2 ಕೊರಿಂಥದವರಿಗೆ 7 - ಕನ್ನಡ ಸತ್ಯವೇದವು J.V. (BSI)1 ಪ್ರಿಯರೇ, ಈ ವಾಗ್ದಾನಗಳು ನಮಗಿರುವದರಿಂದ ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರುವದಕ್ಕೆ ಪ್ರಯತ್ನಿಸೋಣ. ಪೌಲನು ತಾನು ಮೊದಲು ಬರೆದ ಪತ್ರಿಕೆಯಿಂದ ಒಳ್ಳೇ ಫಲವಾಯಿತೆಂದು ಸಂತೋಷಪಟ್ಟದ್ದು 2 ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳಕೊಡಿರಿ; ನಾವು ನಿಮ್ಮಲ್ಲಿ ಯಾರಿಗೂ ಅನ್ಯಾಯಮಾಡಲಿಲ್ಲ, ಯಾರನ್ನೂ ಕೆಡಿಸಲಿಲ್ಲ, ಯಾರನ್ನೂ ವಂಚಿಸಲಿಲ್ಲ. 3 ನಿಮ್ಮ ಮೇಲೆ ತಪ್ಪುಹೊರಿಸಬೇಕೆಂದು ನಾನು ಇದನ್ನು ಹೇಳುವದಿಲ್ಲ. ಕೂಡಾ ಸಾಯುವದಕ್ಕೂ ಕೂಡಾ ಬದುಕುವದಕ್ಕೂ ನೀವು ನಮ್ಮ ಹೃದಯದಲ್ಲಿದ್ದೀರೆಂದು ಮೊದಲೇ ಹೇಳಿದ್ದೇನಲ್ಲಾ. 4 ನಿಮ್ಮಲ್ಲಿ ನನಗೆ ಬಹಳ ಭರವಸ ಉಂಟು; ನಿಮ್ಮ ವಿಷಯದಲ್ಲಿ ನನ್ನ ಉತ್ಸಾಹ ಬಹಳ; ಪರಿಪೂರ್ಣ ಆದರಣೆ ನನಗಾಯಿತು; ನಮಗಾಗುವ ಎಲ್ಲಾ ಸಂಕಟಗಳಲ್ಲಿ ಅತ್ಯಧಿಕವಾದ ಸಂತೋಷದಿಂದ ತುಂಬಿದ್ದೇನೆ. 5 ನಾವು ಮಕೆದೋನ್ಯಕ್ಕೆ ಬಂದಾಗ ನಮ್ಮ ಮನಸ್ಸಿಗೆ ಏನೂ ಉಪಶಮನವಾಗಲಿಲ್ಲ, ಎಲ್ಲಾ ವಿಷಯಗಳಲ್ಲಿಯೂ ನಮಗೆ ಸಂಕಟವಿತ್ತು; ಹೊರಗೆ ಕಲಹ, ಒಳಗೆ ಭಯ. 6 ಆದರೆ ದೀನಾವಸ್ಥೆಯಲ್ಲಿರುವವರನ್ನು ಸಂತೈಸುವ ದೇವರು ತೀತನ ಬರುವಿಕೆಯಿಂದ ನಮ್ಮನ್ನು ಸಂತೈಸಿದನು. 7 ಅವನ ಬರುವಿಕೆಯಿಂದ ಮಾತ್ರವಲ್ಲದೆ ಅವನು ತಾನು ನಿಮ್ಮಲ್ಲಿ ಬಹಳ ಆದರಣೆಯನ್ನು ಹೊಂದಿದೆನೆಂದು ಹೇಳಿದ್ದರಿಂದಲೂ ನಮ್ಮನ್ನು ಸಂತೈಸಿದನು. ಅವನು ನಿಮ್ಮ ಹಂಬಲ, ನಿಮ್ಮ ಗೋಳಾಟ, ನನ್ನ ವಿಷಯವಾದ ನಿಮ್ಮ ಆಸಕ್ತಿ ಇವುಗಳನ್ನು ನಮಗೆ ತಿಳಿಸಿದಾಗ ನಾನು ಹೆಚ್ಚಾಗಿ ಸಂತೋಷಪಟ್ಟೆನು. 8 ನಾನು ಬರೆದ ಪತ್ರಿಕೆಯು ನಿಮ್ಮನ್ನು ದುಃಖಪಡಿಸಿದ್ದರೂ ನನಗೆ ಪಶ್ಚಾತ್ತಾಪವಿಲ್ಲ. ಅದು ನಿಮ್ಮನ್ನು ಒಂದು ಗಳಿಗೆ ಹೊತ್ತಾದರೂ ದುಃಖಪಡಿಸಿತೆಂದು ನಾನು ಮೊದಲು ಪಶ್ಚಾತ್ತಾಪಪಡುತ್ತಿದ್ದರೂ ಈಗ ಸಂತೋಷಪಡುತ್ತೇನೆ. 9 ನಿಮಗೆ ದುಃಖವಾಯಿತೆಂದು ನಾನು ಸಂತೋಷಪಡದೆ ನೀವು ದುಃಖಪಟ್ಟು ಬೇರೆ ಮನಸ್ಸನ್ನು ಹೊಂದಿದ್ದಕ್ಕಾಗಿ ಸಂತೋಷಪಡುತ್ತೇನೆ. ನೀವು ದೇವರ ಚಿತ್ತಾನುಸಾರವಾಗಿ ದುಃಖಿಸಿದ್ದರಿಂದ ನವ್ಮಿುಂದ ಯಾವದರಲ್ಲಿಯೂ ನಷ್ಟಪಡಲಿಲ್ಲವಲ್ಲಾ. 10 ದೇವರ ಚಿತ್ತಾನುಸಾರವಾಗಿರುವ ದುಃಖವು ಮಾನಸಾಂತರವನ್ನುಂಟುಮಾಡಿ ರಕ್ಷಣೆಗೆ ಕಾರಣವಾಗಿದೆ; ಆ ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಆಸ್ಪದವಿಲ್ಲ; ಆದರೆ ಲೋಕದವರಿಗಿರುವಂಥ ದುಃಖವು ಮರಣವನ್ನುಂಟುಮಾಡುತ್ತದೆ. 11 ನೀವು ದೇವರ ಚಿತ್ತಾನುಸಾರವಾಗಿ ಪಟ್ಟ ದುಃಖವು ನಿಮಗೆ ಎಂಥ ತಹತಹವನ್ನು ಉಂಟುಮಾಡಿತು ನೋಡಿರಿ. ನೀವು ನಿರ್ದೋಷಿಗಳೆಂದು ಸ್ಥಾಪಿಸುವದಕ್ಕೆ ಎಷ್ಟೋ ಪ್ರಯಾಸಪಟ್ಟಿರಿ, ಎಷ್ಟೋ ಮನೋವ್ಯಥೆಯನ್ನು ಅನುಭವಿಸಿದಿರಿ; ಎಂಥ ಭಯವನ್ನು ಎಂಥ ಹಂಬಲವನ್ನು ತೋರಿಸಿದಿರಿ; ಮಾನಹಾನಿಗಾಗಿ ಎಷ್ಟೋ ರೋಷಪಟ್ಟು ಶಿಕ್ಷೆಮಾಡಿದಿರಿ. ನೀವು ಆ ಕಾರ್ಯಕ್ಕೆ ಸೇರಿದವರಲ್ಲವೆಂಬದನ್ನು ಎಲ್ಲಾ ವಿಧದಲ್ಲಿಯೂ ತೋರಿಸಿದಿರಿ. 12 ನಾನು ನಿಮಗೆ ಬರೆದಾಗ ಅನ್ಯಾಯಮಾಡಿದವನಿಗೆ ದಂಡನೆಯೂ ಅನ್ಯಾಯಹೊಂದಿದವನಿಗೆ ನ್ಯಾಯವೂ ಆಗಬೇಕೆಂಬುವ ಕಾರಣದಿಂದ ಬರೆಯಲಿಲ್ಲ; ನಮಗೋಸ್ಕರ ನಿಮಗಿರುವ ಆಸಕ್ತಿಯು ದೇವರ ಮುಂದೆ ನಿಮಗೆ ವ್ಯಕ್ತವಾಗಬೇಕೆಂಬುವ ಉದ್ದೇಶದಿಂದಲೇ ಬರೆದೆನು. 13 ಆದಕಾರಣ ನಮ್ಮ ಮನಸ್ಸಿಗೆ ಆದರಣೆ ಉಂಟಾಯಿತು. ಅಷ್ಟು ಮಾತ್ರವೇ ಅಲ್ಲ, ತೀತನ ಮನಸ್ಸಿಗೆ ನಿಮ್ಮೆಲ್ಲರಿಂದ ಉಪಶಮನವಾದ ಕಾರಣ ನಾವು ಅವನ ಸಂತೋಷವನ್ನು ನೋಡಿ ಮತ್ತೂ ಹೆಚ್ಚಾಗಿ ಸಂತೋಷಪಟ್ಟೆವು. 14 ಯಾಕಂದರೆ ನಾನು ಅವನ ಮುಂದೆ ನಿಮ್ಮನ್ನು ಹೊಗಳಿದ್ದರಲ್ಲಿ ನಾಚಿಕೆಪಡಬೇಕಾಗಿ ಬರಲಿಲ್ಲ. ನಾವು ನಿಮಗೆ ಹೇಳಿದ ಎಲ್ಲಾ ಮಾತುಗಳು ಹೇಗೆ ಸತ್ಯವಾಗಿದ್ದವೋ ಹಾಗೆ ನಾವು ತೀತನ ಮುಂದೆ ಆಡಿದ ಹೊಗಳಿಕೆಯ ಮಾತುಗಳೂ ಸತ್ಯವೆಂದು ಕಂಡುಬಂದವು. 15 ನೀವು ಮನೋಭೀತಿಯಿಂದ ನಡುಗುವವರಾಗಿ ಅವನನ್ನು ಸೇರಿಸಿಕೊಂಡದ್ದರಲ್ಲಿ ನಿಮ್ಮೆಲ್ಲರ ವಿಧೇಯತೆಯು ತೋರಬಂತು. ಅವನು ಅದನ್ನು ಜ್ಞಾಪಕಮಾಡಿಕೊಳ್ಳುವಾಗ ನಿಮ್ಮ ಮೇಲೆ ಅವನ ಕನಿಕರವು ಹೆಚ್ಚಾಗಿದೆ. 16 ಸರ್ವ ವಿಷಯದಲ್ಲೂ ನಿಮ್ಮನ್ನು ಕುರಿತು ನನಗೆ ಭರವಸವಿರುವದರಿಂದ ಸಂತೋಷ ಪಡುತ್ತೇನೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India