2 ಪೂರ್ವಕಾಲ ವೃತ್ತಾಂತ 14 - ಕನ್ನಡ ಸತ್ಯವೇದವು J.V. (BSI)ಅರಸನಾದ ಆಸನ ಭಕ್ತಿಯೂ ಜಯವೂ 1 ಅಬೀಯನು ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಆಸನು ಅರಸನಾದನು. ಇವನ ಕಾಲದಲ್ಲಿ ದೇಶದಲ್ಲಿ ಹತ್ತು ವರುಷ ಸಮಾಧಾನವಿತ್ತು. 2 ಆಸನು ತನ್ನ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿಯೂ ನೀತಿವಂತನಾಗಿಯೂ ನಡೆದನು. 3 ಇವನು ಅನ್ಯದೇವತೆಗಳ ಯಜ್ಞವೇದಿಗಳನ್ನೂ ಪೂಜಾಸ್ಥಳಗಳನ್ನೂ ತೆಗೆದುಹಾಕಿ ಕಲ್ಲುಕಂಬಗಳನ್ನು ಒಡಿಸಿ ಅಶೇರವಿಗ್ರಹಸ್ತಂಭಗಳನ್ನು ಕಡಿಸಿಬಿಟ್ಟು ಯೆಹೂದ್ಯರಿಗೆ - 4 ನೀವು ನಿಮ್ಮ ಪಿತೃಗಳ ದೇವರಾದ ಯೆಹೋವನನ್ನೇ ಆಶ್ರಯಿಸಿಕೊಂಡು ಧರ್ಮಶಾಸ್ತ್ರವಿಧಿಗಳನ್ನು ಕೈಕೊಳ್ಳಿರಿ ಎಂದು ಆಜ್ಞಾಪಿಸಿದನು. 5 ಯೆಹೂದದ ಎಲ್ಲಾ ಪಟ್ಟಣಗಳೊಳಗಿಂದ ಪೂಜಾಸ್ಥಳಗಳನ್ನೂ ಸೂರ್ಯಸ್ತಂಭಗಳನ್ನೂ ತೆಗೆದುಹಾಕಿದನು. ಇವನ ಆಳಿಕೆಯಲ್ಲಿ ರಾಜ್ಯದೊಳಗೆ ಸಮಾಧಾನವಿತ್ತು. 6 ಯೆಹೋವನ ಅನುಗ್ರಹದಿಂದ ಶತ್ರುಭಯ ತಪ್ಪಿ ಆ ವರುಷಗಳಲ್ಲಿ ಯಾವ ಯುದ್ಧವೂ ಇಲ್ಲದೆ ದೇಶದಲ್ಲಿ ಸಮಾಧಾನವಿದ್ದದರಿಂದ ಇವನು ಯೆಹೂದದಲ್ಲಿ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಕಟ್ಟಿಸಿದನು. 7 ಇವನು ಯೆಹೂದ್ಯರಿಗೆ - ನಾವು ನಮ್ಮ ದೇವರಾದ ಯೆಹೋವನನ್ನು ಆಶ್ರಯಿಸಿಕೊಂಡ ಕಾರಣ ಆತನ ಅನುಗ್ರಹದಿಂದ ಸುತ್ತಣ ವೈರಿಗಳ ಭಯ ತಪ್ಪಿ ದೇಶವು ಇನ್ನೂ ನಿರಾತಂಕವಾಗಿರುತ್ತದೆ. ಆದದರಿಂದ ನಾವು ಪಟ್ಟಣಗಳನ್ನು ಕಟ್ಟಿ ಅವುಗಳನ್ನು ಸುತ್ತಣಗೋಡೆ ಬುರುಜು ಬಾಗಲು ಅಗುಳಿ ಇವುಗಳಿಂದ ಭದ್ರಪಡಿಸೋಣ ಅನ್ನಲಾಗಿ ಅವರು ಅವುಗಳನ್ನು ಚೆನ್ನಾಗಿ ಕಟ್ಟಿತೀರಿಸಿದರು. 8 ಆಸನಿಗೆ ಸೈನ್ಯವಿತ್ತು; ಅದರಲ್ಲಿ ಗುರಾಣಿಬರ್ಜಿಗಳನ್ನು ಹಿಡಿದಿರುವ ಮೂರು ಲಕ್ಷ ಮಂದಿ ಯೆಹೂದ್ಯರೂ ಖೇಡ್ಯ ಹಿಡಿದವರೂ ಬಿಲ್ಲುಗಾರರೂ ಆಗಿರುವ ಎರಡು ಲಕ್ಷದ ಎಂಭತ್ತು ಸಾವಿರ ಮಂದಿ ಬೆನ್ಯಾಮೀನ್ಯರೂ ಇದ್ದರು. ಇವರೆಲ್ಲರೂ ರಣವೀರರು. 9 ಕೂಷ್ಯನಾದ ಜೆರಹನು ಹತ್ತು ಲಕ್ಷ ಸೈನ್ಯವನ್ನೂ ಮುನ್ನೂರು ರಥಗಳನ್ನೂ ತೆಗೆದುಕೊಂಡು ಇಸ್ರಾಯೇಲ್ಯರಿಗೆ ವಿರುದ್ಧವಾಗಿ ಯುದ್ಧಕ್ಕೆ ಹೊರಟು ಮಾರೇಷಕ್ಕೆ ಬಂದನು. 10 ಆಸನು ಅವನೆದುರಿಗೆ ಹೋದನು. ಮಾರೇಷದ ಬಳಿಯಲ್ಲಿರುವ ಚೆಫಾತಾ ಬೈಲಿನಲ್ಲಿ ಉಭಯರೂ ವ್ಯೂಹಕಟ್ಟಿದರು. 11 ಆಸನು ತನ್ನ ದೇವರಾದ ಯೆಹೋವನಿಗೆ - ಯೆಹೋವನೇ, ಬಲಿಷ್ಠನು ಬಲಹೀನನ ಮೇಲೆ ಬೀಳುವಲ್ಲಿ ನಿನ್ನ ಹೊರತು ರಕ್ಷಕನಿಲ್ಲ. ನಮ್ಮ ದೇವರಾದ ಯೆಹೋವನೇ, ನಮ್ಮನ್ನು ರಕ್ಷಿಸು. ನಿನ್ನಲ್ಲಿ ಭರವಸವಿಟ್ಟು ನಿನ್ನ ಹೆಸರಿನಲ್ಲಿ ಈ ಮಹಾ ಸಮೂಹಕ್ಕೆ ವಿರೋಧವಾಗಿ ಯುದ್ಧಕ್ಕೆ ಬಂದೆವಲ್ಲಾ. ಯೆಹೋವನೇ, ನಮ್ಮ ದೇವರು ನೀನು. ನರರು ನಿನ್ನನ್ನು ಎದುರಿಸಿ ಗೆಲ್ಲಬಾರದು ಎಂದು ಮೊರೆಯಿಡಲು 12 ಯೆಹೋವನು ಕೂಷ್ಯರನ್ನು ಆಸನಿಂದಲೂ ಯೆಹೂದ್ಯರಿಂದಲೂ ಅಪಜಯಪಡಿಸಿದನು. 13 ಕೂಷ್ಯರು ಓಡಿಹೋದಾಗ ಆಸನೂ ಅವನ ಜನರೂ ಗೆರಾರಿನವರೆಗೂ ಅವರನ್ನು ಹಿಂದಟ್ಟಿ ಸಂಹರಿಸಿದರು; ಅವರಲ್ಲಿ ಯಾರೂ ಜೀವದಿಂದುಳಿಯಲಿಲ್ಲ. ಯೆಹೋವನ ಮತ್ತು ಆತನ ಸೈನ್ಯದ ಮುಂದೆ ಚೂರು ಚೂರಾದರು. ಇಸ್ರಾಯೇಲ್ಯರಿಗೆ ಅಪರಿವಿುತವಾದ ಕೊಳ್ಳೆ ಸಿಕ್ಕಿತು. 14 ಇದಲ್ಲದೆ ಅವರು ಯೆಹೋವನ ಭಯಕ್ಕೆ ಒಳಗಾದ ಗೆರಾರಿನ ಸುತ್ತಣ ಪಟ್ಟಣಗಳನ್ನು ವಶಮಾಡಿಕೊಂಡು ಅವುಗಳನ್ನೆಲ್ಲಾ ಸುಲಿಗೆಮಾಡಿದರು. ಅವುಗಳಲ್ಲಿ ದೊಡ್ಡ ಕೊಳ್ಳೆ ಸಿಕ್ಕಿತು. 15 ದನಕಾಯುವವರ ಗುಡಾರಗಳ ಮೇಲೆ ಬಿದ್ದು ಎಷ್ಟೋ ಒಂಟೆ ಕುರಿಗಳನ್ನು ಯೆರೂಸಲೇವಿುಗೆ ಹೊಡೆದುಕೊಂಡು ಬಂದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India