Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೂರ್ವಕಾಲ ವೃತ್ತಾಂತ 15 - ಕನ್ನಡ ಸತ್ಯವೇದವು J.V. (BSI)


ಆಸನು ಯೆಹೋವಧರ್ಮವನ್ನು ಸಂಸ್ಥಾಪನೆಮಾಡಿದ್ದು

1 ಆಗ ಓಬೇದನ ಮಗನಾದ ಅಜರ್ಯನ ಮೇಲೆ ದೇವರ ಆತ್ಮವು ಬಂದದರಿಂದ

2 ಅವನು ಆಸನನ್ನು ಎದುರುಗೊಳ್ಳುವದಕ್ಕೆ ಹೋಗಿ ಅವನಿಗೆ - ಆಸನೇ, ಎಲ್ಲಾ ಯೆಹೂದ ಬೆನ್ಯಾಮೀನ್ ಕುಲಗಳವರೇ, ಕಿವಿಗೊಡಿರಿ. ನೀವು ಯೆಹೋವನನ್ನು ಹೊಂದಿಕೊಂಡಿರುವ ತನಕ ಆತನೂ ನಿಮ್ಮೊಂದಿಗಿರುವನು; ನೀವು ಆತನನ್ನು ಹುಡುಕಿದರೆ ನಿಮಗೆ ಸಿಕ್ಕುವನು; ಆತನನ್ನು ಬಿಟ್ಟರೆ ಆತನೂ ನಿಮ್ಮನ್ನು ಬಿಟ್ಟು ಬಿಡುವನು.

3 ಇಸ್ರಾಯೇಲ್ಯರಿಗೆ ಬಹುಕಾಲದವರೆಗೆ ನಿಜವಾದ ದೇವರೂ ಬೋಧಿಸುವ ಯಾಜಕರೂ ಧರ್ಮಶಾಸ್ತ್ರವೂ ಇರಲಿಲ್ಲ.

4 ಅವರು ತಮ್ಮ ಇಕ್ಕಟ್ಟಿನಲ್ಲಿ ಇಸ್ರಾಯೇಲ್ ದೇವರಾದ ಯೆಹೋವನ ಕಡೆಗೆ ತಿರುಗಿಕೊಂಡರು. ಅವರು ಆತನನ್ನು ಹುಡುಕಿದಾಗ ಆತನು ಅವರಿಗೆ ಸಿಕ್ಕಿದನು.

5 ಆ ಕಾಲದಲ್ಲಿ ಯಾರಿಗೂ ನಿರ್ಭಯವಾಗಿ ತಿರುಗಾಡುವದಕ್ಕೆ ಆಗುತ್ತಿರಲಿಲ್ಲ; ದೇಶ ನಿವಾಸಿಗಳೆಲ್ಲರೂ ಕಳವಳಗೊಂಡಿದ್ದರು.

6 ಒಂದು ಜನಾಂಗವು ಇನ್ನೊಂದು ಜನಾಂಗವನ್ನೂ ಒಂದು ಪಟ್ಟಣದವರು ಇನ್ನೊಂದು ಪಟ್ಟಣದವರನ್ನೂ ಹಾಳು ಮಾಡುತ್ತಿದ್ದರು. ದೇವರು ಎಲ್ಲಾ ತರದ ಕಷ್ಟದಿಂದಲೂ ಅವರನ್ನು ತಳಮಳಗೊಳಿಸಿದನು. ನೀವಾದರೋ ಸ್ಥಿರಚಿತ್ತರಾಗಿರಿ;

7 ನಿಮ್ಮ ಕೈಗಳು ಜೋಲು ಬೀಳದಿರಲಿ. ನಿಮ್ಮ ಪ್ರಯತ್ನಕ್ಕೆ ಫಲತಪ್ಪದು ಎಂದು ಹೇಳಿದನು.

8 ಆಸನು ಓಬೇದನ [ಮಗನಾದ ಅಜರ್ಯನ] ಈ ಪ್ರವಾದನೋಕ್ತಿಗಳನ್ನು ಕೇಳಿದಾಗ ಧೈರ್ಯಗೊಂಡು ಯೆಹೂದ ಬೆನ್ಯಾಮೀನ್ ಪ್ರಾಂತಗಳಲ್ಲಿಯೂ ತಾನು ಸ್ವಾಧೀನಮಾಡಿಕೊಂಡ ಎಫ್ರಾಯೀಮ್ ಪರ್ವತ ಪ್ರದೇಶದ ಪಟ್ಟಣಗಳಲ್ಲಿಯೂ ಇದ್ದ ಅಸಹ್ಯ ಪ್ರತಿಮೆಗಳನ್ನು ತೆಗೆದುಹಾಕಿ ಯೆಹೋವನ ಆಲಯಕ್ಕೆ ಸೇರಿದ ಮಂಟಪದ ಮುಂದಿದ್ದ ಆತನ ಯಜ್ಞವೇದಿಯನ್ನು ಜೀರ್ಣೋದ್ಧಾರಮಾಡಿಸಿದನು.

9 ಆಮೇಲೆ ಆಸನು ಎಲ್ಲಾ ಯೆಹೂದ ಬೆನ್ಯಾಮೀನ್ ಕುಲಗಳವರನ್ನೂ ತನ್ನ ದೇವರಾದ ಯೆಹೋವನು ತನ್ನ ಸಂಗಡ ಇರುವದನ್ನು ನೋಡಿ ತನ್ನೊಡನೆ ಗುಂಪುಗುಂಪಾಗಿ ಕೂಡಿಕೊಂಡು ಯೆಹೂದದೇಶದಲ್ಲಿ ಇಳಕೊಂಡಿದ್ದ ಎಫ್ರಾಯೀಮ್ ಮನಸ್ಸೆ ಸಿಮೆಯೋನ್ ಕುಲಗಳವರನ್ನೂ ಕರಿಸಿಕೊಂಡನು.

10 ಅವರು ಆಸನ ಆಳಿಕೆಯ ಹದಿನೈದನೆಯ ವರುಷದ ಮೂರನೆಯ ತಿಂಗಳಲ್ಲಿ ಯೆರೂಸಲೇವಿುನಲ್ಲಿ ಕೂಡಿಬಂದು

11 ಯೆಹೋವನಿಗೋಸ್ಕರ ಆ ದಿವಸ ತಾವು ತಂದ ಕೊಳ್ಳೆಯಿಂದ ಏಳು ನೂರು ಹೋರಿಗಳನ್ನೂ ಏಳು ಸಾವಿರ ಕುರಿಗಳನ್ನೂ ಯಜ್ಞ ಮಾಡಿದರು.

12 ಇದಲ್ಲದೆ ಅವರು ತಾವು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ತಮ್ಮ ಪಿತೃಗಳ ದೇವರಾದ ಯೆಹೋವನ ಭಕ್ತರಾಗಿರುವೆವೆಂದೂ

13 ತಮ್ಮಲ್ಲಿ ಇಸ್ರಾಯೇಲ್‍ದೇವರಾದ ಯೆಹೋವನ ಭಕ್ತಿಯನ್ನು ಬಿಟ್ಟವರು ಚಿಕ್ಕವರಾಗಲಿ ದೊಡ್ಡವರಾಗಲಿ, ಗಂಡಸರಾಗಲಿ ಹೆಂಗಸರಾಗಲಿ, ಅವರೆಲ್ಲರನ್ನೂ ಕೊಲ್ಲುವೆವೆಂದೂ

14 ತುತೂರಿಕೊಂಬುಗಳನ್ನೂದಿಸಿ ದೊಡ್ಡ ಆರ್ಭಟದೊಡನೆ ಯೆಹೋವನಿಗೆ ಪ್ರಮಾಣಮಾಡಿದರು.

15 ಈ ಪ್ರಮಾಣದ ನಿವಿುತ್ತವಾಗಿ ಯೆಹೂದ್ಯರೆಲ್ಲರಿಗೂ ಸಂತೋಷವಾಯಿತು. ಅವರು ಪೂರ್ಣಮನಸ್ಸಿನಿಂದ ಪ್ರಮಾಣಮಾಡಿ ತುಂಬಾ ಲವಲವಿಕೆಯಿಂದ ಯೆಹೋವನನ್ನು ಬಯಸಿದ ಕಾರಣ ಆತನು ಅವರಿಗೆ ಪ್ರಸನ್ನನಾಗಿ ಎಲ್ಲಾಕಡೆಗಳಲ್ಲಿಯೂ ಸಮಾಧಾನವನ್ನನುಗ್ರಹಿಸಿದನು.

16 ಅರಸನಾದ ಆಸನ ತಾಯಿ ಮಾಕಳು ಅಶೇರದೇವತೆಯ ಒಂದು ಅಸಹ್ಯ ಮೂರ್ತಿಯನ್ನು ಮಾಡಿಸಿದದರಿಂದ ಅವನು ಆಕೆಯನ್ನು ಗದ್ದುಗೆಯಿಂದ ತಳ್ಳಿ ಆ ಮೂರ್ತಿಯನ್ನು ಕಡಿಸಿ ಕಿದ್ರೋನ್ ಹಳ್ಳದ ಬಳಿಯಲ್ಲಿ ಚೂರುಚೂರು ಮಾಡಿ ಸುಡಿಸಿದನು.

17 ಇಸ್ರಾಯೇಲ್‍ಪ್ರಾಂತದಲ್ಲಿದ್ದ ಪೂಜಾಸ್ಥಳಗಳು ತೆಗೆದುಹಾಕಲ್ಪಡದಿದ್ದರೂ ಆಸನು ತನ್ನ ಜೀವಮಾನದಲ್ಲೆಲ್ಲಾ ಯಥಾರ್ಥಚಿತ್ತನಾಗಿ ನಡೆದುಕೊಂಡನು.

18 ತನ್ನ ತಂದೆಯೂ ತಾನೂ ಪ್ರತಿಷ್ಠಿಸಿದ ಬೆಳ್ಳಿಬಂಗಾರವನ್ನೂ ಪಾತ್ರೆಗಳನ್ನೂ ದೇವಾಲಯದಲ್ಲಿ ತಂದಿಟ್ಟನು.

19 ಅವನ ಆಳಿಕೆಯ ಮೂವತ್ತೈದನೆಯ ವರುಷದವರೆಗೂ ಯುದ್ಧವಿರಲಿಲ್ಲ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು