2 ಪೂರ್ವಕಾಲ ವೃತ್ತಾಂತ 11 - ಕನ್ನಡ ಸತ್ಯವೇದವು J.V. (BSI)1 ರೆಹಬ್ಬಾಮನು ಯೆರೂಸಲೇಮನ್ನು ಮುಟ್ಟಿದ ನಂತರ ಇಸ್ರಾಯೇಲ್ಯರಿಗೆ ವಿರೋಧವಾಗಿ ಯುದ್ಧ ಮಾಡುವದಕ್ಕೂ ರಾಜ್ಯವನ್ನು ತಿರಿಗಿ ತನ್ನ ವಶಪಡಿಸಿಕೊಳ್ಳುವದಕ್ಕೂ ಯೆಹೂದ ಬೆನ್ಯಾಮೀನ್ ಕುಲಗಳಿಂದ ಲಕ್ಷದ ಎಂಭತ್ತು ಸಾವಿರಮಂದಿ ಶ್ರೇಷ್ಠ ಸೈನಿಕರನ್ನು ಕೂಡಿಸಿದನು. 2 ಆಗ ದೇವರ ಮನುಷ್ಯನಾದ ಶೆಮಾಯನಿಗೆ - 3 ನೀನು ಹೋಗಿ ಸೊಲೊಮೋನನ ಮಗನೂ ಯೆಹೂದದ ಅರಸನೂ ಆದ ರೆಹಬ್ಬಾಮನಿಗೂ ಯೆಹೂದ ಬೆನ್ಯಾಮೀನ್ ಕುಲಗಳ ಇಸ್ರಾಯೇಲ್ಯರೆಲ್ಲರಿಗೂ - 4 ಯೆಹೋವನು ಇಂತೆನ್ನುತ್ತಾನೆ, ನೀವು ನಿಮ್ಮ ಸಹೋದರರೊಡನೆ ಯುದ್ಧಮಾಡುವದಕ್ಕೆ ಹೋಗಬಾರದು. ಎಲ್ಲರೂ ಹಿಂದಿರುಗಿ ಹೋಗಿರಿ; ಈ ಕಾರ್ಯವು ಯೆಹೋವನಿಂದಾಗಿದೆ ಎಂದು ಹೇಳಬೇಕು ಎಂಬ ಯೆಹೋವನ ವಾಕ್ಯವುಂಟಾಗಲು ಅವರು ಯೆಹೋವನ ಮಾತನ್ನು ಕೇಳಿ ಯಾರೊಬ್ಬಾಮನಿಗೆ ವಿರೋಧವಾಗಿ ಹೊರಡದೆ ಹಿಂದಿರುಗಿ ಹೋದರು. ಅರಸನಾದ ರೆಹಬ್ಬಾಮನು 5 ರೆಹಬ್ಬಾಮನು ಯೆರೂಸಲೇವಿುನಲ್ಲಿ ವಾಸವಾಗಿದ್ದು ಯೆಹೂದದ ಪಟ್ಟಣಗಳನ್ನು ಭದ್ರಪಡಿಸಿದನು. 6 ಅವು ಯಾವವಂದರೆ - ಬೇತ್ಲೆಹೆಮ್, ಏತಾಮ್, ತೆಕೋವ, 7-8 ಬೇತ್ಚೂರ್, ಸೋಕೋ, ಅದುಲ್ಲಾಮ್, ಗತ್ ಊರು, 9 ಮಾರೇಷ, ಜೀಫ್, ಅದೋರೈಮ್, ಲಾಕೀಷ್, 10 ಅಜೇಕ, ಚೊರ್ಗ, ಅಯ್ಯಾಲೋನ್, ಹೆಬ್ರೋನ್ ಇವೇ. ಕೋಟೆಕೊತ್ತಲುಗಳುಳ್ಳ ಈ ಪಟ್ಟಣಗಳು ಯೆಹೂದ ಬೆನ್ಯಾಮೀನ್ ಪ್ರಾಂತದವುಗಳು. 11 ಅವನು ಈ ಕೋಟೆಗಳನ್ನು ಬಲಪಡಿಸಿ ನಾಯಕರ ವಶಕ್ಕೆ ಕೊಟ್ಟು ಪ್ರತಿಯೊಂದರಲ್ಲಿ ಆಹಾರಪದಾರ್ಥ ಎಣ್ಣೆ ದ್ರಾಕ್ಷಾರಸ ಇವುಗಳನ್ನೂ ಗುರಾಣಿಬರ್ಜಿಗಳನ್ನೂ ಸಂಗ್ರಹಿಸಿಟ್ಟನು; 12 ಈ ಪ್ರಕಾರ ಇವುಗಳನ್ನು ಅತ್ಯಧಿಕವಾಗಿ ಭದ್ರಪಡಿಸಿದನು. 13 ಯೆಹೂದ ಬೆನ್ಯಾಮೀನ್ ಕುಲಗಳವರು ಅವನ ಸ್ವಾಧೀನದಲ್ಲಿದ್ದದ್ದಲ್ಲದೆ ಬೇರೆ ಎಲ್ಲಾ ಇಸ್ರಾಯೇಲ್ ಪ್ರಾಂತಗಳಲ್ಲಿದ್ದ ಯಾಜಕರೂ ಲೇವಿಯರೂ ಅವನೊಡನೆ ಕೂಡಿಕೊಂಡರು. 14 ಲೇವಿಯರು ಯೆಹೋವನಿಗೆ ಯಾಜಕಸೇವೆಮಾಡದಂತೆ ಯಾರೊಬ್ಬಾಮನೂ ಅವನ ಮಕ್ಕಳೂ ಅವರನ್ನು ತಳ್ಳಿಬಿಟ್ಟು 15 ತಾವು ಏರ್ಪಡಿಸಿದ ಪೂಜಾಸ್ಥಳ ಅಜದೇವತೆ ಬಸವಮೂರ್ತಿ ಇವುಗಳಿಗೋಸ್ಕರ ಬೇರೆ ಪೂಜಾರಿಗಳನ್ನು ನೇವಿುಸಿಕೊಂಡದ್ದರಿಂದ ಅವರು ಗೋಮಾಳಗಳುಳ್ಳ ತಮ್ಮ ಸ್ವಾಸ್ತ್ಯಗಳನ್ನು ಬಿಟ್ಟು ಯೆಹೂದ ದೇಶಕ್ಕೂ ಯೆರೂಸಲೇವಿುಗೂ ಬಂದರು. 16 ಇಸ್ರಾಯೇಲ್ಯರ ಎಲ್ಲಾ ಕುಲಗಳಲ್ಲಿ ಇಸ್ರಾಯೇಲ್‍ದೇವರಾದ ಯೆಹೋವನ ದರ್ಶನವನ್ನು ಬಯಸುವವರು ತಮ್ಮ ಪಿತೃಗಳ ದೇವರಾದ ಯೆಹೋವನಿಗೆ ಯಜ್ಞವರ್ಪಿಸುವದಕ್ಕಾಗಿ ಆ ಲೇವಿಯರನ್ನು ಹಿಂಬಾಲಿಸಿ ಯೆರೂಸಲೇವಿುಗೆ ಬಂದರು. 17 ಇವರೆಲ್ಲರೂ ಮೊದಲನೆಯ ಮೂರು ವರುಷಗಳಲ್ಲಿ ದಾವೀದಸೊಲೊಮೋನರ ಮಾರ್ಗದಲ್ಲಿ ನಡೆಯುತ್ತಿದ್ದದರಿಂದ ಯೆಹೂದರಾಜ್ಯವು ಆ ವರುಷಗಳಲ್ಲಿ ವೃದ್ಧಿಯಾಗಿ ಸೊಲೊಮೋನನ ಮಗನಾದ ರೆಹಬ್ಬಾಮನು ಬಲಗೊಂಡನು. 18 ರೆಹಬ್ಬಾಮನು ದಾವೀದನ ಮಗನಾದ ಯೆರೀಮೋತನಿಗೆ ಇಷಯನ ಮೊಮ್ಮಗಳೂ ಎಲೀಯಾಬನ ಮಗಳೂ ಆದ ಅಬೀಹೈಲಳಲ್ಲಿ ಹುಟ್ಟಿದ ಮಹ್ಲತ್ ಎಂಬಾಕೆಯನ್ನು ಹೆಂಡತಿಯನ್ನಾಗಿ ತೆಗೆದುಕೊಂಡನು. 19 ಆಕೆಯು ಅವನಿಂದ ಯೆಗೂಷ್, ಶೆಮರ್ಯ, ಜಾಹಮ್ ಎಂಬ ಗಂಡು ಮಕ್ಕಳನ್ನು ಹೆತ್ತಳು. 20 ಅನಂತರ ಅವನು ಅಬ್ಷಾಲೋಮನ ಮಗಳಾದ ಮಾಕ ಎಂಬಾಕೆಯನ್ನು ಮದುವೆಮಾಡಿಕೊಂಡನು; ಆಕೆಯು ಅವನಿಂದ ಅಬೀಯ, ಅತ್ತೈ, ಜೀಜ, ಶೆಲೋಮೀತ್ ಎಂಬವರನ್ನು ಹೆತ್ತಳು. 21 ರೆಹಬ್ಬಾಮನು ತನ್ನ ಎಲ್ಲಾ ಪತ್ನಿಯರಲ್ಲಿಯೂ ಉಪಪತ್ನಿಯರಲ್ಲಿಯೂ ಅಬ್ಷಾಲೋಮನ ಮಗಳಾದ ಮಾಕಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದನು. ಅವನಿಗೆ ಹದಿನೆಂಟು ಮಂದಿ ಪತ್ನಿಯರೂ ಅರುವತ್ತು ಮಂದಿ ಉಪಪತ್ನಿಯರೂ ಇದ್ದರು. ಇವರಲ್ಲಿ ಅವನಿಗೆ ಇಪ್ಪತ್ತೆಂಟು ಮಂದಿ ಗಂಡುಮಕ್ಕಳೂ ಅರುವತ್ತು ಮಂದಿ ಹೆಣ್ಣುಮಕ್ಕಳೂ ಹುಟ್ಟಿದರು. 22 ರೆಹಬ್ಬಾಮನು ಮಾಕಳ ಮಗನಾದ ಅಬೀಯನನ್ನು ಅರಸನನ್ನಾಗಿ ಮಾಡಬೇಕೆಂದು ಅವನನ್ನು ಅವನ ಅಣ್ಣತಮ್ಮಂದಿರಲ್ಲಿ ಪ್ರಧಾನನನ್ನಾಗಿಯೂ ಪ್ರಭುವನ್ನಾಗಿಯೂ ನೇವಿುಸಿದನು. 23 ತನ್ನ ಉಳಿದ ಎಲ್ಲಾ ಮಕ್ಕಳನ್ನು ಜಾಣತನದಿಂದ ವಿಂಗಡಿಸಿ ಯೆಹೂದ ಬೆನ್ಯಾಮೀನ್ ಪ್ರದೇಶಗಳಲ್ಲಿದ್ದ ಕೋಟೆಕೊತ್ತಲುಗಳುಳ್ಳ ಆಯಾ ಪಟ್ಟಣಗಳಲ್ಲಿಟ್ಟು ಅವರಿಗೆ ಬೇಕಾದಷ್ಟು ಆಹಾರವನ್ನು ಏರ್ಪಡಿಸಿ ಅನೇಕ ಮಂದಿ ಹೆಂಡತಿಯರನ್ನೂ ಗೊತ್ತು ಮಾಡಿಕೊಟ್ಟನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India