Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಕೊರಿಂಥದವರಿಗೆ 2 - ಕನ್ನಡ ಸತ್ಯವೇದವು J.V. (BSI)

1 ಆದರೆ ನಾನು ತಿರಿಗಿ ನಿಮ್ಮ ಬಳಿಗೆ ದುಃಖದಿಂದ ಬರುವದಿಲ್ಲವೆಂದು ನನ್ನಲ್ಲಿ ತೀರ್ಮಾನಿಸಿಕೊಂಡೆನು.

2 ನಾನು ನಿಮ್ಮನ್ನು ದುಃಖಪಡಿಸಿದರೆ ನನ್ನನ್ನು ಆನಂದಪಡಿಸುವದಕ್ಕೆ ಯಾರಿದ್ದಾರೆ? ನನ್ನಿಂದ ದುಃಖ ಹೊಂದಿದವರೇ ಹೊರತು ಬೇರೆ ಯಾರೂ ಇಲ್ಲವಲ್ಲಾ.

3 ಆದಕಾರಣ ನಾನು ಬಂದಾಗ ನನ್ನನ್ನು ಸಂತೋಷಪಡಿಸತಕ್ಕವರಿಂದ ದುಃಖಹೊಂದಬಾರದೆಂದು ಯೋಚಿಸಿ ಆ ಸಂಗತಿಯನ್ನು ಪತ್ರಿಕೆಯ ಮೂಲಕವೇ ತಿಳಿಸಿದೆನು. ನನ್ನ ಸಂತೋಷವು ನಿಮ್ಮೆಲ್ಲರ ಸಂತೋಷವೇ ಎಂದು ತಿಳಿದು ನಿಮ್ಮೆಲ್ಲರ ವಿಷಯದಲ್ಲೂ ನನಗೆ ಭರವಸವಿತ್ತು.

4 ನಿಮಗೆ ದುಃಖವಾಗಬೇಕೆಂತಲ್ಲ, ನಿಮ್ಮ ಮೇಲೆ ನನಗಿರುವ ಅಧಿಕವಾದ ಪ್ರೀತಿಯನ್ನು ನೀವು ತಿಳುಕೊಳ್ಳಬೇಕೆಂತಲೇ ನಾನು ಬಹಳ ಕಣ್ಣೀರು ಬಿಡುತ್ತಾ ಹೃದಯದ ಬಹುಸಂಕಟದಿಂದಲೂ ವ್ಯಾಕುಲದಿಂದಲೂ ನಿಮಗೆ ಬರೆದೆನು.

5 ದುಃಖವನ್ನು ಉಂಟುಮಾಡಿರುವವನೊಬ್ಬನು ನಿಮ್ಮಲ್ಲಿ ಇದ್ದರೂ ಅವನು ನನ್ನನ್ನು ಮಾತ್ರ ದುಃಖಪಡಿಸದೆ ನಿಮ್ಮಲ್ಲಿ ಬಹು ಜನರನ್ನೂ ದುಃಖಪಡಿಸಿದ್ದಾನೆ; ಆ ದುಃಖವು ಎಲ್ಲರಲ್ಲಿಯೂ ಉಂಟಾಯಿತೆಂದು ನಾನು ಹೇಳುವದಿಲ್ಲ.

6 ಇಂಥವನಿಗೆ ನಿಮ್ಮಲ್ಲಿ ಹೆಚ್ಚಾದ ಜನರಿಂದುಂಟಾದ ಆ ಶಿಕ್ಷೆಯೇ ಸಾಕು.

7 ಇನ್ನೂ ಅವನನ್ನು ಶಿಕ್ಷಿಸದೆ ಮನ್ನಿಸಿರಿ, ಸಂತೈಸಿರಿ; ಇಲ್ಲವಾದರೆ ಅವನು ಅಧಿಕವಾದ ದುಃಖದಲ್ಲಿ ಮುಳುಗಿಹೋದಾನು.

8 ಆದದರಿಂದ ಅವನಿಗೆ ನಿಮ್ಮ ಪ್ರೀತಿಯನ್ನು ನಿಶ್ಚಯಪಡಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

9 ಸರ್ವವಿಷಯದಲ್ಲಿಯೂ ನೀವು ವಿಧೇಯರಾಗಿದ್ದೀರೋ ಏನೋ ನಿಮ್ಮ ಗುಣವನ್ನು ಪರೀಕ್ಷಿಸಿ ತಿಳುಕೊಳ್ಳಬೇಕೆಂಬುವ ಉದ್ದೇಶದಿಂದಲೇ ಮೊದಲು ಬರೆದೆನು.

10 ನೀವು ಯಾರಿಗೆ ಯಾವದನ್ನು ಮನ್ನಿಸುತ್ತೀರೋ ನಾನು ಸಹ ಮನ್ನಿಸುತ್ತೇನೆ. ನಾನು ಯಾವದನ್ನಾದರೂ ಮನ್ನಿಸಿದ್ದರೆ ಕ್ರಿಸ್ತನ ಸನ್ನಿಧಾನದಲ್ಲಿ ನಿಮ್ಮ ನಿವಿುತ್ತವೇ ಮನ್ನಿಸಿದೆನು.

11 ಸೈತಾನನು ನಮ್ಮನ್ನು ವಂಚಿಸಿ ನಷ್ಟಪಡಿಸಬಾರದು; ಅವನ ಯೋಚನೆಗಳನ್ನು ನಾವು ಅರಿಯದವರಲ್ಲವಲ್ಲಾ.


ಸುವಾರ್ತಾಸೇವೆಯ ಶ್ರೇಷ್ಠತೆಯನ್ನು ಕುರಿತದ್ದು

12 ಕ್ರಿಸ್ತನ ಸುವಾರ್ತೆಯನ್ನು ಸಾರುವದಕ್ಕಾಗಿ ನಾನು ತ್ರೋವಕ್ಕೆ ಬರಲು ಕರ್ತನ ಕೃಪೆಯಿಂದ ನನಗೆ ಒಳ್ಳೇ ಸಂದರ್ಭ ಉಂಟಾಯಿತು.

13 ಆದರೂ ನನ್ನ ಸಹೋದರನಾದ ತೀತನು ನನಗೆ ಸಿಕ್ಕಲಿಲ್ಲವಾದ ಕಾರಣ ನನ್ನ ಆತ್ಮಕ್ಕೆ ಉಪಶಮನವಿಲ್ಲದೆ ಅಲ್ಲಿದ್ದವರಿಂದ ಕಳುಹಿಸಿಕೊಂಡವನಾಗಿ ಹೊರಟು ಮಕೆದೋನ್ಯಕ್ಕೆ ಬಂದೆನು.

14 ಕ್ರಿಸ್ತನ ಅನ್ಯೋನ್ಯತೆಯಲ್ಲಿ ನಮ್ಮನ್ನು ಯಾವಾಗಲೂ ಜಯೋತ್ಸವದೊಡನೆ ಮೆರಸುತ್ತಾ ಆತನ ವಿಷಯವಾದ ಜ್ಞಾನವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ವ್ಯಾಪನಗೊಳಿಸುತ್ತಾ ಬರುವ ದೇವರಿಗೆ ಸ್ತೋತ್ರವು.

15 ರಕ್ಷಣಾಮಾರ್ಗದಲ್ಲಿರುವವರಲ್ಲಿಯೂ ನಾಶನಮಾರ್ಗದಲ್ಲಿರುವವರಲ್ಲಿಯೂ ನಾವು ದೇವರ ಮುಂದೆ ಕ್ರಿಸ್ತನ ಪರಿಮಳವಾಗಿದ್ದೇವೆ.

16 ನಾವು ನಾಶನಮಾರ್ಗದಲ್ಲಿರುವವರಿಗೆ ಮರಣದಿಂದ ಹುಟ್ಟಿ ಮರಣವನ್ನು ಹುಟ್ಟಿಸುವ ವಾಸನೆಯಾಗಿಯೂ ರಕ್ಷಣಾಮಾರ್ಗದಲ್ಲಿರುವವರಿಗೆ ಜೀವದಿಂದ ಹುಟ್ಟಿ ಜೀವವನ್ನು ಹುಟ್ಟಿಸುವ ವಾಸನೆಯಾಗಿಯೂ ಇದ್ದೇವೆ. ಇಂಥ ಕಾರ್ಯಗಳಿಗೆ ಯಾರು ಯೋಗ್ಯರು?

17 ಆದರೆ ನಾವು ದೇವರ ವಾಕ್ಯವನ್ನು ಕಲಬೆರಿಕೆಮಾಡುವವರಾದ ಹೆಚ್ಚು ಪಾಲಿನ ಜನರ ಹಾಗಿರದೆ ನಿಷ್ಕಪಟಿಗಳಾಗಿ ದೇವರಿಂದ ಉಪದೇಶ ಹೊಂದಿದವರಿಗೆ ತಕ್ಕ ಹಾಗೆ ಕ್ರಿಸ್ತನ ಅನ್ಯೋನ್ಯತೆಯಲ್ಲಿದ್ದುಕೊಂಡು ದೇವರ ಸಮಕ್ಷಮದಲ್ಲಿಯೇ ಮಾತಾಡುತ್ತೇವೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು