2 ಕೊರಿಂಥದವರಿಗೆ 6 - ಕನ್ನಡ ಸತ್ಯವೇದವು J.V. (BSI)1 ನಾವು ಆತನೊಂದಿಗೆ ಕೆಲಸ ನಡಿಸುವವರಾಗಿದ್ದು - ನೀವು ಹೊಂದಿದ ದೇವರ ಕೃಪೆಯನ್ನು ವ್ಯರ್ಥ ಮಾಡಿಕೊಳ್ಳಬೇಡಿರೆಂದು ಎಚ್ಚರಿಸುತ್ತೇವೆ. 2 ಪ್ರಸನ್ನತೆಯ ಕಾಲದಲ್ಲಿ ನಿನ್ನ ಮನವಿಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಿನಗೆ ಸಹಾಯ ಮಾಡಿದೆನು ಎಂದು ದೇವರು ಹೇಳುತ್ತಾನಲ್ಲಾ. ಈಗಲೇ ಆ ಸುಪ್ರಸನ್ನತೆಯಕಾಲ; ಇದೇ ಆ ರಕ್ಷಣೆಯ ದಿನ. 3-4 ನಿಂದೆಗೆ ಅವಕಾಶಕೊಡದೆ ಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುತ್ತೇವೆ. ನಾವು ಸಂಕಟಗಳಲ್ಲಿಯೂ ಕೊರತೆಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ 5 ಕಲಹಗಳಲ್ಲಿಯೂ ಕಷ್ಟವಾದ ಕೆಲಸಗಳಲ್ಲಿಯೂ ನಿದ್ದೆಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ ಬಹು ತಾಳ್ಮೆಯನ್ನು ತೋರಿಸುತ್ತೇವೆ. 6 ಶುದ್ಧಮನಸ್ಸು ಜ್ಞಾನ ದೀರ್ಘಶಾಂತಿ ದಯೆ ಪವಿತ್ರಾತ್ಮ ಕಪಟವಿಲ್ಲದ ಪ್ರೀತಿ 7 ಸತ್ಯವಾಕ್ಯ ದೇವರ ಮಹತ್ವ ಇವುಗಳಿಂದ ಕೂಡಿದವರಾಗಿದ್ದೇವೆ. ಎಡಬಲಗೈಗಳಲ್ಲಿ ನೀತಿಯೆಂಬ ಆಯುಧಗಳನ್ನು ಧರಿಸಿಕೊಂಡವರೂ 8 ಮಾನ ಅವಮಾನ ಕೀರ್ತಿ ಅಪಕೀರ್ತಿಗಳನ್ನು ಹೊಂದಿದವರೂ ಆಗಿದ್ದೇವೆ. 9 ಮೋಸಗಾರರೆನಿಸಿಕೊಂಡರೂ ಸತ್ಯವಂತರೂ, ಅಜ್ಞಾತರೆನಿಸಿಕೊಂಡರೂ ವಿಜ್ಞಾತರೂ, ಸಾಯುವವರಾಗಿ ತೋರಿದರೂ ಬದುಕುವವರೂ ಆಗಿದ್ದೇವೆ. ಶಿಕ್ಷೆ ಹೊಂದುವವರಾಗಿದ್ದರೂ ಕೊಲ್ಲಲ್ಪಡದವರೂ, 10 ದುಃಖಪಡುವವರಾಗಿದ್ದರೂ ಯಾವಾಗಲೂ ಸಂತೋಷಪಡುವವರೂ, ಬಡವರಾಗಿದ್ದರೂ ಅನೇಕರಿಗೆ ಐಶ್ವರ್ಯವನ್ನುಂಟುಮಾಡುವವರೂ, ಏನೂ ಇಲ್ಲದವರಾಗಿದ್ದರೂ ಎಲ್ಲಾ ಇದ್ದವರೂ ಆಗಿದ್ದೇವೆ. ಕೊರಿಂಥದವರು ಒಳ್ಳೇ ಮಕ್ಕಳಂತೆ ತನ್ನನ್ನು ಪ್ರೀತಿಸಬೇಕೆಂದು ಪೌಲನು ಕೇಳಿಕೊಂಡದ್ದು 11 ಕೊರಿಂಥದವರೇ, ನಾವು ನಿಮ್ಮೊಡನೆ ಧಾರಾಳವಾಗಿ ಮಾತಾಡುತ್ತಾ ಇದ್ದೇವೆ; ನಮ್ಮ ಹೃದಯವು ನಿಮ್ಮ ವಿಷಯದಲ್ಲಿ ವಿಶಾಲವಾಯಿತು. 12 ನಿಮ್ಮ ಮೇಲಿರುವ ನಮ್ಮ ಪ್ರೀತಿ ಸಂಕೋಚವಾದದ್ದಲ್ಲ; ನಿಮ್ಮ ಪ್ರೀತಿಯೇ ಸಂಕೋಚವಾದದ್ದು. 13 ನಿಮ್ಮ ವಿಷಯದಲ್ಲಿ ನಮ್ಮ ಹೃದಯವು ವಿಶಾಲವಾಗಿರುವದರಿಂದ ನಮ್ಮ ವಿಷಯದಲ್ಲಿ ನಿಮ್ಮ ಹೃದಯವನ್ನೂ ವಿಶಾಲಮಾಡಿಕೊಳ್ಳಿರಿ. ನೀವು ನನ್ನ ಮಕ್ಕಳೆಂದು ಭಾವಿಸಿ ಹೀಗೆ ಹೇಳುತ್ತೇನೆ. ಕ್ರೈಸ್ತರು ಅನ್ಯಜನಗಳ ಸಂಸರ್ಗದಿಂದ ಕೆಡಬಾರದು 14 ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ. ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು? 15 ಬೆಳಕಿಗೂ ಕತ್ತಲೆಗೂ ಐಕ್ಯವೇನು? ಕ್ರಿಸ್ತನಿಗೂ ಸೈತಾನನಿಗೂ ಒಡನಾಟವೇನು? ನಂಬುವವನಿಗೂ ನಂಬದೆ ಇರುವವನಿಗೂ ಪಾಲುಗಾರಿಕೆ ಏನು? 16 ದೇವರ ಮಂದಿರಕ್ಕೂ ವಿಗ್ರಹಗಳಿಗೂ ಒಪ್ಪಿಗೆ ಏನು? ನಾವು ಜೀವಸ್ವರೂಪನಾದ ದೇವರ ಮಂದಿರವಾಗಿದ್ದೇವಲ್ಲಾ. ಇದರ ಸಂಬಂಧವಾಗಿ ದೇವರು ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಹೇಳಿದ್ದಾನೆ. 17 ಆದದರಿಂದ ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ. 18 ಇದಲ್ಲದೆ - ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರಿಯರು ಆಗಿರುವಿರೆಂದು ಸರ್ವಶಕ್ತನಾದ ಕರ್ತನು ಹೇಳುತ್ತಾನೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India