2 ಪೂರ್ವಕಾಲ ವೃತ್ತಾಂತ 2 - ಕನ್ನಡ ಸತ್ಯವೇದವು J.V. (BSI)ಸೊಲೊಮೋನನು ದೇವಾಲಯವನ್ನು ಕಟ್ಟಿಸುವದಕ್ಕಾಗಿ ವ್ಯವಸ್ಥೆಮಾಡಿದ್ದು 1 ಸೊಲೊಮೋನನು ಯೆಹೋವನ ಹೆಸರಿಗೋಸ್ಕರ ಆಲಯವನ್ನೂ ತನಗೋಸ್ಕರ ಅರಮನೆಯನ್ನೂ ಕಟ್ಟಿಸಬೇಕೆಂದು ಮನಸ್ಸುಳ್ಳವನಾಗಿ 2 ಎಪ್ಪತ್ತುಸಾವಿರ ಮಂದಿ ಹೊರೆಹೊರುವವರನ್ನೂ ಎಂಭತ್ತು ಸಾವಿರ ಮಂದಿ ಕಲ್ಲುಗಣಿಯಲ್ಲಿ ಕೆಲಸಮಾಡುವವರನ್ನೂ ಇವರ ಮೇಲ್ವಿಚಾರಣೆಗಾಗಿ ಮೂರು ಸಾವಿರದ ಆರು ನೂರು ಮಂದಿ ಮೇಸ್ತ್ರಿಗಳನ್ನೂ ಲೆಕ್ಕಿಸಿ ನೇವಿುಸಿದನು. 3 ಇದಲ್ಲದೆ ಅವನು ದೂತರ ಮುಖಾಂತರವಾಗಿ ತೂರಿನ ಅರಸನಾದ ಹೂರಾಮನಿಗೆ - ನನ್ನ ತಂದೆಯಾದ ದಾವೀದನು ತನ್ನ ವಾಸಕ್ಕೋಸ್ಕರ ಅರಮನೆಯನ್ನು ಕಟ್ಟಿಸಿಕೊಳ್ಳುವದಕ್ಕಾಗಿ ನೀನು ಅವನಿಗೆ ದೇವದಾರುಮರಗಳನ್ನು ಕಳುಹಿಸಿದಿಯಲ್ಲಾ. 4 ಈಗ ನಾನು ನನ್ನ ದೇವರಾದ ಯೆಹೋವನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಿಸಿ ಇಸ್ರಾಯೇಲ್ಯರಿಗಿರುವ ಶಾಶ್ವತನಿಯಮದ ಪ್ರಕಾರ ಆತನ ಸನ್ನಿಧಿಯಲ್ಲಿ ಸುಗಂಧದ್ರವ್ಯಗಳಿಂದ ಧೂಪಹಾಕುವದಕ್ಕೂ ಪ್ರತಿನಿತ್ಯ ನೈವೇದ್ಯದ ರೊಟ್ಟಿಗಳನ್ನಿಡುವದಕ್ಕೂ ಪ್ರಾತಃಕಾಲ, ಸಾಯಂಕಾಲ, ಸಬ್ಬತ್‍ದಿನ, ಅಮಾವಾಸ್ಯೆ, ನಮ್ಮ ದೇವರಾದ ಯೆಹೋವನ ಜಾತ್ರೆ ಇವುಗಳಲ್ಲಿ ಸರ್ವಾಂಗ ಹೋಮವನ್ನರ್ಪಿಸುವದಕ್ಕೂ ಆ ಆಲಯವನ್ನು ಆತನಿಗೋಸ್ಕರ ಪ್ರತಿಷ್ಠಿಸಬೇಕೆಂದಿದ್ದೇನೆ. 5 ನಮ್ಮ ದೇವರು ಎಲ್ಲಾ ದೇವರುಗಳಿಗಿಂತ ದೊಡ್ಡವನು; ನಾನು ಕಟ್ಟಿಸುವ ಆಲಯವೂ ದೊಡ್ಡದಾಗಿರಬೇಕು. 6 ಆತನಿಗೋಸ್ಕರ ಆಲಯವನ್ನು ಕಟ್ಟುವದಕ್ಕೆ ಶಕ್ತರಾರು! ಆಕಾಶವೂ ಉನ್ನತೋನ್ನತವಾದ ಆಕಾಶವೂ ಆತನ ವಾಸಕ್ಕೆ ಸಾಲದಿರುವಲ್ಲಿ ಆತನಿಗೋಸ್ಕರ ಆಲಯವನ್ನು ಕಟ್ಟುವದಕ್ಕೆ ಶಕ್ತರಾರು! ನಾನು ಆತನ ಸನ್ನಿಧಿಯಲ್ಲಿ ಧೂಪಹಾಕುವ ಉದ್ದೇಶದಿಂದ ಹೊರತು ಆತನ ವಾಸಕ್ಕಾಗಿ ಆಲಯವನ್ನು ಕಟ್ಟಿಸುವದಕ್ಕೆ ಎಷ್ಟರವನು! 7 ಹೀಗಿರಲು ಬಂಗಾರ ಬೆಳ್ಳಿ ತಾಮ್ರ ಕಬ್ಬಿಣ ಇವುಗಳ ಕೆಲಸಮಾಡುವದರಲ್ಲಿಯೂ ಧೂಮ್ರ ರಕ್ತ ನೀಲವರ್ಣಗಳ ಬಟ್ಟೆಯನ್ನು ನೇಯುವದರಲ್ಲಿಯೂ ಚಿತ್ರ ಕೆತ್ತುವದರಲ್ಲಿಯೂ ಜಾಣನಾದ ಮನುಷ್ಯನನ್ನು ನನ್ನ ಬಳಿಗೆ ಕಳುಹಿಸು; ನನ್ನ ತಂದೆಯು ಗೊತ್ತು ಮಾಡಿದಂಥ ಮತ್ತು ನನ್ನೊಡನೆ ಯೆಹೂದದಲ್ಲಿಯೂ ಯೆರೂಸಲೇವಿುನಲ್ಲಿಯೂ ಇರುವಂಥ ಜಾಣರೊಂದಿಗೆ ಅವನು ಕೆಲಸಮಾಡಲಿ. 8 ಮತ್ತು ಲೆಬನೋನಿನಿಂದ ದೇವದಾರುಮರವನ್ನೂ ತುರಾಯಿಮರವನ್ನೂ ಸುಗಂಧದಮರವನ್ನೂ ನನಗೆ ಕಳುಹಿಸಬೇಕು. ನಿನ್ನ ಆಳುಗಳು ಲೆಬನೋನಿನ ಮರಗಳನ್ನು ಕಡಿಯುವದರಲ್ಲಿ ಜಾಣರೆಂದು ನನಗೆ ಗೊತ್ತಿದೆ. ನಿನ್ನ ಆಳುಗಳ ಜೊತೆಯಲ್ಲಿ ನನ್ನ ಆಳುಗಳೂ ಇರುವರು. 9 ನಾನು ದೊಡ್ಡದಾಗಿಯೂ ಸೋಜಿಗವಾಗಿಯೂ ಇರುವ ಆಲಯವನ್ನು ಕಟ್ಟಿಸುವದರಿಂದ ನನಗೋಸ್ಕರ ಹೆಚ್ಚು ಮರವನ್ನು ಸಿದ್ಧಪಡಿಸಬೇಕು. 10 ಮರಕಡಿಯುವ ನಿನ್ನ ಆಳುಗಳಿಗಾಗಿ ಇಪ್ಪತ್ತು ಸಾವಿರ ಕೋರ್ ಗೋದಿ, ಇಪ್ಪತ್ತು ಸಾವಿರ ಕೋರ್ ಜವೆಗೋದಿ, ಇಪ್ಪತ್ತು ಸಾವಿರ ಬತ್ ದ್ರಾಕ್ಷಾರಸ, ಇಪ್ಪತ್ತು ಸಾವಿರ ಬತ್ ಎಣ್ಣೆ ಇವುಗಳನ್ನು ಕೊಡುವೆನೆಂದು ಹೇಳಿಸಿದನು. 11 ತೂರಿನ ಅರಸನಾದ ಹೂರಾಮನು ಪತ್ರದ ಮೂಲಕವಾಗಿ ಸೊಲೊಮೋನನಿಗೆ - ಯೆಹೋವನು ತನ್ನ ಪ್ರಜೆಗಳನ್ನು ಪ್ರೀತಿಸುವವನಾಗಿರುವದರಿಂದ ನಿನ್ನನ್ನು ಅವರ ಅರಸನನ್ನಾಗಿ ನೇವಿುಸಿದ್ದಾನೆ. 12 ಭೂಮ್ಯಾಕಾಶಗಳನ್ನುಂಟುಮಾಡಿದ ಇಸ್ರಾಯೇಲ್‍ದೇವರಾದ ಯೆಹೋವನು ತನಗೋಸ್ಕರ ದೇವಾಲಯವನ್ನೂ ರಾಜನಿಗೋಸ್ಕರ ಅರಮನೆಯನ್ನೂ ಕಟ್ಟಿಸತಕ್ಕ ಬುದ್ಧಿ ಜ್ಞಾನವಿವೇಕಗಳುಳ್ಳ ಮಗನನ್ನು ಅರಸನಾದ ದಾವೀದನಿಗೆ ಕೊಟ್ಟದರಿಂದ ಆತನಿಗೆ ಸ್ತೋತ್ರವಾಗಲಿ. 13 ನಾನು ಈಗ ಜ್ಞಾನವಿವೇಕಗಳುಳ್ಳ ಪುರುಷನನ್ನು ಕಳುಹಿಸುತ್ತೇನೆ; ಅವನ ಹೆಸರು ಹೂರಾಮಾಬೀ. 14 ಅವನು ದಾನ್‍ಕುಲದ ಸ್ತ್ರೀಯ ಮಗನು; ಅವನ ತಂದೆ ತೂರಿನವನು. ಅವನು ಬಂಗಾರ ಬೆಳ್ಳಿ ತಾಮ್ರ ಕಬ್ಬಿಣ ಕಲ್ಲು ಮರ ಇವುಗಳ ಕೆಲಸವನ್ನು ಮಾಡುವದಕ್ಕೂ ಧೂಮ್ರ ನೀಲರಕ್ತವರ್ಣಗಳುಳ್ಳ ನಾರುಬಟ್ಟೆಗಳನ್ನು ನೇಯುವದಕ್ಕೂ ಎಲ್ಲಾ ತರದ ಕೆತ್ತನೆಯ ಕೆಲಸವನ್ನು ಮಾಡುವದಕ್ಕೂ ತನಗೆ ಒಪ್ಪಿಸಲ್ಪಟ್ಟ ಎಲ್ಲಾ ಚಮತ್ಕಾರವಾದ ಕೆಲಸಗಳನ್ನು ನಡಿಸುವದಕ್ಕೂ ಸಮರ್ಥನು. ನೀನೂ ನಿನ್ನ ತಂದೆಯಾದ ದಾವೀದನೂ ಗೊತ್ತುಮಾಡಿದ ಜಾಣರೊಡನೆ ಅವನು ಕೆಲಸಮಾಡಲಿ. 15 ಈಗ ನನ್ನ ಒಡೆಯನು ತಾನು ಮಾತುಕೊಟ್ಟ ಮೇರೆಗೆ ಗೋದಿ ಜವೆಗೋದಿ ಎಣ್ಣೆ ದ್ರಾಕ್ಷಾರಸ ಇವುಗಳನ್ನು ತನ್ನ ದಾಸರಿಗೆ ಕಳುಹಿಸಬೇಕು. 16 ನಾವಾದರೋ ನಿನಗೆ ಬೇಕಾದ ಎಲ್ಲಾ ಮರಗಳನ್ನು ಲೆಬನೋನಿನಲ್ಲಿ ಕಡಿದು ತೆಪ್ಪಗಳಾಗಿ ಕಟ್ಟಿ ಸಮುದ್ರಮಾರ್ಗವಾಗಿ ಯೊಪ್ಪಕ್ಕೆ ಕಳುಹಿಸುವೆವು; ಅಲ್ಲಿಂದ ನೀನು ಅವುಗಳನ್ನು ಯೆರೂಸಲೇವಿುಗೆ ತರಿಸಿಕೊಳ್ಳಬಹುದು ಎಂಬದಾಗಿ ಉತ್ತರಕೊಟ್ಟನು. 17 ಆಮೇಲೆ ಸೊಲೊಮೋನನು ತನ್ನ ತಂದೆಯಾದ ದಾವೀದನು ಮಾಡಿಸಿದ ಖಾನೇಷುಮಾರಿಯ ಆಧಾರದಿಂದ ಇಸ್ರಾಯೇಲ್ ದೇಶದಲ್ಲಿ ಪ್ರವಾಸಿಗಳಾಗಿದ್ದ ಎಲ್ಲಾ ಅನ್ಯಜನರನ್ನು ಲೆಕ್ಕಿಸಲು ಒಂದು ಲಕ್ಷ ಐವತ್ತಮೂರು ಸಾವಿರದ ಆರುನೂರು ಮಂದಿ ಸಿಕ್ಕಿದರು. 18 ಅವರಲ್ಲಿ ಹೊರೆಹೊರುವದಕ್ಕಾಗಿ ಎಪ್ಪತ್ತು ಸಾವಿರ ಮಂದಿಯನ್ನೂ ಕಲ್ಲುಗಣಿಗಳಲ್ಲಿ ಕೆಲಸಮಾಡುವದಕ್ಕಾಗಿ ಎಂಭತ್ತು ಸಾವಿರ ಮಂದಿಯನ್ನೂ ಕೆಲಸದವರ ಮೇಲ್ವಿಚಾರಣೆಗಾಗಿ ಮೂರು ಸಾವಿರದ ಆರುನೂರು ಮಂದಿಯನ್ನೂ ನೇವಿುಸಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India