Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಸಮುಯೇಲ 11 - ಕನ್ನಡ ಸತ್ಯವೇದವು J.V. (BSI)


ದಾವೀದನ ನೀಚಕೃತ್ಯಗಳು

1 ಮರುವರುಷ ಅರಸರು ಯುದ್ಧಕ್ಕೆ ಹೊರಡುವ ಸಮಯದಲ್ಲಿ ದಾವೀದನು ಯೋವಾಬನನ್ನೂ ತನ್ನ ಸೇವಕರನ್ನೂ ಎಲ್ಲಾ ಇಸ್ರಾಯೇಲ್ಯರನ್ನೂ ಯುದ್ಧಕ್ಕೆ ಕಳುಹಿಸಿದನು. ಇವರು ಹೋಗಿ ಅಮ್ಮೋನಿಯರ ಪ್ರಾಂತಗಳನ್ನು ಹಾಳುಮಾಡಿ ರಬ್ಬಕ್ಕೆ ಮುತ್ತಿಗೆಹಾಕಿದರು. ದಾವೀದನು ಯೆರೂಸಲೇವಿುನಲ್ಲಿಯೇ ಇದ್ದನು.

2 ಅವನು ಒಂದು ದಿವಸ ಸಂಜೇ ಹೊತ್ತಿನಲ್ಲಿ ಮಂಚದಿಂದೆದ್ದು ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿರುವಾಗ ಅಲ್ಲಿಂದ ಬಹುಸುಂದರಿಯಾದ ಒಬ್ಬ ಸ್ತ್ರೀ ಸ್ನಾನಮಾಡುವದನ್ನು ಕಂಡನು.

3 ಕೂಡಲೆ ದಾವೀದನು ಒಬ್ಬನನ್ನು ಕರೆದು ಆ ಸ್ತ್ರೀ ಯಾರೆಂದು ಕೇಳಲು ಅವನು - ಆಕೆಯು ಎಲೀಯಾಮನ ಮಗಳೂ ಹಿತ್ತಿಯನಾದ ಊರೀಯನ ಹೆಂಡತಿಯೂ ಆಗಿರುವ ಬತ್ಷೆಬೆಯಲ್ಲವೋ ಎಂದು ಉತ್ತರ ಕೊಟ್ಟನು.

4 ಆಗ ದಾವೀದನು ಆಗಲೇ ಋತುಸ್ನಾನಮಾಡಿಕೊಂಡಿದ್ದ ಆಕೆಯನ್ನು ದೂತರ ಮುಖಾಂತರವಾಗಿ ಕರೇಕಳುಹಿಸಿದನು; ಆಕೆಯು ಬರಲು ಆಕೆಯನ್ನು ಕೂಡಿದನು.

5 ಅನಂತರ ಆಕೆಯು ತನ್ನ ಮನೆಗೆ ಹೋದಳು. ಆಕೆಯು ತಾನು ಗರ್ಭಧರಿಸಿದ್ದು ಗೊತ್ತಾದಾಗ ದಾವೀದನಿಗೆ ವರ್ತಮಾನ ಕಳುಹಿಸಿದಳು.

6 ಒಡನೆ ದಾವೀದನು ದೂತರ ಮುಖಾಂತರವಾಗಿ ಯೋವಾಬನಿಗೆ - ಹಿತ್ತಿಯನಾದ ಊರೀಯನನ್ನು ನನ್ನ ಬಳಿಗೆ ಕಳುಹಿಸು ಎಂದು ಆಜ್ಞಾಪಿಸಿದನು. ಅವನು ಊರೀಯನನ್ನು ಕಳುಹಿಸಿದನು.

7 ಊರೀಯನು ಬಂದಾಗ ದಾವೀದನು - ಯೋವಾಬನೂ ಸೈನ್ಯದವರೂ ಹೇಗಿರುತ್ತಾರೆ? ಯುದ್ಧವು ಹೇಗೆ ನಡೆದದೆ ಎಂದು ವಿಚಾರಿಸಿದನಂತರ ಅವನಿಗೆ -

8 ಮನೆಗೆ ಹೋಗಿ ಕೈಕಾಲು ತೊಳೆದುಕೋ ಎಂದು ಹೇಳಿದನು. ಊರೀಯನು ಅರಮನೆಯಿಂದ ಹೊರಟ ಕೂಡಲೆ ಅವನ ಹಿಂದೆಯೇ ಅರಸನ ಭೋಜನ ಪದಾರ್ಥಗಳೂ ಹೋದವು.

9 ಆದರೆ ಊರೀಯನು ತನ್ನ ಮನೆಗೆ ಹೋಗದೆ ಅರಸನ ಸೇವಕರೊಡನೆ ಅರಮನೆಯ ಬಾಗಲಲ್ಲೇ ಮಲಗಿಕೊಂಡನು.

10 ಊರೀಯನು ತನ್ನ ಮನೆಗೆ ಹೋಗಲಿಲ್ಲ ಎಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ ಇವನು ಅವನಿಗೆ - ನೀನು ಪ್ರಯಾಣಮಾಡಿಕೊಂಡು ಬಂದಿಯಲ್ಲಾ; ಯಾಕೆ ಮನೆಗೆ ಹೋಗಲಿಲ್ಲ ಅಂದನು.

11 ಅದಕ್ಕೆ ಊರೀಯನು - ಒಡಂಬಡಿಕೆಯ ಮಂಜೂಷವೂ ಇಸ್ರಾಯೇಲ್ಯರೂ ಯೆಹೂದ್ಯರೂ ಗುಡಾರಗಳಲ್ಲಿ ವಾಸವಾಗಿದ್ದಾರೆ. ನನ್ನ ಒಡೆಯನಾದ ಯೋವಾಬನೂ ಅವನ ಸೇವಕರೂ ಬೈಲಿನಲ್ಲಿ ಪಾಳೆಯ ಮಾಡಿಕೊಂಡಿದ್ದಾರೆ. ಹೀಗಿರುವಲ್ಲಿ ನಾನು ನನ್ನ ಮನೆಗೆ ಹೋಗಿ ಉಂಡು ಕುಡಿದು ಹೆಂಡತಿಯೊಡನೆ ಮಲಗಿಕೊಳ್ಳುವದು ಹೇಗೆ? ನಿನ್ನಾಣೆ, ನಿನ್ನ ಜೀವದ ಆಣೆ, ನಾನು ಇಂಥದನ್ನು ಮಾಡುವದೇ ಇಲ್ಲ ಎಂದು ಉತ್ತರಕೊಟ್ಟನು.

12 ಆಗ ದಾವೀದನು ಅವನಿಗೆ - ನೀನು ಈ ಹೊತ್ತು ಇಲ್ಲೇ ಇರು, ನಾಳೆ ನಿನ್ನನ್ನು ಕಳುಹಿಸುತ್ತೇನೆ ಎಂದು ಆಜ್ಞಾಪಿಸಿದನು. ಆದದರಿಂದ ಊರೀಯನು ಆ ದಿನ ಯೆರೂಸಲೇವಿುನಲ್ಲೇ ಇದ್ದನು.

13 ಮರುದಿನ ದಾವೀದನು ಅವನನ್ನು ಅನ್ನಪಾನತೆಗೆದುಕೊಳ್ಳಬೇಕೆಂದು ತನ್ನ ಮನೆಗೆ ಕರಕೊಂಡುಹೋಗಿ ಮತ್ತನನ್ನಾಗಿ ಮಾಡಿದನು. ಆದರೆ ಆ ರಾತ್ರಿಯಲ್ಲಿಯೂ ಅವನು ಹೋಗಿ ತನ್ನ ಯಜಮಾನನ ಸೇವಕರ ಹತ್ತಿರ ಹಾಸಿಗೆ ಹಾಸಿ ಮಲಗಿಕೊಂಡನೇ ಹೊರತು ತನ್ನ ಮನೆಗೆ ಹೋಗಲಿಲ್ಲ.

14 ಮರುದಿನ ಬೆಳಿಗ್ಗೆ ದಾವೀದನು ಯೋವಾಬನಿಗೆ ಒಂದು ಪತ್ರವನ್ನು ಬರೆದು ಅದನ್ನು ಊರೀಯನ ಕೈಯಲ್ಲಿ ಕೊಟ್ಟು ಕಳುಹಿಸಿದನು.

15 ಅದರಲ್ಲಿದ್ದದ್ದೇನಂದರೆ - ಊರೀಯನು ಗಾಯಹೊಂದಿ ಸಾಯುವಂತೆ ಅವನನ್ನು ಘೋರಯುದ್ಧ ನಡೆಯುತ್ತಿರುವ ಕಡೆಗೆ ಮುಂಭಾಗದಲ್ಲಿ ನಿಲ್ಲಿಸಿ ನೀವು ಹಿಂದಕ್ಕೆ ಸರಿದುಕೊಳ್ಳಿರಿ ಎಂಬದೇ.

16 ಯೋವಾಬನು ಪಟ್ಟಣಕ್ಕೆ ಮುತ್ತಿಗೆಹಾಕುವಾಗ ಶೂರರಾದ ಶತ್ರುಸೈನಿಕರೆಲ್ಲಿರುತ್ತಾರೆಂದು ಗೊತ್ತುಮಾಡಿಕೊಂಡು ಊರೀಯನನ್ನು ಅಲ್ಲಿ ನಿಲ್ಲಿಸಿದನು.

17 ಆ ಊರಿನ ಜನರು ಹೊರಗೆ ಬಂದು ಯೋವಾಬನೊಡನೆ ಕಾದಿದಾಗ ದಾವೀದನ ಸೇವಕರಲ್ಲಿ ಕೆಲವರು ಸತ್ತರು. ಹಿತ್ತಿಯನಾದ ಊರೀಯನೂ ಮಡಿದನು.

18 ಅನಂತರ ಯೋವಾಬನು ಒಬ್ಬ ದೂತನನ್ನು ಕರೆದು ಅವನಿಗೆ - ನೀನು ಹೋಗಿ ದಾವೀದನಿಗೆ ಯುದ್ಧ ವರ್ತಮಾನವನ್ನೆಲ್ಲಾ ತಿಳಿಸು.

19 ನೀನು ಯುದ್ಧ ಸಮಾಚಾರವನ್ನು ಹೇಳಿ ಮುಗಿಸಿದನಂತರ ಅರಸನು ಮುನಿದು ನಿನ್ನನ್ನು -

20 ನೀವು ಯುದ್ಧಮಾಡುವದಕ್ಕಾಗಿ ಪಟ್ಟಣದ ಸಮೀಪಕ್ಕೆ ಹೋದದ್ದೇಕೆ? ಶತ್ರುಗಳು ಊರುಗೋಡೆಯ ಮೇಲಣಿಂದ ಏನಾದರೂ ಬೀಸಾಡಬಹುದಲ್ಲವೋ?

21 ಯೆರುಬ್ಬೆಷೆತನ ಮಗನಾದ ಅಬೀಮೆಲೆಕನನ್ನು ಕೊಂದವರಾರೆಂದು ನಿಮಗೆ ಗೊತ್ತಿಲ್ಲವೋ? ತೇಬೇಚಿನಲ್ಲಿ ಒಬ್ಬ ಹೆಂಗಸು ಗೋಡೆಯ ಮೇಲಣಿಂದ ಒಂದು ಬೀಸುವ ಕಲ್ಲನ್ನು ಅವನ ಮೇಲೆ ಎತ್ತಿಹಾಕಿ ಅವನನ್ನು ಕೊಂದಳಲ್ಲವೇ. ಹೀಗಿರುವದರಿಂದ ನೀವು ಗೋಡೆಯ ಸಮೀಪಕ್ಕೆ ಹೋದದ್ದೇನು ಎಂದು ಕೇಳಿದರೆ ನೀನು - ಹಿತ್ತಿಯನಾದ ನಿನ್ನ ಸೇವಕ ಊರೀಯನೂ ಮೃತಿಹೊಂದಿದನೆಂದು ಹೇಳು ಎಂಬದಾಗಿ

22 ಆಜ್ಞಾಪಿಸಿ ಅವನನ್ನು ಕಳುಹಿಸಿದನು. ಆ ದೂತನು ಹೋಗಿ

23 ಯೋವಾಬನ ಆಜ್ಞೆಯಂತೆ ದಾವೀದನಿಗೆ ತಿಳಿಸಿದ್ದೇನಂದರೆ - ಆ ಊರಿನವರು ಮಹಾಬಲದೊಡನೆ ಯುದ್ಧಮಾಡುವದಕ್ಕೆ ಬೈಲಿಗೆ ಬಂದರು; ನಾವು ಅವರನ್ನು ಊರುಬಾಗಲಿನವರೆಗೆ ಹಿಂದಟ್ಟಿದೆವು.

24 ಆಗ ಬಿಲ್ಲುಗಾರರು ಗೋಡೆಯ ಮೇಲಣಿಂದ ನಿನ್ನ ಸೇವಕರ ಮೇಲೆ ಬಾಣಗಳನ್ನು ಎಸೆದದರಿಂದ ಅವರಲ್ಲಿ ಕೆಲವರು ಸತ್ತರು. ಹಿತ್ತಿಯನಾದ ನಿನ್ನ ಸೇವಕ ಊರೀಯನೂ ಮಡಿದನು ಎಂಬದೇ.

25 ಆಗ ದಾವೀದನು ದೂತನಿಗೆ ನೀನು ಹೋಗಿ - ಇದಕ್ಕೋಸ್ಕರವಾಗಿ ವ್ಯಸನ ಪಡಬೇಡ; ಕತ್ತಿಯು ಈ ಹೊತ್ತು ಒಬ್ಬನನ್ನು ನುಂಗಿದರೆ ನಾಳೆ ಇನ್ನೊಬ್ಬನನ್ನು ನುಂಗುವದು. ಮತ್ತಷ್ಟು ಶೂರತನದಿಂದ ಯುದ್ಧಮಾಡಿ ಪಟ್ಟಣವನ್ನು ಕೆಡವಿಬಿಡಿರಿ ಎಂಬದಾಗಿ ಅರಸನು ಆಜ್ಞಾಪಿಸುತ್ತಾನೆಂದು ಯೋವಾಬನಿಗೆ ಹೇಳಿ ಅವನನ್ನು ಧೈರ್ಯಪಡಿಸು ಅಂದನು.

26 ಊರೀಯನ ಮರಣವಾರ್ತೆಯನ್ನು ಅವನ ಹೆಂಡತಿಯು ಕೇಳಿ ಗಂಡನಿಗೋಸ್ಕರ ಗೋಳಾಡಿದಳು.

27 ದುಃಖಕಾಲ ತೀರಿದನಂತರ ದಾವೀದನು ಆಕೆಯನ್ನು ತನ್ನ ಮನೆಗೆ ಕರತರಿಸಿ ತನ್ನ ಹೆಂಡತಿಯನ್ನಾಗಿ ಮಾಡಿಕೊಂಡನು; ಆಕೆಯು ಅವನಿಂದ ಒಬ್ಬ ಮಗನನ್ನು ಹೆತ್ತಳು. ದಾವೀದನ ಈ ಕೃತ್ಯವು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿತ್ತು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು