Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೂರ್ವಕಾಲ ವೃತ್ತಾಂತ 32 - ಕನ್ನಡ ಸತ್ಯವೇದವು J.V. (BSI)


ಹಿಜ್ಕೀಯನೂ ಅರಸನಾದ ಸನ್ಹೇರೀಬನೂ

1 ಈ ಭಕ್ತಿಕಾರ್ಯಗಳಾದನಂತರ ಅಶ್ಶೂರದ ಅರಸನಾದ ಸನ್ಹೇರೀಬನು ಯುದ್ಧಕ್ಕೆ ಹೊರಟು ಯೆಹೂದದಲ್ಲಿ ನುಗ್ಗಿ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳಬೇಕೆಂದು ಅವುಗಳಿಗೆ ಮುತ್ತಿಗೆಹಾಕಿದನು.

2 ದೇಶದೊಳಗೆ ನುಗ್ಗಿದ ಸನ್ಹೇರೀಬನು ಯೆರೂಸಲೇವಿುನ ಮೇಲೆಯೂ ಯುದ್ಧಕ್ಕಾಗಿ ಬರಬೇಕೆಂದಿರುವದು ಹಿಜ್ಕೀಯನಿಗೆ ಗೊತ್ತಾಗಲು

3 ಅವನು ಪಟ್ಟಣದ ಹೊರಗಿರುವ ಎಲ್ಲಾ ಬಾವಿಗಳನ್ನು ಮುಚ್ಚಿಸಬೇಕೆಂದು ಮನಸ್ಸುಮಾಡಿ ತನ್ನ ಸರದಾರರ ಮತ್ತು ಶೂರರ ಮುಂದೆ ಆ ಪ್ರಸ್ತಾಪವನ್ನಿಟ್ಟು ಅವರ ಸಹಾಯವನ್ನು ಪಡಕೊಂಡನು.

4 ಆಗ ಅನೇಕರು ಸೇರಿ - ಇಲ್ಲಿಗೆ ಬರುವ ಅಶ್ಶೂರದ ರಾಜರಿಗೆ ಬೇಕಾದಷ್ಟು ನೀರು ಯಾಕೆ ಸಿಕ್ಕಬೇಕು ಎಂದುಕೊಂಡು ಎಲ್ಲಾ ಬಾವಿಗಳನ್ನೂ ದೇಶಮಧ್ಯದಲ್ಲಿ ಹರಿಯುವ ಹಳ್ಳವನ್ನೂ ಮುಚ್ಚಿಬಿಟ್ಟರು.

5 ಇದಲ್ಲದೆ ಅರಸನು ಧೈರ್ಯಗೊಂಡು ಅಲ್ಲಲ್ಲಿ ಬಿದ್ದುಹೋದ ಪೌಳಿಗೋಡೆಯನ್ನು ಜೀರ್ಣೋದ್ಧಾರಮಾಡಿಸಿ ಅದರ ಮೇಲೆ ಬುರುಜುಗಳನ್ನೂ ಹೊರಗೆ ಇನ್ನೊಂದು ಗೋಡೆಯನ್ನೂ ಕಟ್ಟಿಸಿ ದಾವೀದ ನಗರದ ವಿುಲ್ಲೋಕೋಟೆಯನ್ನು ಭದ್ರಪಡಿಸಿ ಅನೇಕಾಯುಧಗಳನ್ನೂ ಗುರಾಣಿಗಳನ್ನೂ ಮಾಡಿಸಿದನು.

6 ಅನಂತರ ಅವನು ಜನರ ಮೇಲೆ ಸೇನಾಪತಿಗಳನ್ನು ನೇವಿುಸಿ ಅವರನ್ನು ಊರುಬಾಗಲಿನ ಬೈಲಿನಲ್ಲಿ ಕೂಡಿಸಿಕೊಂಡು ಅವರಿಗೆ -

7 ಶೂರರಾಗಿರಿ, ಧೈರ್ಯದಿಂದಿರಿ; ಅಶ್ಶೂರದ ಅರಸನಿಗೂ ಅವನೊಂದಿಗಿರುವ ಆ ದೊಡ್ಡ ಗುಂಪಿಗೂ ಅಂಜಬೇಡಿರಿ, ಕಳವಳಪಡಬೇಡಿರಿ. ಅವನಿಗಿರುವ ಸಹಾಯಕ್ಕಿಂತ ನಮಗಿರುವ ಸಹಾಯವು ದೊಡ್ಡದು.

8 ಅವನಿಗಿರುವ ಸಹಾಯವು ಮಾಂಸದ ತೋಳು; ನಮಗಾದರೋ ನಮ್ಮ ದೇವರಾದ ಯೆಹೋವನೇ. ಆತನು ನಮಗೆ ನೆರವಾಗಿ ಯುದ್ಧಗಳಲ್ಲಿ ನಮಗೋಸ್ಕರ ಕಾದಾಡುವನು ಎಂದು ಹೇಳಿ ಧೈರ್ಯಪಡಿಸಿದನು. ಜನರು ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳನ್ನು ಕೇಳಿ ಭರವಸವುಳ್ಳವರಾದರು.

9 ಇದಾದ ಮೇಲೆ ಸರ್ವಸೇನೆಯೊಡನೆ ಲಾಕೀಷಿನ ಎದುರಿನಲ್ಲಿ ಪಾಳೆಯಮಾಡಿಕೊಂಡಿದ್ದ ಅಶ್ಶೂರದ ಅರಸನಾದ ಸನ್ಹೇರೀಬನು ತನ್ನ ಸೇವಕರನ್ನು ಯೆರೂಸಲೇವಿುಗೆ ಕಳುಹಿಸಿ ಅವರಿಂದ ಯೆಹೂದದ ಅರಸನಾದ ಹಿಜ್ಕೀಯನಿಗೂ ಯೆರೂಸಲೇವಿುನಲ್ಲಿದ್ದ ಎಲ್ಲಾ ಯೆಹೂದ್ಯರಿಗೂ -

10 ಅಶ್ಶೂರದ ಅರಸನಾದ ಸನ್ಹೇರೀಬನ ಮಾತನ್ನು ಕೇಳಿರಿ. ನೀವು ಯಾವದರ ಮೇಲೆ ಭರವಸವಿಟ್ಟು ಮುತ್ತಲ್ಪಡುವದಕ್ಕಿರುವ ಯೆರೂಸಲೇವಿುನಲ್ಲಿ ನಿಂತಿದ್ದೀರಿ?

11 ಹಿಜ್ಕೀಯನು - ನಮ್ಮ ದೇವರಾದ ಯೆಹೋವನು ಅಶ್ಶೂರದ ಅರಸನ ಕೈಯಿಂದ ನಮ್ಮನ್ನು ರಕ್ಷಿಸುವನು ಎಂಬ ನಂಬಿಕೆಯನ್ನು ನಿಮ್ಮಲ್ಲಿ ಹುಟ್ಟಿಸುವದಕ್ಕೆ ಪ್ರಯತ್ನಿಸುತ್ತಿರುವದು ನಿಮ್ಮನ್ನು ಹಸಿವೆ ನೀರಡಿಕೆಗಳಿಂದ ಸಾಯಿಸುವದಕ್ಕೇ ಅಲ್ಲವೋ?

12 ಆ ಹಿಜ್ಕೀಯನು ಒಂದೇ ಯಜ್ಞವೇದಿಯ ಮುಂದೆ ಆರಾಧನೆಮಾಡಿ ಅದರ ಮೇಲೆಯೇ ಧೂಪಹಾಕಬೇಕೆಂಬದಾಗಿ ಯೆಹೂದ್ಯರಿಗೂ ಯೆರೂಸಲೇವಿುನವರಿಗೂ ಆಜ್ಞಾಪಿಸಿ ಆತನ ಪೂಜಾಸ್ಥಳಗಳನ್ನೂ ಯಜ್ಞವೇದಿಗಳನ್ನೂ ಹಾಳುಮಾಡಿದನಲ್ಲಾ!

13 ನಾನೂ ನನ್ನ ತಂದೆತಾತಂದಿರೂ ಎಲ್ಲಾ ದೇಶಗಳ ಜನಾಂಗಗಳಿಗೆ ಮಾಡಿದ್ದನ್ನು ಕೇಳಲಿಲ್ಲವೋ? ಆ ಜನಾಂಗಗಳ ದೇವತೆಗಳಿಗೆ ಅವರ ದೇಶವನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸುವದಕ್ಕೆ ಶಕ್ತಿಯಿತ್ತೋ?

14 ನನ್ನ ತಂದೆತಾತಂದಿರು ನಾಶಮಾಡಿಬಿಟ್ಟ ಆ ಜನಾಂಗಗಳ ದೇವರುಗಳಲ್ಲಿ ಯಾವನು ತನ್ನ ಪ್ರಜೆಯನ್ನು ನನ್ನ ಕೈಯಿಂದ ಬಿಡಿಸುವದಕ್ಕೆ ಸಮರ್ಥನಾಗಿದ್ದನು? ಹಾಗಾದರೆ ನಿಮ್ಮ ದೇವರು ನಿಮ್ಮನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಿ ಕಾಪಾಡುವದಕ್ಕೆ ಶಕ್ತನಾಗಿರುವನೋ?

15 ನೀವು ಹಿಜ್ಕೀಯನಿಂದ ಮರುಳಾಗಿ ಈ ಪ್ರಕಾರ ಮೋಸಹೋಗಬೇಡಿರಿ. ಅವನನ್ನು ನಂಬಲೂಬೇಡಿರಿ. ಯಾವ ರಾಜ್ಯ ಜನಾಂಗಗಳ ದೇವತೆಯಾದರೂ ತನ್ನ ಪ್ರಜೆಯನ್ನು ನನ್ನ ಮತ್ತು ನನ್ನ ಪೂರ್ವಿಕರ ಕೈಯಿಂದ ಬಿಡಿಸಲಾರದೆ ಹೋದ ಮೇಲೆ ನಿಮ್ಮ ದೇವರಂಥವನು ನಿಮ್ಮನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಬಲ್ಲನೇ ಎಂದು ಹೇಳಿಸಿದನು.

16 ಸನ್ಹೇರೀಬನು ದೇವರಾದ ಯೆಹೋವನಿಗೂ ಆತನ ಸೇವಕನಾದ ಹಿಜ್ಕೀಯನಿಗೂ ವಿರೋಧವಾದ ಈ ಮೊದಲಾದ ಮಾತುಗಳನ್ನು ತನ್ನ ಸೇವಕರ ಮುಖಾಂತರ ಹೇಳಿ ಕಳುಹಿಸಿದ್ದಲ್ಲದೆ

17 ಇಸ್ರಾಯೇಲ್ ದೇವರಾದ ಯೆಹೋವನನ್ನು ನಿಂದಿಸಿ ದೂಷಿಸುವದಕ್ಕಾಗಿ - ಅನ್ಯದೇಶಗಳವರ ದೇವರುಗಳು ತಮ್ಮ ಜನರನ್ನು ನನ್ನ ಕೈಯಿಂದ ಬಿಡಿಸಲಾರದೆ ಹೋದಂತೆ ಹಿಜ್ಕೀಯನ ದೇವರೂ ತನ್ನ ಪ್ರಜೆಯನ್ನು ನನ್ನ ಕೈಯಿಂದ ಬಿಡಿಸಲಾರನು ಎಂಬದಾಗಿ ಪತ್ರದಲ್ಲಿ ಬರೆದು ಕಳುಹಿಸಿದನು.

18 [ಯೆರೂಸಲೇವಿುಗೆ ಬಂದ ಆ ಅಶ್ಶೂರ್ಯರು] ಗೋಡೆಯ ಮೇಲಿದ್ದ ಜನರನ್ನು ಬೆದರಿಸಿ ಅಂಜಿಸಿ ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳುವದಕ್ಕಾಗಿ

19 ಯೆರೂಸಲೇವಿುನ ದೇವರು ಮನುಷ್ಯರ ಕೈಕೆಲಸವಾಗಿರುವ ಅನ್ಯದೇಶಗಳವರ ದೇವತೆಗಳಿಗೆ ಸಮಾನನಾಗಿರುವನೋ ಎಂಬಂತೆ ಆತನ ವಿಷಯದಲ್ಲಿ ಗಟ್ಟಿಯಾಗಿ ಕೂಗುತ್ತಾ ಅವರೊಡನೆ ಯೂದಾಯ ಭಾಷೆಯಲ್ಲಿ ಮಾತಾಡಿದರು.

20 ಈ ಕಾರಣದಿಂದ ಅರಸನಾದ ಹಿಜ್ಕೀಯನೂ ಆಮೋಚನ ಮಗನಾದ ಯೆಶಾಯನೆಂಬ ಪ್ರವಾದಿಯೂ ಪರಲೋಕಕ್ಕೆ ಮೊರೆಯಿಟ್ಟು ಪ್ರಾರ್ಥಿಸಲು

21 ಯೆಹೋವನು ದೂತನನ್ನು ಕಳುಹಿಸಿ ಅಶ್ಶೂರದ ಅರಸನ ದಂಡಿನಲ್ಲಿದ್ದ ಎಲ್ಲಾ ಶೂರರನ್ನೂ ನಾಯಕರನ್ನೂ ಅಧಿಪತಿಗಳನ್ನೂ ಸಂಹರಿಸಿದನು; ಅರಸನು ನಾಚಿಕೆಯಿಂದ ತನ್ನ ದೇಶಕ್ಕೆ ಹಿಂದಿರುಗಬೇಕಾಯಿತು. ಅಲ್ಲಿ ಅವನು ತನ್ನ ದೇವರ ಗುಡಿಗೆ ಹೋಗಿದ್ದಾಗ ಅವನ ಸ್ವಂತ ಮಕ್ಕಳೇ ಅವನನ್ನು ಕತ್ತಿಯಿಂದ ಕೊಂದರು.

22 ಹೀಗೆ ಯೆಹೋವನು ಹಿಜ್ಕೀಯನನ್ನೂ ಯೆರೂಸಲೇವಿುನವರನ್ನೂ ಅಶ್ಶೂರದ ಅರಸನಾದ ಸನ್ಹೇರೀಬನ ಕೈಗೂ ಸುತ್ತಣ ಎಲ್ಲಾ ಶತ್ರುಗಳ ಕೈಗೂ ಸಿಕ್ಕದಂತೆ ತಪ್ಪಿಸಿ ಕಾಪಾಡುತ್ತಿದ್ದನು.

23 ಅನೇಕರು ಯೆಹೋವನಿಗೋಸ್ಕರ ಕಾಣಿಕೆಗಳನ್ನೂ ಯೆಹೂದ್ಯರ ಅರಸನಾದ ಹಿಜ್ಕೀಯನಿಗೋಸ್ಕರ ಶ್ರೇಷ್ಠ ವಸ್ತುಗಳನ್ನೂ ತೆಗೆದುಕೊಂಡು ಬಂದರು. ಅಂದಿನಿಂದ ಎಲ್ಲಾ ಜನಾಂಗಗಳವರು ಹಿಜ್ಕೀಯನನ್ನು ಬಲು ದೊಡ್ಡವನೆಂದು ಎಣಿಸುತ್ತಿದ್ದರು.


ಹಿಜ್ಕೀಯನ ಚರಿತ್ರದ ಸಮಾಪ್ತಿ

24 ಆ ಕಾಲದಲ್ಲಿ ಹಿಜ್ಕೀಯನು ಮರಣಕರ ರೋಗದಲ್ಲಿ ಬಿದ್ದನು. ಆಗ ಅವನು ದೇವರನ್ನು ಪ್ರಾರ್ಥಿಸಲು ಆತನು ಸದುತ್ತರವನ್ನು ದಯಪಾಲಿಸಿ ಅವನಿಗೆ ಒಂದು ಗುರುತನ್ನು ಅನುಗ್ರಹಿಸಿದನು.

25 ಆದರೆ ಹಿಜ್ಕೀಯನು ಈ ಉಪಕಾರಕ್ಕೆ ತಕ್ಕಂತೆ ನಡೆಯದೆ ಅಹಂಕಾರಿಯಾದದರಿಂದ ಯೆಹೂದದ ಮೇಲೆಯೂ ಯೆರೂಸಲೇವಿುನ ಮೇಲೆಯೂ ದೇವಕೋಪವುಂಟಾಯಿತು.

26 ಹಿಜ್ಕೀಯನು ತನ್ನ ಗರ್ವವನ್ನು ಬಿಟ್ಟು ಯೆರೂಸಲೇವಿುನವರೊಡನೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ಅವನ ಜೀವಮಾನದಲ್ಲಿ ಯೆಹೋವನ ಕೋಪವು ಅವರ ಮೇಲೆ ಬರಲಿಲ್ಲ.

27 ಹಿಜ್ಕೀಯನಿಗೆ ಅತ್ಯಧಿಕವಾದ ಧನ ಘನತೆಗಳು ಒದಗಿದವು; ಅವನು ಬೆಳ್ಳಿ ಬಂಗಾರ, ರತ್ನ, ಪರಿಮಳ ದ್ರವ್ಯ, ಗುರಾಣಿ ಮುಂತಾದ ಶ್ರೇಷ್ಠಾಯುಧ ಇವುಗಳನ್ನಿಡುವದಕ್ಕೋಸ್ಕರ ಭಂಡಾರಗಳನ್ನೂ ಧಾನ್ಯ ದ್ರಾಕ್ಷಾರಸ ಎಣ್ಣೆ ಇವುಗಳನ್ನು ಸಂಗ್ರಹಿಸುವದಕ್ಕೋಸ್ಕರ ಉಗ್ರಾಣಗಳನ್ನೂ

28 ಆಯಾ ಜಾತಿಯ ಪಶುಗಳಿಗೋಸ್ಕರ ಕೊಟ್ಟಿಗೆಗಳನ್ನೂ ಆಡುಕುರಿಗಳಿಗೋಸ್ಕರ ಹಟ್ಟಿಗಳನ್ನೂ ಸಿದ್ಧಮಾಡಿಸಿಕೊಂಡನು.

29 ಇದಲ್ಲದೆ ಪಟ್ಟಣಗಳನ್ನು ಕಟ್ಟಿಸಿ ದನಕುರಿಗಳ ದೊಡ್ಡ ಹಿಂಡುಗಳನ್ನು ಸಂಪಾದಿಸಿಕೊಂಡನು. ದೇವರು ಅವನಿಗೆ ಕೊಟ್ಟ ಸಂಪತ್ತು ಅಪರಿವಿುತವಾದದ್ದು.

30 ಮೇಲಣ ಗೀಹೋನ್ ಎಂಬ ಬುಗ್ಗೆಗೆ ಕಟ್ಟೆಕಟ್ಟಿಸಿ ಅದರ ನೀರು ನೆಟ್ಟಗೆ ದಾವೀದನಗರದ ಪಡುವಣ ತಗ್ಗಿಗೆ ಹರಿಯುವಂತೆ ಮಾಡಿದವನು ಹಿಜ್ಕೀಯನೇ. ಅವನು ತನ್ನ ಎಲ್ಲಾ ಕಾರ್ಯಗಳಲ್ಲಿಯೂ ಸಾರ್ಥಕನಾದನು.

31 ಆದದರಿಂದ ಅವನ ದೇಶದಲ್ಲುಂಟಾದ ಅದ್ಭುತದ ವಿಷಯವನ್ನು ವಿಚಾರಿಸುವದಕ್ಕಾಗಿ ಬಾಬೆಲಿನ ಪ್ರಭುಗಳ ರಾಯಭಾರಿಗಳು ಅವನ ಬಳಿಗೆ ಬಂದಾಗ ದೇವರು ಅವನನ್ನು ಪರೀಕ್ಷಿಸುವದಕ್ಕೂ ಅವನ ಸರ್ವಾಂತರ್ಯವನ್ನು ತಿಳುಕೊಳ್ಳುವದಕ್ಕೂ ಅವನನ್ನು ಕೈಬಿಟ್ಟನು.

32 ಹಿಜ್ಕೀಯನ ಉಳಿದ ಚರಿತ್ರೆಯೂ ಅವನ ಭಕ್ತಿಕಾರ್ಯಗಳೂ ಆಮೋಚನ ಮಗನಾದ ಯೆಶಾಯನ ದರ್ಶನಗ್ರಂಥದಲ್ಲಿಯೂ ಯೆಹೂದ್ಯರ ಮತ್ತು ಇಸ್ರಾಯೇಲ್ಯರ ರಾಜಗ್ರಂಥದಲ್ಲಿಯೂ ಬರೆದಿರುತ್ತವೆ.

33 ಹಿಜ್ಕೀಯನು ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ದಾವೀದವಂಶದವರ ಕುಟುಂಬಶ್ಮಶಾನ ಭೂವಿುಯ ದಿಬ್ಬದ ಮೇಲೆ ಸಮಾಧಿಮಾಡಿದರು. ಅವನ ಉತ್ತರಕ್ರಿಯೆ ನಡೆಯುವಾಗ ಎಲ್ಲಾ ಯೆಹೂದ್ಯರೂ ಯೆರೂಸಲೇವಿುನವರೂ ಅವನನ್ನು ಬಹಳವಾಗಿ ಸನ್ಮಾನಿಸಿದರು. ಅವನಿಗೆ ಬದಲಾಗಿ ಅವನ ಮಗನಾದ ಮನಸ್ಸೆಯು ಅರಸನಾದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು