Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಕೊರಿಂಥದವರಿಗೆ 8 - ಕನ್ನಡ ಸತ್ಯವೇದವು J.V. (BSI)


ಯೆರೂಸಲೇವಿುನ ಬಡ ಕ್ರೈಸ್ತರಿಗಾಗಿ ಹಣಸಹಾಯ ಮಾಡುವದರ ವಿಷಯ ( 8.1—9.15 ) ಪೌಲನು ಮಕೆದೋನ್ಯದ ಸಭೆಗಳವರ ಔದಾರ್ಯವನ್ನು ಕುರಿತು ಹೇಳಿ ಕೊರಿಂಥದವರಲ್ಲಿಯೂ ಔದಾರ್ಯವನ್ನು ಹುಟ್ಟಿಸುವದಕ್ಕೆ ಪ್ರಯತ್ನಿಸಿದ್ದು

1 ಸಹೋದರರೇ, ಮಕೆದೋನ್ಯದ ಸಭೆಗಳಲ್ಲಿ ದೇವರ ಕೃಪೆಯು ತೋರಿದ ಬಗೆಯನ್ನು ನಿಮಗೆ ತಿಳಿಸುತ್ತೇವೆ.

2 ಆ ಸಭೆಗಳವರು ಬಹಳ ಹಿಂಸೆ ತಾಳುವವರಾದರೂ ಮತ್ತು ವಿಪರೀತವಾದ ಬಡತನದಲ್ಲಿದ್ದರೂ ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು.

3 ಅವರು ಶಕ್ತ್ಯನುಸಾರವಾಗಿ ಮಾತ್ರ ಕೊಡದೆ ಶಕ್ತಿಯನ್ನು ಮೀರಿ ತಮ್ಮಷ್ಟಕ್ಕೆ ತಾವೇ ಕೊಟ್ಟರು; ಇದಕ್ಕೆ ನಾನು ಸಾಕ್ಷಿ.

4 ದೇವಜನರಿಗೆ ಸಹಾಯಮಾಡುವ ಕೆಲಸದಲ್ಲಿ ತಾವು ಪಾಲುಗಾರರಾಗುವಂತೆ ಅಪ್ಪಣೆಯಾಗಬೇಕೆಂದು ನಮ್ಮನ್ನು ಬಹಳವಾಗಿ ಬೇಡಿಕೊಂಡರು.

5 ನಾವು ನೆನಸಿದ್ದ ಪ್ರಕಾರವಾಗಿ ಅವರು ಕೊಡದೆ ಮೊದಲು ತಮ್ಮನ್ನೇ ಕರ್ತನಿಗೆ ಒಪ್ಪಿಸಿಕೊಟ್ಟರು; ಅನಂತರ ದೇವರ ಚಿತ್ತಾನುಸಾರವಾಗಿ ನಮಗೂ ತಮ್ಮನ್ನು ಒಪ್ಪಿಸಿದರು.

6 ಹೀಗಿರಲಾಗಿ ಈ ಧರ್ಮಕಾರ್ಯವನ್ನು ಮಾಡುವದಕ್ಕೆ ಮೊದಲು ನಿಮ್ಮನ್ನು ಪ್ರೇರೇಪಿಸಿದ ತೀತನು ತಿರಿಗಿ ನಿಮ್ಮ ಬಳಿಗೆ ಬಂದು ಅದನ್ನು ತೀರಿಸಬೇಕೆಂದು ನಾವು ಅವನನ್ನು ಕೇಳಿಕೊಂಡಿದ್ದೇವೆ.

7 ನೀವು ದೇವರ ಮೇಲಣ ನಂಬಿಕೆ ವಾಕ್ಚಾತುರ್ಯ ಜ್ಞಾನ ಸಕಲವಿಧವಾದ ಆಸಕ್ತಿ ನಮ್ಮ ಪ್ರೇರಣೆಯಿಂದ ನಿಮ್ಮಲ್ಲಿ ಹುಟ್ಟಿದ ಪ್ರೀತಿ ಇವೇ ಮೊದಲಾದ ಎಲ್ಲಾ ವಿಷಯಗಳಲ್ಲಿ ಹೇಗೆ ಸಮೃದ್ಧರಾಗಿದ್ದೀರೋ ಹಾಗೆಯೇ ಈ ಧರ್ಮಕಾರ್ಯದಲ್ಲಿಯೂ ಸಮೃದ್ಧರಾಗಿರಿ.

8 ಇದನ್ನು ಆಜ್ಞಾರೂಪವಾಗಿ ಹೇಳದೆ ಇತರರ ಆಸಕ್ತಿಯನ್ನು ತೋರಿಸಿಕೊಟ್ಟು ನಿಮ್ಮ ಪ್ರೀತಿಯೂ ಯಥಾರ್ಥವಾದದ್ದೆಂಬದನ್ನು ಪರೀಕ್ಷೆಯಿಂದ ತಿಳಿದುಕೊಳ್ಳಬೇಕೆಂದು ಹೇಳುತ್ತೇನೆ.

9 ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮಗೆ ಗೊತ್ತಾಗಿದೆಯಲ್ಲಾ; ಆತನು ಐಶ್ವರ್ಯವಂತನಾಗಿದ್ದು ತಾನು ಬಡತನದಲ್ಲಿ ಸೇರುವದರಿಂದ ನೀವು ಐಶ್ವರ್ಯವಂತರಾಗಬೇಕೆಂದು ನಿಮಗೋಸ್ಕರ ಬಡವನಾದನು.

10 ಈ ಧರ್ಮಕಾರ್ಯವನ್ನು ಕುರಿತು ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ; ಈ ಕಾರ್ಯವನ್ನು ಒಂದು ವರುಷದ ಹಿಂದೆ ನಡಿಸುವದಕ್ಕೆ ತೊಡಗುವದರಲ್ಲಿಯೂ ನಡಿಸಬೇಕೆಂದು ಮನಸ್ಸು ಮಾಡುವದರಲ್ಲಿಯೂ ನೀವು ಅವರಿಗಿಂತ ಮೊದಲಿನವರಾದದರಿಂದ ನಮಗೆ ಅಷ್ಟು ಮಾತ್ರ ಹೇಳುವದು ವಿಹಿತವಾಗಿದೆ.

11 ಈ ಕಾರ್ಯವನ್ನು ಪ್ರಾರಂಭಿಸುವದಕ್ಕೆ ಹೇಗೆ ನಿಮ್ಮಲ್ಲಿ ಸಿದ್ಧಮನಸ್ಸು ಇತ್ತೋ ಹಾಗೆಯೇ ನಿಮ್ಮ ನಿಮ್ಮ ಶಕ್ತ್ಯನುಸಾರವಾಗಿ ನೆರವೇರಿಸಿರಿ.

12 ಒಬ್ಬನು ಕೊಡುವದಕ್ಕೆ ಮನಸ್ಸುಳ್ಳವನಾಗಿರುವಲ್ಲಿ ಅವನು ತನ್ನಲ್ಲಿ ಇರುವದಕ್ಕೆ ಅನುಸಾರವಾಗಿ ಕೊಟ್ಟರೆ ಅದು ಸಮರ್ಪಕವಾಗಿರುವದು; ಅವನಿಗೆ ಇಲ್ಲದ್ದನ್ನು ದೇವರು ಕೇಳಿಕೊಳ್ಳುವದಿಲ್ಲ.

13 ಇತರರಿಗೆ ಕಷ್ಟಪರಿಹಾರವೂ ನಿಮಗೆ ಕಷ್ಟವೂ ಉಂಟಾಗಬೇಕೆಂದು ನನ್ನ ತಾತ್ಪರ್ಯವಲ್ಲ;

14 ಸಮಾನತ್ವವಿರಬೇಕೆಂಬದೇ ನನ್ನ ತಾತ್ಪರ್ಯ. ಸದ್ಯಕ್ಕೆ ನಿಮ್ಮ ಸಮೃದ್ಧಿಯು ಅವರ ಕೊರತೆಯನ್ನು ನೀಗಿಸುತ್ತದೆ. ಮುಂದೆ ಅವರ ಸಮೃದ್ಧಿಯು ನಿಮ್ಮ ಕೊರತೆಯನ್ನು ನೀಗಿಸುವದು; ಹೀಗೆ ಸಮಾನತ್ವವುಂಟಾಗುವದು.

15 ಬಹಳ ಕೂಡಿಸಿದವನಿಗೆ ಏನೂ ಹೆಚ್ಚಾಗಲಿಲ್ಲ, ಸ್ವಲ್ಪವಾಗಿ ಕೂಡಿಸಿದವನಿಗೆ ಏನೂ ಕಡಿಮೆಯಾಗಲಿಲ್ಲ ಎಂದು ಶಾಸ್ತ್ರದಲ್ಲಿ ಬರೆದಿರುವ ಪ್ರಕಾರವಾಗುವದು.


ಧರ್ಮದ್ರವ್ಯವನ್ನು ಕೂಡಿಸುವದಕ್ಕೆ ಪೌಲನು ಯೋಗ್ಯರಾದ ಕೆಲವು ಪುರುಷರನ್ನು ಕೊರಿಂಥಕ್ಕೆ ಕಳುಹಿಸಿದ್ದು

16 ನಿಮ್ಮ ವಿಷಯವಾಗಿ ನನಗಿರುವ ಹಿತಚಿಂತನೆಯನ್ನು ದೇವರು ತೀತನ ಹೃದಯದಲ್ಲಿಯೂ ಹುಟ್ಟಿಸಿದ್ದಕ್ಕಾಗಿ ಆತನಿಗೆ ಸ್ತೋತ್ರವಾಗಲಿ.

17 ಅವನು ನಿಮ್ಮ ಬಳಿಗೆ ಹೋಗಬೇಕೆಂದು ನಾವು ಕೇಳಿಕೊಂಡಾಗ ಅವನು ಒಪ್ಪಿದ್ದಲ್ಲದೆ ಅತ್ಯಾಸಕ್ತನಾಗಿದ್ದು ತನ್ನಷ್ಟಕ್ಕೆ ತಾನೇ ನಿಮ್ಮ ಬಳಿಗೆ ಬರುವದಕ್ಕೆ ಹೊರಟಿದ್ದಾನೆ.

18 ಅವನ ಜೊತೆಯಲ್ಲಿ ಮತ್ತೊಬ್ಬ ಸಹೋದರನನ್ನು ಕಳುಹಿಸಿದ್ದೇವೆ; ಈ ಸಹೋದರನು ಸುವಾರ್ತಾಸೇವೆಯಲ್ಲಿ ಎಲ್ಲಾ ಸಭೆಗಳೊಳಗೆ ಕೀರ್ತಿಪಡಕೊಂಡವನಾಗಿದ್ದಾನೆ.

19 ಇದು ಮಾತ್ರವಲ್ಲದೆ ನಾವು ನಡಿಸುವ ಈ ಧರ್ಮಕಾರ್ಯ ಸಂಬಂಧವಾಗಿ ಸಭೆಗಳವರು ಈತನನ್ನು ನಮ್ಮ ಸಂಗಡ ಪ್ರಯಾಣಮಾಡುವಂತೆ ಗೊತ್ತುಮಾಡಿದ್ದಾರೆ. ಅವರು ಹೀಗೆ ಮಾಡಿದ್ದರಿಂದ ಕರ್ತನಿಗೆ ಘನವೂ ನಮ್ಮಲ್ಲಿ ಸಿದ್ಧಮನಸ್ಸೂ ಉಂಟಾಗುವದು.

20 ನಾವು ಪಾರುಪತ್ಯಮಾಡುವ ಈ ದ್ರವ್ಯಸಂಚಯದ ವಿಷಯದಲ್ಲಿ ಒಬ್ಬರೂ ನಮ್ಮ ಮೇಲೆ ತಪ್ಪುಹೊರಿಸುವದಕ್ಕೆ ಆಸ್ಪದವಿರಬಾರದು.

21 ಯಾಕಂದರೆ ಕರ್ತನ ದೃಷ್ಟಿಯಲ್ಲಿ ಮಾತ್ರವಲ್ಲದೆ ಮನುಷ್ಯರ ದೃಷ್ಟಿಯಲ್ಲಿಯೂ ಗೌರವವಾದದ್ದನ್ನು ಯೋಚನೆಗೆ ತಂದುಕೊಳ್ಳುವವರಾಗಿದ್ದೇವೆ.

22 ಇವರಿಬ್ಬರ ಸಂಗಡ ನಮ್ಮ ಸಹೋದರರಲ್ಲಿ ಮತ್ತೊಬ್ಬನನ್ನು ಕಳುಹಿಸಿದ್ದೇವೆ; ನಾವು ಅನೇಕ ಸಮಯಗಳಲ್ಲಿಯೂ ಅನೇಕ ಕಾರ್ಯಗಳಲ್ಲಿಯೂ ಅವನನ್ನು ಪರೀಕ್ಷಿಸಿ ಆಸಕ್ತನೆಂದು ತಿಳುಕೊಂಡಿದ್ದೇವೆ; ಈಗಲಾದರೋ ಅವನು ನಿಮ್ಮಲ್ಲಿಟ್ಟಿರುವ ವಿಶೇಷ ಭರವಸದಿಂದ ಇನ್ನೂ ಬಹು ಹೆಚ್ಚಾಗಿ ಆಸಕ್ತಿಯುಳ್ಳವನಾಗಿದ್ದಾನೆ.

23 ತೀತನನ್ನು ಕುರಿತು ಕೇಳುತ್ತೀರೋ, ಅವನು ನನ್ನ ಪಾಲುಗಾರನೂ ನಿಮ್ಮ ಪ್ರಯೋಜನಕ್ಕಾಗಿ ನನಗೆ ಸಹಕಾರಿಯೂ ಆಗಿದ್ದಾನೆ; ಆ ಸಹೋದರರನ್ನು ಕುರಿತು ಕೇಳುತ್ತೀರೋ, ಅವರು ಸಭೆಗಳಿಂದ ಕಳುಹಿಸಲ್ಪಟ್ಟವರೂ ಕ್ರಿಸ್ತನ ಮಹಿಮೆಯನ್ನು ಪ್ರಕಾಶಪಡಿಸುವವರೂ ಆಗಿದ್ದಾರೆ.

24 ಆದಕಾರಣ ನಿಮ್ಮ ಪ್ರೀತಿಯು ಯಥಾರ್ಥವಾದದ್ದೆಂಬದನ್ನೂ ನಿಮ್ಮನ್ನು ನಾವು ಹೊಗಳಿದ್ದು ನ್ಯಾಯವೆಂಬದನ್ನೂ ಇವರಿಗೂ ಸಭೆಗಳಿಗೂ ತೋರಿಸಿಕೊಡಿರಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು