Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೂರ್ವಕಾಲ ವೃತ್ತಾಂತ 28 - ಕನ್ನಡ ಸತ್ಯವೇದವು J.V. (BSI)


ಅರಸನಾದ ಆಹಾಜನು

1 ಆಹಾಜನು ಪಟ್ಟಕ್ಕೆ ಬಂದಾಗ ಇಪ್ಪತ್ತು ವರುಷದವನಾಗಿದ್ದನು; ಅವನು ಯೆರೂಸಲೇವಿುನಲ್ಲಿ ಹದಿನಾರು ವರುಷ ಆಳಿದನು. ಅವನು ಯೆಹೋವನ ಚಿತ್ತಾನುಸಾರವಾಗಿ ನಡೆಯಲಿಲ್ಲ.

2 ತನ್ನ ಪೂರ್ವಿಕನಾದ ದಾವೀದನ ಮಾರ್ಗವನ್ನು ಬಿಟ್ಟು ಇಸ್ರಾಯೇಲ್ ರಾಜರ ಮಾರ್ಗದಲ್ಲಿ ನಡೆದು ಅವರಂತೆ ಬಾಳ್ ದೇವರುಗಳ ಎರಕದ ವಿಗ್ರಹಗಳನ್ನು ಮಾಡಿಸಿದನು.

3 ಅವನು ಬೆನ್‍ಹಿನ್ನೋಮ್ ಎಂಬ ತಗ್ಗಿನಲ್ಲಿ ಧೂಪ ಹಾಕಿಸಿದ್ದಲ್ಲದೆ ಯೆಹೋವನು ಇಸ್ರಾಯೇಲ್ಯರ ಎದುರಿನಿಂದ ಓಡಿಸಿಬಿಟ್ಟ ಜನಾಂಗಗಳ ಅಸಹ್ಯಕಾರ್ಯಗಳನ್ನು ಅನುಸರಿಸಿ ತನ್ನ ಮಕ್ಕಳನ್ನು ಆಹುತಿಕೊಟ್ಟನು.

4 ಪೂಜಾಸ್ಥಳಗಳಲ್ಲಿಯೂ ದಿನ್ನೆಗಳ ಮೇಲೂ ಎಲ್ಲಾ ಹಸುರು ಮರಗಳ ಕೆಳಗೂ ಯಜ್ಞಗಳನ್ನೂ ಧೂಪಗಳನ್ನೂ ಸಮರ್ಪಿಸಿದನು.

5 ಆದದರಿಂದ ಅವನ ದೇವರಾದ ಯೆಹೋವನು ಅವನನ್ನು ಅರಾಮ್ಯರ ಅರಸನ ಕೈಗೆ ಒಪ್ಪಿಸಿದನು; ಅರಾಮ್ಯರು ಅವನನ್ನು ಸೋಲಿಸಿ ಅವನ ಜನರಲ್ಲಿ ದೊಡ್ಡ ಗುಂಪನ್ನು ಸೆರೆಹಿಡಿದು ದಮಸ್ಕಕ್ಕೆ ಒಯ್ದರು. ಇದಲ್ಲದೆ ಅವನು ಇಸ್ರಾಯೇಲ್ ರಾಜನ ಕೈಗೂ ಒಪ್ಪಿಸಲ್ಪಟ್ಟು ಅವನಿಂದಲೂ ಪೂರ್ಣವಾಗಿ ಅಪಜಯಹೊಂದಿದನು.

6 ರೆಮಲ್ಯನ ಮಗನಾದ ಪೆಕಹ ಎಂಬವನು ಒಂದೇ ದಿವಸ ಯೆಹೂದ್ಯರಲ್ಲಿ ಲಕ್ಷದ ಇಪ್ಪತ್ತು ಸಾವಿರ ಮಂದಿಯನ್ನು ಕೊಲ್ಲಿಸಿದನು. ಇವರೆಲ್ಲರೂ ರಣವೀರರು. ಯೆಹೂದ್ಯರು ತಮ್ಮ ಪಿತೃಗಳ ದೇವರಾದ ಯೆಹೋವನನ್ನು ಬಿಟ್ಟದ್ದೇ ಇದಕ್ಕೆ ಕಾರಣ.

7 ರಾಜಪುತ್ರನಾದ ಮಾಸೇಯ, ರಾಜಗೃಹಾಧಿಪತಿಯಾದ ಅಜ್ರೀಕಾಮ್, ರಾಜಪ್ರತಿನಿಧಿಯಾದ ಎಲ್ಕಾನ ಎಂಬವರನ್ನು ಎಫ್ರಾಯೀಮ್ ದೇಶದ ಜಿಕ್ರಿಯೆಂಬ ಶೂರನು ಕೊಂದನು.

8 ಇದಲ್ಲದೆ ಇಸ್ರಾಯೇಲ್ಯರು ತಮ್ಮ ಬಂಧುಗಳಾದ ಯೆಹೂದ್ಯರಲ್ಲಿ ಎರಡು ಲಕ್ಷ ಮಂದಿ ಹೆಂಗಸರನ್ನೂ ಗಂಡು ಹೆಣ್ಣು ಮಕ್ಕಳನ್ನೂ ಸೆರೆಹಿಡಿದು ದೊಡ್ಡ ಕೊಳ್ಳೆಯನ್ನೂ ಕೂಡಿಸಿಕೊಂಡು ಸಮಾರ್ಯಕ್ಕೆ ಒಯ್ದರು.

9 ಅಲ್ಲಿ ಯೆಹೋವನ ಒಬ್ಬ ಪ್ರವಾದಿಯಿದ್ದನು; ಅವನ ಹೆಸರು ಓದೇದ್. ಅವನು ಸಮಾರ್ಯಕ್ಕೆ ಬರುತ್ತಿದ್ದ ಸೈನ್ಯದವರನ್ನು ಎದುರುಗೊಂಡು ಅವರಿಗೆ - ನಿಮ್ಮ ಪಿತೃಗಳ ದೇವರಾದ ಯೆಹೋವನು ಯೆಹೂದ್ಯರ ಮೇಲೆ ಕೋಪಗೊಂಡು ಅವರನ್ನು ನಿಮ್ಮ ಕೈಗೆ ಒಪ್ಪಿಸಿಕೊಟ್ಟನಷ್ಟೆ. ಅವರನ್ನು ಸಂಹರಿಸುವದರಲ್ಲಿ ನಿಮ್ಮ ರೌದ್ರವು ಆಕಾಶವನ್ನು ಮುಟ್ಟಿತು.

10 ಇದು ಸಾಲದೆ ನೀವು ಯೆಹೂದ್ಯರನ್ನೂ ಯೆರೂಸಲೇವಿುನವರನ್ನೂ ಬಲಾತ್ಕರಿಸಿ ದಾಸರನ್ನಾಗಿಯೂ ದಾಸಿಯರನ್ನಾಗಿಯೂ ಮಾಡಿಕೊಳ್ಳಬೇಕೆಂದಿದ್ದೀರಿ. ದೇವರಾದ ಯೆಹೋವನಿಗೆ ವಿರುದ್ಧವಾದ ಅಪರಾಧಗಳು ನಿಮ್ಮಲ್ಲಿಯೂ ಇಲ್ಲವೋ?

11 ಈಗ ನೀವು ನನ್ನ ಮಾತಿಗೆ ಕಿವಿಗೊಟ್ಟು ನಿಮ್ಮ ಸಹೋದರರಿಂದ ಸೆರೆಯಾಗಿ ತಂದವರನ್ನು ಹಿಂದಕ್ಕೆ ಕಳುಹಿಸಿರಿ; ಯೆಹೋವನ ಕೋಪಾಗ್ನಿಯು ನಿಮ್ಮ ಮೇಲೆ ಉರಿಯುತ್ತಾ ಇದೆ ಅಂದನು.

12 ಆಗ ಎಫ್ರಾಯೀಮ್ಯರಲ್ಲಿ ಮುಖಂಡರಾಗಿದ್ದ ಯೆಹೋಹಾನಾನನ ಮಗನಾದ ಅಜರ್ಯ, ಮೆಷಿಲ್ಲೇಮೋತನ ಮಗನಾದ ಬೆರೆಕ್ಯ, ಶಲ್ಲೂಮನ ಮಗನಾದ ಹಿಜ್ಕೀಯ, ಹದ್ಲೈಯನ ಮಗನಾದ ಅಮಾಸ ಎಂಬವರು ಯುದ್ಧದಿಂದ ಬರುವವರ ಮುಂದೆ ನಿಂತು ಅವರಿಗೆ -

13 ನೀವು ಸೆರೆಹಿಡಿದವರನ್ನು ಇಲ್ಲಿಗೆ ತರಬೇಡಿರಿ; ನೀವು ನಮ್ಮ ಪಾಪಾಪರಾಧಗಳ ಜೊತೆಯಲ್ಲಿ ಯೆಹೋವನಿಗೆ ವಿರುದ್ಧವಾದ ಮತ್ತೊಂದು ಅಪರಾಧವನ್ನು ಸೇರಿಸಬೇಕೆಂದಿರುತ್ತೀರಾ? ನಮ್ಮ ಅಪರಾಧವು ದೊಡ್ಡದು; ಇಸ್ರಾಯೇಲ್ಯರ ಮೇಲಿರುವ ದೇವಕೋಪವು ಉಗ್ರವಾಗಿದೆ ಎಂದು ಹೇಳಿದರು.

14 ಭಟರು ಇದನ್ನು ಕೇಳಿ ಸೆರೆಯವರನ್ನೂ ಕೊಳ್ಳೆಯನ್ನೂ ಅಧಿಪತಿಗಳ ಮತ್ತು ಸಮೂಹದವರ ಮುಂದೆಯೇ ಬಿಟ್ಟು ಬಿಟ್ಟರು.

15 ಆಗ ಮೇಲೆ ಹೇಳಿದ ಪುರುಷರು ಎದ್ದುಬಂದು ಸೆರೆಯವರಲ್ಲಿ ಬೆತ್ತಲೆಯಾದವರೆಲ್ಲರಿಗೆ ಕೊಳ್ಳೆಯಿಂದ ಉಡುವದಕ್ಕೆ ಬಟ್ಟೆಗಳನ್ನೂ ಕಾಲಿಗೆ ಕೆರಗಳನ್ನೂ ಕೊಟ್ಟು ಅನ್ನಪಾನಗಳನ್ನಿತ್ತು ತೈಲಹಚ್ಚಿ ಬಳಲಿ ಹೋದವರನ್ನು ಕತ್ತೆಗಳ ಮೇಲೆ ಕುಳ್ಳಿರಿಸಿ ಎಲ್ಲರನ್ನೂ ಯೆರಿಕೋವೆಂಬ ಖರ್ಜೂರ ನಗರಕ್ಕೆ ಕರಕೊಂಡುಹೋಗಿ ಅವರ ಬಂಧುಗಳ ಹತ್ತಿರ ಬಿಟ್ಟು ಸಮಾರ್ಯಕ್ಕೆ ಹಿಂದಿರುಗಿದರು.

16 ಆ ಕಾಲದಲ್ಲಿ ಅರಸನಾದ ಆಹಾಜನು ತನಗೆ ಸಹಾಯಮಾಡಬೇಕೆಂದು ಅಶ್ಶೂರದ ರಾಜರನ್ನು ದೂತರ ಮುಖಾಂತರ ಬೇಡಿಕೊಂಡನು.

17 ಯಾಕಂದರೆ ಎದೋಮ್ಯರು ಯೆಹೂದ್ಯರ ಮೇಲೆ ತಿರಿಗಿ ಯುದ್ಧಕ್ಕೆ ಬಂದು ಅವರನ್ನು ಸೋಲಿಸಿ ಅನೇಕಾನೇಕರನ್ನು ಸೆರೆಯೊಯ್ದಿದ್ದರು.

18 ಫಿಲಿಷ್ಟಿಯರು ಯೆಹೂದದ ಇಳಕಲಿನ ಪ್ರದೇಶದ ಮತ್ತು ದಕ್ಷಿಣಪ್ರಾಂತದ ಪಟ್ಟಣಗಳ ಮೇಲೆ ಬಿದ್ದು ಬೇತ್ಷೆಮೆಷ್, ಅಯ್ಯಾಲೋನ್, ಗೆದೇರೋತ್ ಇವುಗಳನ್ನೂ ಸೋಕೋ, ತಿಮ್ನಾ, ಗಿಮ್ಜೋ ಇವುಗಳನ್ನೂ ಇವುಗಳಿಗೆ ಸೇರಿದ ಗ್ರಾಮಗಳನ್ನೂ ಸ್ವಾಧೀನಮಾಡಿಕೊಂಡು ಅವುಗಳಲ್ಲಿ ವಾಸವಾಗಿದ್ದರು.

19 ಯೆಹೂದ್ಯರನ್ನು ಅಧರ್ಮಕ್ಕೆ ಪ್ರೇರಿಸಿ ಯೆಹೋವನಿಗೆ ದ್ರೋಹಮಾಡಿದ ಇಸ್ರಾಯೇಲ್‍ರಾಜನಾದ ಆಹಾಜನ ನಿವಿುತ್ತವಾಗಿ ಯೆಹೋವನು ಯೆಹೂದ್ಯರನ್ನು ಈ ಪ್ರಕಾರ ತಗ್ಗಿಸಿದನು.

20 ಅಶ್ಶೂರದ ಅರಸನಾದ ತಿಗ್ಲತ್ಪಿಲೆಸರನು ಬಂದು ಅವನಿಗೆ ನೆರವಾಗುವದಕ್ಕೆ ಬದಲಾಗಿ ಅವನನ್ನು ಕುಗ್ಗಿಸಿದನು.

21 ಆಹಾಜನು ಯೆಹೋವನ ಆಲಯದ ಅರಮನೆಯ ಪ್ರಭುಗಳ ಆಸ್ತಿಯನ್ನು ಸೂರೆಮಾಡಿಕೊಂಡು ಹೋಗಿ ಅಶ್ಶೂರದ ಅರಸನಿಗೆ ಕಾಣಿಕೆಯನ್ನಾಗಿ ಕೊಟ್ಟರೂ ಅವನಿಂದ ಏನೂ ಸಹಾಯವಾಗಲಿಲ್ಲ.

22 ಕಷ್ಟ ಬಂದಾಗ ಅರಸನಾದ ಆಹಾಜನು ಯೆಹೋವನಿಗೆ ಮತ್ತಷ್ಟು ದ್ರೋಹಿಯಾದನು.

23 ಹೇಗಂದರೆ - ಅರಾಮ್‍ರಾಜರ ದೇವತೆಗಳು ಅವರಿಗೆ ಜಯವನ್ನನುಗ್ರಹಿಸಿದವಲ್ಲಾ; ನಾನೂ ಅವುಗಳಿಗೆ ಯಜ್ಞಸಮರ್ಪಿಸುವೆನು, ಆಗ ನನಗೂ ಜಯವಾಗುವದು ಎಂದುಕೊಂಡು ಅವನು ತನ್ನ ಅಪಜಯಕ್ಕೆ ಕಾರಣವಾಗಿದ್ದ ದಮಸ್ಕದ ದೇವತೆಗಳಿಗೆ ಯಜ್ಞಸಮರ್ಪಿಸುವವನಾದನು. ಆ ದೇವತೆಗಳ ದೆಸೆಯಿಂದ ಅವನಿಗೂ ಎಲ್ಲಾ ಇಸ್ರಾಯೇಲ್ಯರಿಗೂ ಕೇಡುಂಟಾಯಿತು.

24 ಇದಲ್ಲದೆ ಆಹಾಜನು ದೇವಾಲಯದ ಸಾಮಾನುಗಳನ್ನು ಕೂಡಿಸಿ ಅವುಗಳನ್ನು ಕತ್ತರಿಸಿಬಿಟ್ಟನು; ಯೆಹೋವನ ಆಲಯದ ಬಾಗಲುಗಳನ್ನು ಮುಚ್ಚಿ ಯೆರೂಸಲೇವಿುನ ಪ್ರತಿಯೊಂದು ಮೂಲೆಯಲ್ಲಿಯೂ ಯಜ್ಞವೇದಿಗಳನ್ನು ಕಟ್ಟಿಸಿದನು.

25 ಅನ್ಯದೇವತೆಗಳಿಗೆ ಧೂಪಹಾಕುವದಕ್ಕಾಗಿ ಯೆಹೂದದ ಎಲ್ಲಾ ಪಟ್ಟಣಗಳಲ್ಲಿಯೂ ಪೂಜಾಸ್ಥಳಗಳನ್ನು ಏರ್ಪಡಿಸಿದನು. ಹೀಗೆ ತನ್ನ ಪಿತೃಗಳ ದೇವರಾದ ಯೆಹೋವನನ್ನು ರೇಗಿಸಿದನು.

26 ಆಹಾಜನ ಉಳಿದ ಪೂರ್ವೋತ್ತರ ಚರಿತ್ರೆಯೂ ಅವನ ಎಲ್ಲಾ ಪ್ರವರ್ತನೆಗಳೂ ಯೆಹೂದ್ಯರ ಮತ್ತು ಇಸ್ರಾಯೇಲ್ಯರ ರಾಜಗ್ರಂಥದಲ್ಲಿ ಬರೆದಿರುತ್ತವೆ.

27 ಅವನು ತನ್ನ ಪಿತೃಗಳ ಬಳಿಗೆ ಸೇರಲು ಅವನನ್ನು ಇಸ್ರಾಯೇಲ್‍ರಾಜಶ್ಮಶಾನದಲ್ಲಿ ಹೂಣಿಡದೆ ಯೆರೂಸಲೇಮ್ ಪಟ್ಟಣದೊಳಗಣ ಒಂದು ಸ್ಥಳದಲ್ಲಿ ಹೂಣಿಟ್ಟರು. ಅವನಿಗೆ ಬದಲಾಗಿ ಅವನ ಮಗನಾದ ಹಿಜ್ಕೀಯನು ಅರಸನಾದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು