆ ಹೋಗಿ ಮೂರು ಸಬ್ಬತ್‍ದಿನಗಳಲ್ಲಿ ಶಾಸ್ತ್ರಾಧಾರದಿಂದ ಅವರ ಸಂಗಡ ವಾದಿಸಿ

3 ಆಯಾ ವಚನಗಳ ಅರ್ಥವನ್ನು ಬಿಚ್ಚಿ - ಕ್ರಿಸ್ತನು ಬಾಧೆಯನ್ನನುಭವಿಸಿ ಸತ್ತು ಎದ್ದುಬರುವದು ಅಗತ್ಯವೆಂತಲೂ ನಾನು ನಿಮಗೆ ಪ್ರಸಿದ್ಧಿಪಡಿಸುವ ಯೇಸುವೇ ಆ ಕ್ರಿಸ್ತನೆಂತಲೂ ಸ್ಥಾಪಿಸಿದನು.

4 ಅವರಲ್ಲಿ ಕೆಲವರೂ ದೇವಭಕ್ತರಾದ ಗ್ರೀಕರಲ್ಲಿ ದೊಡ್ಡ ಗುಂಪೂ ಪ್ರಮುಖ ಸ್ತ್ರೀಯರಲ್ಲಿ ಅನೇಕರೂ ಒಡಂಬಟ್ಟು ಪೌಲ ಸೀಲರನ್ನು ಸೇರಿಕೊಂಡರು.

5 ಯೆಹೂದ್ಯರು ಹೊಟ್ಟೇಕಿಚ್ಚುಪಟ್ಟು ಪೇಟೆಯಲ್ಲಿ ತಿರುಗಾಡುವ ಕೆಲವು ಪೋಕರನ್ನು ಕರೆದುಕೊಂಡು ಬಂದು ಗುಂಪುಕೂಡಿಸಿ ಊರಲ್ಲಿ ಗದ್ದಲ ಎಬ್ಬಿಸಿ ಪೌಲ ಸೀಲರನ್ನು ಪಟ್ಟಣದ ಸಭೆಗೆದುರಿಗೆ ತರಬೇಕೆಂದು ಅವರನ್ನು ಹುಡುಕುತ್ತಾ ಯಾಸೋನನ ಮನೆಯ ಮೇಲೆ ಬಿದ್ದರು.

6 ಅವರು ಸಿಕ್ಕದೆ ಹೋದದ್ದರಿಂದ ಆ ಜನರು ಯಾಸೋನನನ್ನೂ ಕೆಲವು ಮಂದಿ ಸಹೋದರರನ್ನೂ ಊರಿನ ಅಧಿಕಾರಿಗಳ ಬಳಿಗೆ ಎಳಕೊಂಡು ಹೋಗಿ - ಲೋಕವನ್ನು ಅಲ್ಲಕಲ್ಲೋಲ ಮಾಡಿದ ಆ ಮನುಷ್ಯರು ಇಲ್ಲಿಗೂ ಬಂದಿದ್ದಾರೆ,

7 ಯಾಸೋನನು ಅವರನ್ನು ಸೇರಿಸಿಕೊಂಡಿದ್ದಾನೆ, ಅವರೆಲ್ಲರು ಯೇಸುವೆಂಬ ಬೇರೊಬ್ಬ ಅರಸನು ಇದ್ದಾನೆಂದು ಹೇಳಿ ಚಕ್ರವರ್ತಿಯ ಆಜ್ಞೆಗಳಿಗೆ ವಿರುದ್ಧವಾಗಿ ನಡೆಯುತ್ತಾರೆ ಎಂದು ಕೂಗಿದರು.

8 ಪಟ್ಟಣದವರೂ ಪಟ್ಟಣದ ಅಧಿಕಾರಿಗಳೂ ಈ ಮಾತುಗಳನ್ನು ಕೇಳಿ ಕಳವಳಪಟ್ಟು

9 ಯಾಸೋನ ಮೊದಲಾದವರಿಂದ ಹೊಣೆ ತೆಗೆದುಕೊಂಡರು; ತೆಗೆದುಕೊಂಡ ಮೇಲೆ ಅವರನ್ನು ಬಿಟ್ಟುಬಿಟ್ಟರು.


ಬೆರೋಯ ಊರಿನವರು ದೇವರ ವಾಕ್ಯವನ್ನು ಚೆನ್ನಾಗಿ ಕೇಳಿದ್ದು ಥೆಸಲೋನಿಕದವರು ಅಲ್ಲಿಯೂ ಬಂದು ಜನರನ್ನು ರೇಗಿಸಿದ್ದರಿಂದ ಪೌಲನು ಅಥೇನೆ ಪಟ್ಟಣಕ್ಕೆ ಹೊರಟುಹೋದದ್ದು.

10 ಕೂಡಲೇ ಸಹೋದರರು ರಾತ್ರಿಯಲ್ಲಿ ಪೌಲ ಸೀಲರನ್ನು ಬೆರೋಯಕ್ಕೆ ಕಳುಹಿಸಿಬಿಟ್ಟರು. ಅವರು ಅಲ್ಲಿಗೆ ಸೇರಿ ಯೆಹೂದ್ಯರ ಸಭಾಮಂದಿರದೊಳಕ್ಕೆ ಹೋದರು.

11 ಆ ಸಭೆಯವರು ಥೆಸಲೋನಿಕದವರಿಗಿಂತ ಸದ್ಗುಣವುಳ್ಳವರಾಗಿದ್ದು ದೇವರ ವಾಕ್ಯವನ್ನು ಶುದ್ಧಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು.

12 ಹೀಗಿರಲಾಗಿ ಅವರಲ್ಲಿ ಬಹಳ ಮಂದಿ ನಂಬಿದರು; ಅದಲ್ಲದೆ ಕುಲೀನರಾದ ಗ್ರೀಕ್‍ಹೆಂಗಸರಲ್ಲಿಯೂ ಗಂಡಸರಲ್ಲಿಯೂ ಅನೇಕರು ನಂಬಿದರು.

13 ಆದರೆ ಪೌಲನು ಬೆರೋಯದಲ್ಲಿಯೂ ದೇವರ ವಾಕ್ಯವನ್ನು ಪ್ರಸಿದ್ಧಿಪಡಿಸುತ್ತಾನೆಂಬ ವರ್ತಮಾನವು ಥೆಸಲೋನಿಕದ ಯೆಹೂದ್ಯರಿಗೆ ತಿಳಿದುಬಂದಾಗ ಅವರು ಅಲ್ಲಿಗೂ ಬಂದು ಜನರ ಗುಂಪುಗಳನ್ನು ರೇಗಿಸಿ ಕಲಕಿದರು.

14 ಕೂಡಲೇ ಸಹೋದರರು ಪೌಲನನ್ನು ಸಮುದ್ರದ ತನಕ ಹೋಗುವದಕ್ಕೆ ಕಳುಹಿಸಿಕೊಟ್ಟರು. ಆದರೆ ಸೀಲನೂ ತಿಮೊಥೆಯನೂ ಅಲ್ಲೇ ನಿಂತರು.

15 ಪೌಲನನ್ನು ಸಾಗಕಳುಹಿಸಿದವರು ಅವನನ್ನು ಅಥೇನೆಯವರೆಗೂ ಕರೆದುಕೊಂಡುಹೋಗಿ - ಸೀಲನನ್ನೂ ತಿಮೊಥೆಯನನ್ನೂ ಕೂಡಿದ ಮಟ್ಟಿಗೆ ಬೇಗ ನನ್ನ ಬಳಿಗೆ ಬರಹೇಳಿರಿ ಎಂಬ ಅಪ್ಪಣೆಯನ್ನು ಅವನಿಂದ ಹೊಂದಿ ಹೊರಟುಬಂದರು.


ಅಥೇನೆ ಪಟ್ಟಣದಲ್ಲಿ ಪೌಲನು ತತ್ವವಿಚಾರಕರಿಗೆ ಉಪನ್ಯಾಸಮಾಡಿದ್ದು.

16 ಪೌಲನು ಅವರಿಗೋಸ್ಕರ ಅಥೇನೆಯಲ್ಲಿ ಕಾದುಕೊಂಡಿರುವಾಗ ಆ ಪಟ್ಟಣದಲ್ಲಿ ಎಲ್ಲೆಲ್ಲಿಯೂ ವಿಗ್ರಹಗಳೇ ಇರುವದನ್ನು ನೋಡಿ ಅವನ ಮನಸ್ಸು ಅವನೊಳಗೆ ಕುದಿಯಿತು.

17 ಆದದರಿಂದ ಅವನು ಸಭಾಮಂದಿರದಲ್ಲಿ ಯೆಹೂದ್ಯರ ಮತ್ತು ಯೆಹೂದ್ಯ ಮತಾವಲಂಬಿಗಳ ಸಂಗಡಲೂ ಪ್ರತಿದಿನ ಪೇಟೆಯಲ್ಲಿ ಕಂಡುಬಂದವರ ಸಂಗಡಲೂ ವಾದಿಸಿದನು.

18 ಇದಲ್ಲದೆ ಎಪಿಕೂರಿಯರು ಸ್ತೋಯಿಕರು ಎಂಬ ತತ್ವವಿಚಾರಕರಲ್ಲಿ ಕೆಲವರು ಅವನ ಸಂಗಡ ಚರ್ಚೆಮಾಡಿದರು. ಅವರಲ್ಲಿ ಕೆಲವರು - ಈ ಮಾತಾಳಿ ಏನು ಹೇಳಬೇಕೆಂದಿದ್ದಾನೆ? ಅಂದರು. ಅವನು ಯೇಸುವಿನ ವಿಷಯವಾಗಿಯೂ ಸತ್ತವರು ಎದ್ದುಬರುವರೆಂಬುವ ವಿಷಯವಾಗಿಯೂ ಸಾರುತ್ತಿದ್ದದರಿಂದ - ಇವನು ಅನ್ಯದೇಶದ ದೈವಗಳನ್ನು ಪ್ರಸಿದ್ಧಿಪಡಿಸುವವನಾಗಿ ತೋರುತ್ತಾನೆಂದು ಬೇರೆ ಕೆಲವರು ಹೇಳಿದರು.

19 ಅವರು ಅವನನ್ನು ಹಿಡಿದು ಅರಿಯೊಪಾಗಕ್ಕೆ ಕರೆದುಕೊಂಡು ಹೋಗಿ - ನೀನು ಹೇಳುವ ಈ ನೂತನತರವಾದ ಉಪದೇಶವನ್ನು ನಾವು ತಿಳಿಯಬಹುದೇ?

20 ಅಪೂರ್ವವಾದ ಸಂಗತಿಗಳನ್ನು ನಮಗೆ ಶ್ರುತಪಡಿಸುತ್ತೀಯಲ್ಲಾ; ಆದಕಾರಣ ಅವೇನಿದ್ದಾವು ತಿಳಿಯಬೇಕೆಂದು ನಮಗೆ ಅಪೇಕ್ಷೆಯದೆ ಅಂದರು.

21 ಅಥೇನೆಯರೂ ಅಲ್ಲಿ ವಾಸವಾಗಿದ್ದ ಪರಸ್ಥಳದವರೂ ಹೊಸ ಹೊಸ ಸಂಗತಿಗಳನ್ನು ಹೇಳುವದಕ್ಕೂ ಕೇಳುವದಕ್ಕೂ ಹೊರತು ಬೇರೆ ಯಾವದಕ್ಕೂ ಸಮಯ ಕೊಡುತ್ತಿರಲಿಲ್ಲ.

22 ಪೌಲನು ಅರಿಯೋಪಾಗದ ಮಧ್ಯದಲ್ಲಿ ನಿಂತುಕೊಂಡು ಹೇಳಿದ್ದೇನಂದರೆ - ಅಥೇನೆಯ ಜನರೇ, ನೀವು ಎಲ್ಲಾದರಲ್ಲೂ ಅತಿಭಕ್ತಿವಂತರೆಂದು ನನಗೆ ತೋರುತ್ತದೆ.

23 ನಾನು ನಿಮ್ಮ ಪಟ್ಟಣದಲ್ಲಿ ತಿರುಗಾಡುತ್ತಾ ನೀವು ಪೂಜಿಸುವ ದೇವತಾಪ್ರತಿಮೆಗಳನ್ನು ಚೆನ್ನಾಗಿ ನೋಡುತ್ತಾ ಇದ್ದಾಗ ಒಂದು ಬಲಿಪೀಠವು ನನ್ನ ಕಣ್ಣಿಗೆ ಬಿತ್ತು; ಅದರ ಮೇಲೆ ತಿಳಿಯದ ದೇವರಿಗೆ ಎಂದು ಬರೆದಿತ್ತು. ಆದಕಾರಣ ನೀವು ಯಾವದನ್ನು ತಿಳಿಯದೆ ಪೂಜಿಸುತ್ತೀರೋ ಅದನ್ನೇ ನಿಮಗೆ ತಿಳಿಯಪಡಿಸುತ್ತೇನೆ, ಕೇಳಿರಿ.

24 ಜಗತ್ತನ್ನೂ ಅದರಲ್ಲಿರುವ ಎಲ್ಲಾ ವಸ್ತುಗಳನ್ನೂ ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯನಾಗಿರುವದರಿಂದ ಆತನು ಕೈಯಿಂದ ಕಟ್ಟಿರುವ ಗುಡಿಗಳಲ್ಲಿ ವಾಸಮಾಡುವವನಲ್ಲ;

25 ತಾನೇ ಎಲ್ಲರಿಗೂ ಜೀವಶ್ವಾಸ ಮುಂತಾದದ್ದೆಲ್ಲವನ್ನೂ ಕೊಡುವವನಾಗಿರಲಾಗಿ ಕೊರತೆಯಿದ್ದವನಂತೆ ಮನುಷ್ಯರ ಕೈಗಳಿಂದ ಸೇವೆಹೊಂದುವವನೂ ಅಲ್ಲ.

26 ಆತನು ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ ಅವರವರು ಇರತಕ್ಕ ಕಾಲಗಳನ್ನೂ ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ ಭೂಮಂಡಲದಲ್ಲೆಲ್ಲಾ ವಾಸಮಾಡಿ

27 ಒಂದು ವೇಳೆ ಅವರು ತಡಕಾಡಿ ಕಂಡುಕೊಂಡಾರೇನೋ ಎಂದು ತನ್ನನ್ನು ಹುಡುಕುವವರನ್ನಾಗಿ ಮಾಡಿದನು. ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.

28 ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ, ಇರುತ್ತೇವೆ. ನಿಮ್ಮ ಕವಿಗಳಲ್ಲಿಯೂ ಕೆಲವರು - ನಾವು ಆತನ ಸಂತಾನದವರೇ ಎಂಬದಾಗಿ ಹೇಳಿದ್ದಾರೆ.

29 ನಾವು ದೇವರ ಸಂತಾನದವರಾಗಿದ್ದ ಮೇಲೆ ದೈವವು ಮನುಷ್ಯನ ಶಿಲ್ಪವಿದ್ಯೆಯಿಂದಲೂ ಕಲ್ಪನೆಯಿಂದಲೂ ಕೆತ್ತಿರುವ ಚಿನ್ನ ಬೆಳ್ಳಿ ಕಲ್ಲುಗಳಿಗೆ ಸಮಾನವೆಂದು ನಾವು ಭಾವಿಸಬಾರದು.

30 ಆ ಅಜ್ಞಾನಕಾಲಗಳನ್ನು ದೇವರು ಲಕ್ಷ್ಯಕ್ಕೆ ತರಲಿಲ್ಲ; ಈಗಲಾದರೋ ಆತನು ನಾಲ್ಕು ದಿಕ್ಕಿನಲ್ಲಿರುವ ಮನುಷ್ಯರೆಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪ್ಪಣೆಕೊಡುತ್ತಾನೆ.

31 ಯಾಕಂದರೆ ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸವನ್ನು ಗೊತ್ತುಮಾಡಿದ್ದಾನೆ. ಅವನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ಇದನ್ನು ನಂಬುವದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ ಅಂದನು.

32 ಸತ್ತವರು ಎದ್ದುಬರುವ ವಿಷಯವನ್ನು ಕೇಳಿದಾಗ ಕೆಲವರು ಅಪಹಾಸ್ಯಮಾಡಿದರು; ಬೇರೆ ಕೆಲವರು - ನೀನು ಈ ವಿಷಯದಲ್ಲಿ ಹೇಳುವದನ್ನು ನಾವು ಇನ್ನೊಂದು ಸಾರಿ ಕೇಳುತ್ತೇವೆ ಅಂದರು.

33 ಹೀಗಿರಲು ಪೌಲನು ಅವರ ಮಧ್ಯದಿಂದ ಹೊರಟುಹೋದನು.

34 ಕೆಲವರು ಅವನನ್ನು ಅಂಟಿಕೊಂಡು ನಂಬಿದರು; ನಂಬಿದವರಲ್ಲಿ ಅರಿಯೊಪಾಗದ ಸಭೆಯವನಾದ ದಿಯೊನುಸ್ಯನೂ ದಾಮರಿಯೆಂಬಾಕೆಯೂ ಇನ್ನು ಕೆಲವರೂ ಇದ್ದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು