Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಕೊರಿಂಥದವರಿಗೆ 4 - ಕನ್ನಡ ಸತ್ಯವೇದವು J.V. (BSI)


ಸುವಾರ್ತಾಸೇವೆಯಲ್ಲಿ ಎಂಥ ಕಷ್ಟಗಳು ಸಂಭವಿಸಿದರೂ ದೇವರ ಸೇವಕರು ಧೈರ್ಯಗೆಡದೆ ಅದನ್ನು ನಡಿಸುವರು ಎಂಬದು

1 ಆದದರಿಂದ ನಾವು ದೇವರ ಕರುಣೆಯಿಂದ ಈ ಸೇವೆಯನ್ನು ಹೊಂದಿದವರಾಗಿರಲಾಗಿ ಧೈರ್ಯಗೆಟ್ಟು ಹಿಂದೆಗೆಯುವದಿಲ್ಲ.

2 ನಾಚಿಕೆಯನ್ನು ಹುಟ್ಟಿಸುವ ಗುಪ್ತಕಾರ್ಯಗಳನ್ನು ನಾವು ಬಿಟ್ಟುಬಿಟ್ಟು ತಂತ್ರದಲ್ಲಿ ನಡೆಯದೆ ದೇವರ ವಾಕ್ಯವನ್ನು ಕೆಡಿಸದೆ ಸತ್ಯವನ್ನು ಪರಿಷ್ಕಾರವಾಗಿ ಬೋಧಿಸುತ್ತಾ ನಾವು ಸಜ್ಜನರೆಂದು ಪ್ರತಿಮನುಷ್ಯನ ಮನಸ್ಸು ದೇವರ ಮುಂದೆ ಒಪ್ಪಬೇಕಾದ ರೀತಿಯಲ್ಲಿ ನಡೆಯುತ್ತೇವೆ.

3 ನಾವು ಸಾರುವ ಸುವಾರ್ತೆಯು ಕೆಲವರಿಗೆ ಮರೆಯಾಗಿರುವದಾದರೆ ನಾಶನಮಾರ್ಗದಲ್ಲಿರುವವರಿಗೇ ಮರೆಯಾಗಿರುವದು.

4 ಇವರಲ್ಲಿ ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶವು ಉದಯವಾಗಬಾರದೆಂದು ಈ ಪ್ರಪಂಚದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದನು.

5 ನಮ್ಮನ್ನೇ ಪ್ರಸಿದ್ಧಿಪಡಿಸಿಕೊಳ್ಳದೆ ನಮ್ಮನ್ನು ಯೇಸುವಿನ ನಿವಿುತ್ತ ನಿಮ್ಮ ದಾಸರೆಂತಲೂ ಕ್ರಿಸ್ತೇಸುವನ್ನೇ ಕರ್ತನೆಂತಲೂ ಪ್ರಸಿದ್ಧಿಪಡಿಸುತ್ತೇವೆ.

6 ಯಾಕಂದರೆ ಕತ್ತಲೆಯೊಳಗಿಂದ ಬೆಳಕು ಹೊಳೆಯಲಿ ಎಂದು ಹೇಳಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಪ್ರಭಾವಜ್ಞಾನವೆಂಬ ಪ್ರಕಾಶವು ಅನೇಕರಿಗೆ ಉಂಟಾಗುವದಕ್ಕಾಗಿ ನಮ್ಮ ಹೃದಯಗಳಲ್ಲಿ ಹೊಳೆದನು.

7 ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂದು ತೋರುವದಕ್ಕಾಗಿ ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮಗುಂಟು.

8 ಸರ್ವವಿಧದಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಅತಿ ಸಂಕಟ ಪಡುವವರಲ್ಲ; ನಾವು ದಿಕ್ಕು ಕಾಣದವರಾಗಿದ್ದರೂ ಕೇವಲ ದೆಸೆಗೆಟ್ಟವರಲ್ಲ;

9 ಹಿಂಸೆ ಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ; ಕೆಡವಲ್ಪಟ್ಟವರಾಗಿದ್ದರೂ ಪ್ರಾಣನಷ್ಟಪಡುವವರಲ್ಲ;

10 ಯೇಸುವಿನ ಜೀವವು ನಮ್ಮ ದೇಹದಲ್ಲಿ ಉಂಟೆಂದು ತೋರಿಬರುವದಕ್ಕಾಗಿ ಯೇಸುವಿನ ಮರಣಾವಸ್ಥೆಯನ್ನು ನಾವು ಯಾವಾಗಲೂ ದೇಹದಲ್ಲಿ ಅನುಭವಿಸುತ್ತಾ ತಿರುಗಾಡುತ್ತೇವೆ.

11 ಯೇಸುವಿನ ಜೀವವು ನಮ್ಮ ಮರ್ತ್ಯಶರೀರದಲ್ಲಿ ಉಂಟೆಂದು ತೋರಿಬರುವದಕ್ಕಾಗಿ ಬದುಕಿರುವ ನಾವು ಯೇಸುವಿನ ನಿವಿುತ್ತ ಯಾವಾಗಲೂ ಮರಣಕ್ಕೆ ಒಪ್ಪಿಸಲ್ಪಡುತ್ತಾ ಇದ್ದೇವೆ.

12 ಹೀಗೆ ನಮ್ಮಲ್ಲಿ ಮರಣವು ಪ್ರವರ್ತಿಸುತ್ತದೆ; ಆದರೆ ನಿಮ್ಮಲ್ಲಿ ಜೀವವು ಪ್ರವರ್ತಿಸುತ್ತದೆ.

13 ಹೀಗಿದ್ದರೂ - ನಂಬಿದೆನು, ಆದದರಿಂದ ಮಾತಾಡಿದೆನು ಎಂಬ ಶಾಸ್ತ್ರೋಕ್ತಿಯಲ್ಲಿ ಕಾಣುವ ನಂಬಿಕೆಯ ಭಾವವನ್ನೇ ಹೊಂದಿ ನಾವೂ ನಂಬಿದವರು, ಆದದರಿಂದ ಮಾತಾಡುತ್ತೇವೆ.

14 ಕರ್ತನಾದ ಯೇಸುವನ್ನು ಎಬ್ಬಿಸಿದಾತನು ನಮ್ಮನ್ನು ಸಹ ಯೇಸುವಿನೊಂದಿಗೆ ಎಬ್ಬಿಸಿ ನಿಮ್ಮ ಜೊತೆಯಲ್ಲಿ ತನ್ನ ಮುಂದೆ ನಿಲ್ಲಿಸುವನೆಂದು ತಿಳಿದವರಾಗಿದ್ದೇವೆ.

15 ಆ ಬಾಧೆಗಳೆಲ್ಲಾ ನಿಮ್ಮ ಹಿತಕ್ಕಾಗಿಯೇ ನಮಗೆ ಸಂಭವಿಸುತ್ತವೆ. ಅವುಗಳಲ್ಲಿ ಅಧಿಕವಾಗಿ ದೊರಕುವ ದೈವಕೃಪೆಯು ಬಹುಜನರೊಳಗೆ ಕೃತಜ್ಞತೆಯನ್ನು ಹುಟ್ಟಿಸುವದರಿಂದ ದೇವರಿಗೆ ಹೆಚ್ಚಾದ ಸ್ತೋತ್ರವನ್ನು ಉಂಟುಮಾಡುವದು.


ಪರಲೋಕಭಾಗ್ಯವನ್ನು ಆಲೋಚಿಸುವಾಗ ಕ್ರಿಸ್ತನಲ್ಲಿರುವವರಿಗೆ ಧೈರ್ಯವಾಗುತ್ತದೆ ಎಂಬದು

16 ಆದದರಿಂದ ನಾವು ಧೈರ್ಯಗೆಡುವದಿಲ್ಲ. ನಮ್ಮ ದೇಹವು ನಾಶವಾಗುತ್ತಾ ಇದ್ದರೂ ನಮ್ಮ ಆಂತರ್ಯವು ದಿನೇದಿನೇ ಹೊಸದಾಗುತ್ತಾ ಬರುತ್ತದೆ.

17 ಹೇಗಂದರೆ ಕ್ಷಣಮಾತ್ರವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕವಾದ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಗೌರವವಾದ ಪ್ರಭಾವವನ್ನು ದೊರಕಿಸುತ್ತದೆ.

18 ನಾವು ಕಾಣುವಂಥದನ್ನು ಲಕ್ಷಿಸದೆ ಕಾಣದಿರುವಂಥದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದು ಸ್ವಲ್ಪಕಾಲ ಮಾತ್ರ ಇರುವದು; ಕಾಣದಿರುವಂಥದು ಸದಾಕಾಲವೂ ಇರುವದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು