2 ಪೂರ್ವಕಾಲ ವೃತ್ತಾಂತ 25 - ಕನ್ನಡ ಸತ್ಯವೇದವು J.V. (BSI)ಅರಸನಾದ ಅಮಚ್ಯನು 1 ಅಮಚ್ಯನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರುಷದವನಾಗಿದ್ದನು. ಅವನು ಯೆರೂಸಲೇವಿುನಲ್ಲಿ ಇಪ್ಪತ್ತೊಂಭತ್ತು ವರುಷ ಆಳಿದನು. ಯೆರೂಸಲೇವಿುನವಳಾದ ಯೆಹೋವದ್ದಾನ್ ಎಂಬಾಕೆಯು ಅವನ ತಾಯಿ. 2 ಅವನು ಯೆಹೋವನ ಚಿತ್ತಾನುಸಾರವಾಗಿ ನಡೆದನು; ಆದರೆ ಯಥಾರ್ಥಚಿತ್ತನಾಗಿರಲಿಲ್ಲ. 3 ಅವನು ರಾಜ್ಯವನ್ನು ಭದ್ರಪಡಿಸಿಕೊಂಡ ಕೂಡಲೆ ತನ್ನ ತಂದೆಯನ್ನು ಕೊಂದ ಸೇವಕರನ್ನು ಕೊಲ್ಲಿಸಿದನು. 4 ಆದರೆ ಮಕ್ಕಳ ಪಾಪದ ದೆಸೆಯಿಂದ ತಂದೆಗೂ ತಂದೆಯ ಪಾಪದ ದೆಸೆಯಿಂದ ಮಕ್ಕಳಿಗೂ ಮರಣಶಿಕ್ಷೆಯಾಗಬಾರದು; ಪ್ರತಿಯೊಬ್ಬನೂ ತನ್ನ ಪಾಪದ ಫಲವನ್ನು ತಾನೇ ಅನುಭವಿಸಬೇಕು ಎಂಬದಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿರುವ ಯೆಹೋವನ ಅಪ್ಪಣೆಯನ್ನು ನೆನಪುಮಾಡಿಕೊಂಡು ಅವರ ಮಕ್ಕಳನ್ನು ಕೊಲ್ಲಿಸಲಿಲ್ಲ. 5 ಆಮೇಲೆ ಅಮಚ್ಯನು ಯೆಹೂದ್ಯರನ್ನು ಕೂಡಿಸಿ ಸಹಸ್ರಾಧಿಪತಿ ಶತಾಧಿಪತಿಗಳ ಕೈಕೆಳಗೆ ಕೊಟ್ಟು ಯೆಹೂದ ಬೆನ್ಯಾಮೀನ್ ಕುಲಗಳಲ್ಲಿನ ಆಯಾ ಗೋತ್ರಗಳ ಪ್ರಕಾರ ಅವರನ್ನು ನಿಲ್ಲಿಸಿ ಇಪ್ಪತ್ತು ವರುಷದವರು ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರನ್ನು ಲೆಕ್ಕಮಾಡಲು ಅವರಲ್ಲಿ ಬರ್ಜಿ ಗುರಾಣಿಗಳನ್ನು ಹಿಡಿದುಕೊಂಡು ಯುದ್ಧಕ್ಕೆ ಹೊರಡತಕ್ಕ ಶೂರರು ಮೂರು ಲಕ್ಷ ಮಂದಿ ಸಿಕ್ಕಿದರು. 6 ಇದಲ್ಲದೆ ಅವನು ನೂರು ತಲಾಂತು ಬೆಳ್ಳಿಯನ್ನು ಕೊಟ್ಟು ಇಸ್ರಾಯೇಲ್ಯರಿಂದಲೂ ಲಕ್ಷ ಮಂದಿ ಭಟರನ್ನು ತರಿಸಿದನು. 7 ಆಗ ದೇವರ ಮನುಷ್ಯನೊಬ್ಬನು ಅವನ ಬಳಿಗೆ ಬಂದು ಅವನಿಗೆ - ಅರಸನೇ, ಇಸ್ರಾಯೇಲ್ ಸೈನ್ಯದವರು ನಿನ್ನ ಜೊತೆಯಲ್ಲಿ ಯುದ್ಧಕ್ಕೆ ಹೋಗಬಾರದು. ಯೆಹೋವನು ಎಫ್ರಾಯೀಮ್ಯರಾದ ಇಸ್ರಾಯೇಲ್ಯರನ್ನೆಲ್ಲಾ ಕೈಬಿಟ್ಟಿದ್ದಾನೆ. 8 ನೀನೇ ಹೋಗಿ ಕಾರ್ಯವನ್ನು ನಡಿಸು; ಧೈರ್ಯದಿಂದ ಯುದ್ಧಮಾಡು. [ಹಾಗೆ ಮಾಡದಿದ್ದರೆ] ದೇವರು ಶತ್ರುಗಳಿಂದ ನಿನ್ನನ್ನು ಅಪಜಯಪಡಿಸುವನು. ಜಯಾಪಜಯಗಳನ್ನುಂಟುಮಾಡುವದಕ್ಕೆ ಆತನು ಶಕ್ತನಾಗಿರುತ್ತಾನಲ್ಲಾ ಅಂದನು. 9 ಅಮಚ್ಯನು ದೇವರ ಮನುಷ್ಯನನ್ನು - ಹಾಗಾದರೆ ನಾನು ಇಸ್ರಾಯೇಲ್ ಸೈನ್ಯಕ್ಕೋಸ್ಕರ ನೂರು ತಲಾಂತುಗಳನ್ನು ಕೊಟ್ಟ ವಿಷಯದಲ್ಲಿ ಮಾಡುವದೇನು ಎಂದು ಕೇಳಲು ಅವನು ಯೆಹೋವನು ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿನಗೆ ಕೊಡಬಲ್ಲನು ಅಂದನು. 10 ಆಗ ಅಮಚ್ಯನು ಎಫ್ರಾಯೀಮ್ಯರಿಂದ ಬಂದ ಸೈನಿಕರನ್ನು ಬೇರೆ ಮಾಡಿ ಅವರನ್ನು ಅವರ ದೇಶಕ್ಕೆ ಕಳುಹಿಸಿದನು. ಅವರು ಯೆಹೂದ್ಯರ ಮೇಲೆ ಬಹುಕೋಪಗೊಂಡು ಬಲುಸಿಟ್ಟಿನಿಂದ ತಮ್ಮ ದೇಶಕ್ಕೆ ಹೋದರು. 11 ಅಮಚ್ಯನಾದರೋ ಧೈರ್ಯದಿಂದ ತನ್ನ ಸೈನ್ಯವನ್ನು ಕರಕೊಂಡು ಉಪ್ಪಿನ ತಗ್ಗಿಗೆ ಹೋಗಿ ಸೇಯೀರ್ಯರಲ್ಲಿ ಹತ್ತು ಸಾವಿರ ಮಂದಿಯನ್ನು ವಧಿಸಿದನು. 12 ಯೆಹೂದ್ಯರು ಬೇರೆ ಹತ್ತು ಸಾವಿರ ಮಂದಿಯನ್ನು ಜೀವಸಹಿತವಾಗಿ ಹಿಡಿದು ಕಡಿದಾದ ಬಂಡೆಯ ತುದಿಗೆ ಒಯ್ದು ಅವರೆಲ್ಲರೂ ಚೂರುಚೂರಾಗುವ ಹಾಗೆ ಅವರನ್ನು ಕೆಳಕ್ಕೆ ದೊಬ್ಬಿದರು. 13 ಅಷ್ಟರಲ್ಲಿ ಅಮಚ್ಯನು ತನ್ನ ಜೊತೆಯಲ್ಲಿ ಯುದ್ಧಕ್ಕೆ ಬರಬಾರದೆಂದು ಹಿಂದಕ್ಕೆ ಕಳುಹಿಸಿದ ಗುಂಪಿನವರು ಸಮಾರ್ಯಕ್ಕೂ ಬೇತ್ಹೋರೋನಿಗೂ ಮಧ್ಯದಲ್ಲಿರುವ ಯೆಹೂದಪಟ್ಟಣಗಳ ಮೇಲೆ ಬಿದ್ದು ಮೂರು ಸಾವಿರ ಜನರನ್ನು ಕೊಂದು ದೊಡ್ಡ ಕೊಳ್ಳೆಯನ್ನು ಕೂಡಿಸಿಕೊಂಡು ಹೋದರು. 14 ಅಮಚ್ಯನು ಎದೋಮ್ಯರನ್ನು ಸೋಲಿಸಿ ಮನೆಗೆ ಬಂದ ಮೇಲೆ ತಾನು ತೆಗೆದುಕೊಂಡು ಬಂದಿದ್ದ ಸೇಯೀರನವರ ದೇವತಾಪ್ರತಿಮೆಗಳನ್ನು ತನ್ನ ದೇವರುಗಳೆಂದು ನಿಲ್ಲಿಸಿ ಅವುಗಳಿಗೆ ಅಡ್ಡಬಿದ್ದು ಧೂಪಹಾಕುತ್ತಿದ್ದನು. 15 ಆಗ ಯೆಹೋವನು ಅಮಚ್ಯನ ಮೇಲೆ ಬಹಳವಾಗಿ ಕೋಪಗೊಂಡು ಅವನ ಬಳಿಗೆ ಪ್ರವಾದಿಯನ್ನು ಕಳುಹಿಸಿ ಅವನಿಗೆ - ನಿನ್ನ ಕೈಯಿಂದ ತಮ್ಮ ಜನರನ್ನು ತಪ್ಪಿಸಲಾರದೆಹೋದ ಅನ್ಯದೇವತೆಗಳಲ್ಲಿ ಭಕ್ತಿಯನ್ನೇಕೆ ಇಟ್ಟಿದ್ದೀ ಎಂದು ಹೇಳಿಸಿದನು. 16 ಈ ಮಾತನ್ನು ಹೇಳಿದ ಪ್ರವಾದಿಗೆ ಅರಸನು - ನಿನ್ನನ್ನು ರಾಜಮಂತ್ರಿಯನ್ನಾಗಿ ನೇವಿುಸಿದ್ದೇವೋ? ಸುಮ್ಮನಿರು, ನಿನಗೆ ಪೆಟ್ಟು ಬೇಕೋ ಅನ್ನಲು ಅವನು - ನೀನು ನನ್ನ ಬುದ್ಧಿವಾದವನ್ನು ಲಾಲಿಸದೆ ಹೀಗೆ ಮಾಡುವದರಿಂದ ದೇವರು ನಿನ್ನನ್ನು ನಾಶಮಾಡಬೇಕೆಂದು ನಿಶ್ಚಯಿಸಿಕೊಂಡಿದ್ದಾನೆಂಬದಾಗಿ ನನಗೆ ತಿಳಿಯಬಂತು ಎಂದು ಹೇಳಿ ಸುಮ್ಮನಾದನು. 17 ಅನಂತರ ಯೆಹೂದದ ಅರಸನಾದ ಅಮಚ್ಯನು ಮಂತ್ರಾಲೋಚನೆ ಕೇಳಿ ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಾಯೇಲ್ಯರ ಅರಸನೂ ಆದ ಯೋವಾಷನಿಗೆ - ನಾವು ಒಬ್ಬರನ್ನೊಬ್ಬರು ಎದುರುಗೊಳ್ಳೋಣ ಎಂದು ದೂತರ ಮುಖಾಂತರವಾಗಿ ಹೇಳಿಸಿದನು. 18 ಆಗ ಇಸ್ರಾಯೇಲ್ಯರ ಅರಸನಾದ ಯೋವಾಷನು ಯೆಹೂದ್ಯರ ಅರಸನಾದ ಅಮಚ್ಯನಿಗೆ - ಲೆಬನೋನಿನ ಮುಳ್ಳುಗಿಡವು ಅಲ್ಲಿನ ದೇವದಾರುಮರಕ್ಕೆ - ನನ್ನ ಮಗನಿಗೆ ನಿನ್ನ ಮಗಳನ್ನು ಕೊಡು ಎಂದು ಹೇಳಿಕಳುಹಿಸಿತು. ತುಸುಹೊತ್ತಾದ ಮೇಲೆ ಲೆಬನೋನಿನ ಒಂದು ಕಾಡುಮೃಗವು ಆ ಮಾರ್ಗವಾಗಿ ಹಾದುಹೋಗುತ್ತಿರುವಾಗ ಅದನ್ನು ತುಳಿದು ಬಿಟ್ಟಿತು. 19 ಅಹಹ, ಎದೋಮ್ಯರನ್ನು ಸೋಲಿಸಿ ಬಹುಕೀರ್ತಿಯನ್ನು ಪಡಕೊಂಡೆನಲ್ಲಾ ಎಂದು ನೀನು ಹೆಮ್ಮೆಗೊಂಡಿದ್ದೀ; ಸುಮ್ಮನೆ ಮನೆಯಲ್ಲಿ ಕೂತುಕೊಳ್ಳಬಾರದೇ; ನನ್ನನ್ನು ಕೆಣಕಿ ನಿನಗೂ ನಿನ್ನ ರಾಜ್ಯಕ್ಕೂ ಯಾಕೆ ಕೇಡನ್ನು ತಂದುಕೊಳ್ಳುತ್ತೀ ಎಂದು ಉತ್ತರಕೊಟ್ಟನು. 20 ಅಮಚ್ಯನು ಆ ಮಾತನ್ನು ಲಕ್ಷಿಸಲಿಲ್ಲ; ಹಾಗಾಗಬೇಕೆಂಬದೇ ದೇವರ ಸಂಕಲ್ಪವಾಗಿತ್ತು. ಯೆಹೂದ್ಯರು ಎದೋಮ್ಯರ ದೇವತೆಗಳಲ್ಲಿ ಭಕ್ತಿಯನ್ನಿಟ್ಟದ್ದರಿಂದ ಅವರನ್ನು ಪರಾಧೀನಮಾಡಬೇಕೆಂದು ಆತನು ನಿರ್ಣಯಿಸಿದ್ದನು. 21 ಇಸ್ರಾಯೇಲ್ಯರ ಅರಸನಾದ ಯೋವಾಷನು ಯುದ್ಧಕ್ಕೆ ಹೊರಟನು; ಅವನೂ ಯೆಹೂದದ ಅರಸನಾದ ಅಮಚ್ಯನೂ ಯೆಹೂದಪ್ರಾಂತದ ಬೇತ್ಷೆಮೆಷಿನಲ್ಲಿ ಒಬ್ಬರನ್ನೊಬ್ಬರು ಎದುರುಗೊಂಡರು. 22 ಯೆಹೂದ್ಯರು ಇಸ್ರಾಯೇಲ್ಯರಿಗೆ ಸೋತು ತಮ್ಮ ತಮ್ಮ ನಿವಾಸಗಳಿಗೆ ಓಡಿಹೋದರು. 23 ಇಸ್ರಾಯೇಲ್ಯರ ಅರಸನಾದ ಯೋವಾಷನು ಯೆಹೋವಾಹಾಜನ ಮೊಮ್ಮಗನೂ ಯೆಹೋವಾಷನ ಮಗನೂ ಯೆಹೂದದ ಅರಸನೂ ಆದ ಅಮಚ್ಯನನ್ನು ಬೇತ್ಷೆಮೆಷಿನಲ್ಲಿ ಹಿಡಿದು ಅವನನ್ನು ಯೆರೂಸಲೇವಿುಗೆ ಕರಕೊಂಡು ಬಂದು ಎಫ್ರಾಯೀಮ್ ಬಾಗಲಿಗೂ ಮೂಲೆಯ ಬಾಗಲಿಗೂ ಮಧ್ಯದಲ್ಲಿದ್ದ ಯೆರೂಸಲೇವಿುನ ಗೋಡೆಯನ್ನು ನಾನೂರು ಮೊಳದಷ್ಟು ಕೆಡವಿಬಿಟ್ಟನು. 24 ಇದಲ್ಲದೆ ಅವನು ಓಬೇದೆದೋಮನ ವಶದಲ್ಲಿದ್ದ ದೇವಾಲಯದ ಎಲ್ಲಾ ಬೆಳ್ಳಿಬಂಗಾರವನ್ನೂ ಪಾತ್ರೆಗಳನ್ನೂ ಅರಮನೆಯ ಭಂಡಾರಗಳಲ್ಲಿದ್ದದ್ದೆಲ್ಲವನ್ನೂ ತೆಗೆದುಕೊಂಡು ಹೊಣೆಗಾರರನ್ನಾಗಿ ಕೆಲವರನ್ನು ಸೆರೆಹಿಡಿದು ಸಮಾರ್ಯಕ್ಕೆ ಹಿಂದಿರುಗಿದನು. 25 ಇಸ್ರಾಯೇಲ್ಯರ ಅರಸನೂ ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತ ನಂತರ ಯೆಹೂದದ ಅರಸನಾದ ಯೆಹೋವಾಷನ ಮಗ ಅಮಚ್ಯನು ಇನ್ನೂ ಹದಿನೈದು ವರುಷ ಬದುಕಿದನು. 26 ಅವನ ಉಳಿದ ಪೂರ್ವೋತ್ತರಚರಿತ್ರೆಯು ಯೆಹೂದ್ಯರ ಮತ್ತು ಇಸ್ರಾಯೇಲ್ಯರ ರಾಜರ ಗ್ರಂಥದಲ್ಲಿ ಬರೆದಿರುತ್ತದೆ. 27 ಅಮಚ್ಯನು ಯೆಹೋವ ಭಕ್ತಿಯನ್ನು ಬಿಟ್ಟಂದಿನಿಂದ ಯೆರೂಸಲೇವಿುನವರು ಅವನಿಗೆ ವಿರೋಧವಾಗಿ ಒಳಸಂಚು ಮಾಡುತ್ತಿದ್ದರು. ಆದದರಿಂದ ಅವನು ಲಾಕೀಷಿಗೆ ಓಡಿಹೋದನು; ಆದರೆ ಅವರು ಆಳುಗಳನ್ನು ಕಳುಹಿಸಿ ಅವನನ್ನು ಅಲ್ಲಿಯೇ ಕೊಲ್ಲಿಸಿದರು. 28 ಅವನ ಜನರು ಆ ಶವವನ್ನು ಕುದುರೆಯ ಮೇಲೆ ಯೆರೂಸಲೇವಿುಗೆ ತಂದು ಯೆಹೂದದ ರಾಜಧಾನಿಯೊಳಗೆ ಅವನ ಪಿತೃಶ್ಮಶಾನದಲ್ಲಿ ಸಮಾಧಿಮಾಡಿದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India