2 ಪೂರ್ವಕಾಲ ವೃತ್ತಾಂತ 19 - ಕನ್ನಡ ಸತ್ಯವೇದವು J.V. (BSI)1 ಯೆಹೂದದ ಅರಸನಾದ ಯೆಹೋಷಾಫಾಟನು ಸುರಕ್ಷಿತವಾಗಿ ತನ್ನ ಮನೆಗೆ ಹಿಂದಿರುಗಿದನು. 2 ಅವನು ಯೆರೂಸಲೇವಿುಗೆ ಬರಲು ಹನಾನೀಯನ ಮಗನಾದ ಯೇಹೂ ಎಂಬ ದರ್ಶಿಯು ಅವನನ್ನು ಎದುರುಗೊಂಡು ಅವನಿಗೆ - ನೀನು ಕೆಟ್ಟವನಿಗೆ ಸಹಾಯಮಾಡತಕ್ಕದ್ದೋ? ಯೆಹೋವನ ಹಗೆಗಾರರನ್ನು ಪ್ರೀತಿಸುವದೋ! ನೀನು ಹೀಗೆ ಮಾಡಿದ್ದರಿಂದ ಯೆಹೋವನ ಕೋಪವು ನಿನ್ನ ಮೇಲಿರುತ್ತದೆ. 3 ಆದರೂ ನೀನು ದೇಶದೊಳಗಿಂದ ಅಶೇರವಿಗ್ರಹಸ್ತಂಭಗಳನ್ನು ತೆಗೆದುಹಾಕಿ ಯೆಹೋವನ ಭಕ್ತಿಯಲ್ಲಿ ಮನಸ್ಸಿಟ್ಟದ್ದರಿಂದ ನಿನ್ನಲ್ಲಿ ಸುಶೀಲತೆಯೂ ಉಂಟೆಂದು ತಿಳಿದುಬಂತು ಎಂಬದಾಗಿ ಹೇಳಿದನು. ಯೆಹೋಷಾಫಾಟನು ಸ್ಥಳಿಕ ನ್ಯಾಯಸ್ಥಾನಗಳನ್ನೂ ಮುಖ್ಯನ್ಯಾಯಸ್ಥಾನವನ್ನೂ ಸ್ಥಾಪಿಸಿದ್ದು 4 ಯೆಹೋಷಾಫಾಟನು ಯೆರೂಸಲೇವಿುನಲ್ಲಿ ವಾಸವಾಗಿದ್ದು ಇನ್ನೊಮ್ಮೆ ಬೇರ್ಷೆಬದಿಂದ ಎಫ್ರಾಯೀಮ್ ಪರ್ವತದವರೆಗೂ ಸಂಚರಿಸಿ ತನ್ನ ಪ್ರಜೆಗಳನ್ನು ಅವರ ಪಿತೃಗಳ ದೇವರಾದ ಯೆಹೋವನ ಕಡೆಗೆ ತಿರುಗಿಸಿದನು. 5 ಅವನು ಯೆಹೂದದೇಶದ ಪ್ರತಿಯೊಂದು ಕೋಟೆಕೊತ್ತಲಗಳುಳ್ಳ ಪಟ್ಟಣದಲ್ಲಿ ನ್ಯಾಯಾಧಿಪತಿಗಳನ್ನು ನೇವಿುಸಿ ಅವರಿಗೆ - 6 ನೀವು ಹೇಗೆ ಕೆಲಸನಡಿಸುತ್ತೀರಿ ಎಂಬದರ ವಿಷಯ ನೋಡಿಕೊಳ್ಳಿರಿ. ನೀವು ನ್ಯಾಯತೀರಿಸುವದು ಮನುಷ್ಯರಿಗೋಸ್ಕರವಲ್ಲ, ಯೆಹೋವನಿಗೋಸ್ಕರವೇ. ನ್ಯಾಯವಿಚಾರಣೆ ನಡೆಯುವಾಗ ಆತನು ನಿಮ್ಮ ಮಧ್ಯದಲ್ಲಿರುತ್ತಾನೆ. 7 ಹೀಗಿರುವಲ್ಲಿ ನಿಮಗೆ ಯೆಹೋವನ ಭಯವು ಇರಲಿ. ನಿಮ್ಮ ದೇವರಾದ ಯೆಹೋವನಲ್ಲಿ ಅನ್ಯಾಯವೂ ಮುಖದಾಕ್ಷಿಣ್ಯವೂ ಲಂಚತಿನ್ನುವದೂ ಇಲ್ಲವಾದದರಿಂದ ಜಾಗರೂಕತೆಯಿಂದ ಕೆಲಸಮಾಡಿರಿ ಎಂದು ಎಚ್ಚರಿಸಿದನು. 8 ಇದಲ್ಲದೆ ಯೆಹೋಷಾಫಾಟನು ತನ್ನ ಪರಿವಾರದವರೊಡನೆ ಯೆರೂಸಲೇವಿುಗೆ ಹಿಂದಿರುಗಿ ಬಂದು ಲೇವಿಯರಿಂದಲೂ ಯಾಜಕರಿಂದಲೂ ಇಸ್ರಾಯೇಲ್‍ಗೋತ್ರ ಪ್ರಧಾನರಿಂದಲೂ ಕೆಲವರನ್ನು ಆರಿಸಿ ಯೆಹೋವ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ವ್ಯಾಜ್ಯಗಳನ್ನೂ ಬೇರೆ ವ್ಯಾಜ್ಯಗಳನ್ನೂ ವಿಚಾರಿಸಿ ತೀರಿಸುವದಕ್ಕೋಸ್ಕರ ಯೆರೂಸಲೇವಿುನಲ್ಲಿ ಇರಿಸಿ ಅವರಿಗೆ - 9 ನೀವು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ನಂಬಿಕೆಯಿಂದಲೂ ಯಥಾರ್ಥಮನಸ್ಸಿನಿಂದಲೂ ಮಾಡತಕ್ಕ ಕೆಲಸವು ಯಾವದಂದರೆ - 10 ಯೆಹೂದದ ಪಟ್ಟಣಗಳಲ್ಲಿ ವಾಸಿಸುವ ನಿಮ್ಮ ಸಹೋದರರೊಳಗೆ ಜೀವಹತ್ಯ ಸಂಬಂಧದಲ್ಲಿಯಾಗಲಿ ಧರ್ಮಶಾಸ್ತ್ರದ ಆಯಾ ಆಜ್ಞಾವಿಧಿನ್ಯಾಯಗಳ ಸಂಬಂಧದಲ್ಲಿಯಾಗಲಿ ವ್ಯಾಜ್ಯವುಂಟಾಗಿ ಅದು ನಿಮ್ಮ ಮುಂದೆ ಬರುವದಾದರೆ ನಿಮ್ಮ ಸಹೋದರರು ಯೆಹೋವನ ದೃಷ್ಟಿಯಲ್ಲಿ ಅಪರಾಧಿಗಳಾಗದಂತೆಯೂ ನೀವು ಅವರೊಂದಿಗೆ ದೇವಕೋಪಕ್ಕೆ ಗುರಿಯಾಗದಂತೆಯೂ ಅವರನ್ನು ಎಚ್ಚರಿಸಿರಿ. ಹೀಗೆ ಮಾಡುವದಾದರೆ ನೀವು ನಿರ್ದೋಷಿಗಳಾಗಿರುವಿರಿ. 11 ಇಗೋ, ಯೆಹೋವನ ಕಾರ್ಯಸಂಬಂಧವಾದ ಎಲ್ಲಾ ವಿಚಾರಣೆಗಳಲ್ಲಿಯೂ ಮಹಾಯಾಜಕನಾದ ಅಮರ್ಯನು ನಿಮ್ಮ ಅಧ್ಯಕ್ಷನು; ರಾಜಕೀಯಕಾರ್ಯ ಸಂಬಂಧವಾದ ಎಲ್ಲಾ ವಿಚಾರಣೆಗಳಲ್ಲಿಯೂ ಇಷ್ಮಾಯೇಲನ ಮಗನೂ ಯೆಹೂದಕುಲಪ್ರಭುವೂ ಆದ ಜೆಬದ್ಯನು ಅಧ್ಯಕ್ಷನು; ಲೇವಿಯರು ನ್ಯಾಯಸ್ಥಾನ ಲೇಖಕರು; ಧೈರ್ಯದಿಂದ ಕೆಲಸಮಾಡಿರಿ, ಯೆಹೋವನು ಸಜ್ಜನರ ಸಹಾಯಕನು ಎಂದು ಹೇಳಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India