2 ಸಮುಯೇಲ 8 - ಕನ್ನಡ ಸತ್ಯವೇದವು J.V. (BSI)ದಾವೀದನು ನಡಿಸಿದ ಯುದ್ಧಗಳೂ ಅವನ ಸರದಾರರೂ 1 ಅನಂತರ ದಾವೀದನು ಹೋಗಿ ಫಿಲಿಷ್ಟಿಯರ ಮೇಲೆ ಬಿದ್ದು ಅವರನ್ನು ಸೋಲಿಸಿ ಅವರ ರಾಜಧಾನಿಯನ್ನು ತೆಗೆದುಕೊಂಡು ಆಡಳಿತವನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡನು. 2 ಇದಲ್ಲದೆ ಅವನು ಮೋವಾಬ್ಯರನ್ನು ಸೋಲಿಸಿ ಅವರನ್ನು ನೆಲಕ್ಕೆ ಹಾಕಿಸಿ ಹಗ್ಗದಿಂದ ಅಳತೆ ಮಾಡಿಸಿ ಎರಡು ಪಾಲು ಜನರನ್ನು ಕೊಲ್ಲಿಸಿ ಒಂದು ಪಾಲು ಉಳಿಸಿದನು. ಮೋವಾಬ್ಯರು ದಾವೀದನ ದಾಸರಾಗಿ ಅವನಿಗೆ ಕಪ್ಪಕೊಡಬೇಕಾಯಿತು. 3 ದಾವೀದನು ಯೂಫ್ರೇಟೀಸ್ ನದಿಯ ಸುತ್ತಣ ಪ್ರದೇಶದಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಾಪಿಸುವದಕ್ಕೆ ಹೋಗುತ್ತಿದ್ದ ರೆಹೋಬನ ಮಗನೂ ಚೋಬದ ಅರಸನೂ ಆದ ಹದದೆಜೆರನನ್ನು ಸೋಲಿಸಿ 4 ಅವನ ಸಾವಿರದ ಏಳುನೂರು ಮಂದಿ ರಾಹುತರನ್ನೂ ಇಪ್ಪತ್ತುಸಾವಿರ ಮಂದಿ ಕಾಲಾಳುಗಳನ್ನೂ ಸೆರೆಹಿಡಿದು ನೂರು ಕುದುರೆಗಳನ್ನಿಟ್ಟುಕೊಂಡು ವಿುಕ್ಕಾದ ಕುದುರೆಗಳ ಹಿಂಗಾಲಿನ ನರಗಳನ್ನು ಕೊಯ್ದುಬಿಟ್ಟನು. 5 ದಮಸ್ಕದ ಅರಾಮ್ಯರು ಚೋಬದ ಅರಸನಾದ ಹದದೆಜೆರನನ್ನು ರಕ್ಷಿಸಬಂದಾಗ ದಾವೀದನು ಅವರನ್ನೂ ಸೋಲಿಸಿ ಅವರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಹತಿಸಿದನು. 6 ದಾವೀದನು ದಮಸ್ಕದ ಅರಾಮ್ ದೇಶದಲ್ಲಿ ಕಾವಲುದಂಡನ್ನಿರಿಸಿದನು. ಹೀಗೆ ಅರಾಮ್ಯರು ಅವನ ಸೇವಕರಾಗಿ ಅವನಿಗೆ ಕಪ್ಪಕೊಡುವವರಾದರು. ಯೆಹೋವನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯದೊರಕಿತು. 7 ಅವನು ಹದದೆಜೆರನ ಸೇವಕರಿಗಿದ್ದ ಬಂಗಾರದ ಗುರಾಣಿಗಳನ್ನು ಕಿತ್ತುಕೊಂಡು ಯೆರೂಸಲೇವಿುಗೆ ಒಯ್ದನು. 8 ಇದಲ್ಲದೆ ಹದದೆಜೆರನ ಪಟ್ಟಣಗಳಾದ ಬೆಟಹದಿಂದಲೂ ಬೇರೋತೈಯಿಂದಲೂ ಬಹಳ ತಾಮ್ರವನ್ನು ತೆಗೆದುಕೊಂಡುಹೋದನು. 9 ದಾವೀದನು ಹದದೆಜೆರನ ಸೈನ್ಯವನ್ನು ಸೋಲಿಸಿದನೆಂಬ ವರ್ತಮಾನವು ಹಮಾತಿನ ಅರಸನಾದ ತೋವಿಗೆ ಮುಟ್ಟಿತು. 10 (ತೋವಿಗೂ ಹದದೆಜೆರನಿಗೂ ವಿರೋಧವಿತ್ತು.) ದಾವೀದನು ಹದದೆಜೆರನ ಮೇಲೆ ಬಿದ್ದು ಅವನನ್ನು ಸೋಲಿಸಿದದರಿಂದ ತೋವು ದಾವೀದನನ್ನು ವಂದಿಸುವದಕ್ಕೂ ಹರಸುವದಕ್ಕೂ ತನ್ನ ಮಗನಾದ ಯೋರಾಮನನ್ನು ಕಳುಹಿಸಿದನು. ಇವನು ಬರುವಾಗ ದಾವೀದನಿಗೋಸ್ಕರ ತಾಮ್ರ ಬೆಳ್ಳಿ ಬಂಗಾರದ ಪಾತ್ರೆಗಳನ್ನು ತಂದನು. 11 ಅರಸನಾದ ದಾವೀದನು ಇವುಗಳನ್ನೂ ತನ್ನಿಂದ ಅಪಜಯಹೊಂದಿದ ಅರಾಮ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು, ಅಮಾಲೇಕ್ಯರು ಎಂಬೀ ಸುತ್ತಣ ಜನಾಂಗಗಳಿಂದಲೂ ಚೋಬದ ಅರಸನಾದ ರೆಹೋಬನ ಮಗ ಹದದೆಜೆರನಿಂದಲೂ 12 ಪಡಕೊಂಡ ಬೆಳ್ಳಿಬಂಗಾರವನ್ನೂ ಯೆಹೋವನಿಗೋಸ್ಕರ ಪ್ರತಿಷ್ಠಿಸಿದನು. 13 ಇದಲ್ಲದೆ ದಾವೀದನು ಹೋಗಿ ಉಪ್ಪಿನ ತಗ್ಗಿನಲ್ಲಿ ಎದೋಮ್ಯರ ಹದಿನೆಂಟು ಸಾವಿರ ಮಂದಿ ಸೈನಿಕರನ್ನು ಹೊಡೆದು ಬಂದು ಅಂದಿನಿಂದ ಬಹುಖ್ಯಾತಿವಂತನಾದನು. 14 ಅವನು ಎದೋವಿುನಲ್ಲೆಲ್ಲಾ ಕಾವಲುದಂಡುಗಳನ್ನಿರಿಸಿದನು; ಎದೋಮ್ಯರೆಲ್ಲರೂ ದಾವೀದನ ದಾಸರಾದರು. ಯೆಹೋವನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯವುಂಟಾಯಿತು. 15 ದಾವೀದನು ಇಸ್ರಾಯೇಲ್ಯರೆಲ್ಲರ ಅರಸನಾಗಿ ಎಲ್ಲಾ ಪ್ರಜೆಗಳಿಗೂ ಧರ್ಮತಪ್ಪದೆ ನ್ಯಾಯತೀರಿಸುತ್ತಿದ್ದನು. 16 ಚೆರೂಯಳ ಮಗನಾದ ಯೋವಾಬನು ಅವನ ಸೇನಾಪತಿಯೂ ಅಹೀಲೂದನ ಮಗನಾದ ಯೆಹೋಷಾಫಾಟನು ಮಂತ್ರಿಯೂ ಆಗಿದ್ದರು. 17 ಅಹೀಟೂಬನ ಮಗನಾದ ಚಾದೋಕನೂ ಅಹೀಮೆಲೆಕನ ಮಗನಾದ ಎಬ್ಯಾತಾರನೂ ಅವನ ಯಾಜಕರು; 18 ಸೆರಾಯನು ಲೇಖಕನು. ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯ, ಪೆಲೇತ್ಯ ಎಂಬ ಕಾವಲು ದಂಡುಗಳ ಮುಖ್ಯಸ್ಥನು. ದಾವೀದನ ಮಕ್ಕಳೂ ಯಾಜಕರಾಗಿದ್ದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India