Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಕೊರಿಂಥದವರಿಗೆ 9 - ಕನ್ನಡ ಸತ್ಯವೇದವು J.V. (BSI)

1 ದೇವಜನರಿಗೋಸ್ಕರ ನಡೆಯುವ ಸಹಾಯಕಾರ್ಯವನ್ನು ಕುರಿತು ನಿಮಗೆ ಬರೆಯುವದಕ್ಕೆ ಅವಶ್ಯವಿಲ್ಲ.

2 ನಿಮ್ಮ ಮನಸ್ಸು ಸಿದ್ಧವಾಗಿದೆ ಎಂಬದು ನನಗೆ ಗೊತ್ತುಂಟು. ಒಂದು ವರುಷದ ಹಿಂದೆ ಅಖಾಯದವರು ಸಹಾಯಮಾಡುವದಕ್ಕೆ ಸಿದ್ಧವಾಗಿದ್ದರೆಂದು ಮಕೆದೋನ್ಯದವರ ಮುಂದೆ ನಿಮ್ಮನ್ನು ಹೊಗಳುತ್ತಾ ಇದ್ದೇನೆ. ಮತ್ತು ನಿಮ್ಮ ಆಸಕ್ತಿಯು ಅವರಲ್ಲಿ ಬಹುಜನರನ್ನು ಪ್ರೇರೇಪಿಸಿತು.

3 ಆದರೂ ನಾವು ನಿಮ್ಮನ್ನು ಹೊಗಳಿದ್ದು ನಿರಾಧಾರವಾಗದೆ ನಾನು ಹೇಳಿದ ಪ್ರಕಾರವೇ ನೀವು ಸಿದ್ಧವಾಗಿರಬೇಕೆಂದು ಆ ಸಹೋದರರನ್ನು ಕಳುಹಿಸಿದ್ದೇನೆ.

4 ಸಿದ್ಧವಾಗದಿದ್ದರೆ ಒಂದು ವೇಳೆ ಮಕೆದೋನ್ಯದವರಲ್ಲಿ ಯಾರಾದರೂ ನನ್ನ ಸಂಗಡ ಬಂದು ನೀವು ಸಿದ್ಧವಾಗಲಿಲ್ಲವೆಂಬದನ್ನು ಕಾಣುವಾಗ ನಮಗೆ ಇಂಥ ಭರವಸವಿದ್ದದ್ದಕ್ಕೆ ನಾವು ನಾಚಿಕೆಪಡಬೇಕಾದೀತು; ನಿಮಗೂ ನಾಚಿಕೆಯಾಗುವದೆಂದು ನಾವು ಬೇರೆ ಹೇಳಬೇಕೇ.

5 ಹೀಗಿರಲಾಗಿ ಈ ಸಹೋದರರು ಮುಂದಾಗಿ ನಿಮ್ಮ ಬಳಿಗೆ ಬಂದು ಕೊಡುತ್ತೇವೆಂದು ನೀವು ಮೊದಲು ಹೇಳಿದ ಧರ್ಮದ್ರವ್ಯವನ್ನು ಸಿದ್ಧಪಡಿಸಬೇಕೆಂಬದಾಗಿ ಇವರನ್ನು ಬೇಡಿಕೊಳ್ಳುವದು ಅವಶ್ಯವೆಂದು ನನಗೆ ತೋಚಿತು. ಹೀಗೆ ಆ ಹಣವು ಸುಲಿಗೆಯಂತೆ ಬಾರದೆ ಧರ್ಮಾರ್ಥವಾಗಿಯೇ ಸಿದ್ಧವಾಗುವದು.


ಪೌಲನು ಕೊರಿಂಥದ ಸಭೆಯವರನ್ನು ಉದಾರವಾಗಿ ಕೊಡುವದಕ್ಕೆ ಪ್ರೇರೇಪಿಸುವದು

6 ಆದರೆ ಸ್ವಲ್ಪವಾಗಿ ಬಿತ್ತುವವನು ಪೈರನ್ನು ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು ಎಂದು ತಿಳುಕೊಳ್ಳಿರಿ.

7 ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.

8 ದೇವರು ಸಕಲವಿಧವಾದ ದಾನಗಳನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವದಕ್ಕೆ ಶಕ್ತನಾದ್ದರಿಂದ ನೀವು ಯಾವಾಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆಯುಳ್ಳವರಾಗಿ ಸಕಲಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರಬೇಕು.

9 ಉಪಕಾರಿಯ ವಿಷಯದಲ್ಲಿ - ಅವನು ಬಡವರಿಗೆ ಧಾರಾಳವಾಗಿ ಕೊಟ್ಟನು; ಅವನ ನೀತಿಯ ಫಲವು ಸದಾಕಾಲವೂ ಇರುವದು ಎಂದು ಶಾಸ್ತ್ರದಲ್ಲಿ ಬರೆದದೆಯಲ್ಲಾ.

10 ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಆಹಾರವನ್ನೂ ಕೊಡುವಾತನು ನಿಮಗೂ ಬಿತ್ತುವದಕ್ಕೆ ಬೀಜವನ್ನು ಕೊಟ್ಟು ಹೆಚ್ಚಿಸಿ ನಿಮ್ಮ ಧರ್ಮಕಾರ್ಯಗಳಿಂದಾಗುವ ಫಲಗಳನ್ನು ವೃದ್ಧಿಪಡಿಸುವನು.

11 ಹೀಗೆ ನೀವು ಎಲ್ಲಾ ವಿಷಯಗಳಲ್ಲಿ ಐಶ್ವರ್ಯವಂತರಾಗಿದ್ದು ಉದಾರವಾಗಿ ಕೊಡ ಶಕ್ತರಾಗುವಿರಿ; ಇದಲ್ಲದೆ ನಿಮ್ಮ ದಾನಗಳು ನಮ್ಮ ಕೈಯಿಂದ ಮತ್ತೊಬ್ಬರಿಗೆ ಸೇರಿದಾಗ ದೇವರಿಗೆ ಕೃತಜ್ಞತಾಸ್ತುತಿಯನ್ನುಂಟುಮಾಡುವದು.

12 ಹೇಗಂದರೆ ನೀವು ನಡಿಸುವ ಈ ಧರ್ಮಕಾರ್ಯವು ದೇವಜನರ ಕೊರತೆಗಳನ್ನು ನೀಗುವದು ಮಾತ್ರವಲ್ಲದೆ ಅನೇಕರಿಂದ ದೇವರಿಗೆ ಕೃತಜ್ಞತಾಸ್ತುತಿಯನ್ನು ಹುಟ್ಟಿಸುವದು.

13 ಈ ಸಹಾಯದಿಂದ ತೋರಿಬಂದ ನಿಮ್ಮ ಯೋಗ್ಯಭಾವವನ್ನು ಅವರು ನೋಡುವಾಗ ನೀವು ಮಾಡಿದ್ದ ಪ್ರತಿಜ್ಞೆಗೆ ಸರಿಯಾಗಿ ಕ್ರಿಸ್ತನ ಸುವಾರ್ತೆಯನ್ನು ಅನುಸರಿಸಿದ್ದರಿಂದಲೂ ತಮಗೂ ಎಲ್ಲರಿಗೂ ನೀವು ಉದಾರವಾಗಿ ಸಹಾಯಮಾಡಿದ್ದರಿಂದಲೂ ದೇವರನ್ನು ಕೊಂಡಾಡುವರು.

14 ಇದಲ್ಲದೆ ನಿಮಗೋಸ್ಕರ ವಿಜ್ಞಾಪನೆಮಾಡಿ ದೇವರ ಅತಿಶಯವಾದ ಕೃಪೆಯು ನಿಮ್ಮಲ್ಲಿ ಇರುವದರಿಂದ ನಿಮ್ಮ ಪರಿಚಿತಿಮಾಡಬೇಕೆಂದು ಕೋರುವರು.

15 ವರ್ಣಿಸಲಶಕ್ಯವಾದ ದೇವರ ವರಕ್ಕಾಗಿ ಆತನಿಗೆ ಸ್ತೋತ್ರ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು