2 ಸಮುಯೇಲ 18 - ಕನ್ನಡ ಸತ್ಯವೇದವು J.V. (BSI)1 ತರುವಾಯ ಅರಸನಾದ ದಾವೀದನು ತನ್ನ ಹತ್ತಿರ ಇದ್ದ ಸೈನಿಕರನ್ನು ಲೆಕ್ಕಿಸಿ ಅವರ ಮೇಲೆ ಸಹಸ್ರಾಧಿಪತಿಗಳನ್ನೂ ಶತಾಧಿಪತಿಗಳನ್ನೂ ನೇವಿುಸಿದನು. 2 ಅವನು ಸೈನ್ಯವನ್ನು ಮೂರು ಪಾಲು ಮಾಡಿ ಒಂದು ಪಾಲನ್ನು ಯೋವಾಬನಿಗೂ ಇನ್ನೊಂದನ್ನು ಚೆರೂಯಳ ಮಗನೂ ಯೋವಾಬನ ತಮ್ಮನೂ ಆದ ಅಬೀಷೈಗೂ ಮತ್ತೊಂದನ್ನು ಗಿತ್ತೀಯನಾದ ಇತ್ತೈಗೂ ಒಪ್ಪಿಸಿ - ನಾನೂ ನಿಮ್ಮ ಸಂಗಡ ಬರುತ್ತೇನೆ ಎಂದು ಹೇಳಿದನು. 3 ಆಗ ಸೈನ್ಯದವರು ಅವನಿಗೆ - ನೀನು ಬರಬಾರದು; ನಾವು ಸೋತು ಓಡಿ ಹೋದರೆ ಶತ್ರುಗಳು ಲಕ್ಷಿಸುವದಿಲ್ಲ; ನಮ್ಮಲ್ಲಿ ಅರ್ಧ ಜನರು ಸತ್ತರೂ ಅದು ಅವರಿಗೆ ದೊಡ್ಡ ಲಾಭವಲ್ಲ. ನಮ್ಮಂಥ ಹತ್ತು ಸಾವಿರ ಜನರ ಬೆಲೆ ನಿನ್ನೊಬ್ಬನಿಗೇ ಉಂಟು. ನೀನು ಊರಲ್ಲಿದ್ದುಕೊಂಡು ಅಲ್ಲಿಂದಲೇ ನಮಗೆ ಬೇಕಾದ ಸಹಾಯ ಮಾಡಬಹುದು ಅಂದರು. 4 ಅರಸನು ಅವರಿಗೆ - ನಿಮಗೆ ಸರಿಕಂಡ ಹಾಗೆ ಮಾಡುತ್ತೇನೆ ಎಂದು ಹೇಳಿ ಊರುಬಾಗಲಿನ ಒಂದು ಕಡೆಯಲ್ಲಿ ನಿಂತನು. ಸೈನಿಕರು ನೂರು ನೂರು ಮಂದಿಯಾಗಿಯೂ ಸಾವಿರ ಸಾವಿರ ಮಂದಿಯಾಗಿಯೂ ಹೊರಟರು. 5 ಅರಸನು ಯೋವಾಬ್ ಅಬೀಷೈ ಇತ್ತೈ ಎಂಬವರಿಗೆ - ನನಗೋಸ್ಕರವಾಗಿ ಯೌವನಸ್ಥನಾದ ಅಬ್ಷಾಲೋಮನನ್ನು ಕರುಣಿಸಿರಿ ಎಂದು ಆಜ್ಞಾಪಿಸಿದನು. ದಾವೀದನು ಸೇನಾಪತಿಗಳಿಗೆ ಕೊಟ್ಟ ಈ ಅಪ್ಪಣೆಯು ಸೈನ್ಯದವರಿಗೆಲ್ಲಾ ಕೇಳಿಸಿತು. 6 ಅನಂತರ ಸೈನಿಕರು ಇಸ್ರಾಯೇಲ್ಯರಿಗೆ ವಿರೋಧವಾಗಿ ಹೊರಟು ಬೈಲಿಗೆ ಬಂದರು; ಎಫ್ರಾಯೀಮ್‍ಕಾಡಿನಲ್ಲಿ ಯುದ್ಧವಾಯಿತು. 7 ಇಸ್ರಾಯೇಲ್ಯರು ದಾವೀದನ ಸೈನಿಕರಿಂದ ಪೂರ್ಣವಾಗಿ ಸೋಲಿಸಲ್ಪಟ್ಟರು. ಆ ದಿವಸ ಇಪ್ಪತ್ತುಸಾವಿರ ಜನರು ಹತರಾದರು. 8 ಯುದ್ಧವು ಸುತ್ತಣ ಪ್ರದೇಶಗಳಲ್ಲಿ ಹಬ್ಬಿಕೊಂಡಿತು. ಆ ದಿವಸ ಕತ್ತಿಗಿಂತ ಕಾಡೇ ಹೆಚ್ಚಿನ ಸಂಹಾರಕ್ಕೆ ಕಾರಣವಾಯಿತು. 9 ಅಬ್ಷಾಲೋಮನು ದಾವೀದನ ಸೇವಕರಿಗೆ ಸಿಕ್ಕಿದನು; ಹೇಗಂದರೆ - ಅವನು ಹತ್ತಿದ ಹೇಸರಕತ್ತೆಯು ಒಂದು ದೊಡ್ಡ ಏಲಾಮರದ ಕೆಳಗೆ ಹಾದುಹೋಗುವಾಗ ಅವನ ತಲೆಯು ನಿಬಿಡವಾದ ಅದರ ಕೊಂಬೆಗಳಲ್ಲಿ ಸಿಕ್ಕಿಕೊಂಡಿತು; ಹೇಸರಕತ್ತೆಯು ಅವನ ಕೆಳಗಿನಿಂದ ಓಡಿಹೋಯಿತು. ಅವನು ಭೂವಿುಗೂ ಆಕಾಶಕ್ಕೂ ಮಧ್ಯದಲ್ಲಿ ನೇತಾಡುವವನಾದನು. 10 ಇದನ್ನು ನೋಡಿದ ಒಬ್ಬ ಮನುಷ್ಯನು ಯೋವಾಬನಿಗೆ - ಅಗೋ, ಆ ಏಲಾಮರದಲ್ಲಿ ಅಬ್ಷಾಲೋಮನು ನೇತಾಡುತ್ತಿರುವದನ್ನು ಕಂಡೆನು ಎಂದು ಹೇಳಲು ಯೋವಾಬನು ಅವನಿಗೆ - 11 ನೀನು ಕಂಡ ಕೂಡಲೆ ಯಾಕೆ ಅವನನ್ನು ಕಡಿದು ನೆಲಕ್ಕುರುಳಿಸಲಿಲ್ಲ? ಹಾಗೆ ಮಾಡಿದ್ದರೆ ನಾನು ನಿನಗೆ ಹತ್ತು ರೂಪಾಯಿಗಳನ್ನೂ ಒಂದು ನಡುಕಟ್ಟನ್ನೂ ಕೊಡುತ್ತಿದ್ದೆನು ಅಂದನು. 12 ಅದಕ್ಕೆ ಆ ಮನುಷ್ಯನು - ನೀನು ನನ್ನ ಕೈಯಲ್ಲಿ ಸಾವಿರ ರೂಪಾಯಿಗಳನ್ನಿಟ್ಟರೂ ಅರಸನ ಮಗನಿಗೆ ವಿರೋಧವಾಗಿ ಕೈಯೆತ್ತೆನು. ಅರಸನು ನಮ್ಮೆಲ್ಲರಿಗೆ ಕೇಳಿಸುವಂತೆ ನಿನಗೂ ಅಬೀಷೈಗೂ ಇತ್ತೈಗೂ - ಜಾಗರೂಕತೆಯಿಂದಿರ್ರಿ, ಯೌವನಸ್ಥನಾದ ಅಬ್ಷಾಲೋಮನನ್ನು ಯಾರೂ ಮುಟ್ಟಬಾರದು ಎಂದು ಆಜ್ಞಾಪಿಸಿದನಲ್ಲವೋ? 13 ನಾನು ಅವನ ಪ್ರಾಣಕ್ಕೆ ಅಪಾಯವನ್ನುಂಟುಮಾಡಿದರೆ ಅದು ಅರಸನಿಗೆ ಮರೆಯಾಗುವದಿಲ್ಲ; ನೀನೂ ನನ್ನನ್ನು ಕೈಬಿಟ್ಟು ದೂರ ನಿಲ್ಲುವಿ ಎಂದು ಉತ್ತರಕೊಟ್ಟನು. 14 ಆಗ ಯೋವಾಬನು - ಇಲ್ಲಿ ನಿಂತು ತಡ ಮಾಡುವದೇಕೆ ಎಂದು ಹೇಳಿ ಕೂಡಲೆ ಕೈಯಲ್ಲಿ ಮೂರು ಈಟಿಗಳನ್ನು ತೆಗೆದುಕೊಂಡು ಹೋಗಿ ಅಬ್ಷಾಲೋಮನ ಎದೆಗೆ ತಿವಿದನು. ಅವನು ಇನ್ನೂ ಜೀವದಿಂದ ಮರದಲ್ಲಿ ನೇತಾಡುತ್ತಿರುವಾಗಲೇ 15 ಯೋವಾಬನ ಆಯುಧಗಳನ್ನು ಹೊರುವ ಹತ್ತು ಮಂದಿ ಯೌವನಸ್ಥರು ಬಂದು ಅವನನ್ನು ಕೊಂದುಹಾಕಿದರು. 16 ಕೂಡಲೆ ಯೋವಾಬನು ತನ್ನ ಜನರನ್ನು ತಡೆಯುವದಕ್ಕಾಗಿ ತುತೂರಿಯನ್ನು ಊದಿಸಲು ಸೈನ್ಯದವರೆಲ್ಲಾ ಇಸ್ರಾಯೇಲ್ಯರನ್ನು ಹಿಂದಟ್ಟುವದನ್ನು ಬಿಟ್ಟು ಹಿಂದಿರುಗಿದರು. 17 ಅವರು ಅಬ್ಷಾಲೋಮನ ಶವವನ್ನು ಆ ಕಾಡಿನಲ್ಲಿದ್ದ ಒಂದು ದೊಡ್ಡ ಗುಂಡಿಯೊಳಗೆ ಹಾಕಿ ಅದರ ಮೇಲೆ ಬಲುದೊಡ್ಡ ಕಲ್ಲು ಕುಪ್ಪೆಯನ್ನು ಮಾಡಿದರು. ಇಸ್ರಾಯೇಲ್ಯರಾದರೋ ತಮ್ಮತಮ್ಮ ನಿವಾಸಗಳಿಗೆ ಓಡಿಹೋದರು. 18 ಅಬ್ಷಾಲೋಮನು ಇನ್ನೂ ಜೀವದಿಂದಿದ್ದಾಗ ತನ್ನ ಹೆಸರನ್ನುಳಿಸುವ ಮಗನಿಲ್ಲದ್ದರಿಂದ ಒಂದು ಕಲ್ಲಿನ ಕಂಬವನ್ನು ತರಿಸಿ ಅದನ್ನು ಅರಸನ ತಗ್ಗಿನಲ್ಲಿ ತನ್ನ ಜ್ಞಾಪಕಾರ್ಥವಾಗಿ ನಿಲ್ಲಿಸಿ ಅದಕ್ಕೆ ತನ್ನ ಹೆಸರನ್ನಿಟ್ಟನು. ಅದು ಇಂದಿನವರೆಗೂ ಅಬ್ಷಾಲೋಮನ ಜ್ಞಾಪಕಸ್ತಂಭವೆಂದೆನಿಸಿಕೊಳ್ಳುತ್ತದೆ. ದಾವೀದನು ಮಗನಿಗಾಗಿ ಗೋಳಾಡಿದ್ದು 19 ಚಾದೋಕನ ಮಗನಾದ ಅಹೀಮಾಚನು ಯೋವಾಬನಿಗೆ - ಅಪ್ಪಣೆಯಾಗಲಿ, ನಾನು ಅರಸನ ಬಳಿಗೆ ಓಡಿಹೋಗಿ ಯೆಹೋವನು ಅವನ ವೈರಿಗಳಿಗೆ ಮುಯ್ಯಿ ತೀರಿಸಿದ್ದಾನೆಂಬ ಶುಭವರ್ತಮಾನವನ್ನು ತಿಳಿಸುವೆನು ಅನ್ನಲು 20 ಯೋವಾಬನು ಅವನಿಗೆ - ಈಹೊತ್ತಿನ ಸುದ್ದಿಯನ್ನು ತೆಗೆದುಕೊಂಡು ಹೋಗತಕ್ಕವನು ನೀನಲ್ಲ; ಇನ್ನೊಂದು ಸಾರಿ ನಿನ್ನನ್ನು ಕಳುಹಿಸುತ್ತೇನೆ. ಈಹೊತ್ತು ಅರಸನ ಮಗನು ಸತ್ತಿರುವದರಿಂದ ವರ್ತಮಾನವು ಶುಭವಾದದ್ದಲ್ಲ ಎಂದು ಹೇಳಿ 21 ತನ್ನ ಬಳಿಯಲ್ಲಿದ್ದ ಒಬ್ಬ ಕೂಷ್ಯನನ್ನು ಕರೆದು ಅವನಿಗೆ - ನೀನು ಹೋಗಿ ಕಂಡದ್ದನ್ನು ಅರಸನಿಗೆ ತಿಳಿಸು ಎಂದು ಆಜ್ಞಾಪಿಸಿದನು. ಅವನು ಯೋವಾಬನಿಗೆ ನಮಸ್ಕರಿಸಿ ಹೊರಟಹೋದನು. 22 ಚಾದೋಕನ ಮಗನಾದ ಅಹೀಮಾಚನು ತಿರಿಗಿ ಯೋವಾಬನಿಗೆ - ಆಗುವದಾಗಲಿ, ದಯವಿಟ್ಟು ಆ ಕೂಷ್ಯನ ಹಿಂದೆ ಹೋಗುವದಕ್ಕೆ ನನಗೆ ಅಪ್ಪಣೆಕೊಡು ಎಂದು ಬೇಡಿಕೊಂಡನು. ಅದಕ್ಕೆ ಯೋವಾಬನು - ಮಗನೇ, ಯಾಕೆ ಹೋಗಬೇಕನ್ನುತ್ತೀ? ಅದಕ್ಕಾಗಿ ನಿನಗೆ ಬಹುಮಾನ ಸಿಕ್ಕುವದಿಲ್ಲವಲ್ಲಾ ಅಂದನು. 23 ಆದರೆ ಅಹೀಮಾಚನು ತಿರಿಗಿ - ಚಿಂತೆಯಿಲ್ಲ, ನನ್ನನ್ನೂ ಕಳುಹಿಸು ಎಂದು ಒತ್ತಾಯಪಡಿಸಿದ್ದರಿಂದ ಯೋವಾಬನು ಹೋಗು ಎಂದು ಹೇಳಿದನು. ಆಗ ಅಹೀಮಾಚನು ಯೊರ್ದನ್ ತಗ್ಗಿನಲ್ಲಿರುವ ದಾರಿಯನ್ನು ಹಿಡಿದು ಆ ಕೂಷ್ಯನಿಗಿಂತ ಮುಂದಾಗಿ ಓಡಿದನು. 24 ದಾವೀದನು ಎರಡು ಬಾಗಲುಗಳ ಮಧ್ಯದಲ್ಲಿ ಕೂತುಕೊಂಡಿದ್ದನು. ಅಷ್ಟರಲ್ಲಿ ಕಾವಲುಗಾರನು ಗೋಪುರದ ಮಾಳಿಗೆಯನ್ನು ಹತ್ತಿ ಪಾಗಾರದ ಬಳಿಯಲ್ಲಿ ನಿಂತು ನೋಡಲು ಒಂಟಿಗನಾಗಿ ಬರುವ ಒಬ್ಬ ಮನುಷ್ಯನನ್ನು ಕಂಡನು. 25 ಅವನು ಕೂಡಲೆ ದಾವೀದನಿಗೆ ತಿಳಿಸಲು ದಾವೀದನು - ಅವನು ಒಬ್ಬನಾಗಿ ಇದ್ದರೆ ಸಮಾಚಾರ ತರುವವನಾಗಿರಬಹುದು ಅಂದನು. ಆ ಮನುಷ್ಯನು ಬರಬರುತ್ತಾ ಸಮೀಪವಾದನು. 26 ಅಷ್ಟರಲ್ಲಿ ಕಾವಲುಗಾರನು ಓಡುತ್ತಾ ಬರುವ ಇನ್ನೊಬ್ಬನನ್ನು ಕಂಡು ದ್ವಾರಪಾಲಕನ ಮುಖಾಂತರ - ಇಗೋ, ಇನ್ನೊಬ್ಬನು ಒಂಟಿಗನಾಗಿ ಬರುತ್ತಿದ್ದಾನೆ ಎಂದು ಅರಸನಿಗೆ ತಿಳಿಸಿದನು. ಅರಸನು - ಹಾಗಾದರೆ ಅವನೂ ಸಮಾಚಾರ ತರುವವನು ಎಂದು ಹೇಳಿದನು. 27 ಕಾವಲುಗಾರನು - ಮುಂದಾಗಿ ಬರುತ್ತಿರುವವನ ಓಟವು ಚಾದೋಕನ ಮಗನಾದ ಅಹೀಮಾಚನ ಓಟದ ಹಾಗೆ ಕಾಣುತ್ತದೆ ಎಂದನು. ಅದಕ್ಕೆ ಅರಸನು - ಅವನು ಒಳ್ಳೆಯವನು; ಶುಭವರ್ತಮಾನತರುವವನು ಅಂದನು. 28 ಅಹೀಮಾಚನು ಹತ್ತಿರ ಬಂದು ಅರಸನಿಗೆ ಶುಭವಾಗಲಿ ಎಂದು ಹೇಳಿ ಸಾಷ್ಟಾಂಗನಮಸ್ಕಾರಮಾಡಿ - ಅರಸನಿಗೆ ವಿರೋಧವಾಗಿ ಕೈಯೆತ್ತಿದವರನ್ನು ಸ್ವಾಧೀನಪಡಿಸಿದ ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ ಅಂದನು. 29 ಆಗ ಅರಸನು ಅವನನ್ನು - ಯೌವನಸ್ಥನಾದ ಅಬ್ಷಾಲೋಮನು ಸುರಕ್ಷಿತನಾಗಿದ್ದಾನೋ ಎಂದು ಕೇಳಿದನು. ಅದಕ್ಕೆ ಅಹೀಮಾಚನು ಯೋವಾಬನು ಒಡೆಯರ ಸೇವಕನಾದ ನನ್ನನ್ನು ಕಳುಹಿಸುವಾಗ ನಾನು ಒಂದು ದೊಡ್ಡ ದೊಂಬಿಯನ್ನು ಕಂಡೆನು. ಆದರೆ ಸಂಗತಿಯೇನೆಂಬದು ನನಗೆ ಗೊತ್ತಾಗಲಿಲ್ಲ ಎಂದು ಉತ್ತರಕೊಟ್ಟನು. 30 ಆಗ ಅರಸನು ಅವನಿಗೆ - ನೀನು ಇತ್ತ ನಿಲ್ಲು ಎಂದು ಆಜ್ಞಾಪಿಸಿದನು; ಅವನು ನಿಂತನು. 31 ಅಷ್ಟರಲ್ಲಿ ಕೂಷ್ಯನೂ ಬಂದು - ನನ್ನ ಒಡೆಯನಾದ ಅರಸನಿಗೆ ಶುಭವರ್ತಮಾನ ತಂದಿದ್ದೇನೆ; ಯೆಹೋವನು ನಿನಗೆ ವಿರೋಧವಾಗಿ ಎದ್ದವರೆಲ್ಲರಿಗೂ ಮುಯ್ಯಿತೀರಿಸಿದ್ದಾನೆ ಅಂದನು. 32 ಅರಸನು ಅವನನ್ನು - ಯೌವನಸ್ಥನಾದ ಅಬ್ಷಾಲೋಮನು ಸುರಕ್ಷಿತನಾಗಿದ್ದಾನೋ ಎಂದು ಕೇಳಲು ಅವನು - ನನ್ನ ಒಡೆಯನಾದ ಅರಸನ ಶತ್ರುಗಳಿಗೂ ಅವನಿಗೆ ಕೇಡು ಮಾಡುವದಕ್ಕೆ ಎದ್ದು ನಿಂತವರೆಲ್ಲರಿಗೂ ಆ ಯೌವನಸ್ಥನಿಗಾದ ಗತಿಯೇ ಆಗಲಿ ಎಂದು ಉತ್ತರಕೊಟ್ಟನು. 33 ಇದನ್ನು ಕೇಳಿ ಅರಸನು ಎದೆಯೊಡೆದವನಾಗಿ - ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ, ನಿನಗೆ ಬದಲಾಗಿ ನಾನು ಸತ್ತಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು. ಅಬ್ಷಾಲೋಮನೇ, ನನ್ನ ಮಗನೇ, ಮಗನೇ ಎಂದು ಕೂಗಿ ಅಳುತ್ತಾ ಹೆಬ್ಬಾಗಲಿನ ಮೇಲಿರುವ ಕೋಣೆಗೆ ಹೋದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India