ಅಪೊಸ್ತಲರ ಕೃತ್ಯಗಳು 13 - ಕನ್ನಡ ಸತ್ಯವೇದವು J.V. (BSI)ಸುವಾರ್ತೆಯನ್ನು ಸಾರುವದಕ್ಕೆ ಪೌಲನು ಮಾಡಿದ ಮೊದಲನೆಯ ಪ್ರಯಾಣದ ಸಂಗತಿಗಳು (13.1-14.28) ಬಾರ್ನಬ ಸೌಲರು ಕುಪ್ರದ್ವೀಪಕ್ಕೆ ಹೋದದ್ದು ಎಲುಮನೆಂಬ ಮಂತ್ರವಾದಿಯನ್ನು ಕುರಿತದ್ದು 1 ಅಂತಿಯೋಕ್ಯದಲ್ಲಿದ್ದ ಸಭೆಯೊಳಗೆ ಪ್ರವಾದಿಗಳೂ ಬೋಧಕರೂ ಇದ್ದರು; ಯಾರಾರಂದರೆ - ಬಾರ್ನಬ, ನೀಗರನೆಂಬ ಸಿಮೆಯೋನ, ಕುರೇನ್ಯದ ಲೂಕ್ಯ, ಉಪರಾಜನಾದ ಹೆರೋದನ ಸಾಕತಮ್ಮನಾದ ಮೆನಹೇನ, ಸೌಲ ಇವರೇ. 2 ಇವರು ಕರ್ತನನ್ನು ಸೇವಿಸುತ್ತಾ ಉಪವಾಸ ಮಾಡುತ್ತಾ ಇದ್ದಾಗ ಪವಿತ್ರಾತ್ಮನು - ನಾನು ಬಾರ್ನಬ ಸೌಲರನ್ನು ಕರೆದ ಕೆಲಸಕ್ಕಾಗಿ ಅವರನ್ನು ಪ್ರತ್ಯೇಕಿಸಿರಿ ಎಂದು ಹೇಳಿದನು. 3 ಆಗ ಅವರು ಉಪವಾಸವಿದ್ದು ಪ್ರಾರ್ಥನೆಮಾಡಿ ಆ ಇಬ್ಬರ ಮೇಲೆ ಹಸ್ತಾರ್ಪಣ ಮಾಡಿ ಅವರನ್ನು ಕಳುಹಿಸಿಕೊಟ್ಟರು. 4 ಹೀಗೆ ಅವರು ಪವಿತ್ರಾತ್ಮನಿಂದ ಕಳುಹಿಸಿಕೊಂಡವರಾಗಿ ಸೆಲ್ಯೂಕ್ಯಕ್ಕೆ ಬಂದರು; ಅಲ್ಲಿಂದ ಸಮುದ್ರ ಪ್ರಯಾಣವಾಗಿ ಕುಪ್ರದ್ವೀಪಕ್ಕೆ ಹೋದರು. 5 ಸಲಮೀಸಿಗೆ ಸೇರಿದಾಗ ಯೆಹೂದ್ಯರ ಸಭಾಮಂದಿರಗಳಲ್ಲಿ ದೇವರ ವಾಕ್ಯವನ್ನು ಪ್ರಸಿದ್ಧಿಪಡಿಸಿದರು. ಯೋಹಾನನು ಪರಿಚಾರಕನಾಗಿ ಅವರ ಸಂಗಡ ಇದ್ದನು. 6 ಅವರು ದ್ವೀಪದಲ್ಲೆಲ್ಲಾ ಸಂಚಾರಮಾಡಿ ಪಾಫೋಸ್ ಎಂಬ ಊರಿನ ತನಕ ಬಂದು ಅಲ್ಲಿ ಸುಳ್ಳುಪ್ರವಾದಿಯೂ ಮಂತ್ರವಾದಿಯೂ ಆಗಿದ್ದ ಬಾರ್‍ಯೇಸು ಎಂಬ ಒಬ್ಬ ಯೆಹೂದ್ಯ ಮನುಷ್ಯನನ್ನು ಕಂಡರು. 7 ಅವನು ಬುದ್ಧಿವಂತನಾಗಿದ್ದ ಸೆರ್ಗ್ಯಪೌಲನೆಂಬ ಅಧಿಪತಿಯ ಹತ್ತಿರದಲ್ಲಿದ್ದನು. ಅಧಿಪತಿಯು ಬಾರ್ನಬ ಸೌಲರನ್ನು ತನ್ನ ಬಳಿಗೆ ಕರಿಸಿ ದೇವರ ವಾಕ್ಯವನ್ನು ಕೇಳುವದಕ್ಕೆ ಅಪೇಕ್ಷೆ ಅದೆ ಎಂದು ಹೇಳಿದನು. 8 ಆದರೆ ಆ ಮಂತ್ರವಾದಿಯಾದ ಎಲುಮನು ಅವರಿಗೆ ಎದುರು ನಿಂತು ಅಧಿಪತಿಯು ಕ್ರಿಸ್ತನನ್ನು ನಂಬದ ಹಾಗೆ ಪ್ರಯತ್ನಿಸಿದನು. ಎಲುಮನೆಂಬ ಹೆಸರಿಗೆ ಮಂತ್ರವಾದಿ ಎಂಬದೇ ಅರ್ಥ. 9 ಆಗ ಪೌಲನೆನಿಸಿಕೊಳ್ಳುವ ಸೌಲನು ಪವಿತ್ರಾತ್ಮಭರಿತನಾಗಿ ಅವನನ್ನು ದೃಷ್ಟಿಸಿ ನೋಡಿ - 10 ಎಲೋ, ಎಲ್ಲಾ ಮೋಸದಿಂದಲೂ ಎಲ್ಲಾ ಕೆಟ್ಟತನದಿಂದಲೂ ತುಂಬಿರುವವನೇ, ಸೈತಾನನ ಮಗನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೀಟಾದ ಮಾರ್ಗಗಳನ್ನು ಡೊಂಕುಮಾಡುವದನ್ನು ಬಿಡುವದಿಲ್ಲವೋ? 11 ಇಗೋ, ಕರ್ತನು ನಿನ್ನ ಮೇಲೆ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಕೆಲವು ಕಾಲ ಸೂರ್ಯನನ್ನು ಕಾಣದೆ ಇರುವಿ ಎಂದು ಹೇಳಿದನು. ಆ ಕ್ಷಣವೇ ಅವನಿಗೆ ಕಣ್ಣು ಮೊಬ್ಬಾಗಿ ಕತ್ತಲೆ ಉಂಟಾಯಿತು; ಅವನು ಕೈಹಿಡಿಯುವವರನ್ನು ಹುಡುಕುತ್ತಾ ತಿರುಗಾಡಿದನು. 12 ಅಧಿಪತಿಯು ಆ ಸಂಗತಿಯನ್ನು ನೋಡಿ ಕರ್ತನ ಬೋಧನೆಗೆ ಅತ್ಯಾಶ್ಚರ್ಯಪಟ್ಟು ನಂಬುವವನಾದನು. ಪಿಸಿದ್ಯದ ಅಂತಿಯೋಕ್ಯದಲ್ಲಿ ಪೌಲನು ಇಸ್ರಾಯೇಲ್ ಜನರಿಗೆ ಉಪನ್ಯಾಸಮಾಡಿದ್ದು 13 ತರುವಾಯ ಪೌಲನೂ ಅವನ ಜೊತೆಯಲ್ಲಿದ್ದವರೂ ಪಾಫೋಸೂರನ್ನು ಬಿಟ್ಟು ಸಮುದ್ರಪ್ರಯಾಣ ಮಾಡಿ ಪಂಫುಲ್ಯ ಸೀಮೆಗೆ ಸೇರಿದ ಪೆರ್ಗೆಗೆ ಬಂದರು; ಯೋಹಾನನು ಅವರನ್ನು ಬಿಟ್ಟು ಹಿಂತಿರುಗಿ ಯೆರೂಸಲೇವಿುಗೆ ಹೋದನು. 14 ಆಮೇಲೆ ಅವರು ಪೆರ್ಗೆಯಿಂದ ಸಂಚಾರಮಾಡಿ ಪಿಸಿದ್ಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್‍ದಿನದಲ್ಲಿ ಅವರು ಸಭಾಮಂದಿರಕ್ಕೆ ಹೋಗಿ ಕೂತುಕೊಂಡರು. 15 ಧರ್ಮಶಾಸ್ತ್ರವು ಪ್ರವಾದಿಗಳ ಗ್ರಂಥವು ಇವುಗಳ ಪಾರಾಯಣವಾದ ಮೇಲೆ ಸಭಾಮಂದಿರದ ಯಜಮಾನರು - ಸಹೋದರರೇ, ಜನರಿಗೆ ಹೇಳತಕ್ಕ ಬುದ್ಧಿ ಮಾತೇನಾದರೂ ನಿಮಗಿದ್ದರೆ ಹೇಳಿರಿ ಎಂದು ಅವರಿಗೆ ಹೇಳಿ ಕಳುಹಿಸಿದರು. 16 ಆಗ ಪೌಲನು ಎದ್ದು ಕೈಸನ್ನೆ ಮಾಡಿ ಹೇಳಿದ್ದೇನಂದರೆ - 17 ಇಸ್ರಾಯೇಲ್ ಜನರೇ, ಮತ್ತು ಯೆಹೂದ್ಯ ಮತಾವಲಂಭಿಗಳೇ, ಕೇಳಿರಿ. ನಮ್ಮ ಇಸ್ರಾಯೇಲ್ ಜನರ ದೇವರು ನಮ್ಮ ಪಿತೃಗಳನ್ನು ಆರಿಸಿಕೊಂಡು ನಮ್ಮ ಜನರು ಐಗುಪ್ತದೇಶದಲ್ಲಿ ಪ್ರವಾಸವಾಗಿದ್ದಾಗ ಅವರನ್ನು ವೃದ್ಧಿಗೆ ತಂದು ಭುಜಬಲದಿಂದ ಆ ದೇಶದೊಳಗಿಂದ ಬರಮಾಡಿದನು. 18 ಆತನು ಸುಮಾರು ನಾಲ್ವತ್ತು ವರುಷಗಳವರೆಗೂ ಅಡವಿಯಲ್ಲಿ ಅವರ ನಡಾವಳಿಯನ್ನು ಸಹಿಸಿಕೊಂಡು 19 ಕಾನಾನ್ ದೇಶದಲ್ಲಿದ್ದ ಅನ್ಯಜನಗಳ ಏಳು ರಾಜ್ಯಗಳನ್ನು ನಿರ್ಮೂಲ ಮಾಡಿ ಆ ಜನರ ದೇಶವನ್ನು ಅವರಿಗೆ ಬಾಧ್ಯವಾಗಿ ಹಂಚಿಕೊಟ್ಟನು. 20 ಇಷ್ಟರೊಳಗೆ ಸುಮಾರು ನಾನೂರೈವತ್ತು ವರುಷಗಳು ಗತಿಸಿದವು. ಇದಾದ ಮೇಲೆ ಪ್ರವಾದಿಯಾದ ಸಮುವೇಲನ ಕಾಲದವರೆಗೆ ನ್ಯಾಯಾಧಿಪತಿಗಳನ್ನು ಕೊಟ್ಟನು. 21 ತರುವಾಯ ಅವರು ತಮಗೆ ಅರಸನು ಬೇಕೆಂದು ಕೇಳಿಕೊಳ್ಳಲು ದೇವರು ಅವರಿಗೆ ಬೆನ್ಯಾಮೀನನ ಕುಲದ ಕೀಷನ ಮಗನಾದ ಸೌಲನನ್ನು ಕೊಟ್ಟನು. ಅವನು ನಾಲ್ವತ್ತು ವರುಷ ಆಳಿದನು. 22 ಆಮೇಲೆ ದೇವರು ಅವನನ್ನು ತೆಗೆದುಹಾಕಿ ದಾವೀದನನ್ನು ಅವರ ಮೇಲೆ ಅರಸನನ್ನಾಗಿ ಮಾಡಿ - ಇಷಯನ ಮಗನಾದ ದಾವೀದನು ನನಗೆ ಸಿಕ್ಕಿದನು, ಅವನು ನನಗೆ ಒಪ್ಪುವ ಮನುಷ್ಯನು, ಅವನು ನನ್ನ ಇಷ್ಟವನ್ನೆಲ್ಲಾ ನೆರವೇರಿಸುವನು ಎಂಬದಾಗಿ ಅವನ ವಿಷಯದಲ್ಲಿ ಸಾಕ್ಷಿಹೇಳಿದನು. 23 ಅವನ ಸಂತಾನದಿಂದ ದೇವರು ತನ್ನ ವಾಗ್ದಾನದ ಪ್ರಕಾರ ಇಸ್ರಾಯೇಲ್ಯರಿಗೆ ಒಬ್ಬ ರಕ್ಷಕನನ್ನು ಹುಟ್ಟಿಸಿದ್ದಾನೆ. 24 ಆ ರಕ್ಷಕನೇ ಯೇಸು. ಆತನ ಆಗಮನಕ್ಕೆ ಮುಂಚೆ ಯೋಹಾನನು ಇಸ್ರಾಯೇಲ್ ಜನರೆಲ್ಲರಿಗೆ - ನೀವು ದೇವರ ಕಡೆಗೆ ತಿರುಗಿಕೊಂಡು ಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿದನು. 25 ಯೋಹಾನನು ತನ್ನ ಸೇವೆಯನ್ನು ಪೂರೈಸುತ್ತಿರುವಾಗ ಜನರಿಗೆ - ನನ್ನನ್ನು ಯಾರೆಂದು ಯೋಚಿಸುತ್ತೀರಿ? ನಾನು ಆತನಲ್ಲ, ಆದರೆ ನನ್ನ ಹಿಂದೆ ಒಬ್ಬನು ಬರುತ್ತಾನೆ, ಆತನ ಪಾದದ ಕೆರಗಳನ್ನು ಬಿಚ್ಚುವದಕ್ಕೆ ನಾನು ಯೋಗ್ಯನಲ್ಲ ಎಂದು ಹೇಳಿದನು. 26 ಸಹೋದರರೇ, ಅಬ್ರಹಾಮನ ವಂಶಸ್ಥರೇ, ಮತ್ತು ನಿಮ್ಮಲ್ಲಿರುವ ಯೆಹೂದ್ಯ ಮತಾವಲಂಭಿಗಳೇ, ನಮಗೆ ಈ ರಕ್ಷಣೆಯ ವಾಕ್ಯವು ಕಳುಹಿಸಿ ಅದೆ. 27 ಯೆರೂಸಲೇವಿುನಲ್ಲಿ ವಾಸವಾಗಿರುವವರೂ ಅವರ ಅಧಿಕಾರಿಗಳೂ ಆತನನ್ನಾಗಲಿ ಪ್ರತಿ ಸಬ್ಬತ್ ದಿನದಲ್ಲಿ ಪಾರಾಯಣವಾಗುವ ಪ್ರವಾದಿಗಳ ವಾಕ್ಯಗಳನ್ನಾಗಲಿ ಗ್ರಹಿಸದೆ ಆತನನ್ನು ಅಪರಾಧಿಯೆಂದು ತೀರ್ಪುಮಾಡಿ ಆ ವಾಕ್ಯಗಳನ್ನೇ ನೆರವೇರಿಸಿದರು. 28 ಮರಣದಂಡನೆಗೆ ಕಾರಣವೇನೂ ತಮಗೆ ಸಿಕ್ಕದಿದ್ದರೂ ಆತನನ್ನು ಕೊಲ್ಲಿಸಬೇಕೆಂದು ಪಿಲಾತನನ್ನು ಕೇಳಿಕೊಂಡರು. 29 ಆತನ ವಿಷಯವಾಗಿ ಶಾಸ್ತ್ರದಲ್ಲಿ ಬರೆದಿರುವದನ್ನೆಲ್ಲಾ ನೆರವೇರಿಸಿದ ಮೇಲೆ ಆತನನ್ನು ಮರದ ಕಂಬದಿಂದ ಇಳಿಸಿ ಸಮಾಧಿಯಲ್ಲಿಟ್ಟರು. 30 ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು. 31 ಮತ್ತು ಆತನು ಗಲಿಲಾಯದಿಂದ ಯೆರೂಸಲೇವಿುಗೆ ತನ್ನ ಜೊತೆಯಲ್ಲಿ ಬಂದವರಿಗೆ ಅನೇಕ ದಿವಸಗಳ ಪರಿಯಂತರ ಕಾಣಿಸಿಕೊಂಡನು. ಅವರು ಈಗ ಜನರ ಮುಂದೆ ಆತನಿಗೆ ಸಾಕ್ಷಿಗಳಾಗಿದ್ದಾರೆ. 32-33 ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನವನ್ನು ನಮ್ಮ ಮಕ್ಕಳಿಗೋಸ್ಕರ ನೆರವೇರಿಸಿದ್ದಾನೆಂಬ ಶುಭಸಮಾಚಾರವನ್ನು ನಾವು ನಿಮಗೆ ಸಾರುವವರಾಗಿದ್ದೇವೆ. ಆತನು ಯೇಸುವನ್ನು ಎಬ್ಬಿಸಿದ್ದರಲ್ಲಿ - ನನಗೆ ನೀನು ಮಗನು, ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ ಎಂದು ಎರಡನೆಯ ಕೀರ್ತನೆಯಲ್ಲಿ ಬರೆದಿರುವ ಮಾತು ನೆರವೇರಿತು. 34 ಇದಲ್ಲದೆ ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಕೊಳೆಯುವ ಅವಸ್ಥೆಗೆ ಸೇರತಕ್ಕವನಲ್ಲವೆಂಬದರ ವಿಷಯದಲ್ಲಿ ದೇವರು ಹೇಳಿರುವದೇನಂದರೆ - ದಾವೀದನಿಗೆ ಖಂಡಿತವಾಗಿ ವಾಗ್ದಾನ ಮಾಡಿದ ಕೃಪಾವರಗಳನ್ನು ನಿಮಗೆ ಕೊಡುತ್ತೇನೆ, ಅವು ನಂಬಿಕೆಯಾದವುಗಳೇ ಎಂಬದು. 35 ಅದಕ್ಕನುಸಾರವಾಗಿ ಆತನು - ನೀನು ನಿನ್ನ ಪ್ರಿಯನಿಗೆ ಕೊಳೆಯುವ ಅವಸ್ಥೆಯನ್ನು ನೋಡಗೊಡಿಸುವದಿಲ್ಲವೆಂದು ಬೇರೊಂದು ಕೀರ್ತನೆಯಲ್ಲಿ ಹೇಳಿದ್ದಾನೆ, 36 ದಾವೀದನಾದರೋ ತನ್ನ ಸಕಾಲದವರಿಗೆ ಸೇವೆಮಾಡಿದನಂತರ ದೈವಸಂಕಲ್ಪದಿಂದ ನಿದ್ದೆಹೋಗಿ ತನ್ನ ಪಿತೃಗಳ ಬಳಿಯಲ್ಲಿ ಇಡಲ್ಪಟ್ಟು ಕೊಳೆಯುವ ಅವಸ್ಥೆಯನ್ನು ಅನುಭವಿಸಿದನು. 37 ಆದರೆ ದೇವರು ಎಬ್ಬಿಸಿದಾತನು ಕೊಳೆಯುವ ಅವಸ್ಥೆಯನ್ನು ಅನುಭವಿಸಲಿಲ್ಲ. 38 ಆದದರಿಂದ ಸಹೋದರರೇ, ಆತನ ಮೂಲಕವಾಗಿ ಪಾಪಪರಿಹಾರವು ದೊರೆಯುತ್ತದೆಂಬದು ನಿಮಗೆ ಸಾರೋಣವಾಗುತ್ತದೆಂದು ನಿಮಗೆ ತಿಳಿದಿರಲಿ. 39 ಮೋಶೆಯ ಧರ್ಮಶಾಸ್ತ್ರದ ಮೂಲಕ ನೀವು ಬಿಡುಗಡೆಹೊಂದಲಾಗದ ಎಲ್ಲಾ ಪಾಪಗಳಿಂದ ನಂಬುವವರೆಲ್ಲರು ಆತನ ಮೂಲಕವಾಗಿ ಬಿಡುಗಡೆ ಹೊಂದಿ ನೀತಿವಂತರೆನಿಸಿಕೊಳ್ಳುತ್ತಾರೆ. 40 ಹೀಗಿರಲಾಗಿ ಪ್ರವಾದಿಗಳ ಗ್ರಂಥದಲ್ಲಿ ಹೇಳಿರುವದು ನಿಮಗೆ ಸಂಭವಿಸದಂತೆ ನೋಡಿಕೊಳ್ಳಿರಿ. ಅದೇನಂದರೆ - 41 ಎಲೈ ತಿರಸ್ಕಾರಮಾಡುವವರೇ, ಆಶ್ಚರ್ಯಪಡಿರಿ, ನಾಶವಾಗಿ ಹೋಗಿರಿ. ನಿಮ್ಮ ಕಾಲದಲ್ಲಿ ನಾನು ಒಂದು ಕಾರ್ಯವನ್ನು ಮಾಡುವೆನು; ಆ ಕಾರ್ಯವನ್ನು ಒಬ್ಬನು ನಿಮಗೆ ವಿವರಿಸಿದರೂ ನೀವು ಅದನ್ನು ಎಷ್ಟು ಮಾತ್ರಕ್ಕೂ ನಂಬುವದಿಲ್ಲ ಎಂಬದು ಎಂದು ಹೇಳಿದನು. 42 ಪೌಲನೂ ಬಾರ್ನಬನೂ ಸಭಾಮಂದಿರವನ್ನು ಬಿಟ್ಟುಹೋಗುತ್ತಿರುವಾಗ ಜನರು ಈ ಮಾತುಗಳನ್ನು ಬರುವ ಸಬ್ಬತ್‍ದಿನದಲ್ಲಿಯೂ ತಮಗೆ ಹೇಳಬೇಕೆಂದು ಕೇಳಿಕೊಂಡರು. 43 ಸಭೆಯು ಮುಗಿದ ತರುವಾಯ ಯೆಹೂದ್ಯರಲ್ಲಿಯೂ ದೈವಭಕ್ತರಾಗಿದ್ದ ಯೆಹೂದ್ಯ ಮತಾವಲಂಭಿಗಳಲ್ಲಿಯೂ ಅನೇಕರು ಪೌಲ ಬಾರ್ನಬರನ್ನು ಹಿಂಬಾಲಿಸಿದರು. ಇವರು ಅವರ ಸಂಗಡ ಮಾತಾಡಿ ದೇವರ ಕೃಪಾಶ್ರಯದಲ್ಲಿ ನೆಲೆಗೊಂಡಿರಬೇಕೆಂದು ಅವರನ್ನು ಪ್ರೋತ್ಸಾಹಪಡಿಸಿದರು. 44 ಮುಂದಿನ ಸಬ್ಬತ್‍ದಿನದಲ್ಲಿ ಸ್ವಲ್ಪ ಕಡಿಮೆ ಊರೆಲ್ಲಾ ದೇವರ ವಾಕ್ಯವನ್ನು ಕೇಳುವದಕ್ಕೆ ಕೂಡಿಬಂತು. 45 ಆದರೆ ಜನರು ಗುಂಪುಗುಂಪಾಗಿ ಬರುವದನ್ನು ನೋಡಿ ಯೆಹೂದ್ಯರು ಮತಾಭಿಮಾನದಿಂದ ತುಂಬಿದವರಾಗಿ ಪೌಲನು ಹೇಳಿದ ಮಾತುಗಳಿಗೆ ಎದುರ್ಚಂಡಿಸುತ್ತಾ ದೂಷಣೆ ಮಾಡುತ್ತಾ ಇದ್ದರು. 46 ಆಗ ಪೌಲನೂ ಬಾರ್ನಬನೂ ಧೈರ್ಯದಿಂದ ಮಾತಾಡಿ - ದೇವರ ವಾಕ್ಯವನ್ನು ಮೊದಲು ನಿಮಗೇ ಹೇಳುವದು ಅವಶ್ಯವಾಗಿತ್ತು; ಆದರೆ ನೀವು ಅದನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪುಮಾಡಿಕೊಂಡದ್ದರಿಂದ ಇಗೋ, ನಾವು ನಿಮ್ಮನ್ನು ಬಿಟ್ಟು ಅನ್ಯಜನರ ಕಡೆಗೆ ಹೋಗುತ್ತೇವೆ. 47 ಹಾಗೆಯೇ ಕರ್ತನು ನಮಗೆ ಅಪ್ಪಣೆಕೊಟ್ಟಿದ್ದಾನೆ; ಹೇಗಂದರೆ - ನೀನು ಲೋಕದ ಕಟ್ಟಕಡೆಯವರೆಗೆ ರಕ್ಷಕನಾಗಿರುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇವಿುಸಿದ್ದೇನೆ ಎಂದು ದೇವರು ಹೇಳಿದ್ದಾನೆ ಅಂದರು. 48 ಅಲ್ಲಿದ್ದ ಅನ್ಯಜನರು ಆ ಮಾತನ್ನು ಕೇಳಿ ಸಂತೋಷಪಟ್ಟು ದೇವರ ವಾಕ್ಯವನ್ನು ಹೊಗಳಿದರು; ಮತ್ತು ನಿತ್ಯಜೀವಕ್ಕೆ ನೇವಿುಸಲ್ಪಟ್ಟವರೆಲ್ಲರು ನಂಬಿದರು. 49 ಕರ್ತನ ವಾಕ್ಯವು ಆ ಸೀಮೆಯ ಎಲ್ಲಾ ಕಡೆಗಳಲ್ಲಿ ಹಬ್ಬುತ್ತಾ ಬಂತು. 50 ಆದರೆ ಯೆಹೂದ್ಯರು ತಮ್ಮ ಮತಕ್ಕೆ ಸೇರಿದ್ದ ಕುಲೀನ ಸ್ತ್ರೀಯರನ್ನೂ ಊರಿನ ಪ್ರಮುಖರನ್ನೂ ಪ್ರೇರಿಸಿ ಪೌಲ ಬಾರ್ನಬರ ಮೇಲೆ ಹಿಂಸೆಯನ್ನು ಎಬ್ಬಿಸಿ ಅವರನ್ನು ತಮ್ಮ ಮೇರೆಯಿಂದ ಆಚೆಗೆ ಅಟ್ಟಿದರು. 51 ಇವರು ತಮ್ಮ ಕಾಲಿಗೆ ಹತ್ತಿದ್ದ ದೂಳನ್ನು ಅವರ ಮೇಲೆ ಝಾಡಿಸಿಬಿಟ್ಟು ಇಕೋನ್ಯಕ್ಕೆ ಹೋದರು. 52 ಶಿಷ್ಯರಾದವರು ಸಂತೋಷಪೂರ್ಣರೂ ಪವಿತ್ರಾತ್ಮಭರಿತರೂ ಆದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India