2 ಸಮುಯೇಲ 19 - ಕನ್ನಡ ಸತ್ಯವೇದವು J.V. (BSI)1 ಅರಸನು ಅಬ್ಷಾಲೋಮನಿಗಾಗಿ ಅಳುತ್ತಾ ಗೋಳಾಡುತ್ತಾ ಇದ್ದಾನೆಂಬ ವರ್ತಮಾನವು ಯೋವಾಬನಿಗೆ ಮುಟ್ಟಿತು. 2 ಅರಸನು ಮಗನಿಗೋಸ್ಕರ ಪ್ರಲಾಪಿಸುತ್ತಿದ್ದಾನೆಂಬದು ಎಲ್ಲಾ ಜನರಿಗೂ ಗೊತ್ತಾದದರಿಂದ ಅವರ ಜಯಘೋಷವು ಗೋಳಾಟವಾಯಿತು. 3 ಜನರು ಆ ದಿವಸ ಯುದ್ಧದಲ್ಲಿ ಸೋತು ಓಡಿ ಬಂದವರೋ ಎಂಬಂತೆ ನಾಚಿಕೆಯಿಂದ ಕಳ್ಳತನವಾಗಿ ಊರನ್ನು ಹೊಕ್ಕರು. 4 ಅರಸನು ತನ್ನ ಮೋರೆಯನ್ನು ಮುಚ್ಚಿಕೊಂಡು - ನನ್ನ ಮಗನಾದ ಅಬ್ಷಾಲೋಮನೇ, ಅಬ್ಷಾಲೋಮನೇ, ನನ್ನ ಮಗನೇ, ಮಗನೇ ಎಂದು ಬಹಳವಾಗಿ ಗೋಳಾಡಿದನು. 5 ಯೋವಾಬನು ಅರಸನ ಬಳಿಗೆ ಹೋಗಿ ಅವನಿಗೆ - ನಿನ್ನನ್ನೂ ನಿನ್ನ ಗಂಡುಹೆಣ್ಣು ಮಕ್ಕಳನ್ನೂ ಹೆಂಡತಿಯರನ್ನೂ ಉಪಪತ್ನಿಯರನ್ನೂ ರಕ್ಷಿಸಿದಂಥ ನಿನ್ನ ಸೇವಕರನ್ನು ಈಹೊತ್ತು ಅಪಮಾನಪಡಿಸಿದಿ. 6 ನೀನು ಶತ್ರುಗಳನ್ನು ಪ್ರೀತಿಸುವವನೂ ವಿುತ್ರರನ್ನು ದ್ವೇಷಿಸುವವನೂ ಆಗಿದ್ದೀ; ನೀನು ನಿನ್ನ ಸೇನಾಧಿಪತಿಗಳನ್ನೂ ಸೈನಿಕರನ್ನೂ ಲಕ್ಷಿಸುವವನಲ್ಲವೆಂದು ಈಗ ತೋರಿಸಿಕೊಟ್ಟಿ. ಇದರಿಂದ ಈಹೊತ್ತು ನಾವೆಲ್ಲರೂ ಸತ್ತು ಅಬ್ಷಾಲೋಮನೊಬ್ಬನೇ ಉಳಿದಿದ್ದರೆ ನಿನಗೆ ಸಂತೋಷವಾಗುತ್ತಿತ್ತೆಂದು ತಿಳಿಯಬೇಕಷ್ಟೆ. 7 ಈಗ ಎದ್ದು ಹೋಗಿ ನಿನ್ನ ಸೇವಕರನ್ನು ದಯಾಭಾವದಿಂದ ಮಾತಾಡಿಸು; ಯೆಹೋವನಾಣೆ, ನೀನು ಹೀಗೆ ಮಾಡದಿದ್ದರೆ ಸಾಯಂಕಾಲವಾಗುವಷ್ಟರಲ್ಲಿ ಎಲ್ಲರೂ ನಿನ್ನನ್ನು ಬಿಟ್ಟು ಹೋಗುವರು. ಯೌವನಕಾಲದಿಂದ ಈವರೆಗೆ ನಿನಗೆ ಬಂದ ಎಲ್ಲಾ ಕೇಡುಗಳಲ್ಲಿ ಇದೇ ಹೆಚ್ಚಿನದಾಗಿರುವದು ಎಂದು ಹೇಳಿದನು. 8 ಆಗ ಅರಸನು ಎದ್ದು ಬಂದು ಊರುಬಾಗಲಲ್ಲಿ ಕೂತುಕೊಂಡನು. ಇಗೋ, ಅರಸನು ಬಂದು ಊರುಬಾಗಲಲ್ಲಿ ಕೂತುಕೊಂಡಿದ್ದಾನೆಂಬ ಸುದ್ದಿಯು ಪ್ರಜೆಗಳಿಗೆ ಮುಟ್ಟಿದಾಗ ಅವರೆಲ್ಲರೂ ಅವನ ಮುಂದೆ ಕೂಡಿಬಂದರು. ಜನರು ದಾವೀದನನ್ನು ತಿರಿಗಿ ಯೆರೂಸಲೇವಿುಗೆ ಕರಕೊಂಡು ಬಂದದ್ದು 9 ಇಸ್ರಾಯೇಲ್ಯರೆಲ್ಲರೂ ತಮ್ಮತಮ್ಮ ನಿವಾಸಗಳಿಗೆ ಓಡಿಹೋಗಿದ್ದರು. ಇಸ್ರಾಯೆಲ್‍ಕುಲಗಳಲ್ಲೆಲ್ಲಾ ಜನರು ತಮ್ಮ ತಮ್ಮೊಳಗೆ ಜಗಳವಾಡಿ - ಅರಸನಾದ ದಾವೀದನು ನಮ್ಮನ್ನು ಫಿಲಿಷ್ಟಿಯರ ಕೈಗೂ ಬೇರೆ ಎಲ್ಲಾ ವೈರಿಗಳ ಕೈಗೂ ಸಿಕ್ಕದಂತೆ ತಪ್ಪಿಸಿ ಕಾಪಾಡಿದನು. ಆದರೆ ಅವನು ಅಬ್ಷಾಲೋಮನ ದೆಸೆಯಿಂದ ದೇಶವನ್ನು ಬಿಟ್ಟು ಓಡಿಹೋಗಬೇಕಾಯಿತು. 10 ನಾವು ಅಭಿಷೇಕಿಸಿದ ಅಬ್ಷಾಲೋಮನು ಯುದ್ಧದಲ್ಲಿ ಸತ್ತನು. ಹೀಗಿರುವಲ್ಲಿ ಅರಸನಾದ ದಾವೀದನನ್ನು ತಿರಿಗಿ ಕರಕೊಂಡು ಬರಬಾರದೇ? ಸುಮ್ಮನೆ ಕೂತಿರುವದೇಕೆ ಎಂದು ಮಾತಾಡಿಕೊಂಡರು. 11 ಇಸ್ರಾಯೇಲ್ಯರು ಈ ಪ್ರಕಾರ ಮಾತಾಡಿಕೊಂಡ ವರ್ತಮಾನವು ದಾವೀದನಿಗೆ ಮುಟ್ಟಲು ಅವನು ಯಾಜಕರಾದ ಚಾದೋಕ್ ಎಬ್ಯಾತಾರರಿಗೆ - ನೀವು ನನ್ನ ಹೆಸರಿನಲ್ಲಿ ಯೆಹೂದ ಕುಲದ ಹಿರಿಯರಿಗೆ - ಅರಸನಾದ ನನ್ನನ್ನು ತಿರಿಗಿ ಅರಮನೆಗೆ ಕರಕೊಂಡು ಹೋಗುವದರಲ್ಲಿ ನೀವು ಹಿಂದುಳಿದಿರುವದೇಕೆ? 12 ನೀವು ನನ್ನ ರಕ್ತಸಂಬಂಧಿಗಳಾದ ಸಹೋದರರಾಗಿರುತ್ತೀರಲ್ಲಾ; ಆದದರಿಂದ ನನ್ನನ್ನು ಕರಕೊಂಡು ಹೋಗುವದರಲ್ಲಿ ನೀವು ಹಿಂದುಳಿದಿರುವದು ಒಳ್ಳೇದಲ್ಲ ಎಂಬದಾಗಿಯೂ 13 ಅಮಾಸನಿಗೆ - ನೀನೂ ನನ್ನ ರಕ್ತ ಸಂಬಂಧಿಯಾಗಿದ್ದೀ; ನಾನು ಯೋವಾಬನ ಬದಲಿಗೆ ನಿನ್ನನ್ನೇ ನಿತ್ಯ ಸೇನಾಪತಿಯನ್ನಾಗಿ ಮಾಡದಿದ್ದರೆ ಯೆಹೋವನು ನನಗೆ ಬೇಕಾದದ್ದನ್ನು ಮಾಡಲಿ ಎಂಬದಾಗಿಯೂ ತಿಳಿಸಿರಿ ಎಂದು ಹೇಳಿಕಳುಹಿಸಿದನು. 14 ಆಗ ಯೆಹೂದ್ಯರೆಲ್ಲರೂ ಏಕ ಮನಸ್ಸಿನಿಂದ ಅರಸನ ಕಡೆಗೆ ತಿರುಗಿಕೊಂಡು ಅವನಿಗೆ - ನೀನೂ ನಿನ್ನ ಎಲ್ಲಾ ಸೇವಕರೂ ತಿರಿಗಿ ಬನ್ನಿರಿ ಎಂದು ಹೇಳಿಕಳುಹಿಸಿದರು. 15 ಅರಸನು ಸ್ವದೇಶಕ್ಕೆ ಹೋಗಬೇಕೆಂದು ಹೊರಟು ಯೊರ್ದನಿಗೆ ಬಂದಾಗ ಯೆಹೂದಕುಲದವರು ಅವನನ್ನು ಎದುರುಗೊಳ್ಳುವದಕ್ಕೂ ಯೊರ್ದನ್ ಹೊಳೆಯನ್ನು ದಾಟಿಸುವದಕ್ಕೂ ಗಿಲ್ಗಾಲಿಗೆ ಬಂದರು. 16 ಬೆನ್ಯಾಮೀನ್ ಕುಲದ ಗೇರನ ಮಗನೂ ಬಹುರೀವಿುನವನೂ ಆದ ಶಿಮ್ಮಿಯು ಅವಸರದಿಂದ ಬಂದು ಅರಸನಾದ ದಾವೀದನನ್ನು ಎದುರುಗೊಳ್ಳುವದಕ್ಕೆ ಯೆಹೂದ ಕುಲದವರನ್ನು ಕೂಡಿಕೊಂಡನು. 17 ಅವನ ಜೊತೆಯಲ್ಲಿ ಸಾವಿರ ಮಂದಿ ಬೆನ್ಯಾಮೀನ್ಯರಿದ್ದರು. ಇದಲ್ಲದೆ ಸೌಲನ ಮನೆಯ ಸೇವಕನಾದ ಚೀಬನು ತನ್ನ ಹದಿನೈದು ಮಂದಿ ಮಕ್ಕಳನ್ನೂ ಇಪ್ಪತ್ತುಮಂದಿ ಸೇವಕರನ್ನೂ ಕರಕೊಂಡು ಅರಸನ ಮುಂದೆಯೇ ಪೂರ್ಣಾಸಕ್ತಿಯಿಂದ ಯೊರ್ದನ್ ಹೊಳೆಯಲ್ಲಿಳಿದು 18 ಅರಸನ ಮನೆಯವರನ್ನು ದಾಟಿಸುವದಕ್ಕೋಸ್ಕರವೂ ಅವರಿಗೆ ಬೇಕಾದ ಸಹಾಯ ಮಾಡುವದಕ್ಕೋಸ್ಕರವೂ ದಡದಿಂದ ದಡಕ್ಕೆ ಹೋಗುತ್ತಾ ಬರುತ್ತಾ ಇದ್ದನು. ಅರಸನು ಯೊರ್ದನ್ ಹೊಳೆಯನ್ನು ದಾಟಿಬಂದ ಕೂಡಲೆ ಗೇರನ ಮಗನಾದ ಶಿವ್ಮಿುಯು ಸಾಷ್ಟಾಂಗನಮಸ್ಕಾರ ಮಾಡಿ ಅವನಿಗೆ - 19 ನನ್ನ ಒಡೆಯನು ನನ್ನನ್ನು ಅಪರಾಧಿಯೆಂದೆಣಿಸದಿರಲಿ; ನನ್ನ ಅರಸನು ಯೆರೂಸಲೇಮನ್ನು ಬಿಟ್ಟು ಹೋಗುವಾಗ ನಾನು ಮೂರ್ಖತನದಿಂದ ಮಾಡಿದ್ದನ್ನೆಲ್ಲಾ ಅವನು ನೆನಸದಿರಲಿ, ಲಕ್ಷಿಸದಿರಲಿ. 20 ಒಡೆಯನೇ, ನಿನ್ನ ಸೇವಕನಾದ ನಾನು ಪಾಪ ಮಾಡಿದೆನೆಂದು ಒಪ್ಪಿಕೊಳ್ಳುತ್ತೇನೆ. ಆದದರಿಂದಲೇ ನಾನು ಈಹೊತ್ತು ಅರಸನನ್ನು ಎದುರುಗೊಳ್ಳುವದಕ್ಕೆ ಎಲ್ಲಾ ಯೋಸೇಫ್ಯರಲ್ಲಿ ಮೊದಲಾಗಿ ಬಂದಿದ್ದೇನೆ ಎಂದು ಹೇಳಿದನು. 21 ಚೆರೂಯಳ ಮಗನಾದ ಅಬೀಷೈಯು - ಯೆಹೋವನ ಅಭಿಷಿಕ್ತನನ್ನು ಶಪಿಸಿದ್ದಕ್ಕಾಗಿ ಶಿಮ್ಮಿಗೆ ಮರಣದಂಡನೆಯಾಗಬೇಕಲ್ಲವೇ ಅಂದನು. 22 ಅದಕ್ಕೆ ದಾವೀದನು - ಚೆರೂಯಳ ಮಕ್ಕಳೇ, ನನಗೆ ನಿಮ್ಮ ಗೊಡವೆಯೇ ಬೇಡ; ನೀವು ಈಹೊತ್ತು ನನ್ನನ್ನು ಅಕೃತ್ಯಕ್ಕೆ ಪ್ರೇರಿಸುವವರಾಗಿದ್ದೀರಿ. ಇಂಥ ದಿವಸದಲ್ಲಿ ಇಸ್ರಾಯೇಲ್ಯರಲ್ಲಿ ಒಬ್ಬನಿಗೆ ಮರಣದಂಡನೆಯಾಗುವದು ಸರಿಯೋ? ನಾನು ಇಸ್ರಾಯೇಲ್ಯರ ಅರಸನೆಂಬದು ಈಹೊತ್ತು ಸ್ಪಷ್ಟವಾಗಿ ಗೊತ್ತಾಯಿತು ಎಂದು ನುಡಿದನು. 23 ಅನಂತರ ಅರಸನು ಶಿಮ್ಮಿಗೆ - ನಿನಗೆ ಮರಣ ಶಿಕ್ಷೆಯಾಗುವದಿಲ್ಲ ಎಂದು ಪ್ರಮಾಣಮಾಡಿ ಹೇಳಿದನು. 24 ತರುವಾಯ ಸೌಲನ ಮೊಮ್ಮಗನಾದ ಮೆಫೀಬೋಶೆತನು ಅರಸನನ್ನು ಎದುರುಗೊಳ್ಳುವದಕ್ಕೆ ಬಂದನು. ಅರಸನು ಯೆರೂಸಲೇಮನ್ನು ಬಿಟ್ಟಂದಿನಿಂದ ಸುರಕ್ಷಿತನಾಗಿ ಹಿಂದಿರುಗುವವರೆಗೂ ಇವನು ತನ್ನ ಕಾಲುಗಳನ್ನು ಕಟ್ಟಿಕೊಂಡಿದ್ದಿಲ್ಲ, ಮೀಸೆಯನ್ನು ಕತ್ತರಿಸಿದ್ದಿಲ್ಲ, ಬಟ್ಟೆಗಳನ್ನು ಒಗೆಸಿಕೊಂಡಿದ್ದಿಲ್ಲ, 25 ಇವನು ಯೆರೂಸಲೇವಿುನಿಂದ ಅರಸನ ದರ್ಶನಕ್ಕೆ ಬಂದಾಗ ಅರಸನು - ಮೆಫೀಬೋಶೆತನೇ, ನೀನು ನನ್ನ ಸಂಗಡ ಯಾಕೆ ಬರಲಿಲ್ಲ ಎಂದು ಕೇಳಲು 26 ಅವನು - ನನ್ನ ಒಡೆಯನೇ, ಅರಸನೇ, ನನ್ನ ಸೇವಕನು ನನ್ನನ್ನು ವಂಚಿಸಿದನು. ಕುಂಟನಾದ ನಾನು ಅವನಿಗೆ - ಕತ್ತೆಗೆ ತಡಿಹಾಕು, ನಾನು ಕೂತುಕೊಂಡು ಅರಸನ ಜೊತೆಯಲ್ಲಿ ಹೋಗಬೇಕು ಎಂದು ಆಜ್ಞಾಪಿಸಿದೆನು. 27 ಅವನು ಹಾಗೆ ಮಾಡದೆ ನನ್ನ ಒಡೆಯನಾದ ಅರಸನ ಬಳಿಗೆ ಬಂದು ನನ್ನ ವಿಷಯದಲ್ಲಿ ಚಾಡಿಹೇಳಿದನು. ಅರಸನು ದೇವದೂತನ ಹಾಗಿರುತ್ತಾನೆ, ತನಗೆ ಸರಿಕಂಡದ್ದನ್ನು ಮಾಡಲಿ. 28 ನನ್ನ ತಂದೆಯ ಮನೆಯವರೆಲ್ಲರೂ ಅರಸನಾದ ನನ್ನ ಒಡೆಯನ ದೃಷ್ಟಿಯಲ್ಲಿ ಮರಣಕ್ಕೆ ಪಾತ್ರರಾಗಿದ್ದರು. ಆದರೂ ಅವನು ತನ್ನ ಸೇವಕನಾದ ನನ್ನನ್ನು ಭೋಜನಕ್ಕೆ ತನ್ನ ಪಂಕ್ತಿಯಲ್ಲಿ ಕುಳ್ಳಿರಿಸಿಕೊಂಡನು. ಅರಸನಿಗೆ ಹೆಚ್ಚಾಗಿ ಮೊರೆಯಿಡುವದಕ್ಕೆ ನಾನೇನು ಯೋಗ್ಯನೋ ಎಂದು ಉತ್ತರಕೊಟ್ಟನು. 29 ಆಗ ಅರಸನು ಅವನಿಗೆ - ಹೆಚ್ಚು ಮಾತು ಯಾಕೆ? ನೀನೂ ಚೀಬನೂ ಹೊಲವನ್ನು ಭಾಗಮಾಡಿಕೊಳ್ಳಬೇಕೆಂಬದೇ ನನ್ನ ತೀರ್ಪು ಎಂದು ಹೇಳಿದನು. 30 ಅದಕ್ಕೆ ಮೆಫೀಬೋಶೆತನು - ಚೀಬನು ಎಲ್ಲವನ್ನು ತಾನೇ ತೆಗೆದುಕೊಂಡರೂ ತೆಗೆದುಕೊಳ್ಳಲಿ, ನನ್ನ ಒಡೆಯನಾದ ಅರಸನು ತನ್ನ ಮನೆಗೆ ಸುರಕ್ಷಿತವಾಗಿ ಬಂದದ್ದೇ ಸಾಕು ಅಂದನು. 31 ಗಿಲ್ಯಾದ್ಯನಾದ ಬರ್ಜಿಲ್ಲೈ ಎಂಬವನು ಅರಸನನ್ನು ಸಾಗಕಳುಹಿಸುವದಕ್ಕಾಗಿ ರೋಗೆಲೀವಿುನಿಂದ ಯೊರ್ದನಿಗೆ ಬಂದಿದ್ದನು. 32 ಇವನು ಎಂಭತ್ತು ವರುಷದ ಮುದುಕನು. ಇವನು ಬಹುಶ್ರೀಮಂತನಾಗಿದ್ದದರಿಂದ ದಾವೀದನು ಮಹನಯಿವಿುನಲ್ಲಿದ್ದ ಕಾಲದಲ್ಲೆಲ್ಲಾ ಅವನ ಜೀವನಕ್ಕೆ ಬೇಕಾದದ್ದನ್ನು ಇವನೇ ಒದಗಿಸಿಕೊಡುತ್ತಿದ್ದನು. 33 ಅರಸನು ಬರ್ಜಿಲ್ಲೈಗೆ - ನನ್ನ ಜೊತೆಯಲ್ಲಿ ಹೊಳೆಯ ಆಚೆಗೆ ಬಾ; ನಾನು ಯೆರೂಸಲೇವಿುನಲ್ಲಿ ನಿನ್ನನ್ನು ಹತ್ತಿರವೇ ಇಟ್ಟುಕೊಂಡು ಸಂರಕ್ಷಿಸುತ್ತೇನೆ ಅಂದನು. 34 ಅದಕ್ಕೆ ಬರ್ಜಿಲ್ಲೈಯು - ಇಷ್ಟು ವಯಸ್ಸು ಕಳೆದವನಾದ ನಾನು ಅರಸನ ಸಂಗಡ ಯೆರೂಸಲೇವಿುಗೆ ಬರುವದು ಹೇಗೆ? 35 ಈಗ ನಾನು ಎಂಭತ್ತು ವರುಷದವನು. ಒಳ್ಳೇದು, ಕೆಟ್ಟದ್ದು ಇವುಗಳ ಭೇದವು ನನಗಿನ್ನು ತಿಳಿಯುವದೋ? ನಿನ್ನ ಸೇವಕನಾದ ನನಗೆ ಅನ್ನಪಾನಗಳ ರುಚಿಯು ಗೊತ್ತಾಗುವದೋ? ಗಾಯನ ಮಾಡುವ ಸ್ತ್ರೀಪುರುಷರ ಸ್ವರಗಳು ನನಗೆ ಕೇಳಿಸುತ್ತವೋ? ನಾನು ನನ್ನ ಒಡೆಯನಾದ ಅರಸನಿಗೆ ಸುಮ್ಮನೆ ಯಾಕೆ ಭಾರವಾಗಿರಬೇಕು? 36 ಹೊಳೆದಾಟಿ ಸ್ವಲ್ಪದೂರಕ್ಕೆ ನಿನ್ನ ಸಂಗಡ ಬರುತ್ತೇನೆ. ಅರಸನಾದ ನೀನು ನನಗೇಕೆ ಇಂಥ ಉಪಕಾರ ಮಾಡಬೇಕು? 37 ದಯವಿಟ್ಟು ನಿನ್ನ ಸೇವಕನಾದ ನನಗೆ ಹಿಂದಿರುಗಿ ಹೋಗುವದಕ್ಕೆ ಅಪ್ಪಣೆಯಾಗಲಿ; ನಾನು ನನ್ನ ತಂದೆತಾಯಿಗಳ ಸಮಾಧಿಯಿರುವ ಸ್ವಂತ ಊರಿಗೆ ಹೋಗಿ ಅಲ್ಲೇ ಸಾಯುವೆನು. ಇಗೋ ಇಲ್ಲಿ ನಿನ್ನ ಸೇವಕನಾದ ಕಿಮ್ಹಾಮನಿರುತ್ತಾನೆ. ನನ್ನ ಒಡೆಯನಾದ ಅರಸನು ಇವನನ್ನು ಕರಕೊಂಡುಹೋಗಿ ತನ್ನ ಇಷ್ಟವಿದ್ದಂತೆ ಇವನಿಗೆ ದಯೆತೋರಿಸಲಿ ಎಂದನು. 38 ಅದಕ್ಕೆ ಅರಸನು - ಕಿಮ್ಹಾಮನು ನನ್ನ ಸಂಗಡ ಬರಲಿ; ಅವನಿಗೆ ನಿನ್ನ ಇಷ್ಟದಂತೆ ದಯೆ ತೋರಿಸುವೆನು. ಇನ್ನೂ ಏನೇನು ಮಾಡಬೇಕನ್ನುತ್ತೀಯೋ ಅದೆಲ್ಲವನ್ನೂ ಮಾಡುತ್ತೇನೆ ಎಂದು ಹೇಳಿದನು. 39 ಎಲ್ಲಾ ಜನರೂ ಹೊಳೆದಾಟಿದರು. ಅರಸನು ಹೊಳೆದಾಟಿದ ಮೇಲೆ ಬರ್ಜಿಲ್ಲೈಯನ್ನು ಮುದ್ದಿಟ್ಟು ಆಶೀರ್ವದಿಸಿದನು. ಅನಂತರ ಬರ್ಜಿಲ್ಲೈಯು ತನ್ನ ಊರಿಗೆ ಹೋದನು. 40 ಅರಸನು ಕಿಮ್ಹಾಮನೊಡನೆ ಗಿಲ್ಗಾಲಿಗೆ ತೆರಳಿದನು. ಎಲ್ಲಾ ಯೆಹೂದ್ಯರೂ ಇಸ್ರಾಯೇಲ್ಯರಲ್ಲಿ ಅರ್ಧಜನರೂ ಅರಸನನ್ನು ಕರಕೊಂಡು ಹೋದರು. 41 ಆಗ ಇಸ್ರಾಯೇಲ್ಯರೆಲ್ಲರೂ ಅರಸನ ಮುಂದೆ ಬಂದು ಅವನನ್ನು - ನಮ್ಮ ಸಹೋದರರಾದ ಯೆಹೂದ್ಯರು ನಮಗೆ ತಿಳಿಸದೆ ತಾವೇ ಹೋಗಿ ಅರಸನನ್ನೂ ಅವನ ಮನೆಯವರನ್ನೂ ಅವನೊಡನೆ ಇದ್ದ ಜನರನ್ನೂ ಯೊರ್ದನ್‍ಹೊಳೆ ದಾಟಿಸಿ ಕರಕೊಂಡು ಬಂದದ್ದೇಕೆ ಎಂದು ಕೇಳಿದರು. 42 ಅದಕ್ಕೆ ಯೆಹೂದ್ಯರೆಲ್ಲರೂ - ಅರಸನು ನಮಗೆ ಸಮೀಪಬಂಧು; ನೀವು ಅದಕ್ಕಾಗಿ ಉರಿಗೊಳ್ಳುವದೇಕೆ? ನಾವೇನು ಅರಸನ ಖರ್ಚಿನಿಂದ ಊಟಮಾಡಿದೆವೋ? ಅವನು ನಮಗೆ ಏನಾದರೂ ಕೊಟ್ಟನೋ ಎಂದು ಉತ್ತರಕೊಟ್ಟರು. 43 ಆಗ ಇಸ್ರಾಯೇಲ್ಯರು ಯೆಹೂದ್ಯರಿಗೆ - ಅರಸನಲ್ಲಿ ನಮಗೆ ಹತ್ತುಪಾಲು ಉಂಟಲ್ಲಾ; ದಾವೀದನ ವಿಷಯದಲ್ಲಿಯೂ ನಮಗೆ ಹೆಚ್ಚು ಹಕ್ಕು ಉಂಟು. ಹೀಗಿರುವದರಿಂದ ನೀವು ನಮ್ಮನ್ನು ತಿರಸ್ಕರಿಸಿದ್ದೇಕೆ? ನಮ್ಮ ಅರಸನನ್ನು ಕರಕೊಂಡು ಬರುವ ವಿಷಯದಲ್ಲಿ ಮೊದಲು ಮಾತಾಡಿದವರು ನಾವಲ್ಲವೋ ಅಂದರು. ಇಸ್ರಾಯೇಲ್ಯರ ಮಾತುಗಳಿಗಿಂತ ಯೆಹೂದ್ಯರ ಮಾತುಗಳು ಕಠಿಣವಾಗಿದ್ದವು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India