2 ಪೂರ್ವಕಾಲ ವೃತ್ತಾಂತ 17 - ಕನ್ನಡ ಸತ್ಯವೇದವು J.V. (BSI)ಅರಸನಾದ ಯೆಹೋಷಾಫಾಟನ ಯೆಹೋವಧರ್ಮಾಭಿಮಾನವೂ ರಾಜವೈಭವವೂ 1 ಅವನಿಗೆ ಬದಲಾಗಿ ಅವನ ಮಗನಾದ ಯೆಹೋಷಾಫಾಟನು ಅರಸನಾಗಿ ಇಸ್ರಾಯೇಲ್ಯರಿಂದ ಅಪಾಯವಾಗದಂತೆ ತನ್ನನ್ನು ಭದ್ರಪಡಿಸಿಕೊಂಡನು. 2 ಇವನು ಯೆಹೂದದ ಕೋಟೆಕೊತ್ತಲಗಳುಳ್ಳ ಎಲ್ಲಾ ಪಟ್ಟಣಗಳಲ್ಲಿಯೂ ಸೈನ್ಯವನ್ನಿರಿಸಿ ಯೆಹೂದ ದೇಶದಲ್ಲಿಯೂ ತನ್ನ ತಂದೆಯಾದ ಆಸನು ಕಿತ್ತುಕೊಂಡಿದ್ದ ಎಫ್ರಾಯೀಮ್ಯರ ಪಟ್ಟಣದಲ್ಲಿಯೂ ಅಧಿಕಾರಿಗಳನ್ನು ನೇವಿುಸಿದನು. 3 ಇವನು ಬಾಳ್‍ದೇವರುಗಳನ್ನು ಅವಲಂಬಿಸದೆ ತನ್ನ ಪೂರ್ವಿಕನಾದ ದಾವೀದನ ಮೊದಲಿನ ನಡತೆಯ ಪ್ರಕಾರ ನಡೆಯುತ್ತಿದ್ದದರಿಂದ ಯೆಹೋವನು ಇವನ ಸಂಗಡ ಇದ್ದನು. 4 ಇವನು ಇಸ್ರಾಯೇಲ್ಯರಂತೆ ನಡೆಯದೆ ತನ್ನ ತಂದೆಯ ದೇವರ ಭಕ್ತನಾಗಿ ಆತನ ಆಜ್ಞೆಗಳನ್ನು ಅನುಸರಿಸಿದನು. 5 ಆದದರಿಂದ ಯೆಹೋವನು ಇವನ ರಾಜ್ಯಾಧಿಕಾರವನ್ನು ಸ್ಥಿರಪಡಿಸಿದನು; ಯೆಹೂದ್ಯರೆಲ್ಲರೂ ಯೆಹೋಷಾಫಾಟನಿಗೆ ಕಾಣಿಕೆ ಕೊಡುತ್ತಿದ್ದದರಿಂದ ಇವನ ಧನಘನತೆಗಳು ಹೆಚ್ಚಾದವು. 6 ಇವನು ಯೆಹೋವನ ಮಾರ್ಗದಲ್ಲಿ ನಡೆದು ಧೈರ್ಯಗೊಂಡನು; ಇದಲ್ಲದೆ ಯೆಹೂದದೇಶದಲ್ಲಿದ್ದ ಪೂಜಾಸ್ಥಳಗಳನ್ನೂ ಅಶೇರವಿಗ್ರಹಸ್ತಂಭಗಳನ್ನೂ ತೆಗೆದುಹಾಕಿಸಿದನು. 7 ಇವನು ತನ್ನ ಆಳಿಕೆಯ ಮೂರನೆಯ ವರುಷದಲ್ಲಿ ತನ್ನ ಸರದಾರರಾದ ಬೆನ್ಹೈಲ್, ಓಬದ್ಯ, ಜೆಕರ್ಯ, ನೆತನೇಲ್, ಮೀಕಾಯ ಇವರನ್ನೂ 8 ಇವರ ಜೊತೆಯಲ್ಲಿ ಶೆಮಾಯ, ನೆತನ್ಯ, ಜೆಬದ್ಯ, ಅಸಾಹೇಲ್, ಶೆಮೀರಾಮೋತ್, ಯೆಹೋನಾತಾನ್, ಅದೋನೀಯ, ಟೋಬೀಯ, ಟೋಬದೋನೀಯ ಎಂಬ ಲೇವಿಯರನ್ನೂ ಎಲೀಷಾಮಾ, ಯೆಹೋರಾಮ್ ಎಂಬ ಯಾಜಕರನ್ನೂ ಧರ್ಮೋಪದೇಶ ಮಾಡುವದಕ್ಕೋಸ್ಕರ ಯೆಹೂದ ದೇಶದ ಪಟ್ಟಣಗಳಿಗೆ ಕಳುಹಿಸಿದನು. 9 ಇವರು ಯೆಹೋವಧರ್ಮಶಾಸ್ತ್ರವನ್ನು ತೆಗೆದುಕೊಂಡು ಯೆಹೂದ ದೇಶದಲ್ಲೆಲ್ಲಾ ಸಂಚಾರಮಾಡಿ ಜನರಿಗೆ ಬೋಧಿಸಿದರು. 10 ಯೆಹೂದದ ಸುತ್ತಣ ದೇಶಗಳ ರಾಜ್ಯಗಳವರಿಗೆ ಯೆಹೋವನ ಭಯವಿದ್ದದರಿಂದ ಅವರು ಯೆಹೋಷಾಫಾಟನೊಡನೆ ಯುದ್ಧಕ್ಕೆ ಬರಲಿಲ್ಲ. 11 ಫಿಲಿಷ್ಟಿಯರಲ್ಲಿ ಕೆಲವರು ಯೆಹೋಷಾಫಾಟನಿಗೆ ಕಾಣಿಕೆಯನ್ನೂ ಕಪ್ಪವನ್ನಾಗಿ ಬೆಳ್ಳಿಯನ್ನೂ ತಂದುಕೊಡುತ್ತಿದ್ದರು. ಅರಬಿಯರು ತಮ್ಮ ಪಶುಗಳಲ್ಲಿ ಏಳು ಸಾವಿರದ ಏಳು ನೂರು ಟಗರುಗಳನ್ನೂ ಏಳು ಸಾವಿರದ ಏಳು ನೂರು ಹೋತಗಳನ್ನೂ ಕೊಡುತ್ತಿದ್ದರು. 12 ಹೀಗೆ ಯೆಹೋಷಾಫಾಟನು ಅತ್ಯಧಿಕವಾಗಿ ಅಭಿವೃದ್ಧಿಹೊಂದಿ ಯೆಹೂದದೇಶದಲ್ಲಿ ಕೋಟೆಗಳನ್ನೂ ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು. 13 ಯೆಹೂದದ ಪಟ್ಟಣಗಳಲ್ಲಿ ದೊಡ್ಡ ಪದಾರ್ಥಸಂಗ್ರಹವೂ ಯೆರೂಸಲೇವಿುನಲ್ಲಿ ರಣವೀರರಾದ ಭಟರೂ ಇದ್ದರು. 14 ಗೋತ್ರಗಳ ಪ್ರಕಾರ ಲೆಕ್ಕಿಸಲ್ಪಟ್ಟ ಇವರ ಗೋತ್ರಪ್ರಧಾನರು ಯಾರಂದರೆ - ಯೆಹೂದ್ಯರಲ್ಲಿ ಮೂರು ಲಕ್ಷ ಮಂದಿ ರಣವೀರರ ಅಧಿಪತಿಯಾದ ಅದ್ನ; 15 ಇವನ ತರುವಾಯ ಎರಡು ಲಕ್ಷದ ಎಂಭತ್ತು ಸಾವಿರ ಮಂದಿ ರಣವೀರರ ಅಧಿಪತಿಯಾದ ಯೆಹೋಹಾನಾನ್; 16 ತರುವಾಯ ಎರಡು ಲಕ್ಷ ಮಂದಿ ರಣವೀರರೊಡನೆ ಸ್ವೇಚ್ಫೆಯಿಂದ ತನ್ನನ್ನು ಯೆಹೋವನಿಗೆ ಪ್ರತಿಷ್ಠಿಸಿಕೊಂಡ ಜಿಕ್ರಿಯ ಮಗನಾದ ಅಮಸ್ಯ; 17 ಬೆನ್ಯಾಮೀನ್ಯರಲ್ಲಿ ಬಿಲ್ಲುಗುರಾಣಿಗಳನ್ನು ಹಿಡಿದುಕೊಂಡ ಎರಡು ಲಕ್ಷ ಸೈನಿಕರ ನಾಯಕನೂ ರಣವೀರನೂ ಆದ ಎಲ್ಯಾದ; 18 ಇವನ ತರುವಾಯ ಒಂದು ಲಕ್ಷದ ಎಂಭತ್ತು ಸಾವಿರ ಮಂದಿ ಯುದ್ಧಸನ್ನದ್ಧರ ನಾಯಕನಾದ ಯೆಹೋಜಾಬಾದ್ ಇವರೇ. 19 ಅರಸನಿಗೆ ತನ್ನ ಸನ್ನಿಧಿಯಲ್ಲಿ ಸೇವೆಮಾಡುತ್ತಿರುವ ಇವರಲ್ಲದೆ ಕೋಟೆಕೊತ್ತಲಗಳುಳ್ಳ ಪಟ್ಟಣಗಳಲ್ಲಿಯೂ ಸೈನಿಕರಿದ್ದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India