2 ಕೊರಿಂಥದವರಿಗೆ 3 - ಕನ್ನಡ ಸತ್ಯವೇದವು J.V. (BSI)1 ನಾವೇ ನಮ್ಮನ್ನು ತಿರಿಗಿ ಹೊಗಳಿಕೊಳ್ಳುವದಕ್ಕೆ ಪ್ರಾರಂಭಿಸುತ್ತೇವೋ? ಇಲ್ಲವೆ ಕೆಲವರಿಗೆ ಬೇಕಾಗಿರುವ ಪ್ರಕಾರ ನಿಮಗೆ ತೋರಿಸತಕ್ಕ ಯೋಗ್ಯತಾ ಪತ್ರಗಳು ನಮಗೆ ಅಗತ್ಯವೋ? ಅಥವಾ ಅಂಥ ಪತ್ರಗಳನ್ನು ನಿವ್ಮಿುಂದ ಪಡಕೊಳ್ಳಬೇಕೋ? 2 ನೀವೇ ನಮ್ಮ ಯೋಗ್ಯತಾಪತ್ರ; ಅದು ನಮ್ಮ ಹೃದಯಗಳಲ್ಲೇ ಬರೆದದೆ; ಆ ಪತ್ರವನ್ನು ಎಲ್ಲರೂ ಬಲ್ಲರು, ಎಲ್ಲರೂ ಓದುತ್ತಾರೆ. 3 ಕ್ರಿಸ್ತನು ನಮ್ಮ ಕೈಯಿಂದ ಬರಸಿಕೊಟ್ಟ ಪತ್ರವಾಗಿದ್ದೀರೆಂಬದು ಪ್ರತ್ಯಕ್ಷವಾಗಿಯೇ ಇದೆ; ಅದು ಮಸಿಯಿಂದ ಬರೆದದ್ದಲ್ಲ, ಜೀವವುಳ್ಳ ದೇವರ ಆತ್ಮನಿಂದಲೇ ಬರೆದದ್ದು; ಕಲ್ಲಿನ ಮೇಲೆಯಲ್ಲ, ಮನುಷ್ಯ ಹೃದಯಗಳೆಂಬ ಹಲಿಗೆಗಳ ಮೇಲೆ ಬರೆದದ್ದು. 4 ಇಂಥ ಭರವಸವು ಕ್ರಿಸ್ತನ ಮೂಲಕವೇ ದೇವರ ಮುಂದೆ ನಮಗುಂಟು. 5 ನಮ್ಮಿಂದಲೇ ಏನಾದರೂ ಉಂಟಾಯಿತೆಂದು ತೀರ್ಮಾನಿಸಿಕೊಳ್ಳುವದಕ್ಕೆ ನಮ್ಮಷ್ಟಕ್ಕೆ ನಾವೇ ಸಮರ್ಥರೆಂತಲ್ಲ; ನಮಗಿರುವ ಸಾಮರ್ಥ್ಯವು ದೇವರಿಂದಲೇ ಬಂದದ್ದು; 6 ಆತನು ಹೊಸ ಒಡಂಬಡಿಕೆಗೆ ಸೇವಕರಾಗಿರುವ ಸಾಮರ್ಥ್ಯವನ್ನು ನಮಗೆ ಅನುಗ್ರಹಿಸಿದ್ದಾನೆ. ಈ ಒಡಂಬಡಿಕೆಯು ಲಿಖಿತ ರೂಪವಾದದ್ದಾಗಿರದೆ ದೇವರಾತ್ಮ ಸಂಬಂಧವಾದದ್ದು ಆಗಿದೆ. ಲಿಖಿತರೂಪವಾದ ಒಡಂಬಡಿಕೆಯು ಮರಣವನ್ನುಂಟುಮಾಡುತ್ತದೆ; ದೇವರಾತ್ಮ ಸಂಬಂಧವಾದದ್ದು ಜೀವವನ್ನುಂಟುಮಾಡುತ್ತದೆ. 7 ಮರಣವಿಧಿಸುವ ನಿಯಮದ ಸೇವೆಯು ಕಲ್ಲಿನ ಮೇಲೆ ಲಿಖಿತವಾದ ಅಕ್ಷರಗಳಲ್ಲಿ ಆಧಾರಗೊಂಡಿದ್ದರೂ ಪ್ರಭಾವದಿಂದ ಕೂಡಿದ್ದಾಗಿತ್ತು. ಆ ಪ್ರಭಾವದಿಂದ ಮೋಶೆಯ ಮುಖಕ್ಕೆ ಬಂದ ಪ್ರಕಾಶವು ಕುಂದಿಹೋಗುವಂಥದಾಗಿದ್ದರೂ ಅದರ ನಿವಿುತ್ತ ಇಸ್ರಾಯೇಲ್ಯರು ಅವನ ಮುಖವನ್ನು ನೋಡಲಾರದೆ ಇದ್ದರು. 8 ಹೀಗಿದ್ದ ಮೇಲೆ ದೇವರಾತ್ಮಸಂಬಂಧವಾದ ಸೇವೆಯು ಎಷ್ಟೋ ಹೆಚ್ಚಾಗಿ ಪ್ರಭಾವವುಳ್ಳದ್ದಾಗಿರಬೇಕು. 9 ಅಪರಾಧನಿರ್ಣಯಕ್ಕೆ ಸಾಧನವಾಗಿರುವ ಸೇವೆಯು ಪ್ರಭಾವದಿಂದಿರಲಾಗಿ ನೀತಿಗೆ ಸಾಧನವಾಗಿರುವ ಸೇವೆಯು ಎಷ್ಟೋ ಅಧಿಕವಾದ ಪ್ರಭಾವವುಳ್ಳದ್ದಾಗಿರಬೇಕು. 10 ಅಧಿಕವಾದ ಪ್ರಭಾವವುಳ್ಳದ್ದು ಬಂದದರಿಂದ ಮೊದಲಿದ್ದ ಪ್ರಭಾವವು ಅದರ ಬಳಿಯಲ್ಲಿ ಪ್ರಭಾವವಿಲ್ಲದ್ದಾಯಿತು. 11 ಇಲ್ಲದೆಹೋಗುವಂಥದು ಪ್ರಭಾವವುಳ್ಳದ್ದಾಗಿದ್ದರೆ ಶಾಶ್ವತವಾಗಿ ಇರುವಂಥದು ಬಹು ಹೆಚ್ಚಾಗಿ ಪ್ರಭಾವವುಳ್ಳದ್ದಾಗಿರಬೇಕಲ್ಲವೇ. 12 ಆದದರಿಂದ ನಾವು ಇಂಥ ಭರವಸವುಳ್ಳವರಾಗಿದ್ದು ಧಾರಾಳವಾಗಿ ಮಾತಾಡುತ್ತೇವೆ. 13 ನಾವು ಮೋಶೆಯಂತೆ ಮಾಡುವದಿಲ್ಲ, ಗತಿಸಿಹೋಗುವಂಥದರ ಅಂತ್ಯವನ್ನು ಇಸ್ರಾಯೇಲ್ಯರು ಕಣ್ಣಿಟ್ಟು ನೋಡಬಾರದೆಂದು ಅವನು ತನ್ನ ಮುಖದ ಮೇಲೆ ಮುಸುಕುಹಾಕಿಕೊಳ್ಳುತ್ತಿದ್ದನು. 14 ಆದರೆ ಅವರ ಬುದ್ಧಿ ಮಂದವಾಯಿತು; ಈ ದಿನದವರೆಗೂ ಹಳೇ ಒಡಂಬಡಿಕೆಯು ಪಾರಾಯಣವಾಗುವಾಗ ಅದು ಕ್ರಿಸ್ತನಲ್ಲಿ ಗತಿಸಿಹೋಗುತ್ತದೆಂಬದು ಅವರಿಗೆ ಪ್ರಕಟವಾಗದೆ ಇರುವದರಿಂದ ಅದೇ ಮುಸುಕು ಎತ್ತಲ್ಪಡದೆ ಇರುತ್ತದೆ. 15 ಈ ದಿನದವರೆಗೂ ಮೋಶೆಯ ಗ್ರಂಥಪಾರಾಯಣವು ಆಗುವಾಗೆಲ್ಲಾ ಮುಸುಕು ಅವರ ಹೃದಯದ ಮೇಲೆ ಇರುತ್ತದೆ. 16 ಅವರ ಹೃದಯವು ಕರ್ತನ ಕಡೆಗೆ ತಿರುಗಿಕೊಂಡಾಗಲೇ ಆ ಮುಸುಕು ತೆಗೆಯಲ್ಪಡುವದು. 17 ಆ ಕರ್ತನು ದೇವರಾತ್ಮನೇ; ಕರ್ತನ ಆತ್ಮನು ಯಾರಲ್ಲಿದ್ದಾನೋ ಅವರಿಗೆ ಬಿಡುಗಡೆ ಉಂಟು. 18 ನಾವೆಲ್ಲರೂ ಮುಸುಕುತೆಗೆದಿರುವ ಮುಖದಿಂದ ಕರ್ತನ ಪ್ರಭಾವವನ್ನು ದರ್ಪಣದಲ್ಲಿ ಕಾಣಿಸುತ್ತದೋ ಎಂಬಂತೆ ದೃಷ್ಟಿಸುವವರಾಗಿದ್ದು ಪ್ರಭಾವದಿಂದ ಅಧಿಕಪ್ರಭಾವಕ್ಕೆ ಹೋಗುತ್ತಾ ಆ ಪ್ರಭಾವದ ಸಾರೂಪ್ಯವುಳ್ಳವರೇ ಆಗುತ್ತೇವೆ; ಇದು ದೇವರಾತ್ಮನಾಗಿರುವ ಕರ್ತನ ಕೆಲಸಕ್ಕನುಸಾರವಾದದ್ದೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India