2 ಸಮುಯೇಲ 17 - ಕನ್ನಡ ಸತ್ಯವೇದವು J.V. (BSI)ಹೂಷೈಯು ಅಹೀತೋಫೆಲನ ಆಲೋಚನೆಯನ್ನು ನಿರರ್ಥಕ ಪಡಿಸಿದ್ದೂ ಅಹೀತೋಫೆಲನು ಆತ್ಮಹತ್ಯ ಮಾಡಿಕೊಂಡದ್ದೂ 1 ತರುವಾಯ ಅಹೀತೋಫೆಲನು ಅಬ್ಷಾಲೋಮನಿಗೆ - ಅಪ್ಪಣೆಯಾಗಲಿ, ನಾನು ಹನ್ನೆರಡು ಸಾವಿರ ಜನರನ್ನು ಆರಿಸಿಕೊಂಡು ಈ ರಾತ್ರಿಯೇ ದಾವೀದನನ್ನು ಹಿಂದಟ್ಟುವೆನು; 2 ಅವನು ದಣಿದವನೂ ಧೈರ್ಯಗುಂದಿದವನೂ ಆಗಿರುವಾಗಲೇ ಫಕ್ಕನೆ ಅವನ ಮೇಲೆ ಬಿದ್ದು ಅವನನ್ನು ಬೆದರಿಸುವೆನು, ಅವನ ಜನರೆಲ್ಲರೂ ಓಡಿಹೋಗುವರು. 3 ಅರಸನೊಬ್ಬನನ್ನೇ ಕೊಂದು ಎಲ್ಲಾ ಜನರನ್ನು ತಿರಿಗಿ ನಿನ್ನ ಬಳಿಗೆ ಬರಮಾಡುವೆನು. ನಿನ್ನ ಅಪೇಕ್ಷೆಯಂತೆ ಎಲ್ಲಾ ಜನರೂ ಹಿಂದಿರುಗಿ ಬಂದ ಮೇಲೆ ದೇಶದಲ್ಲೆಲ್ಲಾ ಸಮಾಧಾನವುಂಟಾಗುವದು ಎಂದು ಹೇಳಿದನು. 4 ಈ ಮಾತು ಅಬ್ಷಾಲೋಮನಿಗೂ ಇಸ್ರಾಯೇಲ್ಯರ ಎಲ್ಲಾ ಹಿರಿಯರಿಗೂ ಸರಿಯಾಗಿ ಕಂಡಿತು. 5 ಆಮೇಲೆ ಅಬ್ಷಾಲೋಮನು - ಅರ್ಕೀಯನಾದ ಹೂಷೈಯನ್ನು ಕರೆದು ಅವನ ಅಭಿಪ್ರಾಯವನ್ನು ಕೇಳೋಣ ಎಂದು ಹೇಳಿ 6 ಅವನು ತನ್ನ ಬಳಿಗೆ ಬಂದಾಗ ಅವನನ್ನು - ಅಹೀತೋಫೆಲನು ಹೀಗೆ ಹೀಗೆ ಹೇಳಿದ್ದಾನೆ; ಇದರಂತೆ ಮಾಡಿದರೆ ಒಳ್ಳೇದಾಗುವದೋ? ಇಲ್ಲವಾದರೆ ನಿನ್ನ ಅಭಿಪ್ರಾಯವೇನು ಎಂದು ಕೇಳಲು 7 ಹೂಷೈಯು ಅಬ್ಷಾಲೋಮನಿಗೆ - ಈ ಸಾರಿ ಅಹೀತೋಫೆಲನು ಹೇಳಿದ ಅಲೋಚನೆ ಒಳ್ಳೇದಲ್ಲ; 8 ನಿನ್ನ ತಂದೆಯೂ ಅವನ ಜನರೂ ಶೂರರಾಗಿದ್ದಾರೆಂದೂ ಈಗ ಅವರು ಮರಿಯನ್ನು ಕಳಕೊಂಡ ಕರಡಿಯಂತೆ ರೋಷವುಳ್ಳವರಾಗಿದ್ದಾರೆಂದೂ ನಿನಗೆ ಗೊತ್ತುಂಟಲ್ಲಾ; ಇದಲ್ಲದೆ ಅವನು ಯುದ್ಧನಿಪುಣನು; ಜನರ ಮಧ್ಯದಲ್ಲಿ ರಾತ್ರಿ ಕಳೆಯುವದಿಲ್ಲ. 9 ಅವನು ಈಗ ಒಂದು ಗುಹೆಯಲ್ಲಾಗಲಿ ಬೇರೆ ಯಾವದಾದರೊಂದು ಸ್ಥಳದಲ್ಲಾಗಲಿ ಅಡಗಿಕೊಂಡಿರುವನು. ಮೊದಲು ನಮ್ಮವರಲ್ಲೇ ಕೆಲವರು ಮಡಿದರೆ ಜನರು ಇದನ್ನು ಕೇಳಿ ಅಬ್ಷಾಲೋಮನ ಪಕ್ಷದವರಿಗೆ ಮಹಾಪಜಯವಾಯಿತೆಂದು ಸುದ್ದಿ ಹಬ್ಬಿಸುವರು. 10 ಆಗ ಸಿಂಹಹೃದಯರಾದ ಶೂರರ ಎದೆಯೂ ಕರಗಿ ನೀರಾಗುವದು. ನಿನ್ನ ತಂದೆಯು ರಣವೀರನೆಂದೂ ಅವನ ಸಂಗಡ ಇದ್ದವರು ಪರಾಕ್ರಮಶಾಲಿಗಳೆಂದೂ ಎಲ್ಲಾ ಇಸ್ರಾಯೇಲ್ಯರು ಬಲ್ಲರಷ್ಟೆ. 11 ಹೀಗಿರುವದರಿಂದ ನನ್ನ ಆಲೋಚನೆಯನ್ನು ಕೇಳು - ದಾನಿನಿಂದ ಬೇರ್ಷೆಬದವರೆಗೆ ವಾಸವಾಗಿರುವ ಇಸ್ರಾಯೇಲ್ಯರೊಳಗಿಂದ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಸೈನ್ಯವನ್ನು ಕೂಡಿಸಿ ನೀನೂ ಅವರ ಜೊತೆಯಲ್ಲಿ ಯುದ್ಧಕ್ಕೆ ಹೋಗು. 12 ನಾವು ಅವನಿರುವ ಸ್ಥಳವನ್ನು ಗೊತ್ತುಮಾಡಿಕೊಂಡು ಹೋಗಿ ಇಬ್ಬನಿಯು ನೆಲದ ಮೇಲೆ ಹೇಗೋ ಹಾಗೆಯೇ ನಾವು ಅವರ ಮೇಲೆ ಬೀಳೋಣ. ಆಗ ಅವನೂ ಅವನ ಜನರೂ ನಮ್ಮ ಕೈಗೆ ಸಿಕ್ಕುವರು; ಒಬ್ಬನೂ ತಪ್ಪಿಸಿಕೊಳ್ಳಲಾರನು. 13 ಅವನು ಒಂದು ಪಟ್ಟಣವನ್ನು ಹೊಕ್ಕಿರುವದಾದರೆ ಇಸ್ರಾಯೇಲ್ಯರೆಲ್ಲರೂ ಹಗ್ಗಗಳನ್ನು ತೆಗೆದುಕೊಂಡು ಅಲ್ಲಿಗೆ ಬರಲಿ; ಆಗ ಆ ಊರನ್ನು ಒಂದು ಹರಳಾದರೂ ಉಳಿಯದಂತೆ ಹಗ್ಗಗಳಿಂದ ಎಳೆದುಕೊಂಡು ಹೋಗಿ ಹೊಳೆಯಲ್ಲಿ ಹಾಕಿ ಬಿಡೋಣ ಅಂದನು. 14 ಇದನ್ನು ಕೇಳಿ ಅಬ್ಷಾಲೋಮನೂ ಎಲ್ಲಾ ಇಸ್ರಾಯೇಲ್ಯರೂ ಅರ್ಕೀಯನಾದ ಹೂಷೈಯ ಆಲೋಚನೆಯು ಅಹೀತೋಫೆಲನ ಆಲೋಚನೆಗಿಂತ ಒಳ್ಳೇದಾಗಿದೆ ಎಂದರು. ಯೆಹೋವನು ಅಬ್ಷಾಲೋಮನಿಗೆ ಕೇಡನ್ನುಂಟು ಮಾಡಬೇಕೆಂದು ಅಹೀತೋಫೆಲನ ಆಲೋಚನೆಯನ್ನು ವ್ಯರ್ಥಮಾಡಿದನು. 15 ತರುವಾಯ ಹೂಷೈಯು ಯಾಜಕರಾದ ಚಾದೋಕ ಎಬ್ಯಾತಾರರಿಗೆ - ಅಹೀತೋಫೆಲನು ಅಬ್ಷಾಲೋಮನಿಗೂ ಇಸ್ರಾಯೇಲ್ಯರ ಹಿರಿಯರಿಗೂ ಇಂಥಿಂಥ ಆಲೋಚನೆಯನ್ನು ಹೇಳಿದನು; ನಾನು ಹೀಗೆ ಹೀಗೆ ಹೇಳಿದೆನು. 16 ಆದದರಿಂದ ನೀವು ಬೇಗನೆ ಅರಸನಾದ ದಾವೀದನಿಗೆ - ನೀನು ಈ ರಾತ್ರಿ ಅಡವಿಯಲ್ಲಿ ಹೊಳೆದಾಟುವ ಸ್ಥಳದ ಹತ್ತಿರ ಇಳುಕೊಳ್ಳಬೇಡ; ಶೀಘ್ರವಾಗಿ ಹೊಳೆದಾಟಿ ಮುಂದೆ ಹೋಗಿಬಿಡು; ಇಲ್ಲವಾದರೆ ನೀನೂ ನಿನ್ನ ಜನರೂ ನಾಶವಾಗುವಿರಿ ಎಂದು ಹೇಳಿಕಳುಹಿಸಿರಿ ಅಂದನು. 17 ಯೋನಾತಾನ್ ಅಹೀಮಾಚರು ರೋಗೆಲಿನ ಬುಗ್ಗೆಯ ಬಳಿಯಲ್ಲಿದ್ದರು. ಇವರ ಮನೆಯ ದಾಸಿಯು ಎಲ್ಲಾ ವರ್ತಮಾನಗಳನ್ನು ಇವರಿಗೂ ಇವರು ಅರಸನಾದ ದಾವೀದನಿಗೂ ಮುಟ್ಟಿಸುವಂತೆ ಗೊತ್ತು ಮಾಡಿಕೊಂಡಿದ್ದರು. ತಮ್ಮನ್ನು ಯಾರೂ ನೋಡಬಾರದೆಂದು ಇವರು ತಾವಾಗಿ ಊರೊಳಗೆ ಬರಲಿಲ್ಲ. 18 ಆದರೂ ಒಬ್ಬ ಯೌವನಸ್ಥನು ಅವರನ್ನು ನೋಡಿ ಅಬ್ಷಾಲೋಮನಿಗೆ ತಿಳಿಸಿದನು. ಅಷ್ಟರಲ್ಲಿ ಅವರಿಬ್ಬರೂ ಬಹುರೀವಿುಗೆ ಓಡಿ ಹೋಗಿ ಅಲ್ಲಿ ಒಬ್ಬನ ಮನೆಯನ್ನು ಹೊಕ್ಕರು. ಆ ಮನೆಯ ಅಂಗಳದಲ್ಲಿ ಒಂದು ಬಾವಿಯಿತ್ತು. ಅವರು ಅದರಲ್ಲಿ ಇಳಿದರು. 19 ಕೂಡಲೆ ಆ ಮನೆಯ ಹೆಂಗಸು ಅದರ ಮೇಲೆ ಒಂದು ಬಟ್ಟೆಯನ್ನು ಹಾಸಿ ಗೋದಿಯ ನುಚ್ಚನ್ನು ಹರವಿದಳು. ಆದದರಿಂದ ಸಂಗತಿಯು ಯಾರಿಗೂ ಗೊತ್ತಾಗಲಿಲ್ಲ. 20 ಅಬ್ಷಾಲೋಮನ ಸೇವಕರು ಸ್ತ್ರೀಯ ಮನೆಗೆ ಹೋಗಿ - ಅಹೀಮಾಚ್ ಯೋನಾತಾನರೆಲ್ಲಿ ಎಂದು ಆಕೆಯನ್ನು ಕೇಳಿದ್ದಕ್ಕೆ ಆಕೆಯು - ಅವರು ಹಳ್ಳದಾಟಿ ಹೋಗಿ ಬಿಟ್ಟರು ಎಂದು ಉತ್ತರ ಕೊಟ್ಟಳು. ಅವರು ಅವರನ್ನು ಹುಡುಕುವದಕ್ಕೆ ಹೋಗಿ ಕಾಣದೆ ಯೆರೂಸಲೇವಿುಗೆ ಹಿಂದಿರುಗಿದರು. 21 ಅವರು ಹೋದಕೂಡಲೆ ಇವರಿಬ್ಬರೂ ಬಾವಿಯಿಂದ ಮೇಲಕ್ಕೆ ಬಂದು ಅರಸನಾದ ದಾವೀದನ ಬಳಿಗೆ ಹೋಗಿ ಅವನಿಗೆ - ಅಹೀತೋಫೆಲನು ನಿನಗೆ ವಿರೋಧವಾಗಿ ಇಂಥಿಂಥ ಆಲೋಚನೆಯನ್ನು ಹೇಳಿದ್ದಾನೆ; ಆದದರಿಂದ ಬೇಗನೆ ಎದ್ದು ಹೊಳೆದಾಟಿ ಹೋಗು ಎಂದು ಹೇಳಿದರು. 22 ಆಗ ದಾವೀದನೂ ಅವನ ಜೊತೆಯಲ್ಲಿದ್ದವರೆಲ್ಲರೂ ಯೊರ್ದನ್‍ಹೊಳೆಯನ್ನು ದಾಟಿದರು. ಉದಯವಾದಾಗ ದಾಟಬೇಕಾದವನೊಬ್ಬನೂ ಇರಲಿಲ್ಲ. 23 ಅಹೀತೋಫೆಲನು ತನ್ನ ಆಲೋಚನೆಯು ನಡೆಯಲಿಲ್ಲವೆಂದು ತಿಳಿದು ಕತ್ತೆಗೆ ತಡಿಹಾಕಿಸಿ ಕೂತುಕೊಂಡು ತನ್ನ ಊರಿಗೆ ಹೋಗಿ ಮನೆಯಲ್ಲಿ ವ್ಯವಸ್ಥೆಮಾಡಿ ಉರ್ಲುಹಾಕಿಕೊಂಡು ಸತ್ತನು. ಅವನ ಶವವನ್ನು ಅವನ ತಂದೆಯ ಶ್ಮಶಾನಭೂವಿುಯಲ್ಲಿ ಸಮಾಧಿಮಾಡಿದರು. ದಾವೀದನು ಮಹನಯಿವಿುಗೆ ಹೋದದ್ದೂ ಅಬ್ಷಾಲೋಮನು ಅವನಿಗೆ ವಿರೋಧವಾಗಿ ಯುದ್ಧಕ್ಕೆ ಹೋಗಿ ಕೊಲ್ಲಲ್ಪಟ್ಟದ್ದೂ 24 ದಾವೀದನು ಮಹನಯಿವಿುಗೆ ಹೋದನು. ಇಸ್ರಾಯೇಲ್ಯರನ್ನೆಲ್ಲಾ ಕೂಡಿಸಿಕೊಂಡು ಅಬ್ಷಾಲೋಮನು ಯೊರ್ದನ್‍ಹೊಳೆ ದಾಟಿದನು. 25 ಅವನು ಯೋವಾಬನಿಗೆ ಬದಲಾಗಿ ಅಮಾಸನನ್ನು ಸೇನಾಪತಿಯನ್ನಾಗಿ ನೇವಿುಸಿದನು. ಇಸ್ರಾಯೇಲ್ಯನಾದ ಇತ್ರನು ನಾಹಾಷನ ಮಗಳೂ ಯೋವಾಬನ ತಾಯಿಯಾದ ಚೆರೂಯಳ ತಂಗಿಯೂ ಆದ ಅಬೀಗಲ್ ಎಂಬವಳನ್ನು ಕೂಡಿದ್ದರಿಂದ ಈ ಅಮಾಸನು ಹುಟ್ಟಿದನು. 26 ಇಸ್ರಾಯೇಲ್ಯರೂ ಅಬ್ಷಾಲೋಮನೂ ಗಿಲ್ಯಾದ್ ದೇಶದಲ್ಲಿ ಪಾಳೆಯಮಾಡಿಕೊಂಡರು. 27 ದಾವೀದನು ಮಹನಯಿವಿುಗೆ ಬಂದಾಗ ಅಮ್ಮೋನಿಯರ ರಬ್ಬಾ ಊರಿನವನಾದ ನಾಹಾಷನ ಮಗ ಶೋಬಿ, ಲೋದೆಬಾರಿನ ಅಮ್ಮೀಯೇಲನ ಮಗನಾದ ಮಾಕೀರ್, ರೋಗೆಲೀಮ್ ಊರಿನ ಗಿಲ್ಯಾದ್ಯನಾದ 28 ಬರ್ಜಿಲ್ಲೈ ಎಂಬವರು ದಾವೀದನಿಗೂ ಅವನ ಜನರಿಗೂ ಹಾಸಿಗೆ, ಬಟ್ಟಲು, ಮಡಕೆ ಇವುಗಳನ್ನೂ ಊಟಕ್ಕಾಗಿ ಗೋದಿ ಜವೇಗೋದಿ ಹಿಟ್ಟು ಹುರಿಗಾಳು ಅವರೆ ಅಲಸಂದಿ ಬೇಳೆ ಜೇನುತುಪ್ಪ 29 ಬೆಣ್ಣೆ ಕುರಿ ಹಸುವಿನ ಗಿಣ್ಣು ಇವುಗಳನ್ನೂ ತಂದು ಕೊಟ್ಟರು. ಜನರು ಅರಣ್ಯಪ್ರಯಾಣದಿಂದ ಹಸಿದವರೂ ದಣಿದವರೂ ಬಾಯಾರಿದವರೂ ಆಗಿದ್ದಾರೆ ಅಂದುಕೊಂಡು ಇವುಗಳನ್ನು ತಂದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India