2 ಕೊರಿಂಥದವರಿಗೆ 12 - ಕನ್ನಡ ಸತ್ಯವೇದವು J.V. (BSI)1 ಹೊಗಳಿಕೊಳ್ಳುವದು ವಿಹಿತವಲ್ಲದಿದ್ದರೂ ಅದು ನನಗೆ ಅವಶ್ಯವಾಗಿದೆ. ಆದದರಿಂದ ಕರ್ತನು ನನಗೆ ದಯಪಾಲಿಸಿದ ದರ್ಶನಗಳನ್ನು ಕುರಿತೂ ತಿಳಿಯಪಡಿಸಿದ ರಹಸ್ಯಗಳನ್ನು ಕುರಿತೂ ಹೇಳುತ್ತೇನೆ. 2 ಕ್ರಿಸ್ತನಲ್ಲಿದ್ದ ಒಬ್ಬ ಮನುಷ್ಯನನ್ನು ಬಲ್ಲೆನು, ಅವನು ಹದಿನಾಲ್ಕು ವರುಷಗಳ ಹಿಂದೆ ಮೂರನೆಯ ಆಕಾಶದ ಪರಿಯಂತರಕ್ಕೂ ಒಯ್ಯಲ್ಪಟ್ಟನು. ಅವನು ದೇಹಸಹಿತನಾಗಿ ಒಯ್ಯಲ್ಪಟ್ಟನೋ ದೇಹರಹಿತನಾಗಿ ಒಯ್ಯಲ್ಪಟ್ಟನೋ ನಾನರಿಯೆ, ದೇವರೇ ಬಲ್ಲನು. 3-4 ಅಂಥ ಮನುಷ್ಯನು ಪರದೈಸಕ್ಕೆ ಒಯ್ಯಲ್ಪಟ್ಟು ಮನುಷ್ಯರು ನುಡಿಯಲಶಕ್ಯವಾದ ಹೇಳಬಾರದ ಮಾತುಗಳನ್ನು ಕೇಳಿದನೆಂದು ಬಲ್ಲೆನು; ಆ ಸಮಯದಲ್ಲಿ ಅವನು ದೇಹ ಸಹಿತನಾಗಿದ್ದನೋ ದೇಹರಹಿತನಾಗಿದ್ದನೋ ನಾನರಿಯೆ, ದೇವರೇ ಬಲ್ಲನು. 5 ಅಂಥವನನ್ನು ಕುರಿತು ಹೆಚ್ಚಳಪಡುವೆನು, ನನ್ನನ್ನು ಕುರಿತಾದರೋ ನನ್ನ ನಿರ್ಬಲಾವಸ್ಥೆಗಳಲ್ಲಿಯೇ ಹೊರತು ಬೇರೆ ಹೆಚ್ಚಳಪಡುವದಿಲ್ಲ. 6 ಹೊಗಳಿಕೊಳ್ಳುವದಕ್ಕೆ ನನಗೆ ಒಂದು ವೇಳೆ ಮನಸ್ಸಿದ್ದರೂ ಹಾಗೆ ಹೊಗಳಿಕೊಳ್ಳುವದರಲ್ಲಿ ನಾನು ಬುದ್ಧಿಹೀನನಾಗುವದಿಲ್ಲ. ಯಾಕಂದರೆ ಸತ್ಯವನ್ನೇ ಹೇಳುತ್ತಿರುವೆನು. ಆದರೂ ಯಾವನೂ ನನ್ನಲ್ಲಿ ಕಾಣುವದಕ್ಕಿಂತಲೂ ನನ್ನಿಂದ ಕೇಳುವದಕ್ಕಿಂತಲೂ ಹೆಚ್ಚಾಗಿ ನನ್ನನ್ನು ಕುರಿತು ಎಣಿಸಬಾರದು. 7 ಈ ಕಾರಣದಿಂದಲೂ ನನಗೆ ತಿಳಿಸಲ್ಪಟ್ಟ ರಹಸ್ಯಗಳು ಬಹು ವಿಶೇಷವಾಗಿರುವದರಿಂದಲೂ ನಾನು ಹೊಗಳಿಕೊಳ್ಳದೆ ಸುಮ್ಮನಿರುತ್ತೇನೆ. ನಾನು ನನ್ನನ್ನು ಅತಿಶಯವಾಗಿ ಹೆಚ್ಚಿಸಿಕೊಳ್ಳಬಾರದೆಂದು ಒಂದು ಶೂಲ ನನ್ನ ಶರೀರದಲ್ಲಿ ನಾಟಿದೆಯೋ ಎಂಬಂತೆ ನನ್ನನ್ನು ಗುದ್ದುವದಕ್ಕೆ ಸೈತಾನನ ದೂತರಲ್ಲಿ ಒಬ್ಬನು ನನ್ನ ಬಳಿಗೆ ಕಳುಹಿಸಲ್ಪಟ್ಟನು; ನಾನು ಅತಿಶಯವಾಗಿ ಹೆಚ್ಚಿಸಿಕೊಳ್ಳಬಾರದೆಂತಲೇ ಇದಾಯಿತು. 8 ಈ ಪೀಡೆಯ ವಿಷಯದಲ್ಲಿ ಅದು ನನ್ನನ್ನು ಬಿಟ್ಟುಹೋಗಬೇಕೆಂದು ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು. 9 ಅದಕ್ಕಾತನು - ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ ಎಂದು ನನಗೆ ಹೇಳಿದ್ದಾನೆ. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲಸಿಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾವಸ್ಥೆಗಳ ವಿಷಯದಲ್ಲಿಯೇ ಬಹುಸಂತೋಷವಾಗಿ ಹೆಚ್ಚಳಪಡುವೆನು. 10 ಆದದರಿಂದ ಕ್ರಿಸ್ತನ ನಿವಿುತ್ತ ನನಗೆ ನಿರ್ಬಲಾವಸ್ಥೆಯೂ ತಿರಸ್ಕಾರವೂ ಕೊರತೆಯೂ ಹಿಂಸೆಯೂ ಇಕ್ಕಟ್ಟೂ ಸಂಭವಿಸಿದಾಗ ಸಂತುಷ್ಟನಾಗಿದ್ದೇನೆ. ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ. ಪೌಲನು ತನ್ನ ಪ್ರತಿವಾದವನ್ನು ಮುಗಿಸಿ ತಾನು ಕೊರಿಂಥಕ್ಕೆ ಬಂದು ಎಲ್ಲವನ್ನು ಕ್ರಮಪಡಿಸುವೆನೆಂದು ಹೇಳುವದು 11 ನಾನು ಹೀಗೆ ಬರೆದು ಬುದ್ಧಿಹೀನನಾದೆನು; ಅದಕ್ಕೆ ನೀವೇ ನನ್ನನ್ನು ಬಲವಂತ ಮಾಡಿದಿರಿ. ನಿಮ್ಮಿಂದಲೇ ನನಗೆ ಹೊಗಳಿಕೆಯು ಉಂಟಾಗಬೇಕಾಗಿತ್ತು; ಯಾಕಂದರೆ ನಾನು ಕೇವಲ ಅಲ್ಪನಾದರೂ ಅತಿ ಶ್ರೇಷ್ಠರಾದ ಅಪೊಸ್ತಲರು ಅನ್ನಿಸಿಕೊಳ್ಳುವ ಆ ಜನರಿಗಿಂತ ಒಂದರಲ್ಲಿಯಾದರೂ ಕಡಿಮೆಯಾಗಲಿಲ್ಲ. 12 ನಾನು ಹಿಂಸೆಯನ್ನು ಸ್ಥಿರಚಿತ್ತದಿಂದ ತಾಳಿಕೊಳ್ಳುವದರಲ್ಲಿಯೂ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಹತ್ಕಾರ್ಯಗಳನ್ನೂ ನಡಿಸಿದ್ದರಲ್ಲಿಯೂ ಅಪೊಸ್ತಲನಿಗೆ ಇರತಕ್ಕ ಲಕ್ಷಣಗಳು ನಿಮ್ಮ ಮಧ್ಯದಲ್ಲಿ ತೋರಿದವು. 13 ನನ್ನನ್ನು ಸಂರಕ್ಷಿಸುವ ಭಾರವನ್ನು ನಾನು ನಿಮ್ಮ ಮೇಲೆ ಹಾಕಲಿಲ್ಲವೆಂಬುವ ಒಂದೇ ವಿಷಯದಲ್ಲಿ ಹೊರತು ಇನ್ನಾವ ವಿಷಯದಲ್ಲಿಯೂ ನಿಮ್ಮನ್ನು ವಿುಕ್ಕಾದ ಸಭೆಗಳವರಿಗಿಂತ ಕಡಿಮೆ ಮಾಡಲಿಲ್ಲವಲ್ಲಾ. ನಾನು ಮಾಡಿದ ಈ ಅನ್ಯಾಯವನ್ನು ಕ್ಷವಿುಸಿರಿ. 14 ಇಗೋ, ನಾನು ನಿಮ್ಮ ಬಳಿಗೆ ಬರುವದಕ್ಕೆ ಸಿದ್ಧವಾಗಿರುವದು ಇದು ಮೂರನೆಯ ಸಾರಿ; ಮತ್ತು ನಿಮಗೆ ಭಾರವಾಗಿರುವದಿಲ್ಲ; ನಾನು ನಿಮ್ಮ ಸೊತ್ತನ್ನು ಆಶಿಸದೆ ನಿಮ್ಮನ್ನೇ ಆಶಿಸುತ್ತೇನೆ. ಮಕ್ಕಳು ತಂದೆತಾಯಿಗಳಿಗೋಸ್ಕರ ದ್ರವ್ಯವನ್ನು ಕೂಡಿಸಿಡುವದು ಧರ್ಮವಲ್ಲ, ತಂದೆತಾಯಿಗಳು ಮಕ್ಕಳಿಗೋಸ್ಕರ ಕೂಡಿಸಿಡುವದೇ ಧರ್ಮ. 15 ನಾನಂತೂ ನನಗಿರುವದನ್ನು ನಿಮ್ಮ ಆತ್ಮಸಂರಕ್ಷಣೆಗೋಸ್ಕರ ಅತಿಸಂತೋಷದಿಂದ ವೆಚ್ಚಮಾಡುತ್ತೇನೆ, ನನ್ನನ್ನೇ ವೆಚ್ಚಮಾಡಿಕೊಳ್ಳುತ್ತೇನೆ. ನಾನು ನಿಮ್ಮನ್ನು ಹೆಚ್ಚಾಗಿ ಪ್ರೀತಿಸಿದರೆ ನೀವು ನನ್ನನ್ನು ಕಡಿಮೆಯಾಗಿ ಪ್ರೀತಿಸುತ್ತೀರೋ? 16 ಒಂದು ವೇಳೆ ನೀವು - ಅದಿರಲಿ, ತಾನು ನಮಗೆ ಭಾರವಾಗದೆ ಹೋದರೂ ಯುಕ್ತಿಯುಳ್ಳವನಾಗಿದ್ದು ನಮ್ಮನ್ನು ಉಪಾಯದಿಂದ ಸುಲುಕೊಂಡನೆಂದು ಹೇಳೀರಿ. 17 ನಾನು ನಿಮ್ಮ ಬಳಿಗೆ ಕಳುಹಿಸಿದವರಲ್ಲಿ ಯಾವನ ಮೂಲಕವಾಗಿಯಾಗಲಿ ನಿಮ್ಮನ್ನು ವಂಚಿಸಿ ಏನಾದರೂ ತೆಗೆದುಕೊಂಡೆನೋ? 18 ನಿಮ್ಮ ಬಳಿಗೆ ಹೋಗುವದಕ್ಕೆ ನಾನು ತೀತನನ್ನು ಬೇಡಿಕೊಂಡು ಅವನ ಜೊತೆಯಲ್ಲಿ ಆ ಸಹೋದರನನ್ನು ಕಳುಹಿಸಿಕೊಟ್ಟೆನಷ್ಟೆ. ತೀತನು ನಿಮ್ಮನ್ನು ವಂಚಿಸಿ ಏನಾದರೂ ತೆಗೆದುಕೊಂಡನೋ; ನಾವಿಬ್ಬರೂ ಒಬ್ಬ ಆತ್ಮನಿಂದಲೇ ಪ್ರೇರಿತರಾಗಿ ಒಂದೇ ಹೆಜ್ಜೆಜಾಡಿನಲ್ಲಿ ನಡೆಯಲಿಲ್ಲವೋ? 19 ನಾವು ಇಷ್ಟು ಹೊತ್ತು ನಿಮ್ಮ ಮುಂದೆ ಪ್ರತಿವಾದ ಮಾಡುವವರೆಂದು ನೆನಸುತ್ತೀರೋ? ನಿಮ್ಮ ಮುಂದೆಯಲ್ಲ, ದೇವರ ಸನ್ನಿಧಾನದಲ್ಲಿಯೇ ನಾವು ಕ್ರಿಸ್ತನಲ್ಲಿದ್ದು ಮಾತಾಡುವವರಾಗಿದ್ದೇವೆ. ಪ್ರಿಯರೇ, ನಾವು ಮಾತಾಡುವದೆಲ್ಲಾ ನಿಮ್ಮ ಭಕ್ತಿವೃದ್ಧಿಗೋಸ್ಕರವೇ ಆಗಿದೆ. 20 ನಾನು ಬಂದಾಗ ಒಂದು ವೇಳೆ ನೀವು ನನ್ನ ಇಷ್ಟದ ಪ್ರಕಾರ ಇರುವದಿಲ್ಲವೇನೋ, ನಾನು ನಿಮ್ಮ ಇಷ್ಟದ ಪ್ರಕಾರ ತೋರುವದಿಲ್ಲವೇನೋ, ಒಂದು ವೇಳೆ ನಿಮ್ಮಲ್ಲಿ ಜಗಳ ಹೊಟ್ಟೆಕಿಚ್ಚು ದ್ವೇಷ ಸ್ವಾರ್ಥಬುದ್ಧಿ ಚಾಡಿಹೇಳುವದು ಕಿವಿಯೂದುವದು ಉಬ್ಬಿಕೊಳ್ಳುವದು ಕಲಹ ಎಬ್ಬಿಸುವದು ಇವುಗಳು ಕಾಣಬರುವದೋ ಏನೋ ನನಗೆ ಸಂಶಯ ಉಂಟು. 21 ನಾನು ತಿರಿಗಿ ಬಂದಾಗ ನನ್ನ ದೇವರು ನಿಮ್ಮ ವಿಷಯದಲ್ಲಿ ನನ್ನನ್ನು ನಾಚಿಕೆಗೆ ಗುರಿಮಾಡಾನೆಂತಲೂ, ಪೂರ್ವದಲ್ಲಿ ಬಂಡುತನ ಹಾದರತನ ಪೋಕರಿತನಗಳನ್ನು ನಡಿಸಿ ಪಶ್ಚಾತ್ತಾಪ ಪಡದಿರುವ ಅನೇಕರ ವಿಷಯವಾಗಿ ನಾನು ದುಃಖಪಡಬೇಕಾದೀತೆಂತಲೂ ನನಗೆ ಭಯ ಉಂಟು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India