Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ತಿಮೊಥೆಯನಿಗೆ 3 - ಕನ್ನಡ ಸತ್ಯವೇದವು J.V. (BSI)

1 ಆದರೆ ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ.

2 ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ

3 ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ

4 ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ

5 ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು; ಇಂಥವರ ಸಹವಾಸವನ್ನೂ ಮಾಡದಿರು.

6 ಮನೆಗಳಲ್ಲಿ ನುಸುಳಿ ಪಾಪಗಳಿಂದ ತುಂಬಿದವರೂ ನಾನಾ ವಿಧವಾದ ಇಚ್ಫೆಗಳಿಂದ ಪ್ರೇರಿತರೂ ಆಗಿರುವ ಅವಿವೇಕಿಗಳಾದ ಸ್ತ್ರೀಯರನ್ನು ವಶಮಾಡಿಕೊಳ್ಳುವವರು ಇವರೊಳಗೆ ಸೇರಿದವರೇ.

7 ಆ ಸ್ತ್ರೀಯರು ಯಾವಾಗಲೂ ಉಪದೇಶ ಕೇಳುತ್ತಿದ್ದರೂ ಸತ್ಯದ ಪರಿಜ್ಞಾನವನ್ನು ಹೊಂದಲಾರದವರು.

8 ಯನ್ನ ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ ಆ ಮನುಷ್ಯರು ಸಹ ಸತ್ಯವನ್ನು ವಿರೋಧಿಸುತ್ತಾರೆ; ಬುದ್ಧಿಗೆಟ್ಟವರೂ ಕ್ರಿಸ್ತ ನಂಬಿಕೆಯಿಂದ ಭ್ರಷ್ಟರೂ ಆಗಿದ್ದಾರೆ.

9 ಆದರೆ ಅವರ ಪ್ರಯತ್ನವು ಇನ್ನು ಸಾಗುವದಿಲ್ಲ; ಆ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪರಿಷ್ಕಾರವಾಗಿ ತಿಳಿದುಬಂದ ಪ್ರಕಾರ ಇವರದೂ ತಿಳಿದುಬರುವದು.

10 ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು ನನ್ನ ಬೋಧನೆ ನಡತೆ ಉದ್ದೇಶ ನಂಬಿಕೆ ದೀರ್ಘಶಾಂತಿ ಪ್ರೀತಿ ಸೈರಣೆ ಇವುಗಳನ್ನೂ

11 ಅಂತಿಯೋಕ್ಯ ಇಕೋನ್ಯ ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ ಕಷ್ಟಾನುಭವಗಳನ್ನೂ ತಿಳಿದವನಾಗಿದ್ದೀ. ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನು; ಅವೆಲ್ಲವುಗಳೊಳಗಿಂದ ಕರ್ತನು ನನ್ನನ್ನು ಬಿಡಿಸಿದನು.

12 ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸುಮಾಡುವವರೆಲ್ಲರೂ ಹಿಂಸೆಗೊಳಗಾಗುವರು.

13 ಆದರೆ ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.

14 ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬದನ್ನು ಆಲೋಚಿಸು. ಚಿಕ್ಕಂದಿನಿಂದಲೂ ನಿನಗೆ ಪರಿಶುದ್ಧ ಗ್ರಂಥಗಳ ಪರಿಚಯವಾಯಿತಲ್ಲಾ.

15 ಆ ಗ್ರಂಥಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ.

16 ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.

17 ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು