2 ಥೆಸಲೋನಿಕದವರಿಗೆ 3 - ಕನ್ನಡ ಸತ್ಯವೇದವು J.V. (BSI)1 ಕಡೇ ಮಾತೇನಂದರೆ, ಸಹೋದರರೇ, ನಮಗೋಸ್ಕರ ಪ್ರಾರ್ಥನೆಮಾಡಿರಿ. ಕರ್ತನ ವಾಕ್ಯವು ನಿಮ್ಮಲ್ಲಿ ಹಬ್ಬಿದ ಪ್ರಕಾರ ಎಲ್ಲೆಲ್ಲಿಯೂ ಬೇಗನೆ ಹಬ್ಬಿ ಪ್ರಖ್ಯಾತಿ ಹೊಂದುವ ಹಾಗೆಯೂ 2 ದೇವರು ನಮ್ಮನ್ನು ಮೂರ್ಖರಾದ ದುಷ್ಟಜನರ ಕೈಯಿಂದ ತಪ್ಪಿಸುವ ಹಾಗೆಯೂ ಪ್ರಾರ್ಥಿಸಿರಿ; ಎಲ್ಲರಲ್ಲಿ ಕ್ರಿಸ್ತ ನಂಬಿಕೆಯಿಲ್ಲವಲ್ಲಾ. 3 ಆದರೆ ಕರ್ತನು ನಂಬಿಗಸ್ತನು; ಆತನು ನಿಮ್ಮನ್ನು ದೃಢಪಡಿಸಿ ನೀವು ಕೆಡುಕನ ಕೈಗೆ ಸಿಕ್ಕದಂತೆ ಕಾಪಾಡುವನು. 4 ನಾವು ಆಜ್ಞಾಪಿಸುವ ಪ್ರಕಾರ ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ ನಿಮ್ಮ ವಿಷಯದಲ್ಲಿ ಕರ್ತನ ಮೂಲಕವಾಗಿ ನಮಗೆ ಭರವಸವುಂಟು. 5 ದೇವರ ಪ್ರೀತಿಯಲ್ಲಿಯೂ ಕ್ರಿಸ್ತನ ತಾಳ್ಮೆಯಲ್ಲಿಯೂ ಸೇರುವಂತೆ ಕರ್ತನೇ ನಿಮ್ಮನ್ನು ನಡಿಸಲಿ. ಕ್ರೈಸ್ತರು ಕ್ರಮವಾಗಿ ನಡೆದು ಕೆಲಸಮಾಡಿ ಉಪಜೀವನವನ್ನು ಮಾಡಿಕೊಳ್ಳಬೇಕೆಂಬುವ ಬೋಧೆ 6 ಸಹೋದರರೇ, ನವ್ಮಿುಂದ ಹೊಂದಿದ ಬೋಧನೆಯನ್ನು ಅನುಸರಿಸದೆ ಅಕ್ರಮವಾಗಿ ನಡೆಯುವ ಪ್ರತಿ ಸಹೋದರನಿಗೆ ನೀವು ದೂರವಾಗಿರಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮಗೆ ಆಜ್ಞಾಪಿಸುತ್ತೇವೆ. 7 ನೀವು ನಮ್ಮನ್ನು ಅನುಸರಿಸಿ ಹೇಗೆ ನಡೆಯಬೇಕೆಂದು ನೀವೇ ಬಲ್ಲಿರಿ; 8 ನಾವು ನಿಮ್ಮಲ್ಲಿ ಅಕ್ರಮವಾಗಿ ನಡೆಯಲಿಲ್ಲ; ನಾವು ಹಣಕೊಡದೆ ಯಾರ ಬಳಿಯಲ್ಲಿಯೂ ಊಟಮಾಡಲಿಲ್ಲ; ನಿಮ್ಮಲ್ಲಿ ಒಬ್ಬರಿಗೂ ಭಾರವಾಗಬಾರದೆಂದು ಹಗಲಿರುಳು ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದು ಜೀವನಮಾಡಿಕೊಂಡೆವು. 9 ನಿಮ್ಮಿಂದ ಪೋಷಣೆ ಹೊಂದುವದಕ್ಕೆ ನಮಗೆ ಹಕ್ಕಿಲ್ಲವೆಂದು ಹಾಗೆ ಮಾಡಲಿಲ್ಲ, ನೀವು ನಮ್ಮನ್ನು ಅನುಸರಿಸುವದಕ್ಕಾಗಿ ನಿಮಗೆ ಮಾದರಿಯಾಗಿರೋಣವೆಂದೇ ಮಾಡಿದೆವು. 10 ಇದಲ್ಲದೆ ನಾವು ನಿಮ್ಮ ಸಂಗಡ ಇದ್ದಾಗ - ಕೆಲಸ ಮಾಡಲೊಲ್ಲದವನು ಊಟಮಾಡಬಾರದೆಂದು ನಿಮಗೆ ಆಜ್ಞಾಪಿಸಿದೆವಷ್ಟೆ. 11 ಆದರೆ ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ ಇತರರ ಕೆಲಸದಲ್ಲಿ ಮಾತ್ರ ತಲೆ ಹಾಕಿ ಅಕ್ರಮವಾಗಿ ನಡೆಯುತ್ತಾರೆಂದು ವರ್ತಮಾನ ಕೇಳಿದ್ದೇವೆ. 12 ಇಂಥವರು ತಮ್ಮ ಕೆಲಸವನ್ನು ನೋಡುತ್ತಾ ತಾವೇ ಸಂಪಾದಿಸಿದ್ದನ್ನು ಊಟಮಾಡಬೇಕೆಂದು ಕರ್ತನಾದ ಯೇಸು ಕ್ರಿಸ್ತನಲ್ಲಿ ನಾವು ಆಜ್ಞಾಪಿಸಿ ಪ್ರಬೋಧಿಸುತ್ತೇವೆ. 13 ಸಹೋದರರೇ, ನೀವಾದರೋ ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳಬೇಡಿರಿ. 14 ಈ ಪತ್ರಿಕೆಯ ಮೂಲಕವಾಗಿ ಹೇಳಿರುವ ನಮ್ಮ ಮಾತಿಗೆ ಯಾವನಾದರೂ ಒಳಗಾಗದಿದ್ದರೆ ಅವನನ್ನು ಗುರುತು ಇಟ್ಟುಕೊಂಡು ಅವನಿಗೆ ನಾಚಿಕೆಯಾಗುವಂತೆ ಅವನ ಸಹವಾಸದಲ್ಲಿ ಸೇರಬೇಡಿರಿ. 15 ಆದರೂ ಅವನನ್ನು ವೈರಿಯೆಂದು ಎಣಿಸದೆ ಸಹೋದರನೆಂದು ಎಣಿಸಿಕೊಂಡು ಬುದ್ಧಿಹೇಳಿರಿ. ಸಮಾಪ್ತಿ ವಾಕ್ಯಗಳು 16 ಶಾಂತಿದಾಯಕನಾದ ಕರ್ತನು ತಾನೇ ಸದಾಕಾಲದಲ್ಲಿಯೂ ಸಕಲವಿಧದಲ್ಲಿಯೂ ನಿಮಗೆ ಶಾಂತಿಯನ್ನು ದಯಪಾಲಿಸಲಿ. ಕರ್ತನು ನಿಮ್ಮೆಲ್ಲರೊಂದಿಗೆ ಇರಲಿ. 17 ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ; ಎಲ್ಲಾ ಪತ್ರಿಕೆಗಳಲ್ಲಿಯೂ ಇದೇ ಗುರುತು; ಹೀಗೆಯೇ ನನ್ನ ಕೈಬರಹ. 18 ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರ ಸಂಗಡವಿರಲಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India