2 ಪೂರ್ವಕಾಲ ವೃತ್ತಾಂತ 4 - ಕನ್ನಡ ಸತ್ಯವೇದವು J.V. (BSI)ದೇವಾಲಯದ ಸಾಮಾನುಗಳು 1 ಇದಲ್ಲದೆ ಅವನು ತಾಮ್ರದ ಯಜ್ಞವೇದಿಯನ್ನು ಮಾಡಿಸಿದನು. ಅದರ ಉದ್ದ ಇಪ್ಪತ್ತು ಮೊಳ, ಅಗಲ ಇಪ್ಪತ್ತು ಮೊಳ, ಎತ್ತರ ಹತ್ತು ಮೊಳ. 2 ಅನಂತರ ಅವನು ಸಮುದ್ರವೆನಿಸಿಕೊಳ್ಳುವ ಒಂದು ಎರಕದ ಪಾತ್ರೆಯನ್ನು ಮಾಡಿಸಿದನು. ಅದರ ಬಾಯಿ ಚಕ್ರಾಕಾರವಾಗಿಯೂ ಅಂಚಿನಿಂದ ಅಂಚಿಗೆ ಹತ್ತು ಮೊಳವಾಗಿಯೂ ಇತ್ತು. ಅದರ ಎತ್ತರ ಐದು ಮೊಳ, ಸುತ್ತಳತೆ ಮೂವತ್ತು ಮೊಳ. 3 ಅದನ್ನು ಎರಕಹೊಯ್ಯುವಾಗ ಅದರ [ಅಂಚಿನ] ಕೆಳಗೆ ಸುತ್ತಲೂ ಮೊಳಕ್ಕೆ ಹತ್ತರಂತೆ ಹೋರಿಗಳ ಚಿತ್ರಗಳನ್ನು ಎರಡು ಸಾಲಾಗಿ ಎರಕ ಹೊಯ್ಸಿದನು. 4 ಹನ್ನೆರಡು ಎರಕದ ಹೋರಿಗಳು ಅದನ್ನು ಹೊತ್ತಿದ್ದವು. ಅವುಗಳಲ್ಲಿ ಮೂರು ಉತ್ತರ ದಿಕ್ಕಿಗೂ ಮೂರು ಪಶ್ಚಿಮದಿಕ್ಕಿಗೂ ಮೂರು ದಕ್ಷಿಣ ದಿಕ್ಕಿಗೂ ಮೂರು ಪೂರ್ವದಿಕ್ಕಿಗೂ ಮುಖ ಮಾಡಿಕೊಂಡಿದ್ದವು. ಸಮುದ್ರವು ಅವುಗಳ ಬೆನ್ನಿನ ಮೇಲಿತ್ತು. 5 ಅವುಗಳ ಹಿಂಭಾಗವು ಒಳಗಡೆಗಿತ್ತು. ಪಾತ್ರೆಯು ನಾಲ್ಕು ಬೆರಳು ದಪ್ಪವಾಗಿತ್ತು. ಅದರ ಅಂಚು ಕಮಲಾಕಾರದ ಬಟ್ಟಲನ್ನು ಹೋಲುತ್ತಿತ್ತು. ಅದು ಮೂರು ಸಾವಿರ ಬತ್ ನೀರನ್ನು ಹಿಡಿಯುವದು. 6 ಇದಲ್ಲದೆ ಅವನು ಹತ್ತು ಗಂಗಾಳಗಳನ್ನು ಮಾಡಿಸಿ ಸರ್ವಾಂಗಹೋಮಸಮರ್ಪಣೆಯ ಸಾಮಾನು ತೊಳೆದು ಶುದ್ಧಮಾಡುವದಕ್ಕಾಗಿ ಐದನ್ನು ಬಲಗಡೆಯಲ್ಲಿಯೂ ಐದನ್ನು ಎಡಗಡೆಯಲ್ಲಿಯೂ ಇಡಿಸಿದನು; ಸಮುದ್ರವೆನಿಸಿಕೊಳ್ಳುವ ಪಾತ್ರೆಯು ಯಾಜಕರ ಸ್ನಾನಕ್ಕಾಗಿ ಇತ್ತು. 7 ಮತ್ತು ನೇಮಕವಾದ ಮಾದರಿಯಂತೆ ಬಂಗಾರದ ಹತ್ತು ದೀಪಸ್ತಂಭಗಳನ್ನು ಮಾಡಿಸಿ ಐದನ್ನು ದೇವಾಲಯದೊಳಗೆ ಬಲಗಡೆಯಲ್ಲಿಯೂ ಐದನ್ನು ಎಡಗಡೆಯಲ್ಲಿಯೂ ಇಡಿಸಿದನು. 8 ಹತ್ತು ಮೇಜುಗಳನ್ನು ಮಾಡಿಸಿ ದೇವಾಲಯದೊಳಗೆ ಬಲಗಡೆಯಲ್ಲಿ ಐದನ್ನೂ ಎಡಗಡೆಯಲ್ಲಿ ಐದನ್ನೂ ಇಡಿಸಿ ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು. 9 ಇದಲ್ಲದೆ ಯಾಜಕರ ಪ್ರಾಕಾರವನ್ನೂ ಮಹಾಪ್ರಾಕಾರವನ್ನೂ ಮಹಾಪ್ರಾಕಾರಕ್ಕೆ ಬಾಗಲುಗಳನ್ನೂ ಮಾಡಿಸಿದನು; ಅವುಗಳ ಕದಗಳನ್ನು ತಾಮ್ರದ ತಗಡಿನಿಂದ ಹೊದಿಸಿದನು. 10 ಸಮುದ್ರವೆನಿಸಿಕೊಳ್ಳುವ ಪಾತ್ರೆಯನ್ನು [ದೇವಾಲಯದ] ಬಲಗಡೆಯಲ್ಲಿ ಅಂದರೆ ಪ್ರಾಕಾರದ ಆಗ್ನೇಯ ದಿಕ್ಕಿನಲ್ಲಿ ಇರಿಸಿದನು. 11 ಇದಲ್ಲದೆ ಹೂರಾಮನು ಹಂಡೆಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಮಾಡಿದನು. ಹೂರಾಮನು ಸೊಲೊಮೋನನ ಅಪ್ಪಣೆಯಂತೆ ದೇವಾಲಯಕ್ಕೋಸ್ಕರ ಮಾಡಿದ ಸಾಮಾನುಗಳು ಯಾವವಂದರೆ - 12 ಎರಡು ಕಂಬಗಳು, ಅವುಗಳ ಮೇಲಣ ಕುಂಭಾಕಾರದ ಎರಡು ತಲೆಗಳು, ಕುಂಭಗಳ ಮೇಲೆ ಹಾಕುವದಕ್ಕೋಸ್ಕರ ಎರಡು ಜಾಲರಿಗಳು, 13 ಕಂಬಗಳ ತುದಿಯಲ್ಲಿರುವ ಕುಂಭಗಳ ಜಾಲರಿಗಳ ಮೇಲೆ ಎರಡೆರಡು ಸಾಲಾಗಿ ಸಿಕ್ಕಿಸುವದಕ್ಕೋಸ್ಕರ ತಾಮ್ರದ ನಾನೂರು ದಾಳಿಂಬದ ಹಣ್ಣುಗಳು, 14 ಪೀಠಗಳು, ಅವುಗಳ ಮೇಲಣ ಗಂಗಾಳಗಳು, 15 ಸಮುದ್ರವೆನಿಸಿಕೊಳ್ಳುವ ಪಾತ್ರೆಯು, ಅದನ್ನು ಹೊರುವ ಹನ್ನೆರಡು ಎರಕದ ಹೋರಿಗಳು, ಹಂಡೆ, ಸಲಿಕೆ, ಮುಳ್ಳು ಇವೇ. 16 ಹೂರಾಮಾಬೀವನು ಅರಸನಾದ ಸೊಲೊಮೋನನ ಅಪ್ಪಣೆಯ ಮೇರೆಗೆ ಯೆಹೋವನ ಆಲಯಕ್ಕೋಸ್ಕರ ಅದರ ಎಲ್ಲಾ ಸಾಮಾನುಗಳನ್ನು ಒಪ್ಪಹಾಕಿದ ತಾಮ್ರದಿಂದ ಮಾಡಿ ತೀರಿಸಿದನು. 17 ಅರಸನು ಯೊರ್ದನ್ ತಗ್ಗಿನಲ್ಲಿ ಸುಕ್ಕೋತಿಗೂ ಚೆರೇದಕ್ಕೂ ಮಧ್ಯದಲ್ಲಿರುವ ಮಣ್ಣುನೆಲದಲ್ಲಿ ಎರಕ ಹೊಯ್ಸಿದನು. 18 ಸೊಲೊಮೋನನು ಮಾಡಿಸಿದ ಸಾಮಾನುಗಳು ಅನೇಕವಾಗಿದ್ದದರಿಂದ ಅವುಗಳ ತಾಮ್ರದ ತೂಕ ಎಷ್ಟೆಂಬದು ಗೊತ್ತಾಗದೆ ಹೋಯಿತು. 19 ಅವನು ದೇವಾಲಯಕ್ಕೋಸ್ಕರ ಮಾಡಿಸಿದ ಒಳಗಿನ ಸಾಮಾನುಗಳು ಯಾವವಂದರೆ - ಬಂಗಾರದ ಧೂಪವೇದಿ, ನೈವೇದ್ಯವಾದ ರೊಟ್ಟಿಗಳನ್ನಿಡತಕ್ಕ ಮೇಜುಗಳು, 20 ನಿಯಮದ ಪ್ರಕಾರ ಮಹಾಪರಿಶುದ್ಧಸ್ಥಳದ ಮುಂದೆ ಉರಿಯುತ್ತಿರುವದಕ್ಕಾಗಿ ಪುಷ್ಪಾಲಂಕಾರವುಳ್ಳ ಬಂಗಾರದ ದೀಪಸ್ತಂಭಗಳು, 21 ಉತ್ಕೃಷ್ಟವಾದ ಬಂಗಾರದಿಂದ ಮಾಡಿದ ಅವುಗಳ ಹಣತೆ, ತಂಡಸ, 22 ಚೊಕ್ಕಬಂಗಾರದ ಕತ್ತರಿ, ಬೋಗುಣಿ, ಧೂಪಾರತಿ, ಅಗ್ಗಿಷ್ಟಿಗೆ, ದೇವಾಲಯದ ಮಹಾಪರಿಶುದ್ಧಸ್ಥಳದೊಳಗಣ ಬಾಗಲಿನ ಬಂಗಾರಕದಗಳು, ಪರಿಶುದ್ಧಸ್ಥಳದ ಬಂಗಾರ ಕದಗಳು ಇವೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India