Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೂರ್ವಕಾಲ ವೃತ್ತಾಂತ 30 - ಕನ್ನಡ ಸತ್ಯವೇದವು J.V. (BSI)


ಹಿಜ್ಕೀಯನ ಪ್ರೇರಣೆಯಿಂದ ಇಸ್ರಾಯೇಲ್ಯರು ಪಸ್ಕವನ್ನಾಚರಿಸಿದ್ದು

1 ತರುವಾಯ ಹಿಜ್ಕೀಯನು - ಇಸ್ರಾಯೇಲ್ ದೇವರಾದ ಯೆಹೋವನ ಪಸ್ಕವನ್ನಾಚರಿಸುವದಕ್ಕಾಗಿ ಯೆರೂಸಲೇವಿುನಲ್ಲಿರುವ ಯೆಹೋವನ ಆಲಯಕ್ಕೆ ಬರಬೇಕೆಂದು ಎಲ್ಲಾ ಇಸ್ರಾಯೇಲ್ಯರಿಗೂ ಯೆಹೂದ್ಯರಿಗೂ ಎಫ್ರಾಯೀಮ್ಯರಿಗೂ ಮನಸ್ಸೆಯರಿಗೂ ದೂತರ ಮುಖಾಂತರವಾಗಿ ಮತ್ತು ಪತ್ರಗಳ ಮೂಲಕವಾಗಿ ತಿಳಿಯಪಡಿಸಿದನು.

2 ಯಾಜಕರಲ್ಲಿ ತಕ್ಕಷ್ಟು ಮಂದಿ ತಮ್ಮನ್ನು ಶುದ್ಧಪಡಿಸಿಕೊಂಡಿರಲಿಲ್ಲವಾದದರಿಂದಲೂ ಜನರು ಯೆರೂಸಲೇವಿುನಲ್ಲಿ ಇನ್ನೂ ಕೂಡಿರಲಿಲ್ಲವಾದದರಿಂದಲೂ ಕೂಡಲೆ ಪಸ್ಕವನ್ನು ಆಚರಿಸಲಾಗದೆಂದು ಅರಸನೂ ಅವನ ಸರದಾರರೂ ಯೆರೂಸಲೇವಿುನ ಸರ್ವಸಂಘದವರೂ ತಿಳಿದು

3 ಎರಡನೆಯ ತಿಂಗಳಿನಲ್ಲಿ ಅದನ್ನು ಆಚರಿಸಬೇಕೆಂದು ಅಭಿಪ್ರಾಯಪಟ್ಟರು.

4 ಈ ಅಭಿಪ್ರಾಯವು ಅರಸನಿಗೂ ಸರ್ವಸಮೂಹಕ್ಕೂ ಸರಿಕಂಡದರಿಂದ ಅವರು -

5 ಜನರು ಇಸ್ರಾಯೇಲ್‍ದೇವರಾದ ಯೆಹೋವನಿಗೋಸ್ಕರ ಪಸ್ಕವನ್ನಾಚರಿಸುವದಕ್ಕಾಗಿ ಯೆರೂಸಲೇವಿುಗೆ ಬರಬೇಕು ಎಂಬದಾಗಿ ಬೇರ್ಷೆಬದಿಂದ ದಾನಿನವರೆಗೂ ವಾಸಿಸುವ ಇಸ್ರಾಯೇಲ್ಯರೊಳಗೆ ಡಂಗುರಹೊಡಿಸಬೇಕೆಂದು ನಿರ್ಣಯಿಸಿದರು. ಜನರಲ್ಲಿ ಹೆಚ್ಚು ಮಂದಿ ಆವರೆಗೂ ಧರ್ಮಶಾಸ್ತ್ರವಿಧಿಯ ಮೇರೆಗೆ ಪಸ್ಕವನ್ನು ಆಚರಿಸಿರಲಿಲ್ಲ.

6 ಅರಸನ ಮತ್ತು ಅವನ ಸರದಾರರ ಪತ್ರಗಳನ್ನು ತೆಗೆದುಕೊಂಡುಹೋದ ದೂತರು ಇಸ್ರಾಯೇಲ್ ಯೆಹೂದದೇಶಗಳಲ್ಲೆಲ್ಲಾ ಸಂಚರಿಸಿ ರಾಜಾಜ್ಞೆಯಂತೆ ಪ್ರಕಟಿಸಿದ್ದೇನಂದರೆ - ಇಸ್ರಾಯೇಲ್ಯರೇ, ಅಬ್ರಹಾಮ್ ಇಸಾಕ್ ಇಸ್ರಾಯೇಲರ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ. ಆಗ ಆತನೂ ನಿಮ್ಮಲ್ಲಿ ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡು ಉಳಿದವರ ಕಡೆಗೆ ತಿರುಗಿಕೊಳ್ಳುವನು.

7 ನಿಮ್ಮ ತಂದೆಗಳೂ ಸಹೋದರರೂ ನಡೆದಂತೆ ನೀವೂ ನಡೆಯಬೇಡಿರಿ. ಅವರು ತಮ್ಮ ಪಿತೃಗಳ ದೇವರಾದ ಯೆಹೋವನಿಗೆ ವಿರೋಧವಾಗಿ ದ್ರೋಹಿಗಳಾದದರಿಂದ ಆತನು ಅವರನ್ನು ನಾಶನಕ್ಕೆ ಒಪ್ಪಿಸಿದನು. ಅದಕ್ಕೆ ನೀವೇ ಸಾಕ್ಷಿಗಳು.

8 ಈಗ ನಿಮ್ಮ ಪಿತೃಗಳಂತೆ ಆಜ್ಞೆಗೆ ಮಣಿಯದವರಾಗಿರಬೇಡಿರಿ, ಯೆಹೋವನಿಗೆ ಅಧೀನರಾಗಿರಿ. ನಿಮ್ಮ ದೇವರಾದ ಯೆಹೋವನು ಸದಾಕಾಲಕ್ಕೂ ಪ್ರತಿಷ್ಠಿಸಿಕೊಂಡ ಪವಿತ್ರಾಲಯಕ್ಕೆ ಬಂದು ಆತನನ್ನು ಸೇವಿಸಿರಿ. ಆಗ ನಿಮ್ಮ ಮೇಲಿರುವ ಆತನ ಉಗ್ರಕೋಪವು ತೊಲಗಿಹೋಗುವದು.

9 ನೀವು ಯೆಹೋವನ ಕಡೆಗೆ ತಿರುಗಿಕೊಳ್ಳುವದಾದರೆ ನಿಮ್ಮ ಸಹೋದರರೂ ಮಕ್ಕಳೂ ತಮ್ಮನ್ನು ಸೆರೆಯೊಯ್ದವರ ದೃಷ್ಟಿಯಲ್ಲಿ ದಯೆಗೆ ಪಾತ್ರರಾಗಿ ತಿರಿಗಿ ಸ್ವದೇಶಕ್ಕೆ ಬರುವರು. ನಿಮ್ಮ ದೇವರಾದ ಯೆಹೋವನು ದಯೆಯೂ ಕನಿಕರವೂ ಉಳ್ಳವನಾಗಿರುತ್ತಾನೆ. ಆತನು ತನ್ನ ಕಡೆಗೆ ತಿರುಗಿಕೊಳ್ಳುವ ನಿಮ್ಮನ್ನು ಕಟಾಕ್ಷಿಸದೆ ಇರುವದಿಲ್ಲ ಎಂಬದೇ.

10 ದೂತರು ಎಫ್ರಾಯೀಮ್ ಮನಸ್ಸೆ ಜೆಬುಲೂನ್ ಪ್ರಾಂತಗಳಲ್ಲಿ ಪಟ್ಟಣದಿಂದ ಪಟ್ಟಣಕ್ಕೆ ಹೋಗುತ್ತಿರಲು ಜನರು ಅವರನ್ನು ಕಂಡು ನಕ್ಕು ಗೇಲಿಮಾಡಿದರು.

11 ಕೆಲವು ಮಂದಿ ಆಶೇರ್ಯರೂ ಮನಸ್ಸೆಯವರೂ ಜೆಬುಲೂನ್ಯರೂ ಮಾತ್ರ ತಮ್ಮನ್ನು ತಗ್ಗಿಸಿಕೊಂಡು ಯೆರೂಸಲೇವಿುಗೆ ಬಂದರು.

12 ಯೆಹೂದ್ಯರಾದರೋ ದೇವರ ಕೃಪಾಹಸ್ತ ಪ್ರೇರಣೆಯಿಂದ ಏಕಮನಸ್ಸುಳ್ಳವರಾಗಿ ಯೆಹೋವನ ಧರ್ಮಶಾಸ್ತ್ರನುಸಾರ ಅರಸನಿಂದಲೂ ಪ್ರಭುಗಳಿಂದಲೂ ಹೊರಟ ಆಜ್ಞೆಯನ್ನು ಕೈಕೊಂಡರು.

13 ಹೀಗೆ ಅನೇಕಾನೇಕ ಜನರು ಎರಡನೆಯ ತಿಂಗಳಿನಲ್ಲಿ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನಾಚರಿಸುವದಕ್ಕಾಗಿ ಯೆರೂಸಲೇವಿುನಲ್ಲಿ ಕೂಡಿದರು; ಆ ಕೂಟವು ಮಹಾಸಮೂಹವಾಗಿತ್ತು.

14 ಅವರು ಯೆರೂಸಲೇವಿುನಲ್ಲಿದ್ದ ಯಜ್ಞವೇದಿಗಳನ್ನೂ ಎಲ್ಲಾ ಧೂಪವೇದಿಗಳನ್ನೂ ತೆಗೆದುಕೊಂಡು ಹೋಗಿ ಕಿದ್ರೋನ್‍ಹಳ್ಳದಲ್ಲಿ ಬೀಸಾಟುಬಿಟ್ಟರು.

15 ಆಮೇಲೆ ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಪಸ್ಕಹಬ್ಬಕ್ಕಾಗಿ ಕುರಿಮರಿಗಳನ್ನು ವಧಿಸಿದರು. ಯಾಜಕರೂ ಲೇವಿಯರೂ [ಮೊದಲನೆಯ ಸಾರಿ ತಪ್ಪಿದ್ದಕ್ಕಾಗಿ] ನಾಚಿಕೆಪಟ್ಟು ತಮ್ಮನ್ನು ಶುದ್ಧಿಪಡಿಸಿಕೊಂಡು ಯೆಹೋವನ ಆಲಯದಲ್ಲಿ ಸರ್ವಾಂಗಹೋಮಗಳನ್ನು ಸಮರ್ಪಿಸುತ್ತಾ

16 ತಮ್ಮ ತಮ್ಮ ಸ್ಥಳಗಳಲ್ಲಿ ನಿಂತು ದೇವರ ಮನುಷ್ಯನಾದ ಮೋಶೆಯ ಧರ್ಮಶಾಸ್ತ್ರದಿಂದ ತಮಗೆ ನೇಮಕವಾದ ಸೇವೆಯನ್ನು ಮಾಡುತ್ತಿದ್ದರು.

17 ಯಾಜಕರು ಲೇವಿಯರ ಕೈಯಿಂದ ರಕ್ತವನ್ನು ತೆಗೆದುಕೊಂಡು ಅದನ್ನು ಪ್ರೋಕ್ಷಿಸಿದರು. ಸಮೂಹದಲ್ಲಿ ಅನೇಕರು ತಮ್ಮನ್ನು ಶುದ್ಧಿಪಡಿಸಿಕೊಳ್ಳದೆ ಇದ್ದದರಿಂದ ಅಶುದ್ಧರಾದವರೆಲ್ಲರ ಯಜ್ಞಪಶುಗಳು ಯೆಹೋವನಿಗೆ ಮೀಸಲಾಗುವಂತೆ ಅವುಗಳನ್ನು ಲೇವಿಯರೇ ವಧಿಸಿದರು.

18 ಜನರಲ್ಲಿ ಅನೇಕಾನೇಕರು ಅಂದರೆ ಹೆಚ್ಚಾಗಿ ಎಫ್ರಾಯೀಮ್ ಮನಸ್ಸೆ ಇಸ್ಸಾಕಾರ್ ಜೆಬುಲೂನ್ ಪ್ರಾಂತಗಳವರು ತಮ್ಮನ್ನು ಶುದ್ಧಿಪಡಿಸಿಕೊಳ್ಳದೆ ಧರ್ಮಶಾಸ್ತ್ರಕ್ಕೆ ವಿರುದ್ಧವಾದ ರೀತಿಯಿಂದ ಪಸ್ಕಭೋಜನವನ್ನು ಮಾಡಿದರು. ಆದರೆ ಹಿಜ್ಕೀಯನು - ಯೆಹೋವನೇ, ದಯಾಪರನಾದ ದೇವರೇ, ದೇವಾಲಯಯಾತ್ರಿಕರಿಗಿರಬೇಕಾದ ಪರಿಶುದ್ಧತ್ವವು ಅನೇಕರಲ್ಲಿ ಇಲ್ಲದಿದ್ದರೂ

19 ಪಿತೃಗಳ ದೇವರಾದ ನಿನ್ನನ್ನು ಹುಡುಕಬೇಕೆಂದು ಮನಸ್ಸು ಮಾಡಿರುವವರಿಗೆಲ್ಲಾ ಕ್ಷಮೆಯನ್ನು ಅನುಗ್ರಹಿಸು ಎಂದು ವಿಜ್ಞಾಪನೆ ಮಾಡಿದ್ದರಿಂದ

20 ಯೆಹೋವನು ಹಿಜ್ಕೀಯನ ಪ್ರಾರ್ಥನೆಯನ್ನು ಲಾಲಿಸಿ ಜನರನ್ನು ಸ್ವಸ್ಥಗೊಳಿಸಿದನು.

21 ಯೆರೂಸಲೇವಿುನಲ್ಲಿ ಕೂಡಿಬಂದ ಇಸ್ರಾಯೇಲ್ಯರು ಏಳು ದಿನಗಳವರೆಗೂ ಮಹಾ ಸಂತೋಷದಿಂದ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸುತ್ತಾ ಇದ್ದರು. ಲೇವಿಯರೂ ಯಾಜಕರೂ ಮಹಾವಾದ್ಯದೊಡನೆ ಯೆಹೋವನನ್ನು ಪ್ರತಿದಿನವೂ ಕೀರ್ತಿಸುತ್ತಾ ಇದ್ದರು.

22 ಹಿಜ್ಕೀಯನು ಯೆಹೋವನ [ಭಜನೆಯಲ್ಲಿ] ಗಟ್ಟಿಗರಾಗಿದ್ದ ಎಲ್ಲಾ ಲೇವಿಯರೊಡನೆ ಪ್ರೀತಿಯಿಂದ ಮಾತಾಡಿದನು. ನೇಮಕವಾದ ಏಳು ದಿವಸಗಳವರೆಗೂ ಜನರು ಸಮಾಧಾನಯಜ್ಞಗಳನ್ನರ್ಪಿಸುತ್ತಾ ತಮ್ಮ ಪಿತೃಗಳ ದೇವರಾದ ಯೆಹೋವನನ್ನು ತಮ್ಮ ದೇವರೆಂದು ಕೊಂಡಾಡುತ್ತಾ ಔತಣ ಮಾಡಿದರು.

23 ಯೆಹೂದದ ಅರಸನಾದ ಹಿಜ್ಕೀಯನು ಸಾವಿರ ಹೋರಿಗಳನ್ನೂ ಏಳು ಸಾವಿರ ಕುರಿಗಳನ್ನೂ ಪ್ರಭುಗಳು ಸಾವಿರ ಹೋರಿಗಳನ್ನೂ ಹತ್ತು ಸಾವಿರ ಕುರಿಗಳನ್ನೂ ತಮಗೆ ಯಜ್ಞಕ್ಕಾಗಿ ದಾನಮಾಡಿದ್ದರಿಂದಲೂ ಯಾಜಕರಲ್ಲಿ ಬಹು ಮಂದಿ ತಮ್ಮನ್ನು ಶುದ್ಧಿಪಡಿಸಿಕೊಂಡಿದ್ದರಿಂದಲೂ

24 ಸಮೂಹದವರು ಇನ್ನೂ ಏಳು ದಿವಸ ಹಬ್ಬಮಾಡಬೇಕೆಂದು ಗೊತ್ತುಮಾಡಿಕೊಂಡು ಆ ಏಳು ದಿನಗಳಲ್ಲಿಯೂ ಬಹಳವಾಗಿ ಸಂತೋಷದಿಂದ ಹಬ್ಬವನ್ನು ಆಚರಿಸಿದರು.

25 ಯೆಹೂದ್ಯರ ಸರ್ವಸಮೂಹದವರೂ ಯಾಜಕರೂ ಲೇವಿಯರೂ ಇಸ್ರಾಯೇಲ್‍ಪ್ರಾಂತಗಳಿಂದ ನೆರೆದುಬಂದವರೆಲ್ಲರೂ ಇಸ್ರಾಯೇಲ್ ಯೆಹೂದ ಪ್ರಾಂತಗಳಲ್ಲಿದ್ದ ಪ್ರವಾಸಿಗಳೂ ಈ ಉತ್ಸವದಲ್ಲಿ ಪಾಲುಗಾರರಾಗಿದ್ದರು.

26 ದಾವೀದನ ಮಗನೂ ಇಸ್ರಾಯೇಲ್ಯರ ಅರಸನೂ ಆದ ಸೊಲೊಮೋನನ ಕಾಲದಿಂದ ಯೆರೂಸಲೇವಿುನಲ್ಲಿ ಅಂಥ ಉತ್ಸವವು ನಡೆದಿರಲಿಲ್ಲವಾದದರಿಂದ ಯೆರೂಸಲೇವಿುನಲ್ಲಿ ಬಹುಸಂತೋಷವುಂಟಾಯಿತು.

27 ಆಮೇಲೆ ಯಾಜಕರಾಗಿದ್ದ ಲೇವಿಯರು ಎದ್ದು ನಿಂತು ಜನರನ್ನು ಆಶೀರ್ವದಿಸಿದರು. ಅವರ ಸ್ವರವು [ದೇವರಿಗೆ] ಕೇಳಿಸಿತು; ಅವರ ಪ್ರಾರ್ಥನೆಯು ಪರಲೋಕದಲ್ಲಿರುವ ಆತನ ಪರಿಶುದ್ಧ ನಿವಾಸಕ್ಕೆ ಮುಟ್ಟಿತು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು