Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೇತ್ರನು 3 - ಕನ್ನಡ ಸತ್ಯವೇದವು J.V. (BSI)


ದೇವರ ದಿನವು ತಡಮಾಡಿದರೂ ಅದು ಬರುವದು ನಿಶ್ಚಯ

1 ಪ್ರಿಯರೇ, ನಿಮಗೀಗ ಬರೆಯುವದು ಎರಡನೆಯ ಪತ್ರಿಕೆ.

2 ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ಕರ್ತನಾದ ರಕ್ಷಕನು ನಿಮ್ಮ ಅಪೊಸ್ತಲರ ಮೂಲಕ ಕೊಟ್ಟ ಅಪ್ಪಣೆಯನ್ನೂ ನೀವು ಜ್ಞಾಪಕಮಾಡಿಕೊಳ್ಳಬೇಕೆಂದು ಈ ಎರಡು ಪತ್ರಿಕೆಗಳಲ್ಲಿಯೂ ಜ್ಞಾಪಕಕೊಟ್ಟು ನಿಮ್ಮ ಸರಳ ಮನಸ್ಸನ್ನು ಪ್ರೇರಿಸಿದ್ದೇನೆ.

3 ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯಮಾಡುತ್ತಾ -

4 ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ನಿದ್ರೆ ಹೊಂದಿದ ದಿನ ಮೊದಲುಗೊಂಡು ಸಮಸ್ತವೂ ಲೋಕಾದಿಯಿಂದಿದ್ದ ಹಾಗೆಯೇ ಇರುತ್ತದಲ್ಲಾ ಎಂದು ಹೇಳುವರೆಂಬದಾಗಿ ನೀವು ಮೊದಲು ತಿಳುಕೊಳ್ಳಬೇಕು.

5 ಹೀಗೆ ಮಾತಾಡುವವರು ಒಂದು ಸಂಗತಿಯನ್ನು ತಿಳಿದರೂ ಬೇಕೆಂದು ಮರೆತು ಬಿಡುತ್ತಾರೆ; ಅದೇನಂದರೆ - ಪೂರ್ವಕಾಲದಲ್ಲಿದ್ದ ಭೂಮ್ಯಾಕಾಶಗಳು ದೇವರ ವಾಕ್ಯದ ಮೂಲಕ ನೀರಿನಿಂದ ಉಂಟಾಗಿ ನೀರಿನಿಂದ ಆಧಾರಗೊಂಡಿರುವಲ್ಲಿ

6 ಆ ನೀರುಗಳಿಂದಲೇ ಆ ಕಾಲದಲ್ಲಿದ್ದ ಲೋಕವು ಜಲಪ್ರಲಯದಲ್ಲಿ ನಾಶವಾಯಿತು.

7 ಆದರೆ ಈಗಿರುವ ಭೂಮ್ಯಾಕಾಶಗಳು ಅದೇ ವಾಕ್ಯದ ಬಲದಿಂದ ಬೆಂಕಿಯ ಮೂಲಕ ನಾಶವಾಗುವದಕ್ಕೆ ಇಡಲ್ಪಟ್ಟಿವೆ; ಮತ್ತು ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನಕ್ಕಾಗಿ ಆ ಬೆಂಕಿ ಸಿದ್ಧವಾಗಿದೆ.

8 ಪ್ರಿಯರೇ, ಕರ್ತನ ಎಣಿಕೆಯಲ್ಲಿ ಒಂದು ದಿನವು ಸಾವಿರ ವರುಷಗಳಂತೆಯೂ ಸಾವಿರ ವರುಷಗಳು ಒಂದು ದಿನದಂತೆಯೂ ಅವೆ ಎಂಬದನ್ನು ಮಾತ್ರ ಮರೆಯಬೇಡಿರಿ.

9 ಕರ್ತನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ತಡಮಾಡುತ್ತಾನೆಂಬದಾಗಿ ಕೆಲವರು ಅರ್ಥಮಾಡಿಕೊಳ್ಳುವ ಪ್ರಕಾರ ಆತನು ತಡಮಾಡುವವನಲ್ಲ. ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.

10 ಆದರೂ ಕರ್ತನ ದಿನವು ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಮಂಡಲವು ಮಹಾಘೋಷದಿಂದ ಇಲ್ಲದೆ ಹೋಗುವದು, ಸೂರ್ಯಚಂದ್ರ ನಕ್ಷತ್ರಗಳು ಉರಿದು ಲಯವಾಗಿ ಹೋಗುವವು, ಭೂವಿುಯೂ ಅದರಲ್ಲಿರುವ ಕೆಲಸಗಳೂ ಸುಟ್ಟುಹೋಗುವವು.


ಲೋಕಾಂತ್ಯವನ್ನು ಎದುರುನೋಡುತ್ತಾ ಪರಿಶುದ್ಧರಾಗಿ ನಡೆಯಿರಿ ಎಂಬ ಬೋಧನೆ

11-12 ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದರಿಂದ ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ; ಆ ದಿನದಲ್ಲಿ ಆಕಾಶಮಂಡಲವು ಬೆಂಕಿ ಹತ್ತಿ ಲಯವಾಗಿ ಹೋಗುವದು, ಸೂರ್ಯಚಂದ್ರ ನಕ್ಷತ್ರಗಳು ಉರಿದು ಕರಗಿ ಹೋಗುವವು.

13 ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರು ನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.

14 ಆದಕಾರಣ ಪ್ರಿಯರೇ, ನೀವು ಇವುಗಳನ್ನು ಎದುರು ನೋಡುವವರಾಗಿರುವದರಿಂದ ಶಾಂತರಾಗಿದ್ದು ಆತನೆದುರಿನಲ್ಲಿ ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡಿರಿ.

15 ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಅದೆ ಎಂದು ಎಣಿಸಿಕೊಳ್ಳಿರಿ. ಇದೇ ಅಭಿಪ್ರಾಯಕ್ಕೆ ಸರಿಯಾಗಿ ನಮ್ಮ ಪ್ರಿಯ ಸಹೋದರನಾದ ಪೌಲನು ಸಹ ತನಗೆ ಅನುಗ್ರಹಿಸಿರುವ ಜ್ಞಾನದ ಪ್ರಕಾರ ನಿಮಗೆ ಬರೆದನು.

16 ಅವನು ತನ್ನ ಎಲ್ಲಾ ಪತ್ರಿಕೆಗಳಲ್ಲಿಯೂ ಈ ವಿಷಯಗಳನ್ನು ಕುರಿತು ಬರೆಯುವಾಗ ಹೀಗೆ ಬೋಧಿಸಿದ್ದಾನೆ. ಆ ಪತ್ರಿಕೆಗಳಲ್ಲಿರುವ ಕೆಲವು ಮಾತುಗಳು ತಿಳಿಯುವದಕ್ಕೆ ಕಷ್ಟವಾಗಿವೆ. ವಿದ್ಯಾಹೀನರೂ ಚಪಲಚಿತ್ತರೂ ಹೇಗೆ ನಮಗಿರುವ ವಿುಕ್ಕಾದ ಗ್ರಂಥಗಳಿಗೆ ತಪ್ಪಾದ ಅರ್ಥಮಾಡಿಕೊಂಡಿದ್ದಾರೋ ಹಾಗೆಯೇ ಇವುಗಳಿಗೂ ತಪ್ಪಾದ ಅರ್ಥಮಾಡಿಕೊಂಡು ತಮಗೆ ನಾಶವನ್ನುಂಟುಮಾಡಿಕೊಳ್ಳುತ್ತಾರೆ.

17 ಆದಕಾರಣ ಪ್ರಿಯರೇ, ನೀವು ಈ ಸಂಗತಿಗಳನ್ನು ಮುಂದಾಗಿ ತಿಳಿದುಕೊಂಡಿರುವದರಿಂದ ಅಧರ್ಮಿಗಳ ಭ್ರಾಂತಿಯ ಸೆಳವಿಗೆ ಸಿಕ್ಕಿಕೊಂಡು ನಿಮ್ಮ ಸ್ಥಿರಮನಸ್ಸನ್ನು ಬಿಟ್ಟು ಭ್ರಷ್ಟರಾಗದಂತೆ ಎಚ್ಚರಿಕೆಯಾಗಿರಿ.

18 ನೀವು ಕೃಪೆಯಲ್ಲಿಯೂ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನದಲ್ಲಿಯೂ ಅಭಿವೃದ್ಧಿಯನ್ನು ಹೊಂದುತ್ತಾ ಇರ್ರಿ. ಆತನಿಗೆ ಈಗಲೂ ಸದಾಕಾಲವೂ ಸ್ತೋತ್ರ. ಆಮೆನ್.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು