Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಸಮುಯೇಲ 13 - ಕನ್ನಡ ಸತ್ಯವೇದವು J.V. (BSI)


ಅರಮನೆಯಲ್ಲಿಯೂ ರಾಜ್ಯದಲ್ಲಿಯೂ ಉಂಟಾದ ಕಲಹಗಳು ( 13—20 ) ಅಮ್ನೋನನು ತಾಮಾರಳನ್ನು ಕೆಡಿಸಿದ್ದೂ ಅಬ್ಷಾಲೋಮನು ಅವನನ್ನು ಕೊಂದದ್ದೂ

1 ದಾವೀದನ ಮಗನಾದ ಅಬ್ಷಾಲೋಮನಿಗೆ ತಾಮಾರಳೆಂಬ ಬಹು ಸುಂದರಿಯಾದ ಒಬ್ಬ ತಂಗಿಯಿದ್ದಳು. ದಾವೀದನ ಮಗನಾದ ಅಮ್ನೋನನು ಆಕೆಯನ್ನು ಮೋಹಿಸಿದನು.

2 ಅವನು ಆಕೆಯ ಮೇಲಣ ಮೋಹದಿಂದ ಪೀಡಿತನಾಗಿ ಅಸ್ವಸ್ಥನಾದನು. ಆಕೆಯು ಕನ್ಯೆಯಾಗಿದ್ದದರಿಂದ ಆಕೆಗೆ ಏನು ಮಾಡುವದೂ ಅಸಾಧ್ಯವೆಂದು ಅಮ್ನೋನನಿಗೆ ಕಂಡಿತು.

3 ಅವನಿಗೆ ಯೋನಾದಾಬನೆಂಬ ಒಬ್ಬ ಗೆಳೆಯನಿದ್ದನು. ಇವನು ದಾವೀದನ ಅಣ್ಣನಾದ ಶಿಮ್ಮನ ಮಗನು.

4 ಬಹು ಯುಕ್ತಿವಂತನಾದ ಇವನು ಒಂದು ದಿವಸ ಅಮ್ನೋನನನ್ನು - ರಾಜಪುತ್ರನೇ, ನೀನು ದಿನೇ ದಿನೇ ಕ್ಷೀಣನಾಗುತ್ತಾ ಬರುವದೇಕೆ? ನನಗೆ ತಿಳಿಸುವದಿಲ್ಲವೋ ಎಂದು ಕೇಳಲು ಅವನು - ನನ್ನ ತಮ್ಮನಾದ ಅಬ್ಷಾಲೋಮನ ತಂಗಿ ತಾಮಾರಳ ಮೇಲೆ ನನಗೆ ಮೋಹವುಂಟಾಗಿದೆ ಎಂದು ಉತ್ತರಕೊಟ್ಟನು.

5 ಆಗ ಯೋನಾದಾಬನು ಅವನಿಗೆ - ನೀನು ಅಸ್ವಸ್ಥನಾದವನಂತೆ ಹಾಸಿಗೆಯ ಮೇಲೆ ಮಲಗಿಕೋ, ನಿನ್ನ ತಂದೆಯು ನಿನ್ನನ್ನು ನೋಡುವದಕ್ಕೆ ಬಂದಾಗ ಅವನಿಗೆ - ದಯವಿಟ್ಟು ನನ್ನ ತಂಗಿಯಾದ ತಾಮಾರಳನ್ನು ನನಗಾಗಿ ಆಹಾರ ಸಿದ್ಧಮಾಡುವದಕ್ಕೆ ಕಳುಹಿಸು. ಆಕೆ ನನ್ನೆದುರಿನಲ್ಲಿಯೇ ಸಿದ್ಧಮಾಡಿ ಕೊಡುವದಾದರೆ ಊಟಮಾಡೇನು ಎಂದು ಹೇಳು ಅಂದನು.

6 ಅಮ್ನೋನನು ಅಸ್ವಸ್ಥವಾದವನೋ ಎಂಬಂತೆ ಮಲಗಿಕೊಂಡನು. ಅರಸನು ಅವನನ್ನು ನೋಡುವದಕ್ಕೆ ಬಂದಾಗ ಅವನು ಅರಸನಿಗೆ - ದಯವಿಟ್ಟು ನನ್ನ ತಂಗಿಯಾದ ತಾಮಾರಳನ್ನು ನನ್ನ ಬಳಿಗೆ ಕಳುಹಿಸು; ಆಕೆ ನನ್ನ ಕಣ್ಣುಮುಂದೆಯೇ ಎರಡು ಭಕ್ಷ್ಯಗಳನ್ನು ಮಾಡಿಕೊಡುವದಾದರೆ ಊಟಮಾಡೇನು ಎಂದು ಬೇಡಿಕೊಳ್ಳಲು

7 ದಾವೀದನು ಅರಮನೆಗೆ ಆಳುಗಳನ್ನು ಕಳುಹಿಸಿ ಆಕೆಗೆ - ನೀನು ನಿನ್ನ ಅಣ್ಣನಾದ ಅಮ್ನೋನನ ಮನೆಗೆ ಹೋಗಿ ಅವನಿಗೋಸ್ಕರ ಆಹಾರವನ್ನು ಸಿದ್ಧಮಾಡು ಎಂದು ಹೇಳಿಸಿದನು.

8 ಕೂಡಲೆ ಆಕೆಯು ತನ್ನ ಅಣ್ಣನಾದ ಅಮ್ನೋನನ ಮನೆಗೆ ಹೋದಳು; ಅವನು ಮಲಗಿದ್ದನು. ಆಕೆಯು ಹೋಗಿ ಹಿಟ್ಟು ತೆಗೆದುಕೊಂಡು ನಾದಿ ಅವನ ಕಣ್ಣು ಮುಂದೆಯೇ ಭಕ್ಷ್ಯಗಳನ್ನು ಮಾಡಿ ಸುಟ್ಟಳು.

9 ಅನಂತರ ಆಕೆ ಅವುಗಳನ್ನು ಬಾಂಡ್ಲದಿಂದ ತೆಗೆದು ಅವನ ಮುಂದಿಟ್ಟಳು. ಅವನು ಊಟ ಮಾಡದೆ ಎಲ್ಲಾ ಜನರನ್ನು ತನ್ನ ಬಳಿಯಿಂದ ಹೊರಡಿಸಬೇಕೆಂದು ಅಪ್ಪಣೆ ಮಾಡಿದನು.

10 ಎಲ್ಲರೂ ಹೋದ ಮೇಲೆ ಅವನು ತಾಮಾರಳಿಗೆ - ಆಹಾರವನ್ನು ಈ ಕೋಣೆಗೆ ತೆಗೆದುಕೊಂಡು ಬಾ; ನೀನಾಗಿ ತಂದುಕೊಟ್ಟರೆ ಊಟಮಾಡುತ್ತೇನೆ ಎಂದು ಹೇಳಿದನು. ಆಗ ತಾಮಾರಳು ತಾನು ಮಾಡಿದ ಭಕ್ಷ್ಯಗಳನ್ನು ಅಣ್ಣನಾದ ಅಮ್ನೋನನಿದ್ದ ಕೋಣೆಗೆ ತೆಗೆದುಕೊಂಡುಹೋಗಿ ಅವನ ಮುಂದಿಟ್ಟಳು.

11 ಕೂಡಲೇ ಅವನು ಆಕೆಯನ್ನು ಹಿಡಿದು - ನನ್ನ ತಂಗಿಯೇ, ಬಂದು ನನ್ನ ಸಂಗಡ ಮಲಗಿಕೋ ಅಂದನು.

12 ಆಕೆಯು - ಅಣ್ಣನೇ, ಬೇಡ; ನನ್ನನ್ನು ಕೆಡಿಸಬೇಡ; ಇಸ್ರಾಯೇಲ್ಯರಲ್ಲಿ ಇಂಥದು ನಡೆಯಬಾರದು.

13 ಇಂಥ ಹುಚ್ಚುತನವನ್ನು ಮಾಡಬೇಡ. ಈ ಅಪಮಾನವನ್ನು ಮರೆಮಾಡುವದು ಹೇಗೆ? ನಿನಗಂತೂ ಇಸ್ರಾಯೇಲ್ಯರಲ್ಲಿ ನೀಚನೆಂಬ ಹೆಸರು ತಪ್ಪದು. ಆದದರಿಂದ ದಯವಿಟ್ಟು ಅರಸನ ಸಂಗಡ ಮಾತಾಡು. ಅವನು ನನ್ನನ್ನು ನಿನಗೆ ಕೊಡದಿರಲಾರನು ಎಂದಳು.

14 ಆದರೆ ಅವನು ಆಕೆಯ ಮಾತನ್ನು ಕೇಳದೆ ಬಲಾತ್ಕಾರದಿಂದ ಆಕೆಯನ್ನು ಕೆಡಿಸಿದನು.

15 ಇದಾದ ಮೇಲೆ ಅವನಿಗೆ ಆಕೆಯಲ್ಲಿ ತುಂಬಾ ದ್ವೇಷಹುಟ್ಟಿತು. ಅವನ ಮುಂಚಿನ ಪ್ರೀತಿಗಿಂತ ದ್ವೇಷವೇ ಹೆಚ್ಚಾಯಿತು.

16 ಅಮ್ನೋನನು ಆಕೆಗೆ - ಎದ್ದು ಹೋಗು ಎಂದು ಹೇಳಿದಾಗ ಆಕೆಯು - ಹಾಗೆ ಮಾಡಬೇಡ; ನನ್ನನ್ನು ಹೊರಡಿಸಿಬಿಡುವದು ನೀನು ಮಾಡಿದ ಮೊದಲನೆಯ ಅನ್ಯಾಯಕ್ಕಿಂತ ಹೆಚ್ಚಿನ ಅನ್ಯಾಯವಾಗಿದೆ ಅಂದಳು.

17 ಆದರೆ ಅವನು ಆಕೆಯ ಮಾತನ್ನು ಕೇಳದೆ ಯಾವಾಗಲೂ ತನ್ನ ಹತ್ತಿರವೇ ಇರುವಂಥ ಆಳನ್ನು ಕರೆದು ಅವನಿಗೆ - ಇವಳನ್ನು ಹೊರಗೆ ತಳ್ಳಿ ಕದಮುಚ್ಚು ಎಂದು ಆಜ್ಞಾಪಿಸಿದನು.

18 (ಆಕೆಯು ನಾನಾ ವರ್ಣಗಳುಳ್ಳ ಒಂದು ನಿಲುವಂಗಿಯನ್ನು ಧರಿಸಿಕೊಂಡಿದ್ದಳು. ಕನ್ಯೆಯರಾದ ರಾಜಪುತ್ರಿಯರು ಇದೇ ತರದ ವಸ್ತ್ರಗಳನ್ನು ಹಾಕಿಕೊಳ್ಳುತ್ತಿದ್ದರು.) ಸೇವಕನು ಆಕೆಯನ್ನು ಹೊರಗೆ ಕಳುಹಿಸಿ ಕದಮುಚ್ಚಿದನು.

19 ತಾಮಾರಳು ತಲೆಯ ಮೇಲೆ ಬೂದಿ ಹಾಕಿಕೊಂಡು ನಿಲುವಂಗಿಯನ್ನು ಹರಿದುಕೊಂಡು ಕೈಗಳನ್ನು ತಲೆಯ ಮೇಲಿಟ್ಟು ಗೋಳಾಡುತ್ತಾ ಹೋದಳು.

20 ಆಕೆಯ ಸಹೋದರನಾದ ಅಬ್ಷಾಲೋಮನು ಆಕೆಯನ್ನು ಕಂಡು - ನಿನ್ನ ಅಣ್ಣನಾದ ಅಮ್ನೋನನು ನಿನ್ನನ್ನು ಕೂಡಿದನೇನು? ನನ್ನ ತಂಗಿಯೇ, ಈಗ ಸುಮ್ಮನಿರು; ಅವನು ನಿನ್ನ ಅಣ್ಣನಲ್ಲವೋ? ಈ ಸಂಗತಿಯನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ ಎಂದು ಹೇಳಿದನು. ತಾಮಾರಳು ಒಂಟಿಗಳಾಗಿ ತನ್ನ ಅಣ್ಣನಾದ ಅಬ್ಷಾಲೋಮನ ಮನೆಯಲ್ಲೇ ವಾಸಿಸಿದಳು.

21 ಅರಸನಾದ ದಾವೀದನು ಈ ಸಂಗತಿಯನ್ನು ಕೇಳಿ ಬಹಳವಾಗಿ ಕೋಪಗೊಂಡನು.

22 ಅಬ್ಷಾಲೋಮನು ಅಮ್ನೋನನ ಸಂಗಡ ಒಳ್ಳೇ ಮಾತನ್ನಾಗಲಿ ಕೆಟ್ಟ ಮಾತನ್ನಾಗಲಿ ಆಡಲಿಲ್ಲ. ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅವನು ಅಮ್ನೋನನನ್ನು ದ್ವೇಷಿಸಿದನು.

23 ಎರಡು ವರುಷಗಳಾದನಂತರ ಅಬ್ಷಾಲೋಮನು ಒಂದು ದಿನ ಎಫ್ರಾಯೀವಿುನ ಬಳಿಯಲ್ಲಿರುವ ಬಾಳ್ ಹಾಚೋರಿನಲ್ಲಿ ಕುರಿಗಳ ಉಣ್ಣೆಯನ್ನು ಕತ್ತರಿಸುವಾಗ ಎಲ್ಲಾ ರಾಜಪುತ್ರರನ್ನು ಔತಣಕ್ಕೆ ಕರೆದನು.

24 ಅವನು ಅರಸನ ಬಳಿಗೂ ಹೋಗಿ ಅವನನ್ನು - ಸ್ವಾಮೀ, ನಿನ್ನ ಸೇವಕನು ಕುರಿಗಳ ಉಣ್ಣೆ ಕತ್ತರಿಸುವವರನ್ನು ಕರಿಸಿದ್ದಾನೆ. ಅರಸನು ತನ್ನ ಸೇವಕರೊಡನೆ ಅವನ ಬಳಿಗೆ ಚಿತ್ತಯಿಸೋಣವಾಗಲಿ ಎಂದು ಬೇಡಿಕೊಂಡನು.

25 ಅರಸನು ಅವನಿಗೆ - ಮಗನೇ, ಬೇಡ; ನಾವೆಲ್ಲರೂ ಬಂದರೆ ನಿನಗೆ ಭಾರವಾದೀತು ಅನ್ನಲು ಅಬ್ಷಾಲೋಮನು ಅವನನ್ನು ಬಹಳವಾಗಿ ಒತ್ತಾಯಪಡಿಸಿದನು. ಆದರೂ ಅರಸನು ಒಪ್ಪಲಿಲ್ಲ, ಅವನನ್ನು ಆಶೀರ್ವದಿಸಿದನು, ಅಷ್ಟೆ.

26 ಆಗ ಅಬ್ಷಾಲೋಮನು - ನೀನು ಬಾರದಿದ್ದರೆ ನನ್ನ ಅಣ್ಣನಾದ ಅಮ್ನೋನನನ್ನು ನಮ್ಮೊಡನೆ ಕಳುಹಿಸು ಅಂದನು. ಅದಕ್ಕೆ ಅರಸನು - ಅವನೇಕೆ ನಿನ್ನ ಸಂಗಡ ಬರಬೇಕು ಎಂದು ಕೇಳಿದನು.

27 ಆದರೆ ಅಬ್ಷಾಲೋಮನು ಬಹಳವಾಗಿ ಒತ್ತಾಯಪಡಿಸಿದ್ದರಿಂದ ಅರಸನು ಅಮ್ನೋನನನ್ನೂ ತನ್ನ ಬೇರೆ ಎಲ್ಲಾ ಮಕ್ಕಳನ್ನೂ ಕಳುಹಿಸಿದನು.

28 ಇದಕ್ಕೆ ಮೊದಲೇ ಅಬ್ಷಾಲೋಮನು ತನ್ನ ಆಳುಗಳಿಗೆ - ಕೇಳಿರಿ, ಅಮ್ನೋನನು ದ್ರಾಕ್ಷಾರಸ ಕುಡಿದು ಮತ್ತನಾಗಿರುವಾಗ ನಾನು ಹೊಡೆಯಬೇಕೆಂದು ಹೇಳಿದ ಕೂಡಲೆ ಅವನನ್ನು ಹೊಡೆದು ಕೊಂದುಹಾಕಿರಿ; ಹೆದರಬೇಡಿರಿ, ನಿಮಗೆ ಆಜ್ಞಾಪಿಸಿದವನು ನಾನಲ್ಲವೋ? ಧೈರ್ಯದಿಂದಿರಿ, ಶೂರರಾಗಿರಿ ಎಂದು ಹೇಳಿದ್ದನು.

29 ಅಬ್ಷಾಲೋಮನ ಆಳುಗಳು ಅವನ ಆಜ್ಞೆಯಂತೆ ಅಮ್ನೋನನನ್ನು ಕೊಂದರು. ರಾಜಪುತ್ರರೆಲ್ಲರೂ ತಮ್ಮತಮ್ಮ ಹೇಸರಕತ್ತೆಗಳನ್ನು ಹತ್ತಿ ಓಡಿಹೋದರು.

30 ಅವರು ಇನ್ನೂ ಮಾರ್ಗದಲ್ಲಿರುವಾಗಲೇ ದಾವೀದನಿಗೆ - ಅಬ್ಷಾಲೋಮನು ರಾಜಪುತ್ರರೆಲ್ಲರನ್ನೂ ಕೊಂದುಹಾಕಿದನು, ಒಬ್ಬನನ್ನೂ ಉಳಿಸಲಿಲ್ಲ ಎಂಬ ಸುದ್ದಿ ಮುಟ್ಟಿತು.

31 ಆಗ ಅರಸನು ಎದ್ದು ತನ್ನ ಬಟ್ಟೆಗಳನ್ನು ಹರಿದುಕೊಂಡು ನೆಲಕ್ಕೆ ಬಿದ್ದನು. ಅವನ ಸೇವಕರೆಲ್ಲರೂ ತಮ್ಮತಮ್ಮ ಬಟ್ಟೆಗಳನ್ನು ಹರಕೊಂಡು ಅವನ ಹತ್ತಿರ ನಿಂತರು.

32 ಆಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾದಾಬನು ದಾವೀದನಿಗೆ - ರಾಜಪುತ್ರರೆಲ್ಲರನ್ನೂ ಕೊಂದು ಹಾಕಿದ್ದಾರೆಂದು ನನ್ನ ಒಡೆಯನು ನೆನಸದಿರಲಿ. ಅಮ್ನೋನನೊಬ್ಬನೇ ಸತ್ತಿರಬೇಕು. ಅವನು ಅಬ್ಷಾಲೋಮನ ತಂಗಿಯಾದ ತಾಮಾರಳನ್ನು ಕೆಡಿಸಿದಾಗಿನಿಂದಲೇ ಹೀಗಾಗುವದೆಂದು ಅಬ್ಷಾಲೋಮನ ಮುಖದಿಂದ ತೋರುತ್ತಿತ್ತು.

33 ಆದದರಿಂದ ರಾಜಪುತ್ರರೆಲ್ಲರೂ ಸತ್ತರೆಂಬ ಸುದ್ದಿಗೆ ಅರಸನು ಲಕ್ಷ್ಯಕೊಡದಿರಲಿ; ಅಮ್ನೋನನೊಬ್ಬನೇ ಸತ್ತಿದ್ದಾನಷ್ಟೆ ಎಂದು ಹೇಳಿ ಸಂತೈಸಿದನು.

34 (ಅಬ್ಷಾಲೋಮನು ತಪ್ಪಿಸಿಕೊಂಡನು.) ಅಷ್ಟರಲ್ಲಿ ದಾರಿ ನೋಡುತ್ತಿದ್ದ ಕಾವಲುಗಾರನು ಒಂದು ದೊಡ್ಡ ಗುಂಪು ಹೋರೋನಿನ ಮಾರ್ಗವಾಗಿ ಗುಡ್ಡ ಇಳಿದು ಬರುವದನ್ನು ಕಂಡನು.

35 ಯೋನಾದಾಬನು ಅರಸನಿಗೆ - ಇಗೋ, ರಾಜಕುಮಾರರು ಬರುತ್ತಿದ್ದಾರೆ; ನಿನ್ನ ಸೇವಕನ ಮಾತಿನಂತೆಯೇ ಆಯಿತಲ್ಲವೋ ಎಂದು ಹೇಳಿ ಮುಗಿಸುವಷ್ಟರಲ್ಲೇ

36 ರಾಜಕುಮಾರರು ಬಂದು ಗಟ್ಟಿಯಾಗಿ ಅಳತೊಡಗಿದರು. ಅರಸನೂ ಅವನ ಸೇವಕರೂ ಬಹಳವಾಗಿ ಗೋಳಾಡಿದರು.

37 ದಾವೀದನು ತನ್ನ ಮಗನಿಗೋಸ್ಕರ ನಿತ್ಯವೂ ದುಃಖಪಡುತ್ತಿದ್ದನು. ಅಬ್ಷಾಲೋಮನು ತಪ್ಪಿಸಿಕೊಂಡು ಗೆಷೂರಿಗೆ ಓಡಿಹೋಗಿ ಅಲ್ಲಿನ ಅರಸನೂ ಅಮ್ಮೀಹೂದನ ಮಗನೂ ಆದ

38 ತಲ್ಮೈಯ ಬಳಿಯಲ್ಲಿ ಮೂರು ವರುಷ ಇದ್ದನು.

39 ಅರಸನಾದ ದಾವೀದನು ಅಮ್ನೋನನ ಮರಣದ ವಿಷಯ ಆದರಣೆಹೊಂದಿ ತನ್ನ ಮಗನಾದ ಅಬ್ಷಾಲೋಮನನ್ನು ತಿರಿಗಿ ನೋಡುವದಕ್ಕೆ ಬಹಳ ಆತುರಪಟ್ಟನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು