Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೂರ್ವಕಾಲ ವೃತ್ತಾಂತ 20 - ಕನ್ನಡ ಸತ್ಯವೇದವು J.V. (BSI)


ಯೆಹೋಷಾಫಾಟನಿಗೆ ವಿರೋಧವಾಗಿ ಬಂದ ಶತ್ರುಗಳು ನಾಶವಾದದ್ದು

1 ಇದಾದ ಮೇಲೆ ಮೋವಾಬ್ಯರೂ ಅಮ್ಮೋನಿಯರೂ ಮೆಗೂನ್ಯರಲ್ಲಿ ಕೆಲವರೂ ಯೆಹೋಷಾಫಾಟನಿಗೆ ವಿರೋಧವಾಗಿ ಯುದ್ಧಕ್ಕೆ ಬಂದರು.

2 ದೂತರು ಬಂದು ಯೆಹೋಷಾಫಾಟನಿಗೆ - ಮಹಾಸಮೂಹವು ನಿನಗೆ ವಿರೋಧವಾಗಿ ಲವಣಸಮುದ್ರದ ಆಚೆಯಲ್ಲಿರುವ ಅರಾಮ್ ಪ್ರಾಂತದ ಕಡೆಯಿಂದ ಬಂದು ಈಗ ಏಂಗೆದಿಯೆನಿಸಿಕೊಳ್ಳುವ ಹಚೆಚೋನ್‍ತಾಮಾರಿನಲ್ಲಿರುತ್ತಾರೆಂದು ತಿಳಿಸಿದಾಗ

3 ಯೆಹೋಷಾಫಾಟನು ಹೆದರಿ ಯೆಹೋವನನ್ನೇ ಆಶ್ರಯಿಸಿಕೊಳ್ಳಬೇಕೆಂದು ನಿರ್ಣಯಿಸಿಕೊಂಡು ಯೆಹೂದ್ಯರೆಲ್ಲರೂ ಉಪವಾಸಮಾಡಬೇಕೆಂದು ಪ್ರಕಟಿಸಿದನು.

4 ಆಗ ಯೆಹೂದ್ಯರು ಯೆಹೋವನ ಸಹಾಯವನ್ನು ಕೇಳಿಕೊಳ್ಳುವದಕ್ಕಾಗಿ ತಮ್ಮ ಎಲ್ಲಾ ಪಟ್ಟಣಗಳಿಂದ ಆತನ ಸನ್ನಿಧಿಯಲ್ಲಿ ಕೂಡಿಬಂದರು.

5 ಯೆಹೂದ್ಯರೂ ಯೆರೂಸಲೇವಿುನವರೂ ಯೆಹೋವನ ಆಲಯದ ಹೊಸ ಪ್ರಾಕಾರದಲ್ಲಿ ಸಭೆಯಾಗಿ ನೆರೆದು ಬಂದಾಗ ಯೆಹೋಷಾಫಾಟನು ಅದರ ಮುಂಗಡೆಯಲ್ಲಿ ನಿಂತು -

6 ಯೆಹೋವನೇ, ನಮ್ಮ ಪಿತೃಗಳ ದೇವರೇ, ಪರಲೋಕದಲ್ಲಿ ದೇವರಾಗಿರುವಾತನು ನೀನಲ್ಲವೋ? ನೀನು ಜನಾಂಗಗಳ ಎಲ್ಲಾ ರಾಜ್ಯಗಳನ್ನು ಆಳುವವನಾಗಿರುತ್ತೀ. ನಿನ್ನ ಹಸ್ತದಲ್ಲಿ ಬಲಪರಾಕ್ರಮಗಳಿರುತ್ತವೆ; ನಿನ್ನೆದುರಿನಲ್ಲಿ ಯಾರೂ ನಿಲ್ಲಲಾರರು.

7 ನಮ್ಮ ದೇವರಾದ ನೀನು ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರ ಎದುರಿನಿಂದ ಈ ದೇಶದ ನಿವಾಸಿಗಳನ್ನು ಹೊರಡಿಸಿ ದೇಶವನ್ನು ನಿನ್ನ ಸ್ನೇಹಿತನಾದ ಅಬ್ರಹಾಮನ ಸಂತಾನದವರಿಗೆ ಶಾಶ್ವತ ಸ್ವಾಸ್ತ್ಯವನ್ನಾಗಿ ಕೊಟ್ಟಿಯಲ್ಲಾ.

8 ಅವರು ಈ ದೇಶದಲ್ಲಿ ಇಳುಕೊಂಡು ಇದರಲ್ಲಿ ನಿನ್ನ ಹೆಸರಿಗೋಸ್ಕರ ಪವಿತ್ರಾಲಯವನ್ನು ಕಟ್ಟಿ -

9 ತಮ್ಮ ಮೇಲೆ ಖಡ್ಗವಿಧಿ ಘೋರವ್ಯಾಧಿ ಕ್ಷಾಮ ಮೊದಲಾದ ಆಪತ್ತುಗಳು ಬರುವಾಗ ತಾವು ನಿನ್ನ ನಾಮಮಹತ್ತು ಇರುವ ಈ ಆಲಯದ ಮುಂದೆಯೂ ನಿನ್ನ ಮುಂದೆಯೂ ನಿಂತು ತಮ್ಮ ಇಕ್ಕಟ್ಟಿನಲ್ಲಿ ನಿನಗೆ ಮೊರೆಯಿಡುವದಾದರೆ ನೀನು ಕೇಳಿ ರಕ್ಷಿಸುವಿ ಎಂದುಕೊಂಡರಷ್ಟೆ.

10 ಈ ಅಮ್ಮೋನಿಯರನ್ನೂ ಮೋವಾಬ್ಯರನ್ನೂ ಸೇಯೀರ್ ಪರ್ವತಪ್ರದೇಶದವರನ್ನೂ ನೋಡು; ಇಸ್ರಾಯೇಲ್ಯರು ಐಗುಪ್ತದೇಶದಿಂದ ಬರುತ್ತಿದ್ದಾಗ ಇವರ ದೇಶದಲ್ಲಿ ನುಗ್ಗಬಾರದೆಂದು ನಿನ್ನಿಂದ ಅಪ್ಪಣೆಹೊಂದಿ ಇವರನ್ನು ಸಂಹರಿಸದೆ ವಾರೆಯಾಗಿ ಹೋದರಲ್ಲಾ.

11 ಈಗ ಇವರು ಉಪಕಾರಕ್ಕೆ ಅಪಕಾರಮಾಡಿ ನೀನು ನಮಗೆ ಅನುಗ್ರಹಿಸಿದ ಸ್ವಾಸ್ತ್ಯದೊಳಗಿಂದ ನಮ್ಮನ್ನು ಹೊರಪಡಿಸುವದಕ್ಕೋಸ್ಕರ ನಮ್ಮ ಮೇಲೆ ಯುದ್ಧಕ್ಕೆ ಬಂದಿರುತ್ತಾರೆ.

12 ನಮ್ಮ ದೇವರೇ, ಅವರನ್ನು ದಂಡಿಸದೆ ಬಿಡುವಿಯೋ? ನಮ್ಮ ಮೇಲೆ ಬಂದ ಈ ಮಹಾ ಸಮೂಹದ ಮುಂದೆ ನಿಲ್ಲುವದಕ್ಕೆ ನಮ್ಮಲ್ಲಿ ಬಲವಿಲ್ಲ, ಏನು ಮಾಡಬೇಕೆಂಬದೂ ತಿಳಿಯದು; ನಮ್ಮ ಕಣ್ಣುಗಳು ನಿನ್ನನ್ನೇ ನೋಡುತ್ತವೆ ಎಂದು ಪ್ರಾರ್ಥಿಸಿದನು.

13 ಎಲ್ಲಾ ಯೆಹೂದ್ಯರೂ ಅವರ ಹೆಂಡತಿಮಕ್ಕಳೂ ಯೆಹೋವನ ಸನ್ನಿಧಿಯಲ್ಲಿ ನಿಂತಿದ್ದರು.

14 ಆಗ ಆ ಸಮೂಹದೊಳಗೆ ಆಸಾಫನ ವಂಶದವನಾದ ಲೇವಿಯನೂ ಮತ್ತನ್ಯನಿಗೆ ಹುಟ್ಟಿದ ಯೆಗೀಯೇಲನ ಮರಿಮಗನೂ ಬೆನಾಯನ ಮೊಮ್ಮಗನೂ ಜೆಕರ್ಯನ ಮಗನೂ ಆದ ಯಹಜೀಯೇಲನ ಮೇಲೆ ಯೆಹೋವನ ಆತ್ಮವು ಬಂದಿತು.

15 ಅವನು - ಎಲ್ಲಾ ಯೆಹೂದ್ಯರೇ, ಯೆರೂಸಲೇವಿುನವರೇ, ಅರಸನಾದ ಯೆಹೋಷಾಫಾಟನೇ, ಯೆಹೋವನು ಹೇಳುವದನ್ನು ಕೇಳಿರಿ! ಈ ಮಹಾಸಮೂಹದ ನಿವಿುತ್ತವಾಗಿ ಕಳವಳಗೊಳ್ಳಬೇಡಿರಿ, ಹೆದರಬೇಡಿರಿ, ಯುದ್ಧವು ನಿಮ್ಮದಲ್ಲ, ದೇವರದೇ.

16 ನಾಳೆ ಬೆಳಿಗ್ಗೆ ಅವರಿಗೆ ವಿರೋಧವಾಗಿ ಹೊರಡಿರಿ; ಇಗೋ ಅವರು ಹಚ್ಚೀಚ್ ಗಟ್ಟದ ಮಾರ್ಗವಾಗಿ ಬರುತ್ತಾರೆ. ಯೆರೂವೇಲ್ ಅರಣ್ಯದ ಮುಂದಿರುವ ಕಣಿವೆಯ ತುದಿಯಲ್ಲಿ ಅವರನ್ನು ಸಂಧಿಸುವಿರಿ.

17 ಈ ಸಾರಿ ನೀವು ಯುದ್ಧಮಾಡುವದು ಅವಶ್ಯವಿಲ್ಲ. ಯೆಹೂದ್ಯರೇ, ಯೆರೂಸಲೇವಿುನವರೇ, ಸುಮ್ಮನೆ ನಿಂತುಕೊಂಡು ಯೆಹೋವನು ನಿಮಗೋಸ್ಕರ ನಡಿಸುವ ರಕ್ಷಣಾಕಾರ್ಯವನ್ನು ನೋಡಿರಿ; ಹೆದರಬೇಡಿರಿ, ಕಳವಳಗೊಳ್ಳಬೇಡಿರಿ. ನಾಳೆ ಅವರೆದುರಿಗೆ ಹೊರಡಿರಿ, ಯೆಹೋವನು ನಿಮ್ಮ ಸಂಗಡ ಇರುವನು ಎಂದು ಹೇಳಿದನು.

18 ಆಗ ಯೆಹೋಷಾಫಾಟನು ನೆಲದ ಮಟ್ಟಿಗೂ ತಲೆಬಾಗಿಸಿದನು. ಎಲ್ಲಾ ಯೆಹೂದ್ಯರೂ ಯೆರೂಸಲೇವಿುನವರೂ ಯೆಹೋವನ ಮುಂದೆ ಅಡ್ಡ ಬಿದ್ದು ನಮಸ್ಕರಿಸಿದರು.

19 ಆಮೇಲೆ ಲೇವಿಯರಲ್ಲಿ ಕೆಹಾತ್ಯರೂ ಕೋರಹಿಯರೂ ಎದ್ದು ಇಸ್ರಾಯೇಲ್‍ದೇವರಾದ ಯೆಹೋವನನ್ನು ಮಹಾಸ್ವರದಿಂದ ಕೀರ್ತಿಸಿದರು.

20 ಅವರು ಮರುದಿನ ಬೆಳಿಗ್ಗೆ ಎದ್ದು ತೆಕೋವ ಅರಣ್ಯಕ್ಕೆ ಹೊರಟರು. ಅವರು ಹೊರಡುವಾಗ ಯೆಹೋಷಾಫಾಟನು ನಿಂತು ಅವರಿಗೆ - ಯೆಹೂದ್ಯರೇ, ಯೆರೂಸಲೇವಿುನವರೇ, ನನ್ನ ಮಾತನ್ನು ಕೇಳಿರಿ. ಯೆಹೋವನಲ್ಲಿ ಭರವಸವಿಡಿರಿ, ಆಗ ಸುರಕ್ಷಿತರಾಗಿರುವಿರಿ; ಆತನ ಪ್ರವಾದಿಗಳನ್ನು ನಂಬಿರಿ, ಆಗ ಸಾರ್ಥಕರಾಗುವಿರಿ ಎಂದು ಹೇಳಿದನು.

21 ಆಮೇಲೆ ಅವನು ಜನರ ಸಮ್ಮತಿಯಿಂದ ಯೆಹೋವನಿಗೋಸ್ಕರ ಗಾಯನಮಾಡುವದಕ್ಕಾಗಿ ಕೆಲವರನ್ನು ಆರಿಸಿಕೊಂಡು ಅವರಿಗೆ - ಪರಿಶುದ್ಧತ್ವವೆಂಬ ಭೂಷಣದೊಡನೆ ಭಟರ ಮುಂದೆ ಹೋಗುತ್ತಾ - ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ, ಆತನ ಕೃಪೆಯು ಶಾಶ್ವತವಾಗಿದೆ ಎಂದು ಭಜಿಸಿರಿ ಎಂಬದಾಗಿ ಆಜ್ಞಾಪಿಸಿದನು.

22 ಅವರು ಉತ್ಸಾಹ ಧ್ವನಿಯಿಂದ ಕೀರ್ತಿಸುವದಕ್ಕೆ ಪ್ರಾರಂಭಿಸಲು ಯೆಹೋವನು ಯೆಹೂದ್ಯರಿಗೆ ವಿರೋಧವಾಗಿ ಬಂದ ಅಮ್ಮೋನಿಯರನ್ನೂ ಮೋವಾಬ್ಯರನ್ನೂ ಸೇಯೀರ್ ಪರ್ವತದವರನ್ನೂ ನಶಿಸುವದಕ್ಕೋಸ್ಕರ ಅವರಲ್ಲಿ ಹೊಂಚುಹಾಕುವವರನ್ನು ಇರಿಸಿದ್ದರಿಂದ ಅಮ್ಮೋನಿಯರೂ ಮೋವಾಬ್ಯರೂ ಸೇಯೀರ್ ಪರ್ವತದವರ ಮೇಲೆ ಬಿದ್ದು ಅವರನ್ನು ಪೂರ್ಣವಾಗಿ ಸಂಹರಿಸಿಬಿಟ್ಟರು;

23 ಅವರನ್ನು ಮುಗಿಸಿಬಿಟ್ಟ ಮೇಲೆ ತಾವೇ ಒಬ್ಬರನ್ನೊಬ್ಬರು ಕೊಲ್ಲುವದಕ್ಕೆ ಪ್ರಾರಂಭಿಸಿದರು.

24 ಯೆಹೂದ್ಯರು ಅರಣ್ಯದಲ್ಲಿನ ಬುರುಜಿಗೆ ಬಂದು ಆ ಸಮೂಹವಿದ್ದ ಕಡೆಗೆ ನೋಡಿದಾಗ ನೆಲದ ಮೇಲೆ ಬಿದ್ದಿರುವ ಹೆಣಗಳು ಹೊರತಾಗಿ ಜೀವದಿಂದುಳಿದವರು ಯಾರೂ ಕಾಣಿಸಲಿಲ್ಲ.

25 ಯೆಹೋಷಾಫಾಟನೂ ಅವನ ಜನರೂ ಸುಲಿಗೆಮಾಡುವದಕ್ಕೋಸ್ಕರ ಅಲ್ಲಿಗೆ ಹೋಗಲು ಅವರಿಗೆ ದ್ರವ್ಯ ವಸ್ತ್ರ ಶ್ರೇಷ್ಠಾಯುಧ ಇವುಗಳು ರಾಶಿರಾಶಿಯಾಗಿ ಸಿಕ್ಕಿದವು. ಅವರು ಹೊರಲಾರದಷ್ಟು ಸುಲುಕೊಂಡರು. ಕೊಳ್ಳೆಯು ಬಲುಹೆಚ್ಚಾಗಿದ್ದದರಿಂದ ಅವರು ಮೂರು ದಿನಗಳವರೆಗೂ ಕೂಡಿಸುತ್ತಿದ್ದರು.

26 ನಾಲ್ಕನೆಯ ದಿನದಲ್ಲಿ ಬೆರಾಕ ತಗ್ಗಿನಲ್ಲಿ ಕೂಡಿಬಂದರು. ಅವರು ಅಲ್ಲಿ ಯೆಹೋವನನ್ನು ಸ್ತುತಿಸಿದದರಿಂದ ಆ ಸ್ಥಳಕ್ಕೆ ಇಂದಿನವರೆಗೂ ಬೆರಾಕ ತಗ್ಗು ಎಂಬ ಹೆಸರಿದೆ.

27 ಆಮೇಲೆ ಯೆಹೂದ್ಯರೂ ಯೆರೂಸಲೇವಿುನವರೂ ಅವರ ಮುಂಗಡೆಯಲ್ಲಿ ಯೆಹೋಷಾಫಾಟನೂ ಯೆಹೋವನು ತಮಗೆ ಶತ್ರುಗಳ ಮೇಲೆ ಜಯವನ್ನು ಅನುಗ್ರಹಿಸಿದ್ದಾನೆಂದು ಜಯಘೋಷ ಮಾಡುತ್ತಾ ಯೆರೂಸಲೇವಿುಗೆ ಹಿಂದಿರುಗಿದರು.

28 ಅವರು ಸ್ವರಮಂಡಲ ಕಿನ್ನರಿ ತುತೂರಿ ಇವುಗಳೊಡನೆ ಯೆರೂಸಲೇವಿುನಲ್ಲಿರುವ ಯೆಹೋವನ ಆಲಯಕ್ಕೆ ಬಂದರು.

29 ಯೆಹೋವನು ತಾನೇ ಇಸ್ರಾಯೇಲ್ಯರ ಶತ್ರುಗಳೊಡನೆ ಯುದ್ಧಮಾಡಿದನೆಂಬ ಸುದ್ದಿಯು ಅನ್ಯದೇಶಗಳ ರಾಜ್ಯಗಳವರಿಗೆ ಮುಟ್ಟಿದಾಗ ಅವರೆಲ್ಲರೂ ಬಹುಭೀತರಾದರು.

30 ಹೀಗೆ ದೇವಾನುಗ್ರಹದಿಂದ ಸುತ್ತಣ ವೈರಿಗಳ ಭಯತಪ್ಪಿ ಯೆಹೋಷಾಫಾಟನ ರಾಜ್ಯಕ್ಕೆ ಸಮಾಧಾನವುಂಟಾಯಿತು.


ಯೆಹೋಷಾಫಾಟನ ಚರಿತ್ರಸಮಾಪ್ತಿಯು

31 ಯೆಹೂದ್ಯರ ಅರಸನಾದ ಯೆಹೋಷಾಫಾಟನು ಪಟ್ಟಕ್ಕೆ ಬಂದಾಗ ಮೂವತ್ತೈದು ವರುಷದವನಾಗಿದ್ದನು; ಇವನು ಯೆರೂಸಲೇವಿುನಲ್ಲಿ ಇಪ್ಪತ್ತೈದು ವರುಷ ಆಳಿದನು. ಶಿಲ್ಹಿಯ ಮಗಳಾದ ಅಜೂಬಳೆಂಬಾಕೆಯು ಇವನ ತಾಯಿ.

32 ಇವನು ತಪ್ಪದೆ ತಂದೆಯಾದ ಆಸನ ಮಾರ್ಗದಲ್ಲಿ ನಡೆಯುತ್ತಾ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದರೂ

33 ಪೂಜಾಸ್ಥಳಗಳನ್ನು ಹಾಳುಮಾಡಲಿಲ್ಲ. ಜನರು ಇನ್ನೂ ತಮ್ಮ ಪಿತೃಗಳ ದೇವರ ಮೇಲೆ ಮನಸ್ಸಿಟ್ಟಿರಲಿಲ್ಲ.

34 ಯೆಹೋಷಾಫಾಟನ ಉಳಿದ ಪೂರ್ವೋತ್ತರ ಚರಿತ್ರೆಯು ಇಸ್ರಾಯೇಲ್ ರಾಜರ ಗ್ರಂಥದಲ್ಲಿ ಅಡಕವಾಗಿರುವ ಹನಾನೀಯ ಮಗನಾದ ಯೇಹುವಿನ ವೃತ್ತಾಂತದಲ್ಲಿ ಬರೆದಿರುತ್ತದೆ.

35 ಯೆಹೂದ್ಯರ ಅರಸನಾದ ಯೆಹೋಷಾಫಾಟನು ಇಸ್ರಾಯೇಲ್ಯರ ಅರಸನೂ ಬಹುದುರಾಚಾರಿಯೂ ಆದ ಅಹಜ್ಯನೊಡನೆ ಒಡಂಬಡಿಕೆಮಾಡಿಕೊಂಡನು.

36 ಅವರು ತಾರ್ಷೀಷಿಗೆ ಹೋಗುವದಕ್ಕಾಗಿ ಹಡಗುಗಳನ್ನು ಕಟ್ಟಬೇಕೆಂದು ಒಡಂಬಡಿಕೆಮಾಡಿಕೊಂಡು ಅವುಗಳನ್ನು ಎಚ್ಯೋನ್ಗೆಬೆರಿನಲ್ಲಿ ಕಟ್ಟಿಸಿದರು.

37 ಆಗ ಮಾರೇಷಾ ಊರಿನ ದೋದಾವಾಹುವಿನ ಮಗನಾದ ಎಲೀಯೆಜರನು ಯೆಹೋಷಾಫಾಟನಿಗೆ ವಿರೋಧವಾಗಿ - ನೀನು ಅಹಜ್ಯನೊಡನೆ ಒಡಂಬಡಿಕೆ ಮಾಡಿಕೊಂಡದ್ದರಿಂದ ಯೆಹೋವನು ನಿನ್ನ ಕೆಲಸವನ್ನು ಹಾಳುಮಾಡುವನು ಎಂದು ಪ್ರವಾದಿಸಿದನು. ಆ ಹಡಗುಗಳು ಒಡೆದುಹೋದದ್ದರಿಂದ ತಾರ್ಷೀಷಿಗೆ ಹೊರಡಲೇ ಇಲ್ಲ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು