Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅಪೊಸ್ತಲರ ಕೃತ್ಯಗಳು 16 - ಕನ್ನಡ ಸತ್ಯವೇದವು J.V. (BSI)


ಪೌಲನು ತಿಮೊಥೆಯನನ್ನು ಕೂಡಿಸಿಕೊಂಡದ್ದು; ಕನಸಿನ ದೆಸೆಯಿಂದ ಮಕೆದೋನ್ಯಕ್ಕೆ ಹೋದದ್ದು

1 ಆಮೇಲೆ ಅವನು ದೆರ್ಬೆಗೂ ಲುಸ್ತ್ರಕ್ಕೂ ಬಂದನು. ಲುಸ್ತ್ರದಲ್ಲಿ ತಿಮೊಥೆಯನೆಂಬ ಒಬ್ಬ ಶಿಷ್ಯನಿದ್ದನು. ಅವನು ಕ್ರಿಸ್ತನನ್ನು ನಂಬಿದ್ದ ಒಬ್ಬ ಯೆಹೂದ್ಯ ಸ್ತ್ರೀಯ ಮಗನು. ಅವನ ತಂದೆ ಗ್ರೀಕನು.

2 ಅವನ ವಿಷಯವಾಗಿ ಲುಸ್ತ್ರದಲ್ಲಿಯೂ ಇಕೋನ್ಯದಲ್ಲಿಯೂ ಇದ್ದ ಸಹೋದರರು ಒಳ್ಳೇ ಸಾಕ್ಷಿಹೇಳುತ್ತಿದ್ದರು.

3 ಅವನು ತನ್ನ ಸಂಗಡ ಬರಬೇಕೆಂದು ಪೌಲನು ಅಪೇಕ್ಷಿಸಿ ಆಯಾ ಸ್ಥಳಗಳಲ್ಲಿದ್ದ ಯೆಹೂದ್ಯರ ನಿವಿುತ್ತವಾಗಿ ಅವನಿಗೆ ಸುನ್ನತಿ ಮಾಡಿಸಿದನು. ಯಾಕಂದರೆ ಅವನ ತಂದೆ ಗ್ರೀಕನೆಂದು ಎಲ್ಲರಿಗೂ ಗೊತ್ತಿತ್ತು.

4 ಬಳಿಕ ಅವರು ಊರೂರುಗಳಲ್ಲಿ ಸಂಚಾರಮಾಡುತ್ತಿರುವಾಗ ಯೆರೂಸಲೇವಿುನಲ್ಲಿದ್ದ ಅಪೊಸ್ತಲರೂ ಸಭೆಯ ಹಿರಿಯರೂ ನಿರ್ಣಯಿಸಿದ್ದ ವಿಧಿಗಳನ್ನು ಅವರಿಗೆ ಒಪ್ಪಿಸಿ ಇವುಗಳನ್ನು ನೀವು ಅನುಸರಿಸಿ ನಡೆಯಬೇಕೆಂದು ಬೋಧಿಸಿದರು.

5 ಸಭೆಗಳು ಕ್ರಿಸ್ತನಂಬಿಕೆಯಲ್ಲಿ ದೃಢವಾಗುತ್ತಾ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಾ ಬಂದವು.

6 ಆಸ್ಯಸೀಮೆಯಲ್ಲಿ ವಾಕ್ಯವನ್ನು ಹೇಳಬಾರದೆಂದು ಪವಿತ್ರಾತ್ಮನು ತಡೆದದ್ದರಿಂದ ಅವರು ಫ್ರುಗ್ಯ ಗಲಾತ್ಯ ಸೀಮೆಯನ್ನು ಹಾದುಹೋಗಿ

7 ಮೂಸ್ಯಕ್ಕೆ ಎದುರಾಗಿ ಬಂದಾಗ ಬಿಥೂನ್ಯಕ್ಕೆ ಹೋಗುವ ಪ್ರಯತ್ನಮಾಡಿದರು. ಅಲ್ಲಿಯೂ ಯೇಸುವಿನ ಆತ್ಮನು ಅವರನ್ನು ಹೋಗಗೊಡಿಸಲಿಲ್ಲ.

8 ಆಗ ಅವರು ಮೂಸ್ಯವನ್ನು ಸುಮ್ಮನೆ ದಾಟಿ ತ್ರೋವಕ್ಕೆ ಬಂದರು.

9 ಅಲ್ಲಿ ರಾತ್ರಿಕಾಲದಲ್ಲಿ ಪೌಲನಿಗೆ ಒಂದು ದರ್ಶನವಾಯಿತು, ಏನಂದರೆ - ಮಕೆದೋನ್ಯ ದೇಶದವನಾದ ಒಬ್ಬ ಮನುಷ್ಯನು ನಿಂತುಕೊಂಡು - ನೀನು ಸಮುದ್ರವನ್ನು ದಾಟಿ ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕೆಂದು ಅವನನ್ನು ಬೇಡಿಕೊಳ್ಳುತ್ತಿದ್ದನು.

10 ಅವನಿಗೆ ಆ ದರ್ಶನವಾದ ಮೇಲೆ ಆ ಸೀಮೆಯವರಿಗೆ ಸುವಾರ್ತೆಯನ್ನು ಸಾರುವದಕ್ಕೆ ದೇವರು ನಮ್ಮನ್ನು ಕರೆದಿದ್ದಾನೆಂದು ನಾವು ನಿಶ್ಚಯಿಸಿಕೊಂಡು ಕೂಡಲೆ ಮಕೆದೋನ್ಯಕ್ಕೆ ಹೊರಟು ಹೋಗುವ ಪ್ರಯತ್ನಮಾಡಿದೆವು.

11 ನಾವು ತ್ರೋವದಿಂದ ಸಮುದ್ರಪ್ರಯಾಣಮಾಡಿ ನೆಟ್ಟಗೆ ಸಮೊಥ್ರಾಕೆಗೆ ಬಂದು ಮರುದಿನ ನೆಯಾಪೊಲಿಗೆ ಸೇರಿ ಅಲ್ಲಿಂದ ಫಿಲಿಪ್ಪಿಗೆ ಮುಟ್ಟಿದೆವು.


ಫಿಲಿಪ್ಪಿ ಪಟ್ಟಣದಲ್ಲಿ ಸಭೆಯನ್ನು ಸ್ಥಾಪಿಸಿದ್ದು; ಪೌಲ ಸೀಲರು ಸೆರೆಯಲ್ಲಿ ಬಿದ್ದದ್ದು; ಭೂಕಂಪ ಉಂಟಾಗಿ ಅವರು ಬಿಡಿಸಲ್ಪಟ್ಟದ್ದು

12 ಫಿಲಿಪ್ಪಿ ಎಂಬದು ಮಕೆದೋನ್ಯದಲ್ಲಿ ಪ್ರಧಾನ ಪಟ್ಟಣವೂ ರೋಮಾಪುರದವರ ಒಂದು ಪ್ರವಾಸಸ್ಥಾನವೂ ಆಗಿದೆ. ಈ ಪಟ್ಟಣದಲ್ಲಿ ನಾವು ಕೆಲವು ದಿವಸ ಇದ್ದೆವು.

13 ನದೀತೀರದಲ್ಲಿ ದೇವರ ಪ್ರಾರ್ಥನೆ ನಡೆಯುವ ಸ್ಥಳ ಇರುವದೆಂದು ನೆನಸಿ ಸಬ್ಬತ್‍ದಿನದಲ್ಲಿ ಊರಬಾಗಿಲಿನ ಹೊರಗೆ ಹೋಗಿ ಅಲ್ಲಿ ಕೂಡಿಬಂದಿದ್ದ ಸ್ತ್ರೀಯರ ಸಂಗಡ ಕೂತುಕೊಂಡು ಮಾತಾಡಿದೆವು.

14 ನಮ್ಮ ಮಾತುಗಳನ್ನು ಕೇಳಿದವರಲ್ಲಿ ಲುದ್ಯಳೆಂಬ ಒಬ್ಬ ಸ್ತ್ರೀಯು ಇದ್ದಳು. ಆಕೆ ಧೂಮ್ರವರ್ಣದ ವಸ್ತ್ರಗಳನ್ನು ಮಾರುವವಳೂ ಥುವತೈರ ಎಂಬ ಊರಿನವಳೂ ದೇವಭಕ್ತಳೂ ಆಗಿದ್ದಳು. ಪೌಲನು ಹೇಳಿದ ಮಾತುಗಳಿಗೆ ಲಕ್ಷ್ಯಕೊಡುವದಕ್ಕೆ ಕರ್ತನು ಆಕೆಯ ಹೃದಯವನ್ನು ತೆರೆದನು.

15 ಆಕೆಯೂ ಆಕೆಯ ಮನೆಯವರೂ ದೀಕ್ಷಾಸ್ನಾನ ಮಾಡಿಸಿಕೊಂಡ ಮೇಲೆ ಆಕೆ - ನಾನು ಕರ್ತನನ್ನು ನಂಬಿದವಳೆಂದು ನಿಶ್ಚಯಿಸಿಕೊಂಡಿದ್ದರೆ ನನ್ನ ಮನೆಯಲ್ಲಿ ಬಂದು ಇರ್ರಿ ಎಂದು ಬೇಡಿಕೊಂಡು ನಮ್ಮನ್ನು ಬಲವಂತ ಮಾಡಿದಳು.

16 ಬಳಿಕ ಪ್ರಾರ್ಥನೆ ನಡೆಯುವ ಆ ಸ್ಥಳಕ್ಕೆ ನಾವು ಹೋಗುತ್ತಿರುವಾಗ ಗಾರುಡಗಾತಿಯಾದ ಒಬ್ಬ ದಾಸಿಯು ನಮ್ಮೆದುರಿಗೆ ಬಂದಳು. ಅವಳು ಕಣಿ ಹೇಳುವದರಿಂದ ಅವಳ ಯಜಮಾನರಿಗೆ ಬಹು ಆದಾಯವಾಗುತ್ತಿತ್ತು.

17 ಪೌಲನೂ ನಾವೂ ಹೋಗುತ್ತಿರುವಾಗ ಅವಳು ಹಿಂದೆ ಬಂದು - ಈ ಮನುಷ್ಯರು ಪರಾತ್ಪರನಾದ ದೇವರ ದಾಸರು; ನಿಮಗೆ ರಕ್ಷಣೆಯ ಮಾರ್ಗವನ್ನು ಸಾರುತ್ತಾರೆ ಎಂದು ಕೂಗುತ್ತಿದ್ದಳು.

18 ಹೀಗೆ ಅನೇಕ ದಿವಸ ಮಾಡಿದ್ದರಿಂದ ಪೌಲನು ಬಹಳವಾಗಿ ಬೇಸರಗೊಂಡು ಹಿಂತಿರುಗಿ ಆ ದೆವ್ವಕ್ಕೆ - ಅವಳನ್ನು ಬಿಟ್ಟುಹೋಗು ಎಂದು ಯೇಸು ಕ್ರಿಸ್ತನ ಹೆಸರಿನಲ್ಲಿ ನಿನಗೆ ಅಪ್ಪಣೆಕೊಡುತ್ತೇನೆ ಎಂದು ಹೇಳಿದನು. ಅದೇ ಗಳಿಗೆಯಲ್ಲಿಯೇ ಅದು ಬಿಟ್ಟುಹೋಯಿತು.

19 ಅವಳ ಯಜಮಾನರು ತಮ್ಮ ಆದಾಯದ ನಿರೀಕ್ಷೆ ತಪ್ಪಿತಲ್ಲಾ ಎಂದು ತಿಳಿದು ಪೌಲನನ್ನೂ ಸೀಲನನ್ನೂ ಹಿಡಿದು ಚಾವಡಿಗೆ ಅಧಿಕಾರಿಗಳ ಬಳಿಗೆ ಎಳಕೊಂಡು ಹೋದರು.

20 ಅವರನ್ನು ಅಧಿಪತಿಗಳ ಮುಂದೆ ತಂದು - ಈ ಮನುಷ್ಯರು ನಮ್ಮ ಪಟ್ಟಣವನ್ನು ಬಹಳವಾಗಿ ಗಲಿಬಿಲಿ ಮಾಡುತ್ತಾರೆ;

21 ಇವರು ಯೆಹೂದ್ಯರಾಗಿದ್ದು ರೋಮಾಯರಾದ ನಾವು ಅವಲಂಬಿಸಿ ನಡಿಸಕೂಡದಂಥ ಆಚಾರಗಳನ್ನು ಪ್ರಕಟಿಸುತ್ತಾರೆ ಅಂದರು.

22 ಆಗ ದೊಂಬೀ ಜನರು ಕೂಡಿ ಅವರಿಗೆ ವಿರೋಧವಾಗಿ ಒಟ್ಟಾಗಿ ಎದ್ದರು; ಮತ್ತು ಅಧಿಪತಿಗಳು - ಇವರ ವಸ್ತ್ರಗಳನ್ನು ಹರಿದು ತೆಗೆದು ಚಡಿಗಳಿಂದ ಹೊಡೆಯಬೇಕೆಂದು ಅಪ್ಪಣೆಕೊಟ್ಟರು.

23 ಅವರಿಗೆ ಬಹಳ ಪೆಟ್ಟುಗಳನ್ನು ಹೊಡಿಸಿದ ಮೇಲೆ ಸೆರೆಮನೆಯೊಳಗೆ ಹಾಕಿಸಿ - ಇವರನ್ನು ಭದ್ರವಾಗಿ ಕಾಯಬೇಕೆಂದು ಸೆರೆಯ ಯಜಮಾನನಿಗೆ ಖಂಡಿತವಾಗಿ ಹೇಳಿದರು.

24 ಅವನು ಇಂಥಾ ಅಪ್ಪಣೆಯನ್ನು ಹೊಂದಿ ಅವರನ್ನು ಸೆರೆಮನೆಯ ಒಳಕೋಣೆಯಲ್ಲಿ ಹಾಕಿ ಅವರ ಕಾಲುಗಳಿಗೆ ಕೋಳವನ್ನು ಹಾಕಿ ಬಿಗಿಸಿದನು.

25 ಮಧ್ಯರಾತ್ರಿಯಲ್ಲಿ ಪೌಲನೂ ಸೀಲನೂ ಪ್ರಾರ್ಥನೆ ಮಾಡುವವರಾಗಿ ದೇವರಿಗೆ ಸ್ತುತಿಪದಗಳನ್ನು ಹಾಡುತ್ತಿದ್ದರು; ಸೆರೆಯಲ್ಲಿದ್ದವರು ಲಕ್ಷ್ಯವಿಟ್ಟು ಕೇಳುತ್ತಿದ್ದರು.

26 ಅಕಸ್ಮಾತ್ತಾಗಿ ಮಹಾಭೂಕಂಪವುಂಟಾಯಿತು; ಸೆರೆಮನೆಯ ಅಸ್ತಿವಾರಗಳು ಕದಲಿದವು. ಅದೇ ಕ್ಷಣದಲ್ಲಿ ಕದಗಳೆಲ್ಲಾ ತೆರೆದವು, ಎಲ್ಲರ ಬೇಡಿಗಳು ಕಳಚಿಬಿದ್ದವು.

27 ಸೆರೆಯ ಯಜಮಾನನು ನಿದ್ದೆಯಿಂದ ಎಚ್ಚತ್ತು ಸೆರೆಮನೆಯ ಕದಗಳು ತೆರೆದಿರುವದನ್ನು ಕಂಡು ಸೆರೆಯಲ್ಲಿದ್ದವರು ಓಡಿಹೋದರೆಂದು ಭಾವಿಸಿ ಕತ್ತಿಯನ್ನು ಹಿರಿದು ಆತ್ಮಹತ್ಯ ಮಾಡಿಕೊಳ್ಳಬೇಕೆಂದಿದ್ದನು.

28 ಆದರೆ ಪೌಲನು ಮಹಾಶಬ್ದದಿಂದ ಕೂಗಿ ಅವನಿಗೆ - ನೀನೇನೂ ಕೇಡು ಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲೇ ಇದ್ದೇವೆ ಎಂದು ಹೇಳಲು

29 ಅವನು - ದೀಪ ತರಬೇಕೆಂದು ಕೂಗಿ ಒಳಕ್ಕೆ ಹಾರಿ ನಡುಗುತ್ತಾ ಪೌಲ ಸೀಲರ ಮುಂದೆ ಬಿದ್ದನು.

30 ಮತ್ತು ಅವರನ್ನು ಹೊರಗೆ ಕರಕೊಂಡು ಬಂದು - ಸ್ವಾವಿುಗಳೇ, ನಾನು ರಕ್ಷಣೆಹೊಂದುವದಕ್ಕೆ ಏನು ಮಾಡಬೇಕೆಂದು ಕೇಳಲು

31 ಅವರು - ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆಹೊಂದುವಿ, ನಿನ್ನ ಮನೆಯವರೂ ರಕ್ಷಣೆಹೊಂದುವರು ಎಂದು ಹೇಳಿ ಅವನಿಗೂ ಅವನ ಮನೆಯಲ್ಲಿದ್ದವರೆಲ್ಲರಿಗೂ ದೇವರ ವಾಕ್ಯವನ್ನು ತಿಳಿಸಿದರು.

32 ಆಮೇಲೆ ಅವನು ರಾತ್ರಿಯ ಅದೇ ಗಳಿಗೆಯಲ್ಲಿ

33 ಅವರನ್ನು ಕರಕೊಂಡುಹೋಗಿ ಅವರ ಗಾಯಗಳನ್ನು ತೊಳೆದು ಕೂಡಲೆ ತಾನು ತನ್ನವರೆಲ್ಲರ ಸಹಿತವಾಗಿ ದೀಕ್ಷಾಸ್ನಾನಮಾಡಿಸಿಕೊಂಡನು.

34 ತರುವಾಯ ಅವರನ್ನು ತನ್ನ ಮನೆಗೆ ಕರಕೊಂಡು ಹೋಗಿ ಊಟಮಾಡಿಸಿದನು. ಅವನು ತನ್ನ ಮನೆಯವರೆಲ್ಲರ ಸಂಗಡ ನಂಬಿ ಉಲ್ಲಾಸಗೊಂಡನು.

35 ಬೆಳಗಾದ ಮೇಲೆ ಅಧಿಪತಿಗಳು ಆ ಮನುಷ್ಯರನ್ನು ಬಿಟ್ಟುಬಿಡು ಎಂದು ಜವಾನರ ಕೈಯಲ್ಲಿ ಹೇಳಿಕಳುಹಿಸಿದರು.

36 ಸೆರೇಯಜಮಾನನು ಈ ಮಾತನ್ನು ಪೌಲನಿಗೆ ತಿಳಿಸಿ - ಅಧಿಪತಿಗಳು ನಿಮ್ಮನ್ನು ಬಿಟ್ಟುಬಿಡಬೇಕೆಂದು ಹೇಳಿಕಳುಹಿಸಿದ್ದಾರೆ, ಆದದರಿಂದ ಈಗ ನೀವು ಸಮಾಧಾನದಿಂದ ಹೊರಟುಹೋಗಿರಿ ಎಂದು ಹೇಳಿದನು.

37 ಅದಕ್ಕೆ ಪೌಲನು - ಅವರು ವಿಚಾರಣೆಮಾಡದೆ ರೋಮಾಪುರದ ಹಕ್ಕುದಾರರಾದ ನಮ್ಮನ್ನು ಎಲ್ಲರ ಮುಂದೆ ಹೊಡಿಸಿ ಸೆರೆಮನೆಯೊಳಗೆ ಹಾಕಿಸಿದರು; ಈಗ ನಮ್ಮನ್ನು ಗುಪ್ತವಾಗಿ ಹೊರಗೆ ಕಳುಹಿಸುತ್ತಾರೋ? ಹಾಗೆ ಎಂದಿಗೂ ಆಗಕೂಡದು; ಅವರೇ ಬಂದು ನಮ್ಮನ್ನು ಹೊರಗೆ ಕರಕೊಂಡುಹೋದರೆ ಸರಿ ಎಂದು ಹೇಳಿದನು.

38 ಜವಾನರು ಈ ಮಾತುಗಳನ್ನು ಅಧಿಪತಿಗಳಿಗೆ ತಿಳಿಸಿದಾಗ ರೋಮಾಪುರದ ಹಕ್ಕುದಾರರು ಎಂಬ ಮಾತನ್ನು ಅವರು ಕೇಳಿ ಭಯಪಟ್ಟರು;

39 ಮತ್ತು ಅವರ ಬಳಿಗೆ ಹೋಗಿ ವಿನಯವಾಗಿ ಮಾತಾಡಿ ಹೊರಕ್ಕೆ ಕರೆದುಕೊಂಡು ಬಂದು - ನೀವು ಊರನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು.

40 ಆಗ ಅವರು ಸೆರೆಮನೆಯೊಳಗಿಂದ ಹೊರಟು ಲುದ್ಯಳ ಮನೆಗೆ ಬಂದು ಸಹೋದರರನ್ನು ನೋಡಿ ಅವರನ್ನು ಧೈರ್ಯಗೊಳಿಸಿ ಹೊರಟುಹೋದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು