Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಥೆಸಲೋನಿಕದವರಿಗೆ 2 - ಕನ್ನಡ ಸತ್ಯವೇದವು J.V. (BSI)


ಕರ್ತನಾದ ಯೇಸು ಪ್ರತ್ಯಕ್ಷನಾಗುವದಕ್ಕೆ ಮುಂಚಿತವಾಗಿ ಅನೇಕ ಸಂಗತಿಗಳು ನಡೆಯಬೇಕು

1 ಸಹೋದರರೇ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರತ್ಯಕ್ಷತೆಯ ವಿಷಯವಾಗಿಯೂ ನಾವು ಆತನ ಬಳಿಯಲ್ಲಿ ಕೂಡಿಕೊಳ್ಳುವದರ ವಿಷಯವಾಗಿಯೂ ನಿಮ್ಮನ್ನು ಬೇಡಿಕೊಳ್ಳುವದೇನಂದರೆ -

2 ಕರ್ತನ ದಿನವು ಈಗಲೇ ಹತ್ತಿರವಾಯಿತೆಂಬದಾಗಿ ದೇವರಾತ್ಮಪ್ರೇರಿತವಾದ ನುಡಿ ಇದೆ ಎಂದಾಗಲಿ ಪೌಲನು ಹಾಗೆ ಹೇಳಿದನೆಂದಾಗಲಿ ಪೌಲನು ಹಾಗೆ ಬರೆದನೆಂದಾಗಲಿ ಯಾರಾದರೂ ಹೇಳಿದರೂ ನೀವು ಬೇಗನೆ ಬುದ್ಧಿಗೆಟ್ಟು ಚಂಚಲರಾಗಿ ಕಳವಳಪಡಬೇಡಿರಿ.

3 ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ; ಯಾಕಂದರೆ ಮೊದಲು ಮತಭ್ರಷ್ಟತೆಯು ಉಂಟಾಗಿ ಅಧರ್ಮಸ್ವರೂಪನು ಬೈಲಿಗೆ ಬಂದ ಹೊರತು ಆ ದಿನವು ಬರುವದಿಲ್ಲ.

4 ಯಾವದು ದೇವರೆನಿಸಿಕೊಳ್ಳುತ್ತದೋ ಯಾವದು ಪೂಜೆ ಹೊಂದುತ್ತದೋ ಅದನ್ನೆಲ್ಲಾ ನಾಶನಕ್ಕೆ ಅಧೀನನಾದ ಆ ಪುರುಷನು ಎದುರಿಸಿ ಅದಕ್ಕಿಂತ ಮೇಲಾಗಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ತಾನು ದೇವರೆಂದು ಹೇಳಿಕೊಂಡು ದೇವರ ಗರ್ಭಗುಡಿಯಲ್ಲೇ ಕೂತುಕೊಳ್ಳುತ್ತಾನೆ.

5 ನಾನು ನಿಮ್ಮ ಸಂಗಡ ಇದ್ದಾಗ ಈ ಸಂಗತಿಗಳನ್ನು ಹೇಳಿದ್ದು ಜ್ಞಾಪಕವಿಲ್ಲವೋ?

6 ಇದಲ್ಲದೆ ಆ ಮನುಷ್ಯನು ನೇಮಕವಾದ ಸಮಯದಲ್ಲೇ ಹೊರತು ಬೈಲಿಗೆ ಬರುವದಕ್ಕೆ ಏನು ಅಡ್ಡಿಮಾಡುತ್ತದೋ ಅದು ನಿಮಗೆ ತಿಳಿದೇ ಇದೆ.

7 ಅಧರ್ಮವು ಈಗಲೂ ಗುಪ್ತವಾಗಿ ತನ್ನ ಕಾರ್ಯವನ್ನು ಸಾಧಿಸುತ್ತದೆ; ಆದರೆ ಇದುವರೆಗೆ ಅಡ್ಡಿಮಾಡುವವನು ತೆಗೆದುಬಿಡಲ್ಪಡುವ ತನಕ ಅದು ಗುಪ್ತವಾಗಿಯೇ ಇರುವದು.

8 ಅವನು ತೆಗೆದುಬಿಡಲ್ಪಟ್ಟ ಕೂಡಲೆ ಆ ಅಧರ್ಮಸ್ವರೂಪನು ಕಾಣಬರುವನು; ಅವನನ್ನು ಯೇಸು ಕರ್ತನು ತನ್ನ ಬಾಯ ಉಸುರಿನಿಂದ ಕೊಲ್ಲುವನು, ತನ್ನ ಪ್ರತ್ಯಕ್ಷತೆಯ ಪ್ರಕಾಶದಿಂದ ಸಂಹರಿಸುವನು.

9 ಆ ಅಧರ್ಮಸ್ವರೂಪನ ಪ್ರತ್ಯಕ್ಷತೆಯು ಸೈತಾನನ ಮಾಟಕ್ಕನುಗುಣವಾಗಿರುವದು. ಅದು ಮೋಸಗೊಳಿಸುವ ಸಕಲವಿಧವಾದ ಮಹತ್ಕಾರ್ಯ ಸೂಚಕಕಾರ್ಯ ಅದ್ಭುತಕಾರ್ಯ ಇವುಗಳಿಂದಲೂ ದುರ್ನೀತಿಯ ಎಲ್ಲಾ ವಂಚನೆಯಿಂದಲೂ ಕೂಡಿ ನಾಶನ ಮಾರ್ಗದಲ್ಲಿರುವವರಿಗೋಸ್ಕರ ಸಂಭವಿಸುವದು.

10 ಅವರು ಸತ್ಯದ ಮೇಲೆ ಪ್ರೀತಿಯನ್ನಿಡದ ಕಾರಣದಿಂದ ರಕ್ಷಣೆಯನ್ನು ಹೊಂದದೆ ನಾಶವಾಗುತ್ತಾರೆ.

11 ಅದೇ ಕಾರಣದಿಂದ ದೇವರು ಅಸತ್ಯನಡಿಸುವ ಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಆ ಸುಳ್ಳನ್ನು ನಂಬುವದಕ್ಕೆ ಅವರನ್ನು ಬಿಡುತ್ತಾನೆ.

12 ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಪಡುವವರೆಲ್ಲರೂ ಈ ಪ್ರಕಾರ ನ್ಯಾಯತೀರ್ಪಿಗೆ ಒಳಗಾಗುವರು.


ಪೌಲನು ಥೆಸಲೋನಿಕದವರಿಗಾಗಿ ಮಾಡುವ ಕೃತಜ್ಞತಾಸ್ತುತಿಯೂ ವಿಜ್ಞಾಪನೆಯೂ

13 ಕರ್ತನಿಗೆ ಪ್ರಿಯರಾಗಿರುವ ಸಹೋದರರೇ, ನೀವು ಪವಿತ್ರಾತ್ಮನಿಂದ ಶುದ್ಧೀಕರಿಸಲ್ಪಟ್ಟವರಾಗಿ ಸತ್ಯದ ಮೇಲೆ ನಂಬಿಕೆಯನ್ನಿಟ್ಟು ರಕ್ಷಣೆಯನ್ನು ಪಡೆಯುವದಕ್ಕಾಗಿ ದೇವರು ನಿಮ್ಮನ್ನು ಆದಿಯಿಂದ ಆರಿಸಿಕೊಂಡದರಿಂದ ನಾವು ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಕೃತಜ್ಞತಾಸ್ತುತಿಮಾಡುವದಕ್ಕೆ ಬದ್ಧರಾಗಿದ್ದೇವೆ.

14 ನೀವು ಹೀಗೆ ರಕ್ಷಿಸಲ್ಪಟ್ಟು ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರಭಾವವನ್ನು ಸಂಪಾದಿಸಿಕೊಳ್ಳಬೇಕೆಂದು ದೇವರು ನಮ್ಮ ಸುವಾರ್ತೆಯ ಮೂಲಕವಾಗಿ ನಿಮ್ಮನ್ನು ಕರೆದನು.

15 ಹೀಗಿರುವದರಿಂದ ಸಹೋದರರೇ, ದೃಢವಾಗಿ ನಿಲ್ಲಿರಿ. ನಾವು ಮಾತಿನಿಂದಾಗಲಿ ಪತ್ರಿಕೆಯಿಂದಾಗಲಿ ನಿಮಗೆ ತಿಳಿಸಿದ ಬೋಧನೆಗಳನ್ನು ನೀವು ಭದ್ರವಾಗಿ ಹಿಡಿದುಕೊಂಡಿರ್ರಿ.

16 ಮತ್ತು ನಮ್ಮನ್ನು ಪ್ರೀತಿಸಿ ನಮಗೆ ನಿತ್ಯವಾದ ಆದರಣೆಯನ್ನೂ ಉತ್ತಮವಾದ ನಿರೀಕ್ಷೆಯನ್ನೂ ಕೃಪೆಯಿಂದ ಅನುಗ್ರಹಿಸಿದ ನಮ್ಮ ತಂದೆಯಾದ ದೇವರೂ ನಮ್ಮ ಕರ್ತನಾದ ಯೇಸು ಕ್ರಿಸ್ತನೂ ನಿಮ್ಮ ಹೃದಯಗಳನ್ನು ಸಂತೈಸಿ

17 ಸಕಲ ಸತ್ಕಾರ್ಯದಲ್ಲಿಯೂ ಸದ್ವಾಕ್ಯದಲ್ಲಿಯೂ ದೃಢಪಡಿಸಲಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು