2 ಪೂರ್ವಕಾಲ ವೃತ್ತಾಂತ 6 - ಕನ್ನಡ ಸತ್ಯವೇದವು J.V. (BSI)ದೇವಾಲಯಪ್ರತಿಷ್ಠೆ 1 ತರುವಾಯ ಸೊಲೊಮೋನನು - ಯೆಹೋವನೇ ಕಾರ್ಗತ್ತಲಲ್ಲಿ ವಾಸಿಸುತ್ತೇನೆಂದು ಹೇಳಿದ್ದೀ; 2 ನಾನು ನಿನಗೋಸ್ಕರ ಒಂದು ಮಂದಿರವನ್ನು ಕಟ್ಟಿಸಿದ್ದೇನೆ; ಅದು ನಿನಗೆ ಶಾಶ್ವತವಾದ ವಾಸಸ್ಥಳವಾಗಿರಲಿ ಎಂದು ಪ್ರಾರ್ಥನೆ ಮಾಡಿದನು. 3 ಇದಾದ ಮೇಲೆ ಅರಸನು ಎದ್ದು ನಿಂತಿದ್ದ ಇಸ್ರಾಯೇಲ್ಸಮೂಹದವರ ಕಡೆಗೆ ತಿರುಗಿಕೊಂಡು ಅವರನ್ನು ಆಶೀರ್ವದಿಸಿ - 4 ಇಸ್ರಾಯೇಲ್‍ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ; ನನ್ನ ತಂದೆಯಾದ ದಾವೀದನಿಗೆ ಆತನ ಬಾಯಿ ನುಡಿದದ್ದನ್ನು ಆತನ ಹಸ್ತವು ಈಗ ನೆರವೇರಿಸಿಯದೆ. 5 ಆತನು - ನನ್ನ ಜನರಾದ ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ನಾನು ಬರಮಾಡಿದ್ದು ಮೊದಲುಗೊಂಡು ಇಸ್ರಾಯೇಲ್ ಕುಲಗಳಲ್ಲಿ ಯಾವ ಪಟ್ಟಣವನ್ನೂ ನನ್ನ ನಾಮದ ನಿವಾಸಕ್ಕೋಸ್ಕರ ಆಲಯಸ್ಥಾನವನ್ನಾಗಿ ಆರಿಸಿಕೊಂಡಿರಲಿಲ್ಲ; ನನ್ನ ಪ್ರಜೆಯಾದ ಇಸ್ರಾಯೇಲ್ಯರ ಪ್ರಭುವಾಗುವದಕ್ಕಾಗಿ ಯಾವನೊಬ್ಬ ಪುರುಷನನ್ನು ಆರಿಸಿಕೊಂಡದ್ದೂ ಇಲ್ಲ. 6 ಆದರೆ ಈಗ ನನ್ನ ನಾಮಸ್ಥಾಪನೆಗೋಸ್ಕರ ಯೆರೂಸಲೇಮನ್ನೂ ನನ್ನ ಪ್ರಜೆಗಳಾದ ಇಸ್ರಾಯೇಲ್ಯರನ್ನು ಆಳುವದಕ್ಕೋಸ್ಕರ ದಾವೀದನನ್ನೂ ಆರಿಸಿಕೊಂಡಿದ್ದೇನೆ ಎಂದು ಹೇಳಿದನು. 7 ನನ್ನ ತಂದೆಯಾದ ದಾವೀದನು ಇಸ್ರಾಯೇಲ್ ದೇವರಾದ ಯೆಹೋವನ ಹೆಸರಿನದಾಗಿ ಆಲಯವನ್ನು ಕಟ್ಟಬೇಕೆಂದು ಮನಸ್ಸು ಮಾಡಿದಾಗ ಆತನು ಅವನಿಗೆ - 8 ನೀನು ನನ್ನ ಹೆಸರಿನದಾಗಿ ಒಂದು ಮನೆಯನ್ನು ಕಟ್ಟುವದಕ್ಕೆ ಮನಸ್ಸುಮಾಡಿದ್ದು ಒಳ್ಳೇದೇ ಸರಿ. 9 ಆದರೂ ನೀನು ಅದನ್ನು ಕಟ್ಟಬಾರದು; ನಿನ್ನಿಂದ ಹುಟ್ಟುವ ಮಗನು ಅದನ್ನು ನನ್ನ ಹೆಸರಿನದಾಗಿ ಕಟ್ಟಬೇಕು ಎಂದು ಹೇಳಿದನು. 10 ಯೆಹೋವನು ತಾನು ಕೊಟ್ಟ ಮಾತನ್ನು ನೆರವೇರಿಸಿದನು. ಆತನ ವಾಗ್ದಾನದಂತೆ ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಇಸ್ರಾಯೇಲ್ ಸಿಂಹಾಸನದ ಮೇಲೆ ಅರಸನಾಗಿ ಕೂತುಕೊಂಡು ಇಸ್ರಾಯೇಲ್ ದೇವರಾದ ಯೆಹೋವನ ಹೆಸರಿನದಾಗಿ ಈ ಆಲಯವನ್ನು ಕಟ್ಟಿಸಿದ್ದೇನೆ. 11 ಇದಲ್ಲದೆ ಇಸ್ರಾಯೇಲ್ಯರಿಗೆ ಯೆಹೋವನಿಂದ ದೊರಕಿದ ನಿಬಂಧನಶಾಸನಗಳಿರುವ ಮಂಜೂಷವನ್ನು ಅಲ್ಲಿಟ್ಟಿದ್ದೇನೆ ಎಂದು ಹೇಳಿದನು. 12 ತರುವಾಯ ಸೊಲೊಮೋನನು ಎಲ್ಲಾ ಇಸ್ರಾಯೇಲ್ಯರ ಎದುರಿನಲ್ಲಿ ಯೆಹೋವನ ಯಜ್ಞವೇದಿಯ ಮುಂದೆ ಕೈಗಳನ್ನೆತ್ತಿಕೊಂಡು ನಿಂತನು. 13 ಅವನು ಐದು ಮೊಳ ಉದ್ದ, ಐದು ಮೊಳ ಅಗಲ, ಮೂರು ಮೊಳ ಎತ್ತರವಾಗಿರುವ ಒಂದು ತಾಮ್ರಪೀಠವನ್ನು ಮಾಡಿಸಿ ಪ್ರಾಕಾರದ ಮಧ್ಯದಲ್ಲಿಡಿಸಿದ್ದನು. ಅವನು ಇಸ್ರಾಯೇಲ್ ಸರ್ವಸಮೂಹದ ಎದುರಿನಲ್ಲಿ ಅದನ್ನು ಹತ್ತಿ ಅದರ ಮೇಲೆ ಮೊಣಕಾಲೂರಿಕೊಂಡು ಆಕಾಶದ ಕಡೆಗೆ ಕೈಗಳನ್ನೆತ್ತಿ ಹೀಗೆ ಪ್ರಾರ್ಥಿಸಿದನು - 14 ಇಸ್ರಾಯೇಲ್‍ದೇವರಾದ ಯೆಹೋವನೇ, ಭೂಲೋಕದಲ್ಲಿಯೂ ಪರಲೋಕದಲ್ಲಿಯೂ ನಿನಗೆ ಸಮಾನನಾದ ದೇವರಿಲ್ಲ; ಪೂರ್ಣಮನಸ್ಸಿನಿಂದ ನಿನಗೆ ನಡೆದುಕೊಳ್ಳುವಂಥ ಸೇವಕರ ವಿಷಯದಲ್ಲಿ ನೀನು ನಿನ್ನ ಒಡಂಬಡಿಕೆಯನ್ನೂ ಕೃಪೆಯನ್ನೂ ನೆರವೇರಿಸುವವನು. 15 ನಿನ್ನ ಸೇವಕನೂ ನನ್ನ ತಂದೆಯೂ ಆದ ದಾವೀದನಿಗೆ ಕೊಟ್ಟ ಮಾತನ್ನು ಕೈಕೊಂಡಿ; ನಿನ್ನ ಬಾಯಿ ನುಡಿದದ್ದನ್ನು ನಿನ್ನ ಹಸ್ತವು ಈಗ ನೆರವೇರಿಸಿತು. 16 ಇಸ್ರಾಯೇಲ್‍ದೇವರಾದ ಯೆಹೋವನೇ, ನೀನು ನನ್ನ ತಂದೆಯಾದ ದಾವೀದನಿಗೆ - ನಿನ್ನ ಸಂತಾನದವರು ನಿನ್ನಂತೆ ಜಾಗರೂಕತೆಯಿಂದ ನನ್ನ ಕಟ್ಟಳೆಯನ್ನು ಅನುಸರಿಸಿ ನಡೆದುಕೊಳ್ಳುವದಾದರೆ ಅವರು ತಪ್ಪದೆ ಇಸ್ರಾಯೇಲ್ ಸಿಂಹಾಸನದ ಮೇಲೆ ಕೂತುಕೊಳ್ಳುವಂತೆ ಮಾಡುವೆನು ಎಂಬದಾಗಿ ವಾಗ್ದಾನಮಾಡಿದಿಯಲ್ಲಾ, ಅದನ್ನು ನೆರವೇರಿಸು. 17 ಇಸ್ರಾಯೇಲ್ ದೇವರೇ, ಯೆಹೋವನೇ, ನೀನು ನಿನ್ನ ಸೇವಕನಾದ ದಾವೀದನಿಗೆ ನುಡಿದದ್ದೆಲ್ಲವೂ ಸಾರ್ಥಕವಾಗಲಿ. 18 ದೇವರು ನಿಜವಾಗಿ ಮನುಷ್ಯರೊಡನೆ ಭೂಲೋಕದಲ್ಲಿ ವಾಸಿಸುವನೋ? ಆಕಾಶವೂ ಉನ್ನತೋನ್ನತವಾದ ಆಕಾಶವೂ ನಿನ್ನ ವಾಸಕ್ಕೆ ಸಾಲವು; ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ಸಾಕಾದೀತು? 19 ಆದರೂ ನನ್ನ ದೇವರೇ, ಯೆಹೋವನೇ, ನಿನ್ನ ಸೇವಕನ ಪ್ರಾರ್ಥನೆಗೂ ವಿಜ್ಞಾಪನೆಗೂ ಕಿವಿಗೊಡು; ನಿನ್ನನ್ನು ಪ್ರಾರ್ಥಿಸುತ್ತಿರುವ ನಿನ್ನ ಸೇವಕನ ಮೊರೆಯನ್ನು ಲಾಲಿಸು. 20 ಈ ಸ್ಥಳವನ್ನು ಕುರಿತು - ನನ್ನ ನಾಮಪ್ರಭಾವವು ಇಲ್ಲಿ ವಾಸಿಸುವದು ಎಂದು ಹೇಳಿದವನೇ, ನಿನ್ನ ಕಟಾಕ್ಷವು ಹಗಲಿರುಳೂ ಈ ಮಂದಿರದ ಮೇಲಿರಲಿ; ಇಲ್ಲಿ ನಿನ್ನ ಸೇವಕನು ಪ್ರಾರ್ಥಿಸುವಾಗೆಲ್ಲಾ ಅವನಿಗೆ ಸದುತ್ತರವನ್ನು ದಯಪಾಲಿಸು. 21 ನಿನ್ನ ಸೇವಕನಾದ ನಾನಾಗಲಿ ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಾಗಲಿ ಈ ಸ್ಥಳದ ಕಡೆಗೆ ತಿರುಗಿಕೊಂಡು ನಿನ್ನನ್ನು ಪ್ರಾರ್ಥಿಸುವಾಗ ನಿನ್ನ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹಗಳನ್ನು ಕೇಳಿ ಕ್ಷಮೆಯನ್ನು ಅನುಗ್ರಹಿಸು. 22 ನೆರೆಯವನಿಗೆ ವಿರೋಧವಾಗಿ ತಪ್ಪುಮಾಡಿದವನೆಂಬ ಸಂಶಯಕ್ಕೆ ಗುರಿಯಾದ ಮನುಷ್ಯನು ತಾನು ನಿರ್ದೋಷಿಯೆಂದು ಪ್ರಮಾಣಮಾಡಬೇಕಾದಾಗ ಅವನು ಈ ಆಲಯಕ್ಕೆ ಬಂದು ನಿನ್ನ ವೇದಿಯ ಮುಂದೆ ನಿಂತು ಪ್ರಮಾಣಮಾಡುವದಾದರೆ 23 ನೀನು ಪರಲೋಕದಿಂದ ಅದನ್ನು ಕೇಳಿ ನಿನ್ನ ಸೇವಕರ ವ್ಯಾಜ್ಯವನ್ನು ತೀರಿಸು; ದುಷ್ಟನಿಗೆ ಅವನ ದುಷ್ಟತ್ವವನ್ನು ಅವನ ತಲೆಯ ಮೇಲೆಯೇ ಬರಮಾಡಿ ಮುಯ್ಯಿತೀರಿಸು; ನೀತಿವಂತನಿಗೆ ಅವನ ನೀತಿಯ ಫಲವನ್ನು ಅನುಗ್ರಹಿಸಿ ಅವನು ನೀತಿವಂತನೆಂದು ತೋರಿಸಿಕೊಡು. 24 ತಮ್ಮ ಪಾಪಗಳ ಸಲುವಾಗಿ ಶತ್ರುಗಳಿಂದ ಕುಗ್ಗಿಸಲ್ಪಟ್ಟ ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರು ತಿರುಗಿಕೊಂಡು ನಿನ್ನ ನಾಮವನ್ನು ಎತ್ತಿ ಈ ಆಲಯಕ್ಕೆ ಬಂದು ನಿನ್ನ ಸನ್ನಿಧಿಯಲ್ಲಿ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಮಾಡುವದಾದರೆ 25 ನೀನು ಪರಲೋಕದಿಂದ ಲಾಲಿಸಿ ಅವರ ಪಾಪಗಳನ್ನು ಕ್ಷವಿುಸಿ ಅವರಿಗೂ ಅವರ ಪಿತೃಗಳಿಗೂ ನೀನು ಕೊಟ್ಟ ದೇಶಕ್ಕೆ ಅವರನ್ನು ತಿರಿಗಿ ಬರಮಾಡು. 26 ಅವರ ಪಾಪಗಳ ನಿವಿುತ್ತವಾಗಿ ನೀನು ಆಕಾಶವನ್ನು ಮಳೆಗರೆಯದಂತೆ ಮುಚ್ಚಿ ಅವರನ್ನು ತಗ್ಗಿಸಿದಾಗ ಅವರು ತಮ್ಮ ಪಾಪಗಳನ್ನು ಬಿಟ್ಟು ತಮ್ಮನ್ನು ತಗ್ಗಿಸಿದವನು ನೀನೇ ಎಂದು ನಿನ್ನ ನಾಮವನ್ನು ಎತ್ತಿ ಈ ಆಲಯದ ಕಡೆಗೆ ತಿರುಗಿಕೊಂಡು ನಿನ್ನನ್ನು ಪ್ರಾರ್ಥಿಸುವದಾದರೆ 27 ಪರಲೋಕದಲ್ಲಿರುವ ನೀನು ಲಾಲಿಸಿ ನಿನ್ನ ಸೇವಕರೂ ಪ್ರಜೆಗಳೂ ಆದ ಇಸ್ರಾಯೇಲ್ಯರ ಪಾಪಗಳನ್ನು ಕ್ಷವಿುಸಿ ಅವರು ನಡೆಯಬೇಕಾದ ಸನ್ಮಾರ್ಗವನ್ನು ತೋರಿಸಿ ನಿನ್ನ ಪ್ರಜೆಗೆ ಸ್ವಾಸ್ತ್ಯವಾಗಿ ಕೊಟ್ಟ ದೇಶಕ್ಕೆ ಮಳೆಯನ್ನು ಅನುಗ್ರಹಿಸು. 28 ದೇಶಕ್ಕೆ ಕ್ಷಾಮ, ಘೋರವ್ಯಾದಿ, [ಬೆಳೆಗೆ] ಬಿಸಿಗಾಳಿ, ಬೂದಿ, ವಿುಡಿತೆ, ಜಿಟ್ಟೇಹುಳ, ಪಟ್ಟಣಗಳಿಗೆ ಶತ್ರುಗಳ ಮುತ್ತಿಗೆ ಅಂತು ಯಾವ ಉಪದ್ರವದಿಂದಾಗಲಿ ವ್ಯಾಧಿಯಿಂದಾಗಲಿ ಬಾಧೆಯುಂಟಾಗುವಲ್ಲಿ 29 ಎಲ್ಲಾ ಇಸ್ರಾಯೇಲ್ಯರಾಗಲಿ ಅವರಲ್ಲೊಬ್ಬನಾಗಲಿ ತಾವು ಅನುಭವಿಸುತ್ತಿರುವ ಉಪದ್ರವ ದುಃಖಗಳ ನಿವಿುತ್ತವಾಗಿ ಈ ಆಲಯದ ಕಡೆಗೆ ಕೈಯೆತ್ತಿ ನಿನಗೆ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡುವದಾದರೆ 30 ಮನುಷ್ಯರ ಹೃದಯಗಳನ್ನು ಬಲ್ಲಂಥ ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಲಾಲಿಸಿ ಅವರಿಗೆ ಪಾಪ ಪರಿಹಾರವನ್ನು ಅನುಗ್ರಹಿಸು. ನೀನೊಬ್ಬನೇ ಮನುಷ್ಯರ ಹೃದಯಗಳನ್ನು ಬಲ್ಲವನಾಗಿರುವದರಿಂದ ಪ್ರತಿಯೊಬ್ಬನಿಗೂ ಅವನವನು ಹಿಡಿಯುವ ಮಾರ್ಗಕ್ಕೆ ತಕ್ಕ ಹಾಗೆ ಫಲವನ್ನು ಕೊಡು. 31 ಆಗ ನಮ್ಮ ಪಿತೃಗಳಿಗೆ ನೀನು ಕೊಟ್ಟ ದೇಶದಲ್ಲಿ ಅವರು ವಾಸಿಸುವ ಕಾಲದಲ್ಲೆಲ್ಲಾ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿ ನಿನ್ನ ಮಾರ್ಗಗಳಲ್ಲಿ ನಡೆಯುವರು. 32 ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಸೇರದಂಥ ಒಬ್ಬೊಬ್ಬ ಪರದೇಶಿಯೂ ನಿನ್ನ ನಾಮಮಹತ್ತು ಭುಜಬಲ ಶಿಕ್ಷಾಹಸ್ತ ಇವುಗಳ ವರ್ತಮಾನ ಕೇಳಿ ದೂರದೇಶದಿಂದ ಬಂದು ಈ ಆಲಯದ ಮುಂದೆ ನಿಂತು ನಿನ್ನನ್ನು ಪ್ರಾರ್ಥಿಸುವದಾದರೆ 33 ನಿನ್ನ ನಿವಾಸವಾಗಿರುವ ಪರಲೋಕದಿಂದ ಅವರ ಪ್ರಾರ್ಥನೆಯನ್ನು ಕೇಳಿ ಅವರು ಬೇಡಿಕೊಂಡದ್ದನ್ನು ಅನುಗ್ರಹಿಸು. ಆಗ ಲೋಕದ ಎಲ್ಲಾ ಜನರೂ ನಿನ್ನ ನಾಮಮಹತ್ತನ್ನು ತಿಳಿದು ನಿನ್ನ ಜನರಾದ ಇಸ್ರಾಯೇಲ್ಯರಂತೆ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿ ನಾನು ಈ ಆಲಯವನ್ನು ನಿನ್ನ ಹೆಸರಿನದಾಗಿ ಕಟ್ಟಿಸಿದ್ದೇನೆಂದು ತಿಳಿದುಕೊಳ್ಳುವರು. 34 ನೀನು ನಿನ್ನ ಜನರನ್ನು ಶತ್ರುಗಳೊಡನೆ ಯುದ್ಧಮಾಡುವದಕ್ಕೋಸ್ಕರ ಎಲ್ಲಿಗಾದರೂ ಕಳುಹಿಸಿದಾಗ ಅವರು ಅಲ್ಲಿಂದ ನೀನು ಆರಿಸಿಕೊಂಡ ಪಟ್ಟಣದ ಕಡೆಗೂ ನಾನು ನಿನ್ನ ಹೆಸರಿಗಾಗಿ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು ನಿನ್ನನ್ನು ಪ್ರಾರ್ಥಿಸುವದಾದರೆ 35 ನೀನು ಪರಲೋಕದಿಂದ ಅವರ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಕೇಳಿ ಅವರ ನ್ಯಾಯವನ್ನು ಸ್ಥಾಪಿಸು. 36 ಅವರು ನಿನಗೆ ವಿರುದ್ಧವಾಗಿ ಪಾಪಮಾಡಾರು; ಪಾಪಮಾಡದ ಮನುಷ್ಯನು ಒಬ್ಬನೂ ಇಲ್ಲವಲ್ಲಾ. ನೀನು ಅವರ ಮೇಲೆ ಕೋಪಗೊಂಡು ಅವರನ್ನು ಶತ್ರುಗಳ ಕೈಗೆ ಒಪ್ಪಿಸಿದಾಗ ಮತ್ತು ಆ ಶತ್ರುಗಳು ಅವರನ್ನು ಸೆರೆಹಿಡಿದು ದೂರದಲ್ಲಾಗಲಿ ಸಮೀಪದಲ್ಲಾಗಲಿ ಇರುವ ದೇಶಕ್ಕೆ ಒಯ್ದಾಗ 37 ತಾವು ಸೆರೆಯವರಾಗಿ ಬಿದ್ದುಕೊಂಡಿರುವ ದೇಶದಲ್ಲಿ ಅವರು ಪಶ್ಚಾತ್ತಾಪಪಟ್ಟು 38 ನಿನ್ನ ಅನುಗ್ರಹದಿಂದ ತಮ್ಮ ಪಿತೃಗಳಿಗೆ ದೊರಕಿದ ದೇಶದ ಕಡೆಗೂ ನೀನು ಆರಿಸಿಕೊಂಡ ಪಟ್ಟಣದ ಕಡೆಗೂ ನಾನು ನಿನ್ನ ಹೆಸರಿಗೋಸ್ಕರ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು - ನಾವು ನಿನ್ನ ಆಜ್ಞೆಗಳನ್ನು ಮೀರಿ ಪಾಪಮಾಡಿ ದ್ರೋಹಿಗಳಾದೆವು ಎಂದು ಒಪ್ಪಿ ಪೂರ್ಣಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ನಿನ್ನನ್ನು ಪ್ರಾರ್ಥಿಸುವದಾದರೆ 39 ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಅವರ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಲಾಲಿಸಿ ಅವರ ನ್ಯಾಯವನ್ನು ಸ್ಥಾಪಿಸಿ ನಿನಗೆ ವಿರುದ್ಧವಾಗಿ ಪಾಪಮಾಡಿದ ನಿನ್ನ ಪ್ರಜೆಗೆ ಕ್ಷಮೆಯನ್ನು ಅನುಗ್ರಹಿಸು. 40 ನನ್ನ ದೇವರೇ, ಕಟಾಕ್ಷವಿಟ್ಟು ಈ ಸ್ಥಳದಲ್ಲಿ ಮಾಡುವ ಪ್ರಾರ್ಥನೆಗೆ ಕಿವಿಗೊಡು. 41 ದೇವರಾದ ಯೆಹೋವನೇ, ಎದ್ದು ನಿನ್ನ ಪ್ರತಾಪಯುಕ್ತವಾದ ಮಂಜೂಷದೊಡನೆ ನಿನ್ನ ವಾಸಸ್ಥಾನದೊಳಗೆ ಸೇರೋಣವಾಗಲಿ. ದೇವರಾದ ಯೆಹೋವನೇ, ನಿನ್ನ ಯಾಜಕರು ರಕ್ಷಣೆಯೆಂಬ ವಸ್ತ್ರವನ್ನು ಹೊದ್ದುಕೊಳ್ಳಲಿ; ನಿನ್ನ ಭಕ್ತರು ಸೌಭಾಗ್ಯದಲ್ಲಿ ಹರ್ಷಿಸಲಿ. 42 ದೇವರಾದ ಯೆಹೋವನೇ, ನಿನ್ನಿಂದ ಅಭಿಷಿಕ್ತನಾದವನನ್ನು ತಳ್ಳಿಬಿಡಬೇಡ; ನಿನ್ನ ಸೇವಕನಾದ ದಾವೀದನಿಗೆ ಅನುಗ್ರಹಿಸಿದ ಕೃಪೆಯನ್ನು ನೆನಪುಮಾಡಿಕೋ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India