Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೂರ್ವಕಾಲ ವೃತ್ತಾಂತ 10 - ಕನ್ನಡ ಸತ್ಯವೇದವು J.V. (BSI)


ರಾಜ್ಯಭೇದವಾದಂದಿನಿಂದ ಯೆಹೂದರಾಜರ ಚರಿತ್ರೆ ( 10—36 ) ರಾಜ್ಯಭೇದ

1 ರೆಹಬ್ಬಾಮನು ಶೆಕೆವಿುಗೆ ಹೋದನು. ಅಲ್ಲಿ ಎಲ್ಲಾ ಇಸ್ರಾಯೇಲ್ಯರೂ ಅವನನ್ನು ಅರಸನನ್ನಾಗಿ ಮಾಡುವದಕ್ಕೆ ಕೂಡಿಬಂದಿದ್ದರು.

2 ಇದಲ್ಲದೆ ಅರಸನಾದ ಸೊಲೊಮೋನನಿಗೆ ತಪ್ಪಿಸಿಕೊಂಡು ಐಗುಪ್ತಕ್ಕೆ ಓಡಿಹೋಗಿದ್ದ ನೆಬಾಟನ ಮಗನಾದ ಯಾರೊಬ್ಬಾಮನು ನಡೆದ ಸಂಗತಿಗಳ ವರ್ತಮಾನವನ್ನು ಕೇಳಿದೊಡನೆ ಐಗುಪ್ತದಿಂದ ಹಿಂದಿರುಗಿ ಬಂದಿದ್ದನು.

3 ಇಸ್ರಾಯೇಲ್ಯರು ಅವನನ್ನೂ ತಮ್ಮ ಬಳಿಗೆ ಕರಿಸಿಕೊಂಡರು. ಅವನು ಎಲ್ಲಾ ಇಸ್ರಾಯೇಲ್ಯರೊಡನೆ ರೆಹಬ್ಬಾಮನ ಬಳಿಗೆ ಹೋಗಿ

4 ಅವನಿಗೆ ನಿನ್ನ ತಂದೆಯು ನಮ್ಮ ಮೇಲೆ ಭಾರವಾದ ನೊಗವನ್ನು ಹೇರಿದನು; ನಿನ್ನ ತಂದೆಯು ನೇವಿುಸಿದ ಬಿಟ್ಟೀ ಕೆಲಸವನ್ನು ನೀನು ಕಡಿಮೆ ಮಾಡಿ ನಮ್ಮ ಮೇಲಿರುವ ಭಾರವಾದ ನೊಗವನ್ನು ಹಗುರಮಾಡುವದಾದರೆ ನಾವು ನಿನ್ನನ್ನು ಸೇವಿಸುವೆವು ಎಂದು ಹೇಳಲು ಅವನು -

5 ನೀವು ಮೂರು ದಿನಗಳಾದ ನಂತರ ತಿರಿಗಿ ಬನ್ನಿರಿ ಎಂದು ಉತ್ತರಕೊಟ್ಟನು; ಜನರು ಹೋದರು.

6 ಆಗ ಅರಸನಾದ ರೆಹಬ್ಬಾಮನು ತನ್ನ ತಂದೆಯಾದ ಸೊಲೊಮೋನನ ಕಾಲದಲ್ಲಿ ಮಂತ್ರಿಗಳಾಗಿದ್ದ ಹಿರಿಯರನ್ನು ಕೂಡಿಸಿ ತಾನು ಜನರಿಗೆ ಕೊಡತಕ್ಕ ಉತ್ತರದ ವಿಷಯದಲ್ಲಿ ಅವರ ಆಲೋಚನೆಯನ್ನು ಕೇಳಿದನು.

7 ಅವರು ಅವನಿಗೆ - ನೀನು ಈ ಜನರಿಗೆ ದಯತೋರಿಸಿ ಅವರನ್ನು ಮೆಚ್ಚಿಸುವ ಒಳ್ಳೇ ಉತ್ತರ ಕೊಡುವದಾದರೆ ಅವರು ಯಾವಾಗಲೂ ನಿನಗೆ ಒಳಗಾಗಿರುವರು ಅಂದರು.

8 ಆದರೆ ಅವನು ಹಿರಿಯರ ಆಲೋಚನೆಯನ್ನು ನಿರಾಕರಿಸಿ ತನ್ನ ಸಂಗಡಲೇ ಬೆಳೆದು ತನಗೆ ಮಂತ್ರಿಗಳೂ ಆದ ಯೌವನಸ್ಥರನ್ನು ಕರಿಸಿ -

9 ನನ್ನ ತಂದೆಯು ಹೇರಿದ ನೊಗವನ್ನು ಹಗುರಮಾಡಬೇಕೆಂದು ಬೇಡಿಕೊಳ್ಳುವ ಈ ಜನರಿಗೆ ಯಾವ ಉತ್ತರವನ್ನು ಕೊಡತಕ್ಕದ್ದು? ಈ ವಿಷಯದಲ್ಲಿ ನಿಮ್ಮ ಆಲೋಚನೆ ಏನು ಎಂದು ಕೇಳಲು

10 ಅವರು ಅವನಿಗೆ - ನಿನ್ನ ತಂದೆಯು ನಮ್ಮ ಮೇಲೆ ಹೇರಿರುವ ಭಾರವಾದ ನೊಗವನ್ನು ಹಗುರಮಾಡು ಎಂಬದಾಗಿ ನಿನ್ನನ್ನು ಬೇಡಿಕೊಂಡ ಜನರಿಗೆ ನೀನು - ನನ್ನ ತಂದೆಯ ನಡುವಿಗಿಂತ ನನ್ನ ಕಿರಿಬೆರಳು ದಪ್ಪವಾಗಿದೆ;

11 ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹೇರಿರುವದು ನಿಜ; ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುತ್ತೇನೆ; ಅವನು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ; ನಾನಾದರೋ ನಿಮ್ಮನ್ನು ಮುಳ್ಳುಕೊರಡೆಗಳಿಂದ ದಂಡಿಸುವೆನು ಎಂಬದಾಗಿ ಹೇಳಬೇಕು ಎಂದು ಉತ್ತರಕೊಟ್ಟರು.

12 ಯಾರೊಬ್ಬಾಮನೂ ಎಲ್ಲಾ ಜನರೂ ಅರಸನಾದ ರೆಹಬ್ಬಾಮನ ಅಪ್ಪಣೆಯಂತೆ ಮೂರನೆಯ ದಿನದಲ್ಲಿ ತಿರಿಗಿ ಅವನ ಬಳಿಗೆ ಬಂದರು.

13 ಅರಸನು ಅವರಿಗೆ ಕಠಿನವಾದ ಉತ್ತರವನ್ನು ಕೊಟ್ಟನು; ಅವನು ಹಿರಿಯರ ಆಲೋಚನೆಯನ್ನು ನಿರಾಕರಿಸಿ

14 ಯೌವನಸ್ಥರ ಆಲೋಚನೆಗನುಸಾರವಾಗಿ ಜನರಿಗೆ - ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹೇರಿರುವದು ನಿಜ; ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುವೆನು. ಅವನು ನಿಮ್ಮನ್ನು ಬಾರು ಕೋಲುಗಳಿಂದ ಹೊಡೆದದ್ದು ನಿಜ; ನಾನಾದರೋ ನಿಮ್ಮನ್ನು ಮುಳ್ಳು ಕೊರಡೆಗಳಿಂದ ದಂಡಿಸುವೆನು ಎಂದು ನುಡಿದನು.

15 ಅರಸನು ಜನರ ಮಾತನ್ನು ಕೇಳದೆಹೋದದ್ದು ದೈವಯೋಗದಿಂದಲೇ. ಈ ಪ್ರಕಾರ ಯೆಹೋವನು ಶೀಲೋವಿನವನಾದ ಅಹೀಯನ ಮುಖಾಂತರವಾಗಿ ನೆಬಾಟನ ಮಗನಾದ ಯಾರೊಬ್ಬಾಮನಿಗೆ ಹೇಳಿಸಿದ ಮಾತು ನೆರವೇರಿತು.

16 ಅರಸನು ತಮ್ಮ ಮಾತನ್ನು ಲಕ್ಷಿಸಲಿಲ್ಲವೆಂದು ತಿಳಿದು ಇಸ್ರಾಯೇಲ್ಯರೆಲ್ಲರೂ ಅವನಿಗೆ - ದಾವೀದನಲ್ಲಿ ನಮಗೇನು ಪಾಲು? ಇಷಯನ ಮಗನಲ್ಲಿ ನಮಗೇನು ಬಾಧ್ಯತೆ? ಇಸ್ರಾಯೇಲ್ಯರೇ, ನಿಮ್ಮ ನಿಮ್ಮ ನಿವಾಸಗಳಿಗೆ ಹೋಗಿರಿ; ದಾವೀದನವರೇ, ನಿಮ್ಮ ಕುಲವನ್ನು ನೀವೇ ನೋಡಿಕೊಳ್ಳಿರಿ ಎಂದು ಹೇಳಿ ತಮ್ಮ ತಮ್ಮ ನಿವಾಸಗಳಿಗೆ ಹೋದರು.

17 ಯೆಹೂದ ಪ್ರಾಂತದಲ್ಲಿದ್ದ ಇಸ್ರಾಯೇಲ್ಯರಾದರೋ ಅರಸನಾದ ರೆಹಬ್ಬಾಮನ ಅಧೀನದಲ್ಲಿದ್ದರು.

18 ರೆಹಬ್ಬಾಮನು ಬಿಟ್ಟೀಕೆಲಸದವರ ಮೇಲ್ವಿಚಾರಕನಾದ ಹದೋರಾಮನನ್ನು ಇಸ್ರಾಯೇಲ್ಯರ ಬಳಿಗೆ ಕಳುಹಿಸಲು ಅವರು ಇವನನ್ನು ಕಲ್ಲೆಸೆದು ಕೊಂದರು. ಆಗ ಅರಸನಾದ ರೆಹಬ್ಬಾಮನು ಬೇಗನೆ ರಥವನ್ನೇರಿ ಯೆರೂಸಲೇವಿುಗೆ ಓಡಿ ಹೋದನು.

19 ಇಸ್ರಾಯೇಲ್ಯರು ಅಂದಿನಿಂದ ಇಂದಿನವರೆಗೂ ದಾವೀದನ ಕುಟುಂಬದವರೊಡನೆ ಸಮಾಧಾನವಾಗಲೇ ಇಲ್ಲ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು