Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಸಮುಯೇಲ 14 - ಕನ್ನಡ ಸತ್ಯವೇದವು J.V. (BSI)


ಯೋವಾಬನ ಪ್ರಯತ್ನದಿಂದ ದಾವೀದನಿಗೂ ಅಬ್ಷಾಲೋಮನಿಗೂ ಸಂಧಾನವಾದದ್ದು

1 ಅರಸನು ಅಬ್ಷಾಲೋಮನಿಗಾಗಿ ಹಂಬಲಿಸುತ್ತಿರುವದನ್ನು ಚೆರೂಯಳ ಮಗನಾದ ಯೋವಾಬನು ತಿಳಿದು

2 ತೆಕೋವದಿಂದ ಒಬ್ಬ ಬುದ್ದಿವಂತೆಯಾದ ಸ್ತ್ರೀಯನ್ನು ಕರೇಕಳುಹಿಸಿ ಆಕೆಗೆ - ನೀನು ಪ್ರಿಯರನ್ನು ಕಳಕೊಂಡು ಬಹುದಿವಸಗಳಿಂದ ಶೋಕಪಡುತ್ತಿರುವ ಸ್ತ್ರೀಯೋ ಎಂಬಂತೆ ಶೋಕವಸ್ತ್ರಗಳನ್ನು ಧರಿಸಿಕೊಂಡು

3 ಎಣ್ಣೆ ಹಚ್ಚಿಕೊಳ್ಳದೆ ಅರಸನ ಬಳಿಗೆ ಹೋಗಿ ಈ ಮಾತುಗಳನ್ನು ಅವನಿಗೆ ಹೇಳು ಎಂದು ಆಜ್ಞಾಪಿಸಿ ಹೇಳಬೇಕಾದ ಮಾತುಗಳನ್ನು ಆಕೆಗೆ ಕಲಿಸಿಕೊಟ್ಟನು.

4 ತೆಕೋವದ ಸ್ತ್ರೀಯು ಅರಸನ ಹತ್ತಿರ ಹೋಗಿ ಅವನ ಮುಂದೆ ನೆಲಕ್ಕೆ ಬಿದ್ದು - ಅರಸೇ, ರಕ್ಷಿಸು ಎಂದು ಕೂಗಿದಳು.

5 ಅರಸನು ನಿನಗೇನಾಯಿತು ಎಂದು ಆಕೆಯನ್ನು ಕೇಳಲು ಆಕೆಯು - ನಾನು ವಿಧವೆ; ಗಂಡನು ಸತ್ತುಹೋಗಿದ್ದಾನೆ.

6 ನಿನ್ನ ದಾಸಿಯಾದ ನನಗೆ ಇಬ್ಬರು ಮಕ್ಕಳಿದ್ದರು. ಒಂದು ದಿವಸ ಅವರಿಬ್ಬರೂ ಹೊಲದಲ್ಲಿ ಜಗಳವಾಡಿದರು; ಅಲ್ಲಿ ಬಿಡಿಸುವವರಾರೂ ಇರಲಿಲ್ಲವಾದದರಿಂದ ಒಬ್ಬನು ಇನ್ನೊಬ್ಬನನ್ನು ಹೊಡೆದು ಕೊಂದನು.

7 ಈಗ ನೋಡು, ಸಂಬಂಧಿಕರೆಲ್ಲಾ ನಿನ್ನ ದಾಸಿಯಾದ ನನಗೆ ವಿರೋಧವಾಗಿ ಎದ್ದು - ತಮ್ಮನನ್ನು ಕೊಂದವನೆಲ್ಲಿ? ಅವನನ್ನು ನಮಗೆ ಒಪ್ಪಿಸು; ತಮ್ಮನ ಪ್ರಾಣಕ್ಕಾಗಿ ಅವನ ಪ್ರಾಣವನ್ನೂ ತೆಗೆದುಬಿಟ್ಟು ನಿನ್ನನ್ನು ಬಾಧ್ಯಸ್ಥನಿಲ್ಲದ ಹಾಗೆ ಮಾಡಿಬಿಡುತ್ತೇವೆ ಅನ್ನುತ್ತಾರೆ. ಹೀಗೆ ಅವರು ನನಗುಳಿದಿರುವ ಒಂದು ಕೆಂಡವನ್ನೂ ಆರಿಸಿಬಿಟ್ಟು ನನ್ನ ಗಂಡನ ಹೆಸರನ್ನೂ ಸಂತಾನವನ್ನೂ ಭೂಲೋಕದ ಮೇಲಣಿಂದ ಅಳಿಸಬೇಕೆಂದಿದ್ದಾರೆ ಎಂದು ಉತ್ತರಕೊಟ್ಟಳು.

8 ಆಗ ಅರಸನು - ಮನೆಗೆ ಹೋಗು, ನಿನ್ನ ವಿಷಯದಲ್ಲಿ ಆಜ್ಞಾಪಿಸುತ್ತೇನೆ ಎಂದು ಹೇಳಿದ್ದಕ್ಕೆ

9 ಆ ತೆಕೋವದ ಸ್ತ್ರೀಯು - ಅರಸನೇ, ಒಡೆಯನೇ, ಅಪರಾಧವು ನನ್ನ ಮೇಲೆಯೂ ನನ್ನ ಕುಟುಂಬದ ಮೇಲೆಯೂ ಇರಲಿ; ಅರಸನಿಗೂ ಅವನ ಸಿಂಹಾಸನಕ್ಕೂ ದೋಷಹತ್ತದಿರಲಿ ಅಂದಳು.

10 ಅರಸನು ಆಕೆಗೆ - ಹಾಗೆ ಅಂದವರನ್ನು ನನ್ನ ಬಳಿಗೆ ಕರಕೊಂಡು ಬಾ; ಅವರು ನಿನ್ನನ್ನು ಮುಟ್ಟದಂತೆ ಮಾಡುತ್ತೇನೆ ಅಂದನು.

11 ಆಗ ಆ ಸ್ತ್ರೀಯು - ಸಮೀಪಬಂಧುವು ನನ್ನ ಎರಡನೆಯ ಮಗನನ್ನು ಕೊಂದು ನನ್ನನ್ನು ಪೂರ್ಣವಾಗಿ ಹಾಳುಮಾಡದಂತೆ ಅರಸನು ತಾನಾಗಿ ನೋಡಿಕೊಳ್ಳುವನೆಂಬದಾಗಿ ನನ್ನ ದೇವರಾದ ಯೆಹೋವನ ಮೇಲೆ ಆಣೆಯಿಟ್ಟು ಪ್ರಮಾಣಮಾಡಬೇಕು ಎಂದು ಬೇಡಿಕೊಂಡಳು. ಅದಕ್ಕೆ ಅರಸನು - ಯೆಹೋವನಾಣೆ, ನಿನ್ನ ಮಗನ ಕೂದಲುಗಳಲ್ಲಿ ಒಂದನ್ನೂ ನೆಲಕ್ಕೆ ಬೀಳಗೊಡುವದಿಲ್ಲ ಎಂದು ಹೇಳಿದನು.

12 ಆಗ ಸ್ತ್ರೀಯು - ನನ್ನ ಒಡೆಯನಿಗೆ ಇನ್ನೊಂದು ಮಾತನ್ನು ಹೇಳಿಕೊಳ್ಳುವದಕ್ಕೆ ಅಪ್ಪಣೆಯಾಗಲಿ ಅನ್ನಲು ಅರಸನು - ಹೇಳು ಅಂದನು.

13 ಆಕೆಯು - ಅರಸನು ಈ ತೀರ್ಪುಕೊಟ್ಟದ್ದರಿಂದ ತನ್ನನ್ನೇ ಅಪರಾಧಿಯೆಂದು ನಿರ್ಣಯಿಸಿದ ಹಾಗಾಯಿತು. ಅವನು ತಳ್ಳಲ್ಪಟ್ಟವನನ್ನು ಸೇರಿಸಿಕೊಳ್ಳಲೊಲ್ಲದೆ ಹೋಗುವದರಿಂದ ದೇವಪ್ರಜೆಗೆ ವಿರೋಧವಾಗಿ ಅದೇ ಆಲೋಚನೆ ಮಾಡಿದ ಹಾಗಾಯಿತು. ಅರಸನು ಹೀಗೇಕೆ ಮಾಡಬೇಕು?

14 ನಾವು ಸಾಯುವವರು; ನೆಲದ ಮೇಲೆ ಚೆಲ್ಲಲ್ಪಟ್ಟು ತಿರಿಗಿ ಕೂಡಿಸಲ್ಪಡಲಾರದ ನೀರಿನಂತಿದ್ದೇವೆ. ಮನುಷ್ಯರ ಪ್ರಾಣವನ್ನು ತೆಗೆಯುವದಕ್ಕೆ ದೇವರಿಗೆ ಇಷ್ಟವಿಲ್ಲ; ತಳ್ಳಲ್ಪಟ್ಟವನು ತಿರಿಗಿ ತನ್ನ ಬಳಿಗೆ ಬರುವ ಹಾಗೆ ಆತನು ಸದುಪಾಯಗಳನ್ನು ಕಲ್ಪಿಸುವವನಾಗಿರುತ್ತಾನೆ.

15 ಅದಿರಲಿ, ಜನರು ನಿನ್ನ ಸೇವಕಿಯಾದ ನನ್ನನ್ನು ಹೆದರಿಸಿದ್ದರಿಂದ ನಾನು ಈ ಸಂಗತಿಯನ್ನು ಅರಸನಿಗೆ ತಿಳಿಸಿದರೆ ಅವನು ತನ್ನ ಸೇವಕಿಯ ಬಿನ್ನಹವನ್ನು ಲಾಲಿಸಾನು ಎಂದುಕೊಂಡು ನನ್ನ ಒಡೆಯನಾದ ಅರಸನಿಗೆ ಇದನ್ನು ತಿಳಿಸುವದಕ್ಕೆ ಬಂದೆನು.

16 ಅರಸನು ತನ್ನ ಸೇವಕಿಯಾದ ನನ್ನ ಬಿನ್ನಹವನ್ನು ಲಾಲಿಸಿ ನನ್ನನ್ನೂ ನನ್ನ ಮಗನನ್ನೂ ದೇವರ ಸ್ವಾಸ್ತ್ಯದಿಂದ ತೆಗೆದುಹಾಕಬೇಕೆಂದಿರುವವರ ಕೈಗೆ ಸಿಕ್ಕದಂತೆ ತಪ್ಪಿಸಿ ರಕ್ಷಿಸುವನೆಂದು ನಂಬಿಕೊಂಡಿದ್ದೇನೆ.

17 ನನ್ನ ಒಡೆಯನಾದ ಅರಸನ ಮಾತು ಸಮಾಧಾನಕ್ಕೆ ಕಾರಣವಾಗುವದೆಂದು ನೆನಸಿ ನಿನ್ನ ದಾಸಿಯಾದ ನಾನು ಬಂದೆನು. ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವದರಲ್ಲಿ ನನ್ನ ಒಡೆಯನಾದ ಅರಸನು ದೇವದೂತನಂತಿರುತ್ತಾನೆ; ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರಲಿ ಅಂದಳು.

18 ಆಗ ಅರಸನು ಆ ಸ್ತ್ರೀಗೆ - ನಾನು ನಿನ್ನನ್ನು ಒಂದು ಮಾತು ಕೇಳಬೇಕೆಂದಿರುತ್ತೇನೆ; ನೀನು ಅದನ್ನು ಮರೆಮಾಡದೆ ತಿಳಿಸಬೇಕು ಎಂದು ಹೇಳಲು ಆಕೆಯು - ಅರಸನ ಅಪ್ಪಣೆಯಾಗಲಿ ಎಂದು ಉತ್ತರಕೊಟ್ಟಳು.

19 ಅರಸನು - ಈ ಕಾರ್ಯದಲ್ಲಿ ಯೋವಾಬನ ಕೈಯಿರುತ್ತದಲ್ಲವೋ ಎಂದು ಕೇಳಿದನು. ಅದಕ್ಕೆ ಸ್ತ್ರೀಯು - ಅರಸನ ಜೀವದಾಣೆ, ಅರಸನು ಒಂದು ಮಾತು ಹೇಳಿದರೆ ನಾವು ತಪ್ಪಿಸಿಕೊಂಡು ಎಡಕ್ಕಾಗಲಿ ಬಲಕ್ಕಾಗಲಿ ಜಾರಿಕೊಳ್ಳುವದಕ್ಕೆ ಆಗುವದಿಲ್ಲ; ನಿನ್ನ ದಾಸಿಯಾದ ನನ್ನನ್ನು ಪ್ರೇರಿಸಿ ಈ ಎಲ್ಲಾ ಮಾತುಗಳನ್ನು ನನಗೆ ಕಲಿಸಿಕೊಟ್ಟವನು ನಿನ್ನ ಸೇವಕನಾದ ಯೋವಾಬನೇ ಹೌದು.

20 ಅಬ್ಷಾಲೋಮನ ವಿಷಯವನ್ನು ರೂಪಾಂತರಪಡಿಸುವದಕ್ಕೋಸ್ಕರ ನಿನ್ನ ಸೇವಕನಾದ ಯೋವಾಬನೇ ಇದನ್ನು ಮಾಡಿದನು. ನನ್ನ ಒಡೆಯನು ದೇವದೂತನಂಥ ಜ್ಞಾನಿಯು; ಅವನು ಭೂಲೋಕದಲ್ಲಿ ನಡೆಯುವದನ್ನೆಲ್ಲಾ ತಿಳುಕೊಳ್ಳುವನು ಎಂದು ಉತ್ತರಕೊಟ್ಟಳು.

21 ಅನಂತರ ಅರಸನು ಯೋವಾಬನಿಗೆ - ನೀನು ಕೇಳಿಕೊಂಡದ್ದನ್ನು ಅನುಗ್ರಹಿಸಿದ್ದೇನೆ; ಹೋಗಿ ಯೌವನಸ್ಥನಾದ ಅಬ್ಷಾಲೋಮನನ್ನು ಕರಕೊಂಡು ಬಾ ಅಂದನು.

22 ಆಗ ಯೋವಾಬನು ನೆಲಕ್ಕೆ ಬಿದ್ದು ನಮಸ್ಕರಿಸಿ ಅರಸನನ್ನು ಹರಸಿ - ಅರಸನೇ, ನನ್ನ ಒಡೆಯನೇ, ನೀನು ನಿನ್ನ ಸೇವಕನಾದ ನನ್ನ ಬಿನ್ನಹವನ್ನು ಲಾಲಿಸಿದ್ದರಿಂದ ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರಕಿತೆಂದು ಈಗ ಗೊತ್ತಾಯಿತು ಎಂದು ಹೇಳಿ

23 ಎದ್ದು ಗೆಷೂರಿಗೆ ಹೋಗಿ ಅಬ್ಷಾಲೋಮನನ್ನು ಯೆರೂಸಲೇವಿುಗೆ ಕರಕೊಂಡು ಬಂದನು.

24 ಆದರೆ ಅರಸನು - ಅಬ್ಷಾಲೋಮನು ತನ್ನ ಮನೆಗೆ ಹೋಗಲಿ; ಅವನು ನನ್ನ ಮುಖವನ್ನು ನೋಡಬಾರದು ಎಂದು ಆಜ್ಞಾಪಿಸಿದ್ದರಿಂದ ಅವನು ತನ್ನ ಮನೆಗೆ ಹೋದನು; ಅರಸನ ಮುಖವನ್ನು ನೋಡಲಿಲ್ಲ.

25 ಸೌಂದರ್ಯದಲ್ಲಿ ಅಬ್ಷಾಲೋಮನಂತೆ ಹೆಸರುಗೊಂಡ ಪುರುಷನು ಇಸ್ರಾಯೇಲ್ಯರಲ್ಲಿ ಒಬ್ಬನೂ ಇರಲಿಲ್ಲ. ಅವನಲ್ಲಿ ಅಂಗಾಲಿನಿಂದ ನಡುನೆತ್ತಿಯವರೆಗೆ ಒಂದು ದೋಷವಾದರೂ ಇರಲಿಲ್ಲ.

26 ಅವನು ತಲೆಗೂದಲು ಬಹುಭಾರವಾಗುವದರಿಂದ ಪ್ರತಿ ವರುಷದ ಅಂತ್ಯದಲ್ಲಿ ಬೋಳಿಸಿಕೊಳ್ಳುವನು. ಆಗ ಅವನ ಕೂದಲು ಸರಕಾರೀ ತೂಕದ ಪ್ರಕಾರ ಇನ್ನೂರು ರೂಪಾಯಿ ತೂಕವಾಗುತ್ತಿತ್ತು.

27 ಅವನಿಗೆ ಮೂರು ಮಂದಿ ಗಂಡುಮಕ್ಕಳೂ ಒಬ್ಬ ಮಗಳೂ ಇದ್ದರು. ಮಗಳ ಹೆಸರು ತಾಮಾರ್; ಈಕೆಯು ಬಹು ಸುಂದರಿಯಾಗಿದ್ದಳು.

28 ಅಬ್ಷಾಲೋಮನು ಅರಸನ ಮೋರೆಯನ್ನು ನೋಡದೆ ಎರಡು ವರುಷ ಯೆರೂಸಲೇವಿುನಲ್ಲಿ ವಾಸವಾಗಿದ್ದ ನಂತರ

29 ಒಂದು ದಿವಸ ಅವನು ಅರಸನ ಬಳಿಗೆ ಕಳುಹಿಸುವದಕ್ಕಾಗಿ ಯೋವಾಬನನ್ನು ಕರೇಕಳುಹಿಸಿದನು; ಆದರೆ ಯೋವಾಬನು ಬರಲಿಲ್ಲ. ಎರಡನೆಯ ಸಾರಿ ಕರೇಕಳುಹಿಸಿದರೂ ಅವನು ಬರಲಿಲ್ಲ.

30 ಆದದರಿಂದ ಅಬ್ಷಾಲೋಮನು ತನ್ನ ಸೇವಕರಿಗೆ - ನೋಡಿರಿ, ಸಮೀಪದಲ್ಲಿಯೇ ಯೋವಾಬನ ಜವೆಗೋದಿಹೊಲವುಂಟಲ್ಲಾ; ಹೋಗಿ ಅದಕ್ಕೆ ಬೆಂಕಿ ಹಚ್ಚಿರಿ ಎಂದು ಆಜ್ಞಾಪಿಸಿದನು; ಅವರು ಹಾಗೆಯೇ ಮಾಡಿದರು.

31 ಆಗ ಯೋವಾಬನು ಅಬ್ಷಾಲೋಮನ ಮನೆಗೆ ಹೋಗಿ - ನಿನ್ನ ಸೇವಕರು ನನ್ನ ಹೊಲಕ್ಕೆ ಬೆಂಕಿಹಚ್ಚಿದ್ದೇಕೆ ಎಂದು ಅವನನ್ನು ಕೇಳಲು

32 ಅಬ್ಷಾಲೋಮನು ಅವನಿಗೆ - ನಾನು ಗೆಷೂರಿನಿಂದ ಇಲ್ಲಿಗೆ ಬಂದದ್ದೇಕೆ? ಅಲ್ಲೇ ಇದ್ದರೆ ಒಳ್ಳೇದಾಗುತ್ತಿತ್ತಲ್ಲವೋ ಎಂದು ನಿನ್ನ ಮುಖಾಂತರ ಅರಸನಿಗೆ ತಿಳಿಸುವದಕ್ಕಾಗಿ ನಿನ್ನನ್ನು ಕರೇಕಳುಹಿಸಿದೆನು; ನಾನು ಹೇಗೂ ಅರಸನ ಮೋರೆಯನ್ನು ನೋಡಬೇಕು;

33 ನಾನು ಅಪರಾಧಿಯಾಗಿದ್ದರೆ ಅವನು ನನ್ನನ್ನು ಕೊಲ್ಲಿಸಲಿ ಅಂದನು. ಯೋವಾಬನು ಹೋಗಿ ಇದನ್ನು ಅರಸನಿಗೆ ತಿಳಿಸಿದಾಗ ಅರಸನು ಅಬ್ಷಾಲೋಮನನ್ನು ಕರಿಸಿದನು. ಅವನು ಅರಸನ ಬಳಿಗೆ ಬಂದು ಸಾಷ್ಟಾಂಗನಮಸ್ಕಾರಮಾಡಿದನು. ಅರಸನು ಅವನನ್ನು ಮುದ್ದಿಟ್ಟನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು