2 ಸಮುಯೇಲ 15 - ಕನ್ನಡ ಸತ್ಯವೇದವು J.V. (BSI)ಅಬ್ಷಾಲೋಮನು ತಂದೆಗೆ ವಿರೋಧವಾಗಿ ಎದ್ದು ರಾಜ್ಯವನ್ನು ಕಿತ್ತುಕೊಂಡದ್ದು 1 ಸ್ವಲ್ಪ ಕಾಲವಾದನಂತರ ಅಬ್ಷಾಲೋಮನು ತನಗೋಸ್ಕರ ಒಂದು ರಥವನ್ನೂ ಕುದುರೆಗಳನ್ನೂ ತೆಗೆದುಕೊಂಡು ತನ್ನ ಮುಂದೆ ಮೈಗಾವಲಾಗಿ ಓಡುವದಕ್ಕೆ ಐವತ್ತು ಮಂದಿಯನ್ನು ನೇವಿುಸಿದನು. 2 ಅವನು ಹೊತ್ತಾರೆಯಲ್ಲೆದ್ದು ಊರುಬಾಗಲ ಬಳಿಯಲ್ಲಿ ನಿಂತುಕೊಳ್ಳುವನು. ಯಾವನಾದರೂ ತನ್ನ ವ್ಯಾಜ್ಯತೀರಿಸಿಕೊಳ್ಳುವದಕ್ಕಾಗಿ ಅರಸನ ಬಳಿಗೆ ಹೋಗುವದನ್ನು ಅಬ್ಷಾಲೋಮನು ಕಂಡರೆ ಅಂಥವನನ್ನು ತನ್ನ ಬಳಿಗೆ ಕರೆದು ನೀನು ಯಾವ ಊರಿನವನು ಎಂದು ಕೇಳುವನು. ಅವನು - ನಿನ್ನ ಸೇವಕನಾದ ನಾನು ಇಸ್ರಾಯೇಲ್ಯರ ಇಂಥ ಕುಲಕ್ಕೆ ಸೇರಿದವನು ಎಂದು ಉತ್ತರ ಕೊಡುವನು. 3 ಆಗ ಅಬ್ಷಾಲೋಮನು - ನೋಡು, ನಿನ್ನ ಕಾರ್ಯವು ಒಳ್ಳೇದೂ ನ್ಯಾಯವಾದದ್ದೂ ಆಗಿದೆ; ಆದರೆ ವ್ಯಾಜ್ಯಗಳನ್ನು ವಿಚಾರಿಸುವದಕ್ಕೆ ಅರಸನಿಂದ ಒಬ್ಬನೂ ನೇಮಕವಾಗಿಲ್ಲ. 4 ವ್ಯಾಜ್ಯವಾಗಲಿ ಬಿನ್ನಹವಾಗಲಿ ಉಳ್ಳವರು ಬಂದು ನ್ಯಾಯವನ್ನು ಪಡಕೊಳ್ಳುವ ಹಾಗೆ ನನ್ನನ್ನೇ ದೇಶದ ನ್ಯಾಯಾಧಿಪತಿಯನ್ನಾಗಿ ನೇವಿುಸಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು ಎಂದು ಹೇಳುವನು. 5 ಯಾವನಾದರೂ ಅವನಿಗೆ ಸಾಷ್ಟಾಂಗನಮಸ್ಕಾರ ಮಾಡುವದಕ್ಕೆ ಬಂದರೆ ಅವನು ಕೂಡಲೆ ಕೈಚಾಚಿ ಅವನನ್ನು ಹಿಡಿದು ಮುದ್ದಿಡುವನು. 6 ಅರಸನ ಬಳಿಗೆ ವ್ಯಾಜ್ಯಕ್ಕಾಗಿ ಬರುವ ಎಲ್ಲಾ ಇಸ್ರಾಯೇಲ್ಯರಿಗೆ ಅಬ್ಷಾಲೋಮನು ಹೀಗೆಯೇ ಮಾಡಿ ಎಲ್ಲರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿಕೊಂಡನು. 7 ನಾಲ್ಕು ವರುಷಗಳಾದನಂತರ ಅಬ್ಷಾಲೋಮನು ಅರಸನಿಗೆ - ನಾನು ಯೆಹೋವನಿಗೆ ಹೊತ್ತ ಹರಕೆಗಳನ್ನು ಸಲ್ಲಿಸುವದಕ್ಕಾಗಿ ಹೆಬ್ರೋನಿಗೆ ಹೋಗಬೇಕಾಗಿದೆ, ಅಪ್ಪಣೆಯಾಗಲಿ. 8 ನಿನ್ನ ಸೇವಕನಾದ ನಾನು ಅರಾಮ್‍ದೇಶದ ಗೆಷೂರಿನಲ್ಲಿದ್ದಾಗ - ಯೆಹೋವನು ನನ್ನನ್ನು ತಿರಿಗಿ ಯೆರೂಸಲೇವಿುಗೆ ಬರಮಾಡುವದಾದರೆ ಆತನಿಗೆ ಒಂದು ವಿಶೇಷವಾದ ಆರಾಧನೆ ಮಾಡಿಸುವೆನೆಂದು ಹರಕೆಮಾಡಿದ್ದೆನು ಎಂದು ವಿಜ್ಞಾಪಿಸಲು 9 ಅರಸನು - ಹೋಗು, ನಿನಗೆ ಶುಭವಾಗಲಿ ಎಂದನು. ಅಬ್ಷಾಲೋಮನು ಹೆಬ್ರೋನಿಗೆ ಹೊರಟು ಹೋದನು. 10 ಅವನು ಗೂಢಚಾರರನ್ನು ಕಳುಹಿಸಿ ಇಸ್ರಾಯೇಲ್ಯರ ಎಲ್ಲಾ ಕುಲದವರಿಗೆ - ನೀವು ತುತೂರಿಯ ಧ್ವನಿಯನ್ನು ಕೇಳುತ್ತಲೆ ಅಬ್ಷಾಲೋಮನು ಹೆಬ್ರೋನಿನಲ್ಲಿ ಅರಸನಾದನೆಂದು ಆರ್ಭಟಿಸಿರಿ ಎಂದು ಹೇಳಿಸಿದ್ದನು. 11 ಅಬ್ಷಾಲೋಮನು ಯೆರೂಸಲೇವಿುನಿಂದ ಸಮಾರಾಧನೆಗೆಂದು ಇನ್ನೂರು ಜನರನ್ನು ಕರಕೊಂಡು ಹೋಗಿದ್ದನು. ಅವರು ಯಥಾರ್ಥ ಮನಸ್ಸಿನಿಂದ ಹೋದವರು; ಅವರಿಗೇನೂ ಗೊತ್ತಿರಲಿಲ್ಲ. 12 ಇದಲ್ಲದೆ ಅವನು ಸಮಾಧಾನಯಜ್ಞವನ್ನು ಮಾಡುತ್ತಿರುವಾಗ ದಾವೀದನ ಮಂತ್ರಿಯಾಗಿದ್ದ ಗೀಲೋವಿನ ಅಹೀತೋಫೆಲನೆಂಬವನನ್ನು ಅವನ ಊರಾದ ಗೀಲೋವಿನಿಂದ ಕರೇಕಳುಹಿಸಿದನು. ಜನರು ಅಬ್ಷಾಲೋಮನನ್ನು ಕೂಡಿಕೊಳ್ಳುತ್ತಾ ಬಂದದರಿಂದ ಒಳಸಂಚು ಬಲವಾಗುತ್ತಾ ಹೋಯಿತು. 13 ಇಸ್ರಾಯೇಲ್ಯರ ಮನಸ್ಸು ಅಬ್ಷಾಲೋಮನ ಕಡೆಗೆ ತಿರುಗಿಕೊಂಡಿತೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ 14 ಅವನು ಯೆರೂಸಲೇವಿುನಲ್ಲಿದ್ದ ತನ್ನ ಸೇವಕರಿಗೆ - ಏಳಿರಿ, ಓಡಿ ಹೋಗೋಣ; ಇಲ್ಲೇ ಇದ್ದರೆ ನಾವು ಅಬ್ಷಾಲೋಮನ ಕೈಯಿಂದ ತಪ್ಪಿಸಿಕೊಳ್ಳಲಾರೆವು. ಬೇಗ ಹೊರಡೋಣ; ಅವನು ಅಕಸ್ಮಾತ್ತಾಗಿ ನಮ್ಮ ಮೇಲೆ ಬಿದ್ದು ನಮಗೆ ದುರ್ಗತಿಯನ್ನುಂಟುಮಾಡಿ ಪಟ್ಟಣದವರನ್ನೆಲ್ಲಾ ಕತ್ತಿಯಿಂದ ಸಂಹರಿಸಾನು ಎಂದು ಹೇಳಿದನು. 15 ಸೇವಕರು ಅರಸನಿಗೆ - ನಮ್ಮ ಒಡೆಯನಾದ ಅರಸನಿಗೆ ಸರಿತೋಚಿದ್ದನ್ನು ಮಾಡಸಿದ್ಧರಾಗಿದ್ದೇವೆ ಎಂದು ಉತ್ತರಕೊಟ್ಟರು. 16 ಆಗ ಅರಸನು ಮನೆಕಾಯುವದಕ್ಕಾಗಿ ಹತ್ತು ಮಂದಿ ಉಪ ಪತ್ನಿಯರನ್ನು ಬಿಟ್ಟು ಉಳಿದವರನ್ನೆಲ್ಲಾ ಕರಕೊಂಡು ಹೊರಟನು. 17 ಅರಸನೂ ಅವನ ಜೊತೆಯಲ್ಲಿ ಹೋದ ಜನರೆಲ್ಲರೂ ಪಟ್ಟಣದ ಕಡೇ ಮನೆಯ ಬಳಿಯಲ್ಲಿ ತುಸು ಹೊತ್ತು ನಿಂತರು. 18 ದಾವೀದನ ಎಲ್ಲಾ ಸೇವಕರೂ ಕೆರೇತ್ಯ, ಪೆಲೇತ್ಯ ಎಂಬ ಕಾವಲುದಂಡುಗಳೂ ಗತ್ಊರಿನಿಂದ ಅರಸನ ಜೊತೆಯಲ್ಲಿ ಬಂದಿದ್ದ ಆರುನೂರು ಮಂದಿ ಗಿತ್ತೀಯರೂ ಅರಸನ ಮುಂದೆ ಹೋದರು. 19 ಆಗ ಅರಸನು ಗಿತ್ತೀಯನಾದ ಇತ್ತೈ ಎಂಬವನಿಗೆ - ನೀನೂ ನಮ್ಮ ಸಂಗಡ ಯಾಕೆ ಬರಬೇಕು? ನೀನು ಸ್ವದೇಶವನ್ನು ಬಿಟ್ಟು ನನ್ನ ಆಶ್ರಯಕ್ಕೆ ಬಂದವನಲ್ಲವೇ. ಹಿಂದಿರುಗಿ ಹೋಗಿ ಅರಸನ ಬಳಿಯಲ್ಲಿ ವಾಸಮಾಡು. 20 ನಾನು ಎಲ್ಲೆಲ್ಲಿಯೋ ಅಲೆಯುತ್ತಿರಬೇಕಾಗುವದು; ಹೀಗಿರುವದರಿಂದ ನಿನ್ನೆ ಬಂದಂಥ ನಿನ್ನನ್ನು ಕರಕೊಂಡು ಹೋಗಿ ಸುಮ್ಮನೆ ಯಾಕೆ ತಿರುಗಾಡಲಿಕ್ಕೆ ಹಚ್ಚಬೇಕು? ನಿನ್ನ ಸಹೋದರರನ್ನು ಕರಕೊಂಡು ಹಿಂದಿರುಗಿಹೋಗು; ಕೃಪಾಸತ್ಯತೆಗಳು ನಿನ್ನ ಸಂಗಡ ಇರಲಿ ಎಂದು ಹೇಳಿದನು. 21 ಅದಕ್ಕೆ ಇತ್ತೈ - ಯೆಹೋವನಾಣೆ, ನನ್ನ ಒಡೆಯನಾದ ಅರಸನ ಜೀವದಾಣೆ, ಜೀವಹೋದರೂ ಉಳಿದರೂ ನನ್ನ ಒಡೆಯನಾದ ಅರಸನಿರುವಲ್ಲಿಗೆ ಹೋಗುವೆನು ಎಂದು ಉತ್ತರಕೊಟ್ಟನು. 22 ಆಗ ದಾವೀದನು ಅವನಿಗೆ - ಒಳ್ಳೇದು, ಮುಂದೆ ನಡೆ ಅಂದನು. ಗಿತ್ತೀಯನಾದ ಇತ್ತೈಯು ತನ್ನ ಎಲ್ಲಾ ಸೈನಿಕರನ್ನೂ ಪರಿಜನವನ್ನೂ ಕರಕೊಂಡು ಮುಂದೆ ನಡೆದನು. 23 ಇವರೆಲ್ಲರೂ ಮುಂದೆ ನಡೆಯುವಾಗ ಸುತ್ತಣವರೆಲ್ಲರೂ ಬಹಳವಾಗಿ ಅತ್ತರು. ಅರಸನೂ ಎಲ್ಲಾ ಜನರೂ ಕಿದ್ರೋನ್‍ಹಳ್ಳವನ್ನು ದಾಟಿ ಅರಣ್ಯಮಾರ್ಗ ಹಿಡಿದರು. 24 ಚಾದೋಕನೂ ಅವನ ವಶದಲ್ಲಿದ್ದ ಎಲ್ಲಾ ಲೇವಿಯರೂ ದೇವರ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬಂದು ಅದನ್ನು ಜನರೆಲ್ಲರೂ ದಾಟಿಹೋಗುವವರೆಗೆ ಕೆಳಗಿಳಿಸಿದ್ದರು. ಎಬ್ಯಾತಾರನೂ ಬಂದಿದ್ದನು. 25 ಅರಸನು ಚಾದೋಕನಿಗೆ - ನೀನು ದೇವರ ಒಡಂಬಡಿಕೆಯ ಮಂಜೂಷವನ್ನು ಹಿಂದಿರುಗಿ ತೆಗೆದುಕೊಂಡು ಹೋಗು; ಯೆಹೋವನ ದೃಷ್ಟಿಯಲ್ಲಿ ನನಗೆ ದಯೆದೊರಕಿದರೆ ನಾನು ಆತನನ್ನೂ ಆತನ ಆಲಯವನ್ನೂ ನೋಡುವ ಹಾಗೆ ತಾನೇ ನನ್ನನ್ನು ಹಿಂದಕ್ಕೆ ಬರಮಾಡುವನು. 26 ಆತನು - ನಿನ್ನಲ್ಲಿ ನನಗೆ ಇಷ್ಟವಿಲ್ಲವೆಂದು ತೋರಿಸಿದರೆ ತನಗೆ ಸರಿಕಂಡಂತೆ ಮಾಡಲಿ, ಆತನ ಚಿತ್ತ ಅಂದನು. 27 ಇದಲ್ಲದೆ ಅವನು ಯಾಜಕನಾದ ಚಾದೋಕನಿಗೆ - ನೀನು ದೇವದರ್ಶಿ; ನೀನು ನಿನ್ನ ಮಗನಾದ ಅಹೀಮಾಚನು, ಎಬ್ಯಾತಾರನ ಮಗನಾದ ಯೋನಾತಾನನು ಎಂಬ ಈ ಇಬ್ಬರು ಹುಡುಗರನ್ನು ಕರಕೊಂಡು ಸುರಕ್ಷಿತವಾಗಿ ಪಟ್ಟಣಕ್ಕೆ ಹೋಗಬೇಕು. 28 ನಿವ್ಮಿುಂದ ವರ್ತಮಾನಬರುವ ತನಕ ನಾನು ಅಡವಿಯಲ್ಲಿ ಹೊಳೆದಾಟುವ ಸ್ಥಳದ ಹತ್ತಿರ ಇರುವೆನು ಎಂದು ಹೇಳಿದನು. 29 ಆಗ ಚಾದೋಕನೂ ಎಬ್ಯಾತಾರನೂ ದೇವರ ಮಂಜೂಷವನ್ನು ಯೆರೂಸಲೇವಿುಗೆ ಒಯ್ದು ಅಲ್ಲೇ ವಾಸಿಸಿದರು. 30 ದಾವೀದನು ಮೋರೆಯನ್ನು ಮುಚ್ಚಿಕೊಂಡು ಅಳುತ್ತಾ ಬರಿಗಾಲಿನಿಂದ ಎಣ್ಣೇಮರಗಳ ಗುಡ್ಡವನ್ನೇರಿದನು. ಅವನ ಜೊತೆಯಲ್ಲಿದ್ದ ಜನರೂ ಮೋರೆಮುಚ್ಚಿಕೊಂಡು ಅಳುತ್ತಾ ಏರಿದರು. 31 ಅಬ್ಷಾಲೋಮನ ಸಂಗಡ ಒಳಸಂಚುಮಾಡಿದವರಲ್ಲಿ ಅಹೀತೋಫೆಲನೂ ಇದ್ದಾನೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ ಅವನು - ಯೆಹೋವನೇ, ಅಹೀತೋಫೆಲನ ಆಲೋಚನೆಗಳನ್ನು ನಿರರ್ಥಕಪಡಿಸು ಎಂದು ಪ್ರಾರ್ಥಿಸಿದನು. 32 ಅವನು ಗುಡ್ಡದ ತುದಿಯಲ್ಲಿ ದೇವಾರಾಧನೆ ನಡೆಯುವ ಸ್ಥಳಕ್ಕೆ ಬಂದಾಗ ಅರ್ಕೀಯನಾದ ಹೂಷೈ ಎಂಬವನು ಅಂಗಿಯನ್ನು ಹರಕೊಂಡು ತಲೆಯ ಮೇಲೆ ಮಣ್ಣುಹಾಕಿಕೊಂಡು ಅರಸನ ಬಳಿಗೆ ಬಂದನು. 33 ಅರಸನು ಅವನಿಗೆ - ನೀನು ನನ್ನ ಸಂಗಡ ಬರುವದಾದರೆ ನನಗೆ ಭಾರವಾಗುವಿಯಷ್ಟೆ. 34 ಆದರೆ ನೀನು ಹಿಂದಿರುಗಿ ಪಟ್ಟಣಕ್ಕೆ ಹೋಗಿ ಅಬ್ಷಾಲೋಮನಿಗೆ - ಅರಸನೇ, ನಾನು ನಿನ್ನ ಸೇವಕನು; ಮುಂಚೆ ನಿನ್ನ ತಂದೆಯನ್ನು ಸೇವಿಸಿದಂತೆ ಈಗ ನಿನ್ನನ್ನು ಸೇವಿಸುತ್ತೇನೆ ಎಂದು ಹೇಳುವದಾದರೆ ನನಗೋಸ್ಕರ ಅಹೀತೋಫೆಲನ ಆಲೋಚನೆಯನ್ನು ವ್ಯರ್ಥಮಾಡುವದಕ್ಕೆ ನಿನಗೆ ಅನುಕೂಲವಾಗುವದು. 35 ಅಲ್ಲಿ ನಿನ್ನ ಸಂಗಡ ಯಾಜಕರಾದ ಚಾದೋಕ್ ಎಬ್ಯಾತಾರರು ಇರುತ್ತಾರಲ್ಲಾ; ಅರಮನೆಯಲ್ಲಿ ನಿನಗೆ ಗೊತ್ತಾಗುವ ವರ್ತಮಾನವನ್ನೆಲ್ಲಾ ಆ ಇಬ್ಬರು ಯಾಜಕರಿಗೆ ತಿಳಿಸು. 36 ಅವರ ಬಳಿಯಲ್ಲಿ ಇಬ್ಬರು ಹುಡುಗರಿದ್ದಾರೆ; ಒಬ್ಬನು ಚಾದೋಕನ ಮಗನಾದ ಅಹೀಮಾಚನು; ಇನ್ನೊಬ್ಬನು ಎಬ್ಯಾತಾರನ ಮಗನಾದ ಯೋನಾತಾನನು. ಇವರ ಮುಖಾಂತರವಾಗಿ ನೀನು ಎಲ್ಲಾ ವರ್ತಮಾನವನ್ನು ನನಗೆ ಮುಟ್ಟಿಸಬಹುದು ಎಂದು ಹೇಳಿ ಅವನನ್ನು ಕಳುಹಿಸಿದನು. 37 ಅಬ್ಷಾಲೋಮನು ಯೆರೂಸಲೇಮನ್ನು ಪ್ರವೇಶಿಸುವಷ್ಟರಲ್ಲೇ ದಾವೀದನ ಸ್ನೇಹಿತನಾದ ಹೂಷೈಯು ಪಟ್ಟಣಕ್ಕೆ ಬಂದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India