2 ಕೊರಿಂಥದವರಿಗೆ 10 - ಕನ್ನಡ ಸತ್ಯವೇದವು J.V. (BSI)ತನಗೆ ಅಧಿಕಾರವಿಲ್ಲವೆಂದು ವಿರೋಧಿಗಳು ಹೇಳಿದ ಮಾತಿಗೆ ಪೌಲನು ಕೊಡುವ ಉತ್ತರ ( 10.1—13.10 ) ತನಗೆ ಅಧಿಕಾರ ಉಂಟೆಂಬದನ್ನೂ ಅದು ಎಂಥ ಅಧಿಕಾರವೆಂಬದನ್ನೂ ಕೊರಿಂಥಕ್ಕೆ ಬಂದಾಗ ತೋರಿಸುವೆನೆಂದು ಪೌಲನು ಖಂಡಿತವಾಗಿ ಹೇಳುವದು 1 ಪೌಲನು ನಮ್ಮೆದುರಿನಲ್ಲಿರುವಾಗ ದೀನನಾಗಿ ನಡಕೊಳ್ಳುವವನೂ ದೂರದಲ್ಲಿರುವಾಗ ನಮ್ಮನ್ನು ಕುರಿತು ದಿಟ್ಟತನತೋರಿಸುವವನೂ ಆಗಿದ್ದಾನೆ ಎಂದು ಹೇಳುವವರು ನಿಮ್ಮಲ್ಲಿದ್ದಾರಲ್ಲಾ. ಆ ಪೌಲನೆಂಬ ನಾನು ಕ್ರಿಸ್ತನ ಶಾಂತಮನಸ್ಸನ್ನೂ ಸಾತ್ವಿಕತ್ವವನ್ನೂ ನೆನಪಿಗೆ ತಂದುಕೊಂಡು ನಿಮಗೆ ಖಂಡಿತವಾಗಿ ಹೇಳುವದೇನಂದರೆ 2 ಯಾರು ನಮ್ಮನ್ನು ಲೋಕಾನುಸಾರಿಗಳೆಂದು ಎಣಿಸುತ್ತಾರೋ ಅವರಿಗೆ ದಿಟ್ಟವಾದ ಧೈರ್ಯವನ್ನು ತೋರಿಸಬೇಕೆಂದು ಯೋಚಿಸುತ್ತಾ ಇದ್ದೇನೆ. ನಾವು ನಿಮ್ಮಲ್ಲಿಗೆ ಬಂದಿರುವಾಗ ಅಂಥ ದಿಟ್ಟತನವನ್ನು ತೋರಿಸುವದಕ್ಕೆ ಅವಕಾಶ ಉಂಟಾಗಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 3 ನಾವು ಲೋಕದಲ್ಲಿದ್ದರೂ ಲೋಕಾನುಸಾರವಾಗಿ ಯುದ್ಧಮಾಡುವವರಲ್ಲ. 4 ನಾವು ಉಪಯೋಗಿಸುವ ಆಯುಧಗಳು ಲೋಕಸಂಬಂಧವಾದ ಆಯುಧಗಳಲ್ಲ; ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ. 5 ನಾವು ವಿತರ್ಕಗಳನ್ನೂ ದೇವಜ್ಞಾನವನ್ನು ವಿರೋಧಿಸುವದಕ್ಕೆ ಏರಿಸಲ್ಪಟ್ಟಿರುವ ಉನ್ನತವಾದ ಎಲ್ಲಾ ಕೊತ್ತಲಗಳನ್ನೂ ಕೆಡವಿಹಾಕಿ ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿದು 6 ನಿಮ್ಮ ವಿಧೇಯತ್ವವು ಪರಿಪೂರ್ಣವಾದ ಮೇಲೆ ಎಲ್ಲಾ ಅವಿಧೇಯತ್ವಕ್ಕೆ ಶಿಕ್ಷೆ ಮಾಡುವದಕ್ಕೆ ಸಿದ್ಧರಾಗಿದ್ದೇವೆ. 7 ನೀವು ಮುಖದ ಮುಂದೆ ಇರುವಂಥದನ್ನು ನೋಡಿರಿ. ಯಾವನಾದರೂ ತನ್ನನ್ನು ಕ್ರಿಸ್ತನವನೆಂದು ನಂಬಿಕೊಂಡರೆ ಅವನು ತಿರಿಗಿ ಆಲೋಚನೆ ಮಾಡಿಕೊಂಡು ತಾನು ಹೇಗೆ ಕ್ರಿಸ್ತನವನೋ ಹಾಗೆ ನಾವೂ ಕ್ರಿಸ್ತನವರೆಂದು ತಿಳುಕೊಳ್ಳಲಿ. 8 ನಮಗಿರುವ ಅಧಿಕಾರವನ್ನು ಕುರಿತು ನಾವು ಒಂದು ವೇಳೆ ಹೆಚ್ಚಾಗಿ ಹೊಗಳಿಕೊಂಡರೂ ಹಾಗೆ ಹೊಗಳಿಕೊಳ್ಳುವದರಲ್ಲಿ ನಾಚಿಕೆಪಡುವದಕ್ಕೆ ಕಾರಣವಾಗುವದಿಲ್ಲ. ಆದರೆ ನಿಮ್ಮನ್ನು ಕೆಡವಿಹಾಕುವದಕ್ಕಲ್ಲ ಕಟ್ಟುವದಕ್ಕಾಗಿಯೇ ಕರ್ತನು ಈ ಅಧಿಕಾರವನ್ನು ನಮಗೆ ಕೊಟ್ಟನು. 9 ಪತ್ರಿಕೆಗಳಿಂದ ನಿಮ್ಮನ್ನು ಹೆದರಿಸುವವನಾಗಿ ಕಾಣಿಸಿಕೊಳ್ಳುವದಕ್ಕೆ ನನಗೆ ಮನಸ್ಸಿಲ್ಲ. 10 ಅವನಿಂದ ಬಂದ ಪತ್ರಿಕೆಗಳು ಗೌರವವಾದವುಗಳೂ ಬಲವುಳ್ಳವುಗಳೂ ಆಗಿವೆ; ಅವನು ಸಾಕ್ಷಾತ್ತಾಗಿ ಬಂದರೆ ಅವನು ನಿರ್ಬಲನು, ಅವನ ಮಾತು ಗಣನೆಗೆ ಬಾರದ್ದು ಅನ್ನುತ್ತಾರೆ. 11 ಅಂಥವರು - ನಾವು ದೂರದಲ್ಲಿರುವಾಗ ಪತ್ರಿಕೆಗಳ ಮೂಲಕ ಮಾತಿನಲ್ಲಿ ಎಂಥವರಾಗಿದ್ದೇವೋ ಹತ್ತಿರದಲ್ಲಿರುವಾಗ ಕಾರ್ಯದಲ್ಲಿಯೂ ಅಂಥವರಾಗಿಯೇ ಇದ್ದೇವೆಂದು ತಿಳುಕೊಳ್ಳಲಿ. ಮತ್ತೊಬ್ಬರು ಸುವಾರ್ತೆ ಸಾರಿದ ಕಡೆಯಲ್ಲಿ ತಾನು ಸಾರುವವನಲ್ಲವೆಂದು ಪೌಲನು ಹೇಳುವದು 12 ತಮ್ಮನ್ನು ತಾವೇ ಹೊಗಳಿಕೊಳ್ಳುವ ಕೆಲವರಲ್ಲಿ ನಮ್ಮನ್ನು ಸೇರಿಸಿಕೊಳ್ಳುವದಕ್ಕಾಗಲಿ ಅವರಿಗೆ ಹೋಲಿಸಿಕೊಳ್ಳುವದಕ್ಕಾಗಲಿ ನಮಗೆ ಧೈರ್ಯಸಾಲದು; ಅವರಂತೂ ತಮ್ಮ ತಮ್ಮೊಳಗೆ ತಮ್ಮನ್ನು ಅಳತೆಮಾಡಿಕೊಂಡು ತಮತಮಗೆ ಹೋಲಿಸಿಕೊಂಡು ವಿವೇಕವಿಲ್ಲದವರಾಗಿದ್ದಾರೆ. 13 ನಾವಾದರೋ ಮೇರೆದಪ್ಪಿ ಹೊಗಳಿಕೊಳ್ಳದೆ ದೇವರು ನಮಗೆ ನೇವಿುಸಿದಂಥ ಮೇರೆಯೊಳಗಿದ್ದು ಹೊಗಳಿಕೊಳ್ಳುತ್ತೇವೆ. ಈ ಮೇರೆಯೊಳಗಿದ್ದು ನಿಮ್ಮ ಪರ್ಯಂತರಕ್ಕೂ ಬಂದಿದ್ದೇವೆ. 14 ನಾವು ಕ್ರಿಸ್ತನ ಸುವಾರ್ತೆಯನ್ನು ಸಾರುತ್ತಾ ಇತರರಿಗಿಂತ ಮೊದಲು ನಿಮ್ಮ ಬಳಿಗೆ ಬಂದದರಿಂದ ನಿಮ್ಮ ಮೇಲೆ ಅಧಿಕಾರವಿಲ್ಲದವರಂತೆ ಮೇರೆಯನ್ನು ಅತಿಕ್ರವಿುಸಿದವರಲ್ಲ. 15 ನಾವು ಮೇರೆದಪ್ಪಿ ಮತ್ತೊಬ್ಬರ ಪ್ರಯಾಸದ ಫಲಗಳನ್ನು ತಕ್ಕೊಂಡು ಇವು ನಮ್ಮವು ಎಂದು ಹಿಗ್ಗುವವರಲ್ಲ; ಆದರೆ ನಿಮ್ಮ ನಂಬಿಕೆಯು ಹೆಚ್ಚಿದ ಹಾಗೆಲ್ಲಾ ನಿಮ್ಮ ಮೂಲಕ ನಮ್ಮ ಮೇರೆಯೊಳಗೆ ಇನ್ನೂ ಅಭಿವೃದ್ಧಿಹೊಂದಿ 16 ನಿಮಗೆ ಆಚೆ ಇರುವ ಸೀಮೆಗಳಲ್ಲಿ ಸುವಾರ್ತೆಯನ್ನು ಸಾರುವೆವೆಂಬ ನಿರೀಕ್ಷೆ ನಮಗುಂಟು. ಮತ್ತೊಬ್ಬರ ಮೇರೆಯಲ್ಲಿ ಸಿದ್ಧವಾಗಿ ನಮಗೆ ಸಿಕ್ಕಿದ ಫಲವನ್ನು ಕುರಿತು ನಾವು ಹೆಚ್ಚಳಪಡುವದಿಲ್ಲ. 17 ಹೆಚ್ಚಳಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ. 18 ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯನಲ್ಲ; ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India