2 ಸಮುಯೇಲ 3 - ಕನ್ನಡ ಸತ್ಯವೇದವು J.V. (BSI)1 ಬಹುದಿವಸಗಳವರೆಗೆ ಸೌಲನ ವಂಶದವರಿಗೂ ದಾವೀದನ ವಂಶದವರಿಗೂ ಯುದ್ಧನಡೆದಿತ್ತು. ದಾವೀದನು ಬಲಗೊಳ್ಳುತ್ತಾ ಬಂದನು, ಸೌಲನ ವಂಶವು ದುರ್ಬಲವಾಗುತ್ತಾ ಬಂದಿತು. ದಾವೀದನ ಕುಟುಂಬವು 2 ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು - ಚೊಚ್ಚಲ ಮಗನು ಅಮ್ನೋನನು; ಇವನು ಇಜ್ರೇಲಿನವಳಾದ ಅಹೀನೋವಮಳಲ್ಲಿ ಹುಟ್ಟಿದವನು. 3 ಎರಡನೆಯವನು ಕಿಲಾಬನು; ಇವನು ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳಲ್ಲಿ ಹುಟ್ಟಿದವನು. ಮೂರನೆಯವನು ಅಬ್ಷಾಲೋಮನು; ಇವನು ಗೆಷೂರಿನ ಅರಸನಾದ ತಲ್ಮೈ ಎಂಬವನ ಮಗಳಾದ ಮಾಕಳ ಪುತ್ರನು. 4 ನಾಲ್ಕನೆಯವನು ಅದೋನೀಯನು; ಇವನು ಹಗ್ಗೀತಳ ಮಗನು. ಐದನೆಯವನು ಶೆಫಟ್ಯನು; ಇವನು ಅಬೀಟಲಳ ಮಗನು. 5 ಆರನೆಯವನು ಇತ್ರಾಮನು; ಇವನು ದಾವೀದನಿಗೆ ಅವನ ಹೆಂಡತಿಯಾದ ಎಗ್ಲಳಲ್ಲಿ ಹುಟ್ಟಿದವನು. ಹೆಬ್ರೋನಿನಲ್ಲಿರುವಾಗ ದಾವೀದನಿಗೆ ಹುಟ್ಟಿದ ಮಕ್ಕಳು ಇವರೇ. ಅಬ್ನೇರನು ಈಷ್ಬೋಶೆತನನ್ನು ಬಿಟ್ಟು ದಾವೀದನ ಪಕ್ಷ ಹಿಡಿದದ್ದೂ ಯೋವಾಬನಿಂದ ಹತನಾದದ್ದೂ 6 ಸೌಲನ ವಂಶದವರಿಗೂ ದಾವೀದನ ವಂಶದವರಿಗೂ ಯುದ್ಧನಡಿಯುತ್ತಿದ್ದಾಗ ಸೌಲನ ವಂಶದವರಲ್ಲಿ ಅಬ್ನೇರನೇ ಬಲಿಷ್ಠನಾಗಿದ್ದನು. 7 ಅಯಾಹನ ಮಗಳಾದ ರಿಚ್ಪಳು ಸೌಲನ ಉಪಪತ್ನಿಯಾಗಿದ್ದಳು. ಒಂದು ದಿವಸ ಈಷ್ಬೋಶೆತನು ಅಬ್ನೇರನನ್ನು - ನೀನು ನನ್ನ ತಂದೆಯ ಉಪಪತ್ನಿಯನ್ನು ಕೂಡಿದ್ದೇಕೆ ಎಂದು ಕೇಳಿದನು. 8 ಅಬ್ನೇರನು ಈ ಮಾತನ್ನು ಕೇಳಿ ಉರಿಗೊಂಡು ಈಷ್ಬೋಶೆತನಿಗೆ - ಈವರೆಗೆ ನಾನು ನಿನ್ನ ತಂದೆಯಾದ ಸೌಲನ ಕುಟುಂಬಕ್ಕೂ ಅವನ ಬಂಧು ವಿುತ್ರರಿಗೂ ದಯೆತೋರಿಸುತ್ತಿದ್ದೆನಲ್ಲಾ; ನಿನ್ನನ್ನು ದಾವೀದನ ಕೈಗೆ ಒಪ್ಪಿಸಿಕೊಡಲಿಲ್ಲವಷ್ಟೆ. ಈಗ ಈ ಹೆಂಗಸಿನ ದೆಸೆಯಿಂದ ನನ್ನಲ್ಲಿ ತಪ್ಪುಹಿಡಿಯುವದಕ್ಕೆ ನಾನೇನು ಯೆಹೂದನಾಯಿಯ ತಲೆಯೋ? 9 ನಾನು ಅರಸುತನವನ್ನು ಸೌಲನ ಕುಟುಂಬದಿಂದ ತೆಗೆದು ದಾನಿನಿಂದ ಬೇರ್ಷೆಬದವರೆಗಿರುವ ಎಲ್ಲಾ ಇಸ್ರಾಯೇಲ್ಯರಲ್ಲಿಯೂ ಯೆಹೂದ್ಯರಲ್ಲಿಯೂ ದಾವೀದನ ಸಿಂಹಾಸನವನ್ನು ಸ್ಥಿರಪಡಿಸಿ 10 ಯೆಹೋವನಾದ ದೇವರು ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸದೆಹೋದರೆ ಆತನು ನನಗೆ ಬೇಕಾದದ್ದನ್ನು ಮಾಡಲಿ ಅಂದನು. 11 ಈಷ್ಬೋಶೆತನು ಅವನಿಗೆ ಹೆದರಿ ಏನೂ ಉತ್ತರ ಕೊಡಲಾರದೆ ಹೋದನು. 12 ಅನಂತರ ಅಬ್ನೇರನು ದಾವೀದನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ - ದೇಶವು ಯಾರದು? ನೀನು ನನ್ನೊಡನೆ ಒಡಂಬಡಿಕೆ ಮಾಡಿಕೊಂಡರೆ ಇಸ್ರಾಯೇಲ್ಯರನ್ನೆಲ್ಲಾ ನಿನ್ನ ಕಡೆಗೆ ತಿರುಗಿಸುವ ಹಾಗೆ ನನ್ನ ಹಸ್ತವು ನಿನ್ನ ಸಂಗಡ ಇರುವದು ಎಂದು ಹೇಳಿಸಿದನು. 13 ಅದಕ್ಕೆ ದಾವೀದನು - ಒಳ್ಳೇದು, ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ; ಆದರೆ ನೀನು ಒಂದು ಮಾಡಬೇಕು. ನನ್ನನ್ನು ನೋಡುವದಕ್ಕೆ ಬರುವಾಗ ಸೌಲನ ಮಗಳಾದ ಮೀಕಲಳನ್ನು ಕರಕೊಂಡು ಬರಬೇಕು; ಹಾಗೆ ಕರಕೊಂಡು ಬಾರದಿದ್ದರೆ ನೀನು ನನ್ನ ಮೋರೆಯನ್ನು ನೋಡಕೂಡದು ಎಂದು ಉತ್ತರ ಕೊಟ್ಟನು. 14 ಮತ್ತು ಅವನು ಸೌಲನ ಮಗನಾದ ಈಷ್ಬೋಶೆತನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ - ನಾನು ನೂರು ಮಂದಿ ಫಿಲಿಷ್ಟಿಯರ ಮುಂದೊಗಲನ್ನು ತಂದು ಕೊಟ್ಟು ವರಿಸಿದ ನನ್ನ ಹೆಂಡತಿಯಾದ ಮೀಕಲಳನ್ನು ನನಗೊಪ್ಪಿಸು ಎಂಬದಾಗಿ ಆಜ್ಞಾಪಿಸಿದನು. 15 ಈಷ್ಬೋಶೆತನು ಲಯಿಷನ ಮಗನೂ ಆಕೆಯ ಗಂಡನೂ ಆದ ಪಲ್ಟೀಯೇಲನ ಮನೆಗೆ ಆಳುಗಳನ್ನು ಕಳುಹಿಸಿ ಆಕೆಯನ್ನು ತರಿಸಿದನು. 16 ಆಗ ಪಲ್ಟೀಯೇಲನು ಬಹುರೀವಿುನವರೆಗೆ ಅಳುತ್ತಾ ಆಕೆಯ ಹಿಂದೆ ಬಂದನು. ಅನಂತರ ಅಬ್ನೇರನು ಅವನಿಗೆ - ಹಿಂದಿರುಗು, ನಡೆ ಎಂದು ಹೇಳಲು ಅವನು ಹಿಂದಿರುಗಿ ಹೋದನು. 17 ಅಬ್ನೇರನು ಇಸ್ರಾಯೇಲ್ಯರ ಹಿರಿಯರಿಗೆ - ದಾವೀದನು ನಮ್ಮ ಅರಸನಾಗಬೇಕೆಂದು ನೀವು ಮುಂಚೆ ಅಪೇಕ್ಷಿಸಿದಂತೆಯೇ ಈಗ ಮಾಡಿರಿ. 18 ಯೆಹೋವನು ದಾವೀದನ ವಿಷಯವಾಗಿ - ನನ್ನ ಸೇವಕನಾದ ದಾವೀದನ ಮುಖಾಂತರವಾಗಿ ನನ್ನ ಪ್ರಜೆಗಳಾದ ಇಸ್ರಾಯೇಲ್ಯರನ್ನು ಫಿಲಿಷ್ಟಿಯರ ಕೈಗೂ ಬೇರೆ ಎಲ್ಲಾ ಶತ್ರುಗಳ ಕೈಗೂ ತಪ್ಪಿಸುವೆನೆಂದು ನುಡಿದಿದ್ದಾನಲ್ಲಾ ಎಂದು ಹೇಳಿಸಿದನು. 19 ಅವನು ಬೆನ್ಯಾಮೀನ್ಯರಿಗೂ ಇದೇ ಪ್ರಕಾರ ಹೇಳಿದನು. ತರುವಾಯ ಅವನು ಇಸ್ರಾಯೇಲ್ಯರೂ ಬೆನ್ಯಾಮೀನ್ಯರೆಲ್ಲರೂ ಒಪ್ಪಿ ಹೇಳಿದ ಮಾತುಗಳನ್ನು ದಾವೀದನಿಗೆ ತಿಳಿಸುವದಕ್ಕೋಸ್ಕರ ಹೆಬ್ರೋನಿಗೆ ಹೊರಟನು. 20 ಅವನು ಹೆಬ್ರೋನಿಗೆ ಬಂದಾಗ ದಾವೀದನು ಅವನಿಗೂ ಅವನ ಸಂಗಡ ಬಂದಿದ್ದ ಇಪ್ಪತ್ತು ಜನರಿಗೂ ಔತಣಮಾಡಿಸಿದನು. 21 ಅಬ್ನೇರನು ದಾವೀದನಿಗೆ - ನಾನು ಹೊರಟುಹೋಗಿ ಇಸ್ರಾಯೇಲ್ಯರನ್ನೆಲ್ಲಾ ಕೂಡಿಸಿ ನನ್ನ ಒಡೆಯನಾದ ಅರಸನ ಬಳಿಗೆ ಕರಕೊಂಡುಬರುವೆನು; ಅವರು ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುವರು; ನೀನು ನಿನ್ನ ಅಪೇಕ್ಷೆಯಂತೆ ಎಲ್ಲರ ಮೇಲೆ ದೊರೆತನಮಾಡಬಹುದು ಎಂದು ಹೇಳಲು ದಾವೀದನು ಅವನನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟನು. 22 ಸುಲಿಗೆಮಾಡುವದಕ್ಕಾಗಿ ಹೋಗಿದ್ದ ದಾವೀದನ ಭಟರೂ ಯೋವಾಬನೂ ದೊಡ್ಡ ಕೊಳ್ಳೆಯೊಡನೆ ಅಷ್ಟರಲ್ಲಿ ಹಿಂದಿರುಗಿ ಬಂದರು. ಅವರು ಹೆಬ್ರೋನಿಗೆ ಬಂದಾಗ ಅಬ್ನೇರನು ದಾವೀದನ ಹತ್ತಿರ ಇರಲಿಲ್ಲ. ದಾವೀದನು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟಿದ್ದನು. 23 ಸೈನ್ಯಸಹಿತವಾಗಿ ಹಿಂದಿರುಗಿ ಬಂದ ಯೋವಾಬನು - ನೇರನ ಮಗನಾದ ಅಬ್ನೇರನು ಬಂದಿದ್ದನೆಂದೂ ಅರಸನು ಅವನನ್ನು ಸುರಕ್ಷಿತವಾಗಿ ಕಳುಹಿಸಿದನೆಂದೂ ತಿಳಿದು 24 ಅರಸನ ಬಳಿಗೆ ಹೋಗಿ - ನೀನು ಮಾಡಿದ್ದೇನು? ಅಬ್ನೇರನು ನಿನ್ನ ಬಳಿಗೆ ಬಂದಿದ್ದನಂತೆ; ನೀನು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟದ್ದೇಕೆ? 25 ನೇರನ ಮಗನಾದ ಅಬ್ನೇರನ ಸಂಗತಿಯು ನಿನಗೆ ಗೊತ್ತಿಲ್ಲವೋ? ಅವನು ನಿನ್ನನ್ನು ವಂಚಿಸುವದಕ್ಕೂ ನಿನ್ನ ಸ್ಥಿತಿಗತಿಗಳನ್ನು ತಿಳುಕೊಳ್ಳುವದಕ್ಕೂ ನೀನು ಏನೇನು ಮಾಡುತ್ತಿರುತ್ತೀ ಎಂಬದನ್ನು ಕಂಡು ಹಿಡಿಯುವದಕ್ಕೂ ಬಂದಿದ್ದನಷ್ಟೆ ಎಂದು ಹೇಳಿ 26 ದಾವೀದನನ್ನು ಬಿಟ್ಟು ಹೊರಗೆ ಹೋಗಿ ಅಬ್ನೇರನನ್ನು ಕರತರುವಂತೆ ದೂತರನ್ನು ಅಟ್ಟಿದನು. ಇವರು ಹೋಗಿ ಸಿರಾ ಬಾವಿಯ ಬಳಿಯಿಂದ ಅವನನ್ನು ಕರಕೊಂಡುಬಂದರು. ಇದು ದಾವೀದನಿಗೆ ಗೊತ್ತಿರಲಿಲ್ಲ. 27 ಅಬ್ನೇರನು ಹೆಬ್ರೋನಿಗೆ ಬಂದಾಗ ಯೋವಾಬನು ಅವನನ್ನು ಗುಪ್ತ ಸಂಭಾಷಣೆಗಾಗಿಯೋ ಎಂಬಂತೆ ಊರು ಬಾಗಲಿನೊಳಗೆ ಕರಕೊಂಡು ಹೋಗಿ ತನ್ನ ತಮ್ಮನಾದ ಅಸಾಹೇಲನನ್ನು ವಧಿಸಿದ್ದದಕ್ಕೆ ಪ್ರತಿಯಾಗಿ ಅವನನ್ನು ಹೊಟ್ಟೆಯಲ್ಲಿ ತಿವಿದು ಕೊಂದನು. 28 ತುಸು ಹೊತ್ತಾದ ಮೇಲೆ ಈ ವರ್ತಮಾನವು ದಾವೀದನಗೆ ಮುಟ್ಟಿತು. ಆಗ ಅವನು - ನೇರನ ಮಗನಾದ ಅಬ್ನೇರನ ವಧೆಯಲ್ಲಿ ನಾನೂ ನನ್ನ ರಾಜ್ಯವೂ ಯೆಹೋವನ ಮುಂದೆ ಸದಾ ನಿರ್ದೋಷಿಗಳು. 29 ಈ ಅಪರಾಧವು ಯೋವಾಬನ ಮೇಲೆಯೂ ಅವನ ಸಂತಾನದವರೆಲ್ಲರ ಮೇಲೆಯೂ ಇರಲಿ. ಅವನ ಮನೆಯಲ್ಲಿ ಮೇಹಸ್ರಾವವುಳ್ಳವರೂ ಕುಷ್ಠರೋಗಿಗಳೂ ಕುಂಟರೂ ಕತ್ತಿಯಿಂದ ಹತರಾಗುವವರೂ ಭಿಕ್ಷೆ ಬೇಡುವವರೂ ಇದ್ದೇ ಇರಲಿ ಅಂದನು. 30 ಅಬ್ನೇರನು ಗಿಬ್ಯೋನಿನ ಸಮೀಪದಲ್ಲಾದ ಯುದ್ಧದಲ್ಲಿ ಯೋವಾಬ ಅಬೀಷೈಯರ ತಮ್ಮನಾದ ಅಸಾಹೇಲನನ್ನು ವಧಿಸಿದ್ದದರಿಂದ ಅವರು ಇವನನ್ನು ಕೊಂದುಹಾಕಿದರು. 31 ದಾವೀದನು ಯೋವಾಬನಿಗೂ ಅವನ ಸಂಗಡ ಇದ್ದ ಜನರಿಗೂ - ನಿಮ್ಮ ಬಟ್ಟೆಗಳನ್ನು ಹರಕೊಂಡು ಗೋಣೀತಟ್ಟುಗಳನ್ನು ಕಟ್ಟಿಕೊಂಡು ಗೋಳಾಡುತ್ತಾ ಅಬ್ನೇರನ ಶವದ ಮುಂದೆ ನಡಿಯಿರಿ ಎಂದು ಆಜ್ಞಾಪಿಸಿ ತಾನು ಚಟ್ಟದ ಹಿಂದೆ ಹೋದನು. 32 ಅಬ್ನೇರನ ಶವವನ್ನು ಹೆಬ್ರೋನಿನಲ್ಲಿ ಸಮಾಧಿಮಾಡಿದರು. ಅರಸನು ಅವನ ಸಮಾಧಿಯ ಹತ್ತಿರ ನಿಂತು ಗಟ್ಟಿಯಾಗಿ ಅತ್ತನು; ಜನರೆಲ್ಲರೂ ಅತ್ತರು. 33 ದಾವೀದನು ಅಬ್ನೇರನನ್ನು ಕುರಿತು - ಅಬ್ನೇರನೇ, ನಿನಗೆ ಮೂರ್ಖರಿಗಾಗುವಂತೆ ದುರ್ಮರಣವಾಯಿತೇ! 34 ನಿನ್ನ ಕೈಗಳು ಕಟ್ಟಲ್ಪಡಲಿಲ್ಲ, ನಿನ್ನ ಕಾಲಿಗೆ ಬೇಡಿಗಳು ಬರಲಿಲ್ಲ; ನೀನು ದುಷ್ಟರಿಂದಲೋ ಎಂಬಂತೆ ಹತನಾದಿ ಎಂದು ಶೋಕಗೀತವನ್ನು ಹಾಡಲು ಜನರು ತಿರಿಗಿ ಅತ್ತರು. 35 ಸೂರ್ಯಾಸ್ತಮಾನಕ್ಕೆ ಮೊದಲೇ ಜನರೆಲ್ಲರೂ ದಾವೀದನ ಬಳಿಗೆ ಬಂದು ಅವನನ್ನು ಊಟಕ್ಕೆ ಎಬ್ಬಿಸಬೇಕೆಂದು ಪ್ರಯತ್ನಿಸಿದರು. ಆದರೆ ಅವನು - ಸೂರ್ಯನು ಮುಣುಗುವ ಮೊದಲು ನಾನು ರೊಟ್ಟಿಯನ್ನಾಗಲಿ ಬೇರೆ ಯಾವದನ್ನಾಗಲಿ ಬಾಯಲ್ಲಿ ಹಾಕಿದರೆ ದೇವರು ನನಗೆ ಬೇಕಾದದ್ದು ಮಾಡಲಿ ಎಂದು ಆಣೆಯಿಟ್ಟು ಹೇಳಿದನು. 36 ಜನರು ಇದನ್ನು ಕಂಡು ಮೆಚ್ಚಿದರು; ಅರಸನು ಮಾಡಿದ್ದೆಲ್ಲವೂ ಅವರಿಗೆ ಒಪ್ಪಿಕೆಯಾಯಿತು. 37 ನೇರನ ಮಗನಾದ ಅಬ್ನೇರನ ವಧೆಯಲ್ಲಿ ಅರಸನು ಕೈಹಾಕಲಿಲ್ಲವೆಂಬದು ಅವನ ಎಲ್ಲಾ ಜನರಿಗೂ ಇಸ್ರಾಯೇಲ್ಯರಿಗೂ ಅದೇ ದಿವಸ ಗೊತ್ತಾಯಿತು. 38 ಅರಸನು ತನ್ನ ಸೇವಕರಿಗೆ - ಈ ಹೊತ್ತು ಇಸ್ರಾಯೇಲ್ಯರಲ್ಲಿ ಹತವಾದವನು ಪ್ರಭುವೂ ಮಹಾಪುರುಷನೂ ಆಗಿದ್ದಾನೆಂಬದು ನಿಮಗೆ ಗೊತ್ತುಂಟಲ್ಲಾ; 39 ನಾನು ರಾಜ್ಯಾಭಿಷೇಕ ಹೊಂದಿದವನಾಗಿದ್ದರೂ ಈಗ ಏನೂ ಮಾಡಲಾರದವನಾಗಿದ್ದೇನೆ. ಚೆರೂಯಳ ಮಕ್ಕಳಾದ ಇವರು ನನ್ನ ಹತೋಟಿಗೆ ಬಾರದವರು. ಯೆಹೋವನೇ ಕೆಡುಕರಿಗೆ ಮುಯ್ಯಿತೀರಿಸಲಿ ಎಂದು ಹೇಳಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India