Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅಪೊಸ್ತಲರ ಕೃತ್ಯಗಳು 11 - ಕನ್ನಡ ಸತ್ಯವೇದವು J.V. (BSI)


ಪೇತ್ರನು ಅನ್ಯಜನರೊಂದಿಗೆ ಬಳಿಕೆ ಮಾಡಿದ್ದಕ್ಕೆ ಯೆರೂಸಲೇವಿುನಲ್ಲಿದ್ದ ಯೆಹೂದ್ಯ ಕ್ರೈಸ್ತರು ಆಕ್ಷೇಪಣೆ ಮಾಡಲು ಪೇತ್ರನು ಪ್ರತಿವಾದ ಹೇಳಿದ್ದು

1 ಅನ್ಯಜನರು ಸಹ ದೇವರ ವಾಕ್ಯವನ್ನು ಅಂಗೀಕರಿಸಿದರೆಂಬ ಸಮಾಚಾರವನ್ನು ಅಪೊಸ್ತಲರೂ ಯೂದಾಯದಲ್ಲಿದ್ದ ಸಹೋದರರೂ ಕೇಳಿದರು.

2-3 ಪೇತ್ರನು ಯೆರೂಸಲೇವಿುಗೆ ಬಂದಾಗ ಸುನ್ನತಿಯವರು - ನೀನು ಸುನ್ನತಿಯಿಲ್ಲದವರಲ್ಲಿ ಸೇರಿ ಅವರ ಸಂಗಡ ಊಟಮಾಡಿದೆಯಲ್ಲಾ ಎಂದು ಅವನ ಕೂಡ ವಿವಾದಿಸಿದರು.

4 ಪೇತ್ರನು ನಡೆದ ಸಂಗತಿಯನ್ನು ಅವರಿಗೆ ಮೊದಲಿಂದ ಕ್ರಮವಾಗಿ ವಿವರಿಸಿ ಹೇಳಿದ್ದೇನಂದರೆ -

5 ನಾನು ಯೊಪ್ಪ ಪಟ್ಟಣದಲ್ಲಿ ಪ್ರಾರ್ಥನೆಮಾಡುತ್ತಿದ್ದಾಗ ಧ್ಯಾನಪರವಶನಾಗಿದ್ದ ನನಗೆ ಒಂದು ದರ್ಶನವಾಯಿತು; ಅದೇನಂದರೆ ಆಕಾಶದಿಂದ ನಾಲ್ಕು ಮೂಲೆಗಳನ್ನು ಹಿಡಿದಿದ್ದ ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ಇಳಿಸಲ್ಪಟ್ಟು ನಾನಿದ್ದಲ್ಲಿಗೆ ಬಂತು.

6 ಅದೇನೆಂದು ತಿಳುಕೊಳ್ಳುವದಕ್ಕೆ ನಾನು ಚೆನ್ನಾಗಿ ನೋಡಿದಾಗ ನೆಲದ ಮೇಲೆ ತಿರುಗಾಡುವ ಪಶು ಮೃಗ ಕ್ರಿವಿುಕೀಟಗಳನ್ನೂ ಅಂತರಿಕ್ಷದಲ್ಲಿ ಹಾರಾಡುವ ಹಕ್ಕಿಗಳನ್ನೂ ಕಂಡೆನು.

7 ಆಗ - ಪೇತ್ರನೇ, ಎದ್ದು ಕೊಯ್ದು ತಿನ್ನು ಎಂದು ನನಗೆ ಹೇಳುವ ವಾಣಿಯನ್ನು ಕೇಳಿದೆನು.

8 ನಾನು - ಬೇಡವೇ ಬೇಡ, ಸ್ವಾಮೀ, ಹೊಲೆಯಾದ ಪದಾರ್ಥವಾಗಲಿ ಅಶುದ್ಧ ಪದಾರ್ಥವಾಗಲಿ ಎಂದೂ ನನ್ನ ಬಾಯೊಳಗೆ ಸೇರಿದ್ದಿಲ್ಲ ಅಂದೆನು.

9 ಅದಕ್ಕೆ - ದೇವರು ಶುದ್ಧಮಾಡಿದ್ದನ್ನು ನೀನು ಹೊಲೆ ಎನ್ನಬಾರದು ಎಂಬದಾಗಿ ಎರಡನೆಯ ಸಾರಿ ಆಕಾಶವಾಣಿಯಾಯಿತು.

10 ಹೀಗೆ ಮೂರು ಸಾರಿ ಆಯಿತು. ಆಮೇಲೆ ಎಲ್ಲವೂ ತಿರಿಗಿ ಆಕಾಶಕ್ಕೆ ಎತ್ತಲ್ಪಟ್ಟಿತು.

11 ಆ ಕ್ಷಣದಲ್ಲೇ ಮೂರು ಮಂದಿ ಮನುಷ್ಯರು ನಾವಿದ್ದ ಮನೆಯ ಮುಂದೆ ನಿಂತಿದ್ದರು. ಅವರು ಕೈಸರೈಯದಿಂದ ನನ್ನ ಹತ್ತರಕ್ಕೆ ಕಳುಹಿಸಲ್ಪಟ್ಟವರು.

12 ದೇವರಾತ್ಮನು - ನೀನು ಏನೂ ಭೇದಮಾಡದೆ ಅವರ ಜೊತೆಯಲ್ಲಿ ಹೋಗು ಎಂದು ನನಗೆ ಹೇಳಿದನು. ಈ ಆರು ಮಂದಿ ಸಹೋದರರು ಸಹ ನನ್ನ ಸಂಗಡ ಬಂದರು.

13 ಆ ಮನುಷ್ಯನ ಮನೆಯೊಳಗೆ ನಾವು ಸೇರಲು ಅವನು ನಮಗೆ - ಒಬ್ಬ ದೇವದೂತನು ನನ್ನ ಮನೆಯಲ್ಲಿ ನಿಂತಿರುವದನ್ನು ಕಂಡೆನು. ಆ ದೂತನು - ನೀನು ಯೊಪ್ಪಕ್ಕೆ ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರಿಸು;

14 ಅವನು ನಿನಗೆ ಕೆಲವು ಮಾತುಗಳನ್ನು ಹೇಳುವನು, ಆ ಮಾತುಗಳಿಂದ ನಿನಗೂ ನಿನ್ನ ಮನೆಯವರೆಲ್ಲರಿಗೂ ರಕ್ಷಣೆಯಾಗುವದು ಎಂದು ಹೇಳಿದನೆಂಬದಾಗಿ ತಿಳಿಸಿದನು.

15 ನಾನು ಮಾತಾಡುವದಕ್ಕೆ ಪ್ರಾರಂಭಿಸಿದಾಗ ಪವಿತ್ರಾತ್ಮ ವರವು ಮೊದಲು ನಮ್ಮ ಮೇಲೆ ಇಳಿದಂತೆ ಅವರ ಮೇಲೆಯೂ ಇಳಿಯಿತು.

16 ಆಗ - ಯೋಹಾನನಂತೂ ನೀರಿನ ದೀಕ್ಷಾಸ್ನಾನಮಾಡಿಸಿದನು; ನಿಮಗಾದರೋ ಪವಿತ್ರಾತ್ಮದಲ್ಲಿ ಸ್ನಾನವಾಗುವದು ಎಂದು ಯೇಸುಸ್ವಾವಿು ಹೇಳಿದ ಮಾತು ನನ್ನ ನೆನಪಿಗೆ ಬಂತು.

17 ದೇವರು ಕರ್ತನಾಗಿರುವ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ ಕೊಟ್ಟ ವರಕ್ಕೆ ಸರಿಯಾದ ವರವನ್ನು ಅವರಿಗೂ ಕೊಟ್ಟಿರಲಾಗಿ ದೇವರನ್ನು ತಡೆಯುವದಕ್ಕೆ ನಾನು ಶಕ್ತನೋ?

18 ಹೀಗೆಂದ ಮಾತುಗಳನ್ನು ಆ ಸುನ್ನತಿಯವರು ಕೇಳಿ ಆಕ್ಷೇಪಣೆ ಮಾಡುವದನ್ನು ಬಿಟ್ಟು - ಹಾಗಾದರೆ ದೇವರು ಅನ್ಯಜನರಿಗೂ ಜೀವಕೊಡಬೇಕೆಂದು ಅವರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿದ್ದಾನೆ ಎಂದು ದೇವರನ್ನು ಕೊಂಡಾಡಿದರು.


ಅಂತಿಯೋಕ್ಯದಲ್ಲಿ ಬಹುಜನ ಗ್ರೀಕರು ನಂಬಿದ್ದು; ಬಾರ್ನಬ ಸೌಲರು ಅಲ್ಲಿ ಬೋಧಿಸಿದ್ದು; ಆ ಪಟ್ಟಣದಲ್ಲಿ ಕ್ರೈಸ್ತರೆಂಬ ಹೆಸರು ಉತ್ಪತ್ತಿಯಾದದ್ದು

19 ಸ್ತೆಫನನ ವಿಷಯದಲ್ಲಿ ಉಂಟಾದ ಹಿಂಸೆಯಿಂದ ಚದರಿಹೋದವರು ಯೆಹೂದ್ಯರಿಗೇ ಹೊರತು ಮತ್ತಾರಿಗೂ ವಾಕ್ಯವನ್ನು ಹೇಳದೆ ಫೊಯಿನಿಕೆ ಕುಪ್ರ ಅಂತಿಯೋಕ್ಯ ಪ್ರಾಂತ್ಯಗಳವರೆಗೂ ಸಂಚರಿಸಿದರು.

20 ಅವರಲ್ಲಿ ಕುಪ್ರದ್ವೀಪದವರು ಕೆಲವರೂ ಕುರೇನ್ಯದವರು ಕೆಲವರೂ ಅಂತಿಯೋಕ್ಯಕ್ಕೆ ಬಂದು ಗ್ರೀಕರ ಸಂಗಡಲೂ ಮಾತಾಡಿ ಕರ್ತನಾದ ಯೇಸುವಿನ ವಿಷಯವಾದ ಸುವಾರ್ತೆಯನ್ನು ತಿಳಿಸಿದರು.

21 ಕರ್ತನ ಹಸ್ತವು ಅವರಿಗೆ ಸಹಾಯವಾದ್ದರಿಂದ ಬಹು ಜನರು ನಂಬಿ ಕರ್ತನ ಕಡೆಗೆ ತಿರುಗಿಕೊಂಡರು.

22 ಇವರ ವಿಷಯವಾದ ವರ್ತಮಾನವು ಯೆರೂಸಲೇವಿುನಲ್ಲಿದ್ದ ಸಭೆಯವರ ಕಿವಿಗೆ ಬಿದ್ದಾಗ ಅವರು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿದರು.

23-24 ಅವನು ಒಳ್ಳೆಯವನೂ ಪವಿತ್ರಾತ್ಮಭರಿತನೂ ನಂಬಿಕೆಯಿಂದ ತುಂಬಿದವನೂ ಆಗಿದ್ದನು. ಆದಕಾರಣ ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ನೋಡಿದಾಗ ಸಂತೋಷಪಟ್ಟು - ನೀವು ದೃಢಮನಸ್ಸಿನಿಂದ ಕರ್ತನಲ್ಲಿ ನೆಲೆಗೊಂಡಿರ್ರಿ ಎಂದು ಅವರೆಲ್ಲರಿಗೆ ಬುದ್ಧಿ ಹೇಳಿದನು.

25 ಆಗ ಬಹುಮಂದಿ ಕರ್ತನಿಗೆ ಸೇರಿಕೊಂಡರು. ತರುವಾಯ ಬಾರ್ನಬನು ಸೌಲನನ್ನು ಹುಡುಕುವದಕ್ಕಾಗಿ ತಾರ್ಸಕ್ಕೆ ಹೋಗಿ

26 ಅವನನ್ನು ಕಂಡು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಆಮೇಲೆ ಅವರು ಪೂರಾ ಒಂದು ವರುಷ ಸಭೆಯವರ ಸಂಗಡ ಕೂಡಿದ್ದು ಬಹು ಜನರಿಗೆ ಉಪದೇಶಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಕ್ರೈಸ್ತರೆಂಬ ಹೆಸರು ಮೊದಲು ಬಂತು.


ಬಾರ್ನಬ ಸೌಲರು ಯೆರೂಸಲೇವಿುಗೆ ದ್ರವ್ಯ ಸಹಾಯವನ್ನು ತೆಗೆದುಕೊಂಡು ಹೋದದ್ದು; ಅಷ್ಟರಲ್ಲಿ ಅರಸನಾದ ಹೆರೋದನು ಯಾಕೋಬನನ್ನು ಕೊಲ್ಲಿಸಿ ಪೇತ್ರನನ್ನು ಸೆರೆಯಲ್ಲಿ ಹಾಕಿಸಿದ್ದು; ದೇವದೂತನು ಪೇತ್ರನನ್ನು ಬಿಡಿಸಿದ್ದು; ಅರಸನು ಸತ್ತದ್ದು

27 ಆ ಕಾಲದಲ್ಲಿ ಪ್ರವಾದಿಗಳಾಗಿದ್ದ ಕೆಲವರು ಯೆರೂಸಲೇವಿುನಿಂದ ಅಂತಿಯೋಕ್ಯಕ್ಕೆ ಬಂದರು.

28 ಅವರಲ್ಲಿ ಅಗಬನೆಂಬವನೊಬ್ಬನು ಎದ್ದು ಲೋಕಕ್ಕೆಲ್ಲಾ ದೊಡ್ಡ ಕ್ಷಾಮ ಬರುವದು ಎಂದು ಪವಿತ್ರಾತ್ಮ ಪ್ರೇರಣೆಯಿಂದ ಸೂಚಿಸಿದನು. ಅದು ಕ್ಲೌದ್ಯಚಕ್ರವರ್ತಿಯ ಕಾಲದಲ್ಲಿ ಉಂಟಾಯಿತು;

29 ಆಗ ಆ ಶಿಷ್ಯರಲ್ಲಿ ಪ್ರತಿಯೊಬ್ಬರು ಯೂದಾಯ ಸೀಮೆಯಲ್ಲಿ ವಾಸವಾಗಿದ್ದ ಸಹೋದರರಿಗೆ ತಮ್ಮ ತಮ್ಮ ಶಕ್ತ್ಯನುಸಾರ ದ್ರವ್ಯ ಸಹಾಯಮಾಡಬೇಕೆಂದು ನಿಶ್ಚಯಿಸಿಕೊಂಡರು.

30 ಹಾಗೆಯೇ ಮಾಡಿ ಅದನ್ನು ಬಾರ್ನಬ ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು