Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಕೊರಿಂಥದವರಿಗೆ 13 - ಕನ್ನಡ ಸತ್ಯವೇದವು J.V. (BSI)

1 ನಾನು ನಿಮ್ಮ ಬಳಿಗೆ ಬರುವದು ಇದು ಮೂರನೆಯ ಸಾರಿ. ಇಬ್ಬರು ಮೂವರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಸಂಗತಿ ಸ್ಥಾಪಿತವಾಗಬೇಕು.

2 ನಾನು ಎರಡನೆಯ ಸಾರಿ ನಿಮ್ಮಲ್ಲಿದ್ದಾಗ - ತಿರಿಗಿ ಬಂದರೆ ನಿಮ್ಮನ್ನು ಶಿಕ್ಷಿಸದೆ ಬಿಡುವದಿಲ್ಲವೆಂದು ಹೇಗೆ ಹೇಳಿದೆನೋ ಹಾಗೆಯೇ ಈಗಲೂ ನಿಮಗೆ ದೂರದಲ್ಲಿದ್ದು ಪೂರ್ವಪಾಪಕೃತ್ಯಗಳನ್ನು ಇನ್ನೂ ನಡಿಸುತ್ತಿರುವವರಿಗೂ ವಿುಕ್ಕಾದವರೆಲ್ಲರಿಗೂ ಹೇಳುತ್ತೇನೆ.

3 ಕ್ರಿಸ್ತನು ನನ್ನಲ್ಲಿ ಮಾತಾಡುತ್ತಾನೆಂಬದಕ್ಕೆ ನಿಮಗೆ ಬೇಕಾದ ಪ್ರಮಾಣವು ಆಗ ತೋರಿಬರುವದು. ಆತನು ನಿಮ್ಮನ್ನು ಕುರಿತು ನಿರ್ಬಲನಾಗಿರದೆ ಬಲವಾದ ಕೆಲಸಗಳನ್ನು ನಿಮ್ಮಲ್ಲಿ ನಡಿಸುವವನಾಗಿದ್ದಾನೆ.

4 ಆತನು ಬಲಹೀನಾವಸ್ಥೆಯಲ್ಲಿದ್ದದರಿಂದ ಶಿಲುಬೆಗೆ ಹಾಕಲ್ಪಟ್ಟನು ನಿಜ; ಆದರೂ ದೇವರ ಬಲದಿಂದ ಬದುಕುತ್ತಾನೆ. ನಾವು ಸಹ ಆತನ ಬಲಹೀನಾವಸ್ಥೆಯಲ್ಲಿ ಪಾಲುಗಾರರಾಗಿದ್ದೇವೆ; ಆದರೂ ಆತನೊಂದಿಗೆ ದೇವರ ಬಲದಿಂದ ಬದುಕುವವರಾಗಿದ್ದೇವೆ; ಇದು ನಿಮಗೆ ತೋರಿಬರುವದು.

5 ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ. ಏನು, ಯೇಸು ಕ್ರಿಸ್ತನು ನಿಮ್ಮಲ್ಲಿದ್ದಾನೆಂಬದು ನಿಮ್ಮನ್ನು ಕುರಿತು ನಿಮಗೆ ಚೆನ್ನಾಗಿ ತಿಳಿಯುವದಿಲ್ಲವೋ? ಆತನು ನಿಮ್ಮಲ್ಲಿಲ್ಲದಿದ್ದರೆ ನೀವು ಅಯೋಗ್ಯರೇ.

6 ನಾವಂತೂ ಅಯೋಗ್ಯರಲ್ಲವೆಂದು ನಿಮಗೆ ಗೊತ್ತಾಗುವದೆಂಬದಾಗಿ ನಿರೀಕ್ಷಿಸುತ್ತೇನೆ.

7 ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ; ಇದರಲ್ಲಿ ನಾವೇ ಯೋಗ್ಯರಾಗಿ ತೋರಿಬರಬೇಕೆಂಬದು ನಮ್ಮ ಉದ್ದೇಶವಲ್ಲ; ನಾವು ಅಯೋಗ್ಯರೆನಿಸಿಕೊಂಡರೂ ನೀವು ಒಳ್ಳೇದನ್ನು ಮಾಡುವವರಾಗಬೇಕೆಂಬದೇ ನಮ್ಮ ಉದ್ದೇಶ.

8 ಸತ್ಯಕ್ಕೆ ವಿರುದ್ಧವಾಗಿ ನಾವೇನೂ ಮಾಡಲಾರೆವು; ಸತ್ಯಾಭಿವೃದ್ಧಿಗೋಸ್ಕರವೇ ಸಮಸ್ತವನ್ನು ಮಾಡುತ್ತೇವೆ.

9 ನಾವು ಬಲಹೀನರಾಗಿದ್ದರೂ ನೀವು ಬಲಿಷ್ಠರಾಗಿದ್ದ ಪಕ್ಷಕ್ಕೆ ಸಂತೋಷವಾಗಿದ್ದೇವೆ. ಇದಲ್ಲದೆ ನೀವು ಪೂರ್ಣಕ್ರಮಕ್ಕೆ ಬರಬೇಕೆಂದು ಪ್ರಾರ್ಥಿಸುತ್ತೇವೆ.

10 ಇದಕ್ಕಾಗಿಯೇ ನಾನು ನಿಮ್ಮಲ್ಲಿ ಇಲ್ಲದಿರುವಾಗ ಈ ಮಾತುಗಳನ್ನು ಬರೆದಿದ್ದೇನೆ. ನಿಮ್ಮನ್ನು ಕೆಡವಿಹಾಕುವದಕ್ಕಲ್ಲ, ಕಟ್ಟುವದಕ್ಕಾಗಿ ಕರ್ತನು ನನಗೆ ಕೊಟ್ಟಿರುವ ಅಧಿಕಾರದ ಪ್ರಯೋಗದಲ್ಲಿ ನಿಮ್ಮ ಬಳಿಗೆ ಬಂದಾಗ ಕಾಠಿಣ್ಯವನ್ನು ತೋರಿಸುವದಕ್ಕೆ ಅವಕಾಶವಿರಬಾರದೆಂದು ಅಪೇಕ್ಷಿಸುತ್ತೇನೆ.


ಕಡೇ ಮಾತುಗಳು

11 ಕಡೇ ಮಾತೇನಂದರೆ ಸಹೋದರರೇ ಸಂತೋಷಪಡಿರಿ, ಕ್ರಮಪಡಿಸಿಕೊಳ್ಳಿರಿ; ಧೈರ್ಯವುಳ್ಳವರಾಗಿರಿ, ಒಂದೇ ಮನಸ್ಸುಳ್ಳವರಾಗಿರಿ, ಸಮಾಧಾನದಿಂದಿರಿ; ಆಗ ಪ್ರೀತಿಯನ್ನೂ ಶಾಂತಿಯನ್ನೂ ಕೊಡುವ ದೇವರು ನಿಮ್ಮ ಸಂಗಡ ಇರುವನು.

12 ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.

13 ದೇವಜನರೆಲ್ಲರೂ ನಿಮಗೆ ವಂದನೆ ಹೇಳುತ್ತಾರೆ.

14 ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯೂ ದೇವರ ಪ್ರೀತಿಯೂ ಪವಿತ್ರಾತ್ಮನ ಅನ್ಯೋನ್ಯತೆಯೂ ನಿಮ್ಮೆಲ್ಲರ ಸಂಗಡವಿರಲಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು