2 ಪೇತ್ರನು 2 - ಕನ್ನಡ ಸತ್ಯವೇದವು J.V. (BSI)ದುರ್ಮಾರ್ಗತನವನ್ನು ಬೋಧಿಸುವವರ ವಿಷಯದಲ್ಲಿ ಎಚ್ಚರಿಕೆ (ಯೂದ 1-19) 1 ಆದರೆ ಇಸ್ರಾಯೇಲ್ ಜನರಲ್ಲಿ ಸುಳ್ಳುಪ್ರವಾದಿಗಳೂ ಎದ್ದರಲ್ಲಾ; ಅದೇ ಪ್ರಕಾರ ನಿಮ್ಮಲ್ಲಿಯೂ ಸುಳ್ಳುಬೋಧಕರು ಇರುವರು. ಅವರು ನಾಶಕರವಾದ ಮತಭೇದಗಳನ್ನು ಕಳ್ಳತನದಿಂದ ಹುಟ್ಟಿಸುವವರೂ ತಮ್ಮನ್ನು ಕೊಂಡುಕೊಂಡ ಒಡೆಯನನ್ನು ಕೂಡ ತಾವು ಅರಿಯೆವು ಎಂದು ಹೇಳುವವರೂ ಆಗಿದ್ದು ಫಕ್ಕನೆ ತಮ್ಮ ಮೇಲೆ ನಾಶವನ್ನು ಬರಮಾಡಿಕೊಳ್ಳುವರು. 2 ಅವರ ನಿರ್ಲಜ್ಜಾಕೃತ್ಯಗಳನ್ನು ಅನೇಕರು ಅನುಸರಿಸುವರು; ಅವರ ನಿವಿುತ್ತ ಸತ್ಯಮಾರ್ಗಕ್ಕೆ ದೂಷಣೆ ಉಂಟಾಗುವದು. 3 ಅವರು ದ್ರವ್ಯಾಶೆಯುಳ್ಳವರಾಗಿ ಕಲ್ಪನೆಯ ಮಾತುಗಳನ್ನು ಹೇಳುತ್ತಾ ನಿಮ್ಮಿಂದ ಲಾಭವನ್ನು ಸಂಪಾದಿಸಬೇಕೆಂದಿರುವರು. ಲೋಕಾದಿಯಿಂದ ಅಂಥವರಿಗೆ ದಂಡನೆಯ ತೀರ್ಪು ತಪ್ಪದೆ ಬರುತ್ತಿರುವದು, ಅವರ ನಾಶವು ತೂಕಡಿಸುವದಿಲ್ಲ. 4 ಹೇಗಂದರೆ ದೇವದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯತೀರ್ಪನ್ನು ಹೊಂದುವದಕ್ಕೆ ಇಡಲ್ಪಟ್ಟವರಾಗಿರಬೇಕೆಂದು ಕತ್ತಲೇ ಗುಂಡಿಗಳಿಗೆ ಒಪ್ಪಿಸಿದನು. 5 ಆತನು ಭಕ್ತಿಹೀನರಾದ ಪುರಾತನರ ಲೋಕವನ್ನು ಸುಮ್ಮನೆ ಬಿಡದೆ ಅವರ ಮೇಲೆ ಜಲಪ್ರಲಯವನ್ನು ಬರಮಾಡಿದನು; ಆದರೆ ಸುನೀತಿಯನ್ನು ಸಾರುವವನಾಗಿದ್ದ ನೋಹನನ್ನೂ ಅವನೊಂದಿಗೆ ಬೇರೆ ಏಳು ಮಂದಿಯನ್ನೂ ಉಳಿಸಿದನು. 6 ಆತನು ಸೊದೋಮ್‍ಗೊಮೋರ ಪಟ್ಟಣಗಳನ್ನು ಸುಟ್ಟು ಬೂದಿಮಾಡಿ ಮುಂದೆ ಭಕ್ತಿಹೀನರಾಗಿ ಬದುಕುವವರ ಗತಿ ಇಂಥದೆಂದು ಸೂಚಿಸುವದಕ್ಕಾಗಿ ಅವುಗಳಿಗೆ ನಾಶನವನ್ನು ವಿಧಿಸಿದನು. 7 ಆದರೆ ಆ ಅಧರ್ಮಿಗಳ ನಾಚಿಕೆಗೆಟ್ಟ ನಡತೆಗೆ ವೇದನೆಗೊಂಡಿದ್ದ ನೀತಿವಂತನಾದ ಲೋಟನನ್ನು ತಪ್ಪಿಸಿದನು. 8 ಆ ನೀತಿವಂತನು ಅವರ ನಡುವೆ ಇದ್ದುಕೊಂಡು ಅವರ ಅನ್ಯಾಯಕೃತ್ಯಗಳನ್ನು ನೋಡುತ್ತಾ ಕೇಳುತ್ತಾ ಅವುಗಳ ನಿವಿುತ್ತ ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ಬಹಳವಾಗಿ ಕರಕರೆಗೊಂಡನು. 9 ಕರ್ತನು ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ ದುರ್ಮಾರ್ಗಿಗಳನ್ನು ನ್ಯಾಯತೀರ್ಪಿನ ದಿನದ ತನಕ ಶಿಕ್ಷಾನುಭವದಲ್ಲಿ ಇಡುವದಕ್ಕೂ ಬಲ್ಲವನಾಗಿದ್ದಾನೆ. 10 ಮುಖ್ಯವಾಗಿ ಬಂಡುತನವನ್ನು ಆಶಿಸಿ ಶರೀರಭಾವಾನುಸಾರ ನಡೆದು ಪ್ರಭುತ್ವ ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವನು. ಇವರು ಯಾರಿಗೂ ಹೆದರದೆ ಸ್ವೇಚ್ಫಾಪರರಾಗಿದ್ದು ಮಹಾಪದವಿಯವರನ್ನು ನಿರ್ಭಯವಾಗಿ ದೂಷಿಸುತ್ತಾರೆ. 11 ದೇವದೂತರು ಬಲದಲ್ಲಿಯೂ ಮಹತ್ತಿನಲ್ಲಿಯೂ ಶ್ರೇಷ್ಠರಾಗಿದ್ದರೂ ಕರ್ತನ ಮುಂದೆ ಮಹಾಪದವಿಯವರ ಮೇಲೆ ದೂಷಣಾಭಿಪ್ರಾಯವನ್ನು ಹೇಳುವದಿಲ್ಲವಲ್ಲಾ. 12 ಆದರೆ ಸ್ವಾಭಾವಿಕವಾಗಿ ಬೇಟೆಗೂ ಕೊಲೆಗೂ ಹುಟ್ಟಿರುವ ವಿವೇಕಶೂನ್ಯ ಪಶುಗಳಂತಿರುವ ಈ ದುರ್ಮಾರ್ಗಿಗಳು ತಮಗೆ ತಿಳಿಯದವುಗಳ ವಿಷಯವಾಗಿ ದೂಷಣೆ ಹೇಳುವವರಾಗಿದ್ದಾರೆ. ಇವರು ತಮ್ಮ ಕೆಟ್ಟತನದಿಂದ ತಾವೇ ಕೆಟ್ಟುಹೋಗಿ ತಮ್ಮ ದುಷ್ಪ್ರವರ್ತನೆಗೆ ಸರಿಯಾದ ದುಷ್ಫಲವನ್ನು ಹೊಂದುವರು. 13 ದುಂದುಗಾರಿಕೆಯಲ್ಲಿ ಹಗಲನ್ನು ಕಳೆಯುವದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮ ಸಂಗಡ ಸೇರಿ ಔತಣಮಾಡುತ್ತಿರುವಾಗ ವಂಚಕರಾಗಿದ್ದು ಉಂಡು ಕುಡಿದು ಕಳಂಕಕ್ಕೂ ಅವಮಾನಕ್ಕೂ ಕಾರಣರಾಗಿದ್ದಾರೆ. 14 ಇವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರೂ ಚಪಲಚಿತ್ತರನ್ನು ಮರುಳುಗೊಳಿಸುವವರೂ ಲೋಭದಲ್ಲಿ ತೇರ್ಗಡೆಹೊಂದಿದ ಮನಸ್ಸುಳ್ಳವರೂ ಶಾಪಕ್ಕೆ ಪಾತ್ರರೂ ಆಗಿದ್ದಾರೆ. 15 ಇವರು ನೀಟಾದ ಮಾರ್ಗವನ್ನು ಬಿಟ್ಟು ಬೆಯೋರನ ಮಗನಾದ ಬಿಳಾಮನ ಮಾರ್ಗವನ್ನು ಹಿಡಿದು ತಪ್ಪಿಹೋಗಿದ್ದಾರೆ. ಈ ಬಿಳಾಮನು ಅಧರ್ಮದಿಂದ ದೊರಕುವ ದ್ರವ್ಯವನ್ನು ಪ್ರೀತಿಸಿದನು; 16 ಆದರೆ ಅವನ ಅಕ್ರಮಕ್ಕೆ ಖಂಡನೆಯಾಯಿತು; ಮೂಕ ಪಶುವು ಮನುಷ್ಯಸ್ವರದಿಂದ ಮಾತಾಡಿ ಆ ಪ್ರವಾದಿಯ ಹುಚ್ಚುತನಕ್ಕೆ ಅಡ್ಡಿಮಾಡಿತು. 17 ಇವರು ನೀರಿಲ್ಲದ ಬಾವಿಗಳೂ ಬಿರುಗಾಳಿಯಿಂದ ಬಡಿಸಿಕೊಂಡು ಹಾರಿಹೋಗುವ ಮಂಜೂ ಆಗಿದ್ದಾರೆ; ಇಂಥವರ ಪಾಲಿಗೆ ಕಾರ್ಗತ್ತಲೆ ಇಟ್ಟಿರುವದು. 18 ತಪ್ಪಾದ ಮಾರ್ಗದಲ್ಲಿ ನಡೆಯುವವರ ಸಹವಾಸದಿಂದ ಹೊಸದಾಗಿ ತಪ್ಪಿಸಿಕೊಂಡವರ ಸಂಗಡ ಇವರು ಹುರುಳಿಲ್ಲದ ದೊಡ್ಡ ದೊಡ್ಡ ಮಾತುಗಳನ್ನಾಡಿ ಬಂಡುಬಂಡಾದ ದುರಾಶೆಗಳನ್ನು ಹುಟ್ಟಿಸಿ ಅವರನ್ನು ಮರುಳುಗೊಳಿಸುತ್ತಾರೆ. 19 ಸ್ವಾತಂತ್ರ್ಯ ಕೊಡುತ್ತೇವೆಂದು ಅವರಿಗೆ ವಾಗ್ದಾನಮಾಡುತ್ತಾರೆ, ಆದರೆ ತಾವೇ ಕೆಟ್ಟತನದ ದಾಸತ್ವದೊಳಗಿದ್ದಾರೆ. ಒಬ್ಬನು ಯಾವದಕ್ಕೆ ಸೋತು ಹೋಗಿರುವನೋ ಅದರ ದಾಸತ್ವದೊಳಗಿರುವನಷ್ಟೆ. 20 ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನಹೊಂದಿ ಲೋಕದ ಮಲಿನತ್ವಗಳಿಗೆ ತಪ್ಪಿಸಿಕೊಂಡವರು ತಿರಿಗಿ ಅವುಗಳಲ್ಲಿ ಸಿಕ್ಕಿಕೊಂಡು ಸೋತುಹೋದರೆ ಅವರ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿದೆ. 21 ಅವರು ನೀತಿ ಮಾರ್ಗವನ್ನು ತಿಳಿದು ತಮಗೆ ಕೊಡಲ್ಪಟ್ಟ ಪರಿಶುದ್ಧ ಆಜ್ಞೆಯಿಂದ ತೊಲಗಿಹೋಗುವದಕ್ಕಿಂತ ಆ ಮಾರ್ಗವನ್ನು ತಿಳಿಯದಿದ್ದರೆ ಮೇಲಾಗಿತ್ತು. 22 ನಾಯಿ ತಾನು ಕಕ್ಕಿದ್ದನ್ನು ನೆಕ್ಕುವದಕ್ಕೆ ತಿರುಗಿಕೊಂಡಿತು ಮತ್ತು ತೊಳೆದ ಹಂದಿ ಕೆಸರಿನಲ್ಲಿ ಹೊರಳುವದಕ್ಕೆ ಹೋಯಿತು ಎಂಬ ನಿಜವಾದ ಗಾದೆಗೆ ಸರಿಯಾಗಿ ನಡೆದಿದ್ದಾರೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India