2 ಪೂರ್ವಕಾಲ ವೃತ್ತಾಂತ 26 - ಕನ್ನಡ ಸತ್ಯವೇದವು J.V. (BSI)ಅರಸನಾದ ಉಜ್ಜೀಯನು 1 ಅನಂತರ ಎಲ್ಲಾ ಯೆಹೂದ್ಯರೂ ಕೂಡಿ ಹದಿನಾರು ವರುಷದವನಾಗಿದ್ದ ಉಜ್ಜೀಯನನ್ನು ಅವನ ತಂದೆಯಾದ ಅಮಚ್ಯನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು. 2 ಅರಸನು ಪಿತೃಗಳ ಬಳಿಗೆ ಸೇರಿದ ಮೇಲೆ ಇವನು ಏಲೋತ್ ಪಟ್ಟಣವನ್ನು ತಿರಿಗಿ ಯೆಹೂದರಾಜ್ಯಕ್ಕೆ ಸೇರಿಸಿಕೊಂಡು ಭದ್ರಪಡಿಸಿದನು. 3 ಉಜ್ಜೀಯನು ಪಟ್ಟಕ್ಕೆ ಬಂದಾಗ ಹದಿನಾರು ವರುಷದವನಾಗಿದ್ದನು; ಅವನು ಯೆರೂಸಲೇವಿುನಲ್ಲಿ ಐವತ್ತೆರಡು ವರುಷ ಆಳಿದನು. ಯೆರೂಸಲೇವಿುನವಳಾದ ಯೆಕೊಲ್ಯ ಎಂಬಾಕೆಯು ಅವನ ತಾಯಿ. 4 ಅವನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವನ ಚಿತ್ತಾನುಸಾರವಾಗಿ ನಡೆದನು. 5 ದೇವಭಕ್ತಿಯನ್ನು ಬೋಧಿಸುತ್ತಿದ್ದ ಜೆಕರ್ಯನ ಜೀವಮಾನದಲ್ಲಿ ಅವನು ದೇವರನ್ನು ಅವಲಂಬಿಸಿಕೊಂಡಿದ್ದನು; ಹೀಗೆ ಅವಲಂಬಿಸಿದ್ದ ಕಾಲದಲ್ಲೆಲ್ಲಾ ದೇವರಾದ ಯೆಹೋವನು ಅವನನ್ನು ಅಭಿವೃದ್ಧಿಗೆ ತಂದನು. 6 ಅವನು ಫಿಲಿಷ್ಟಿಯರ ಮೇಲೆ ಯುದ್ಧಕ್ಕಾಗಿ ಹೊರಟು ಗತ್ ಊರು, ಯಬ್ನೆ, ಅಷ್ಡೋದ್ ಎಂಬ ಪಟ್ಟಣಗಳ ಗೋಡೆಗಳನ್ನು ಕೆಡವಿಬಿಟ್ಟು ಅಷ್ಡೋದಿನ ಮತ್ತು ಫಿಲಿಷ್ಟಿಯರ ಪ್ರಾಂತಗಳಲ್ಲಿ ಪಟ್ಟಣಗಳನ್ನು ಕಟ್ಟಿಸಿದನು. 7 ಫಿಲಿಷ್ಟಿಯರೊಡನೆಯೂ ಗೂರ್ ಬಾಳಿನಲ್ಲಿರುವ ಅರಬಿಯರೊಡನೆಯೂ ಮೆಗೂನ್ಯರೊಡನೆಯೂ ಯುದ್ಧಮಾಡುವಾಗ ಅವನಿಗೆ ದೇವರ ಸಹಾಯವು ದೊರೆಯಿತು. 8 ಅಮ್ಮೋನಿಯರೂ ಉಜ್ಜೀಯನಿಗೆ ಕಪ್ಪವನ್ನು ಕೊಡುವವರಾದರು. ಅವನು ಅಧಿಕಬಲವುಳ್ಳವನಾದದರಿಂದ ಅವನ ಹೆಸರು ಐಗುಪ್ತದ ಮೇರೆಯವರೆಗೂ ಹಬ್ಬಿತು. 9 ಅವನು ಯೆರೂಸಲೇವಿುನಲ್ಲಿ ಮೂಲೆಬಾಗಲು, ತಗ್ಗಿನ ಬಾಗಲು, ಗೋಡೆ ತಿರುಗುವ ಭಾಗ ಇವುಗಳ ಮೇಲೆ ಬುರುಜುಗಳನ್ನು ಕಟ್ಟಿಸಿದನು. 10 ಅವನಿಗೆ ಇಳಕಲಿನ ಪ್ರದೇಶದಲ್ಲಿಯೂ ತಪ್ಪಲ ಸೀಮೆಯಲ್ಲಿಯೂ ಅಲ್ಲದೆ ಅಡವಿಯಲ್ಲಿಯೂ ಪಶುಗಳ ದೊಡ್ಡ ಮಂದೆಗಳಿದ್ದದರಿಂದ ಆ ಅಡವಿಯಲ್ಲಿ ಬುರುಜುಗಳನ್ನು ಕಟ್ಟಿಸಿ ಹಲವು ಬಾವಿಗಳನ್ನು ತೋಡಿಸಿದನು. ಅವನು ವ್ಯವಸಾಯದಲ್ಲಿ ಇಷ್ಟವುಳ್ಳವನಾಗಿದ್ದದರಿಂದ ಗುಡ್ಡ, ಫಲವತ್ತಾದ ಬೈಲು ಇವುಗಳಲ್ಲಿ ಹೊಲ ದ್ರಾಕ್ಷೇತೋಟಗಳ ಕೆಲಸಮಾಡುವವರನ್ನು ನೇವಿುಸಿದನು. 11 ಇದಲ್ಲದೆ ಉಜ್ಜೀಯನಿಗೆ ಯುದ್ಧಕ್ಕೋಸ್ಕರ ಸೈನ್ಯವೂ ಇತ್ತು. ಲೇಖಕನಾದ ಯೆಗೀಯೇಲ್, ಅಧಿಕಾರಿಯಾದ ಮಾಸೇಯ ಇವರು ಅರಸನ ಸರದಾರರಲ್ಲೊಬ್ಬನಾದ ಹನನ್ಯನ ಆಜ್ಞಾನುಸಾರವಾಗಿ ಅವರ ಪಟ್ಟಿಯನ್ನು ಬರೆದಿದ್ದರು. ಆಯಾ ಗುಂಪುಗಳು ಪಟ್ಟಿಯ ಕ್ರಮಾನುಸಾರ ಯುದ್ಧಕ್ಕೆ ಹೊರಡುತ್ತಿದ್ದವು. 12 ರಣವೀರರಾಗಿರುವ ಎಲ್ಲಾ ಗೋತ್ರಪ್ರಧಾನರ ಸಂಖ್ಯೆಯು ಎರಡು ಸಾವಿರದ ಆರು ನೂರು. 13 ಇವರ ಕೈಕೆಳಗಿರುವ ಭಟರ ಸಂಖ್ಯೆಯು ಮೂರು ಲಕ್ಷದ ಏಳು ಸಾವಿರದ ಐನೂರು; ಇವರು ಅರಸನ ಸೇವೆಯಲ್ಲಿದ್ದು ಅವನ ವೈರಿಗಳಿಗೆ ವಿರೋಧವಾಗಿ ಪರಾಕ್ರಮದಿಂದ ಯುದ್ಧಮಾಡುತ್ತಿದ್ದರು. 14 ಉಜ್ಜೀಯನು ಈ ಎಲ್ಲಾ ಸೈನ್ಯದವರಿಗೋಸ್ಕರ ಬೇಕಾದ ಗುರಾಣಿ ಬರ್ಜಿ ಶಿರಸ್ತ್ರಾಣ ಕವಚ ಬಿಲ್ಲು ಕವಣೆಯಕಲ್ಲು ಇವುಗಳನ್ನು ಒದಗಿಸಿಕೊಟ್ಟನು. 15 ಇದಲ್ಲದೆ ಅವನು ಬಾಣಗಳನ್ನೂ ದೊಡ್ಡ ಕಲ್ಲುಗಳನ್ನೂ ಎಸೆಯುವದಕ್ಕಾಗಿ ಜಾಣರ ಕಲ್ಪನೆಯ ಮೇರೆಗೆ ಯಂತ್ರಗಳನ್ನು ಮಾಡಿಸಿ ಅವುಗಳನ್ನು ಯೆರೂಸಲೇವಿುನಲ್ಲಿ ಬುರುಜುಗಳ ಮೇಲೆಯೂ ಆಳುವೇರಿಗಳ ಮೇಲೆಯೂ ಇಡಿಸಿದನು. ಅವನು ಬಲಿಷ್ಠನಾಗುವವರೆಗೂ ದೇವರ ಆಶ್ಚರ್ಯವಾದ ಸಹಾಯವನ್ನು ಹೊಂದಿದನು; ಅವನ ಕೀರ್ತಿಯು ದೂರದವರೆಗೆ ಹಬ್ಬಿತು. 16 ಆದರೆ ಅವನು ಬಲಿಷ್ಠನಾದ ಮೇಲೆ ಗರ್ವಿಷ್ಠನಾಗಿ ಭ್ರಷ್ಟನಾದನು; ತನ್ನ ದೇವರಾದ ಯೆಹೋವನಿಗೆ ದ್ರೋಹಿಯಾಗಿ ಧೂಪವೇದಿಯ ಮೇಲೆ ತಾನೇ ಧೂಪ ಹಾಕಬೇಕೆಂದು ಯೆಹೋವನ ಆಲಯದೊಳಕ್ಕೆ ಹೋದನು. 17 ಆಗ ಮಹಾಯಾಜಕನಾದ ಅಜರ್ಯನೂ ಧೈರ್ಯಶಾಲಿಗಳಾದ ಎಂಭತ್ತು ಮಂದಿ ಇತರ ಯಾಜಕರೂ ಅರಸನಾದ ಉಜ್ಜೀಯನ ಹಿಂದೆಯೇ ಹೋಗಿ ಅವನೆದುರಿಗೆ ನಿಂತು 18 ಅವನಿಗೆ - ಉಜ್ಜೀಯನೇ, ಯೆಹೋವನಿಗೋಸ್ಕರ ಧೂಪ ಹಾಕುವದು ನಿನ್ನ ಕೆಲಸವಲ್ಲ; ಅದಕ್ಕೋಸ್ಕರ ಆರೋನನ ಸಂತಾನದವರಾದ ಯಾಜಕರು ಪ್ರತಿಷ್ಠಿತರಾಗಿದ್ದಾರೆ. ಪವಿತ್ರಾಲಯವನ್ನು ಬಿಟ್ಟುಹೋಗು; ನೀನು ದ್ರೋಹಿ. ಇದಕ್ಕಾಗಿ ದೇವರಾದ ಯೆಹೋವನಿಂದ ನಿನಗೆ ಮಾನವುಂಟಾಗಲಾರದು ಅನ್ನಲು 19 ಧೂಪಹಾಕಬೇಕೆಂದು ಕೈಯಲ್ಲಿ ಧೂಪಾರತಿಯನ್ನು ಹಿಡಿದಿದ್ದ ಉಜ್ಜೀಯನು ಕೋಪವುಳ್ಳವನಾದನು. ಅವನು ಯೆಹೋವನ ಆಲಯದ ಧೂಪವೇದಿಯ ಬಳಿಯಲ್ಲಿ ನಿಂತು ಯಾಜಕರೊಡನೆ ಸಿಟ್ಟಿನಿಂದ ಮಾತಾಡುತ್ತಿರುವಾಗ ಯಾಜಕರ ಸಮಕ್ಷದಲ್ಲೇ ಅವನ ಹಣೆಯಲ್ಲಿ ಕುಷ್ಠ ಹುಟ್ಟಿತು. 20 ಮಹಾಯಾಜಕನಾದ ಅಜರ್ಯನೂ ಎಲ್ಲಾ ಯಾಜಕರೂ ಅವನನ್ನು ದೃಷ್ಟಿಸಿ ನೋಡಿದಾಗ ಅವನ ಹಣೆಯಲ್ಲಿ ಕುಷ್ಠವು ಕಂಡುಬಂದಕಾರಣ ಅವನನ್ನು ಶೀಘ್ರವಾಗಿ ಅಲ್ಲಿಂದ ಹೊರಡಿಸಿದರು. ಯೆಹೋವನು ತನ್ನನ್ನು ಬಾಧಿಸಿದ್ದಾನೆಂದು ಅವನಿಗೆ ತಿಳಿದದರಿಂದ ಅವನೂ ಶೀಘ್ರವಾಗಿ ಹೊರಗೆ ಹೋದನು. 21 ಉಜ್ಜೀಯನು ಜೀವದಿಂದಿರುವವರೆಗೂ ಕುಷ್ಠರೋಗಿಯಾಗಿದ್ದು ಯೆಹೋವನ ಆಲಯಕ್ಕೆ ಬಾರದಂತೆ ಬಹಿಷ್ಕೃತನಾದನು. ಅವನು ಕುಷ್ಠದ ದೆಸೆಯಿಂದ ಪ್ರತ್ಯೇಕವಾದ ಮನೆಯಲ್ಲಿ ವಾಸಿಸಬೇಕಾಯಿತು. ರಾಜ ಗೃಹಾಧಿಪತ್ಯವನ್ನೂ ಪ್ರಜಾಪಾಲನೆಯನ್ನೂ ಅವನ ಮಗನಾದ ಯೋತಾಮನು ನೋಡಿಕೊಳ್ಳುತ್ತಿದ್ದನು. 22 ಉಜ್ಜೀಯನ ಉಳಿದ ಪೂರ್ವೋತ್ತರ ಚರಿತ್ರೆಯನ್ನು ಆಮೋಚನ ಮಗನಾದ ಯೆಶಾಯನೆಂಬ ಪ್ರವಾದಿಯು ಬರೆದಿದ್ದಾನೆ. 23 ಉಜ್ಜೀಯನು ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ಕುಷ್ಠರೋಗಿಯದೆಂದು ರಾಜಕುಟುಂಬಶ್ಮಶಾನವಿದ್ದ ಹೊಲದಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಯೋತಾಮನು ಅರಸನಾದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India