Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಅರಸುಗಳು 9 - ಕನ್ನಡ ಸತ್ಯವೇದವು J.V. (BSI)


ಯೇಹುವಿನ ಆಳಿಕೆ ಮೊದಲುಗೊಂಡು ಇಸ್ರಾಯೇಲರಾಜ್ಯ ನಾಶನದವರೆಗಿದ್ದ ಕಾಲದ ಚರಿತ್ರೆಯು ( 9—17 ) ಯೇಹುವು ದಂಗೆ ಎಬ್ಬಿಸಿ ಯೋರಾಮ್ ಅಹಜ್ಯ ಈಜೆಬೆಲ್ ಇವರನ್ನು ಕೊಲ್ಲಿಸಿದ್ದು

1 ಪ್ರವಾದಿಯಾದ ಎಲೀಷನು ಪ್ರವಾದಿ ಮಂಡಲಿಯವರಲ್ಲಿ ಒಬ್ಬನನ್ನು ಕರೆದು ಅವನಿಗೆ - ನಡುಕಟ್ಟಿ ಈ ಎಣ್ಣೆಯ ಕುಪ್ಪಿಯನ್ನು ತೆಗೆದುಕೊಂಡು ರಾಮೋತ್ ಗಿಲ್ಯಾದಿಗೆ ಹೋಗು.

2 ಊರನ್ನು ಮುಟ್ಟಿದ ನಂತರ ನಿಂಷಿಯ ಮೊಮ್ಮಗನೂ ಯೆಹೋಷಾಫಾಟನ ಮಗನೂ ಆದ ಯೇಹುವು ಎಲ್ಲಿರುತ್ತಾನೆಂದು ವಿಚಾರಿಸಿ ಅವನು ಸಿಕ್ಕಿದಾಗ ಅವನನ್ನು ಅವನ ಜೊತೆಗಾರರ ಗುಂಪಿನಿಂದ ಒಳಗಿನ ಕೋಣೆಗೆ ಕರಕೊಂಡು ಹೋಗು.

3 ತರುವಾಯ ಕುಪ್ಪಿಯಲ್ಲಿರುವ ಎಣ್ಣೆಯನ್ನು ಅವನ ತಲೆಯ ಮೇಲೆ ಹೊಯ್ದು - ನಾನು ನಿನ್ನನ್ನು ಇಸ್ರಾಯೇಲ್ಯರ ಅರಸನಾಗುವದಕ್ಕೆ ಅಭಿಷೇಕಿಸಿದ್ದೇನೆಂದು ಯೆಹೋವನು ಅನ್ನುತ್ತಾನೆ ಎಂಬದಾಗಿ ಹೇಳಿ ಕೂಡಲೆ ಕದತೆರೆದು ಓಡಿಹೋಗು ಎಂದು ಆಜ್ಞಾಪಿಸಿದನು.

4 ಆಗ ಪ್ರವಾದಿಯ ಸೇವಕನಾದ ಆ ಯೌವನಸ್ಥನು ರಾಮೋತ್‍ಗಿಲ್ಯಾದಿಗೆ ಹೋಗಿ

5 ಸೈನ್ಯಾಧಿಪತಿಗಳೆಲ್ಲಾ ಒಂದು ಕಡೆಯಲ್ಲಿ ಕೂಡಿರುವದನ್ನು ಕಂಡು ಅವರನ್ನು ಸಮೀಪಿಸಿ - ಸೇನಾಪತಿಯೇ, ನಿನಗೊಂದು ಮಾತು ಹೇಳುವದದೆ ಅಂದನು. ಯೇಹುವು ಅವನನ್ನು - ನಮ್ಮಲ್ಲಿ ಯಾರಿಗೆ ಎಂದು ಕೇಳಲು ಅವನು - ಸೇನಾಪತಿಯಾದ ನಿನಗೇ ಎಂದು ಉತ್ತರಕೊಟ್ಟನು.

6 ಯೇಹುವು ಎದ್ದು ಒಳಗಿನ ಕೋಣೆಗೆ ಹೋಗಲು ಆ ಯೌವನಸ್ಥನು ಇವನ ತಲೆಯ ಮೇಲೆ ಎಣ್ಣೆಯನ್ನು ಹೊಯ್ದು - ಇಸ್ರಾಯೇಲ್‍ದೇವರಾದ ಯೆಹೋವನ ಮಾತನ್ನು ಕೇಳು - ಆತನು ನಿನಗೆ - ನಾನು ನಿನ್ನನ್ನು ನನ್ನ ಪ್ರಜೆಯಾದ ಇಸ್ರಾಯೇಲ್ಯರ ಅರಸನಾಗುವದಕ್ಕೆ ಅಭಿಷೇಕಿಸಿದ್ದೇನೆ.

7 ನೀನು ನಿನ್ನ ಯಜಮಾನನಾದ ಅಹಾಬನ ಮನೆಯವರನ್ನು ಸಂಹರಿಸಿಬಿಡು; ಆಗ ನನ್ನ ಸೇವಕರಾದ ಪ್ರವಾದಿಗಳೇ ಮೊದಲಾದ ಯೆಹೋವಭಕ್ತರ ರಕ್ತವನ್ನು ಸುರಿಸಿದ್ದಕ್ಕಾಗಿ ನಾನು ಈಜೆಬೆಲಳಿಗೆ ಮುಯ್ಯಿತೀರಿಸಿದಂತಾಗುವದು.

8 ಅಹಾಬನ ಕುಟುಂಬದವರೆಲ್ಲಾ ನಿರ್ನಾಮವಾಗಬೇಕು. ಅವನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಿರಲಿ ಪರತಂತ್ರರಾಗಿರಲಿ ಎಲ್ಲರನ್ನೂ ಇಸ್ರಾಯೇಲ್ಯರೊಳಗಿಂದ ತೆಗೆದುಹಾಕುವೆನು.

9 ನೆಬಾಟನ ಮಗನಾದ ಯಾರೊಬ್ಬಾಮನ ಮನೆಗೂ ಅಹೀಯನ ಮಗನಾದ ಬಾಷನ ಮನೆಗೂ ಆದ ಗತಿಯು ಅಹಾಬನ ಮನೆಗೂ ಆಗುವದು.

10 ಈಜೆಬೆಲಳ ಶವವು ಸಮಾಧಿಯನ್ನು ಸೇರುವದಿಲ್ಲ; ನಾಯಿಗಳು ಅದನ್ನು ಇಜ್ರೇಲಿನ ಹೊಲದಲ್ಲಿ ತಿಂದುಬಿಡುವವು ಅನ್ನುತ್ತಾನೆ ಎಂದು ಹೇಳಿ ಕದತೆರೆದು ಓಡಿಹೋದನು.

11 ಯೇಹುವು ತಿರಿಗಿ ತನ್ನ ಒಡೆಯನ ಸೇವಕರ ಹತ್ತಿರ ಬರಲು ಅವರು ಅವನನ್ನು - ಶುಭವಾರ್ತೆಯೋ? ಆ ಹುಚ್ಚನು ನಿನ್ನ ಬಳಿಗೆ ಬಂದದ್ದೇಕೆ ಎಂದು ಕೇಳಿದರು. ಅದಕ್ಕೆ ಅವನು - ಆ ಮನುಷ್ಯನು ಎಂಥವನು, ಅವನ ಮಾತು ಎಂಥದು ಎಂಬದು ನಿಮಗೆ ಗೊತ್ತುಂಟಲ್ಲಾ ಎಂದು ಉತ್ತರಕೊಟ್ಟನು.

12 ಆದರೆ ಅವರು - ಅದು ಸುಳ್ಳು; ಅವನು ಹೇಳಿದ್ದನ್ನು ತಿಳಿಸು ಎಂದು ಅವನನ್ನು ಒತ್ತಾಯಪಡಿಸಿದದರಿಂದ ಅವನು - ನಿನ್ನನ್ನು ಇಸ್ರಾಯೇಲ್ಯರ ಅರಸನಾಗುವದಕ್ಕೆ ಅಭಿಷೇಕಿಸಿದ್ದೇನೆಂಬದಾಗಿ ಯೆಹೋವನು ಅನ್ನುತ್ತಾನೆ ಎಂಬೀ ಮೊದಲಾದ ಮಾತುಗಳನ್ನು ಹೇಳಿದನು ಎಂದು ಉತ್ತರಕೊಟ್ಟನು.

13 ಕೂಡಲೆ ಅವರು ಅವನಿಗೋಸ್ಕರ ಮೆಟ್ಲುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಸಿ ತುತೂರಿಯನ್ನು ಊದಿಸಿ ಯೇಹುವು ಅರಸನಾಗಿದ್ದಾನೆಂದು ಆರ್ಭಟಿಸಿದರು.

14 ಹೀಗೆ ನಿಂಷಿಯ ಮೊಮ್ಮಗನೂ ಯೆಹೋಶಾಫಾಟನ ಮಗನೂ ಆದ ಯೆಹುವು ಯೋರಾಮನಿಗೆ ವಿರೋಧವಾಗಿ ಒಳಸಂಚುಮಾಡಿದನು. (ಅರಾಮ್ಯರ ಅರಸನಾದ ಹಜಾಯೇಲನು ರಾಮೋತ್‍ಗಿಲ್ಯಾದಿಗೆ ವಿರೋಧವಾಗಿ ಬರಲು ಯೋರಾಮನು ಅದನ್ನು ಕಾಪಾಡುವದಕ್ಕೋಸ್ಕರ ಎಲ್ಲಾ ಇಸ್ರಾಯೇಲ್ಯರ ಸಹಿತವಾಗಿ ಹೋಗಿ ಹಜಾಯೇಲನೊಡನೆ

15 ಯುದ್ಧಮಾಡುತ್ತಿರುವಾಗ ಗಾಯ ಹೊಂದಿದದರಿಂದ ಅದನ್ನು ಮಾಯಿಸಿಕೊಳ್ಳುವದಕ್ಕಾಗಿ ಹಿಂದಿರುಗಿ ಇಜ್ರೇಲಿಗೆ ಬಂದಿದ್ದನು.) ಯೇಹುವು ತನ್ನ ಜೊತೆಗಾರರಿಗೆ - ನೀವು ನನ್ನವರಾಗಿದ್ದರೆ ಈ ಸುದ್ದಿಯು ಇಜ್ರೇಲನ್ನು ಮುಟ್ಟದಂತೆ ಒಬ್ಬನನ್ನೂ ಈ ಪಟ್ಟಣದಿಂದ ಹೊರಗೆ ಬಿಡಬೇಡಿರಿ ಎಂದು ಹೇಳಿದನು.

16 ಅನಂತರ ಅವನು ರಥದಲ್ಲಿ ಕೂತು ಇಜ್ರೇಲಿಗೆ ಹೋಗುವದಕ್ಕಾಗಿ ಹೊರಟನು. ಅಲ್ಲಿ ಅಸ್ವಸ್ಥನಾದ ಯೋರಾಮನೂ ಅವನನ್ನು ನೋಡುವದಕ್ಕೆ ಬಂದಿದ್ದ ಯೆಹೂದ್ಯರ ಅರಸನಾದ ಅಹಜ್ಯನೂ ಇದ್ದರು.

17 ಇಜ್ರೇಲಿನ ಬುರುಜಿನಲ್ಲಿದ್ದ ಕಾವಲುಗಾರನು ಯೇಹುವಿನ ಗುಂಪಿನವರನ್ನು ಕಂಡು - ಜನರ ಒಂದು ಗುಂಪು ಕಾಣಿಸುತ್ತದೆ ಎಂದು ಯೋರಾಮನಿಗೆ ತಿಳಿಸಿದನು. ಯೋರಾಮನು ಅವನಿಗೆ - ನೀನು ಒಬ್ಬ ರಾಹುತನನ್ನು ಕರೆದು ಬರುತ್ತಿರುವವರು ಶುಭವಾರ್ತೆಯನ್ನು ತರುತ್ತಾರೋ ಎಂದು ಕೇಳುವದಕ್ಕಾಗಿ ಕಳುಹಿಸು ಎಂಬದಾಗಿ ಆಜ್ಞಾಪಿಸಿದನು.

18 ರಾಹುತನು ಯೇಹುವನ್ನು ಎದುರುಗೊಂಡು - ಅರಸನು ಶುಭವಾರ್ತೆಯುಂಟೋ ಎಂದು ಕೇಳುತ್ತಾನೆ ಅನ್ನಲು ಅವನು - ಶುಭವಾರ್ತೆ ನಿನಗೇನು? ನನ್ನ ಹಿಂದೆ ಬಾ ಎಂದು ಹೇಳಿದನು. ಕಾವಲುಗಾರನು ಅರಸನಿಗೆ - ರಾಹುತನು ಆ ಗುಂಪನ್ನು ಮುಟ್ಟಿದನು; ಆದರೆ ತಿರಿಗಿ ಬರುವದು ಕಾಣಿಸುವದಿಲ್ಲ ಎಂದು ತಿಳಿಸಿದಾಗ ಅರಸನು ಇನ್ನೊಬ್ಬ ರಾಹುತನನ್ನು ಕಳುಹಿಸಿದನು.

19 ಇವನು ಹೋಗಿ ಯೇಹುವನ್ನು ಎದುರುಗೊಂಡು - ಅರಸನು ಶುಭವಾರ್ತೆಯುಂಟೋ ಎಂದು ಕೇಳುತ್ತಾನೆ ಅನ್ನಲು ಅವನು - ಶುಭವಾರ್ತೆ ನಿನಗೇನು? ನನ್ನ ಹಿಂದೆ ಬಾ ಎಂದನು.

20 ಕಾವಲುಗಾರನು ತಿರಿಗಿ ಅರಸನಿಗೆ - ಎರಡನೆಯವನೂ ಆ ಗುಂಪನ್ನು ಮುಟ್ಟಿದನು; ಆದರೆ ಹಿಂದಿರುಗಿ ಬರುವದು ಕಾಣಿಸುವದೇ ಇಲ್ಲ. ರಥದಲ್ಲಿ ಕೂತಿರುವವನು ಕುದುರೆಗಳನ್ನು ಹುಚ್ಚು ಹಿಡಿದವನಂತೆ ಓಡಿಸುವದನ್ನು ನೋಡಿದರೆ ಅವನು ನಿಂಷಿಯ ಮೊಮ್ಮಗನಾದ ಯೇಹುವಾಗಿರಬೇಕು ಎಂದು ಹೇಳಿದನು.

21 ಯೋರಾಮನು ರಥಹೂಡಬೇಕೆಂದು ತನ್ನ ಸೇವಕರಿಗೆ ಆಜ್ಞಾಪಿಸಿದನು. ಅವರು ಹೂಡಿದರು. ಆಗ ಇಸ್ರಾಯೇಲ್ಯರ ಅರಸನಾದ ಇವನೂ ಯೆಹೂದ್ಯರ ಅರಸನಾದ ಅಹಜ್ಯನೂ ತಮ್ಮತಮ್ಮ ರಥಗಳಲ್ಲಿ ಕೂತುಕೊಂಡು ಯೇಹುವನ್ನು ಎದುರುಗೊಳ್ಳುವದಕ್ಕಾಗಿ ಹೊರಟು ಇಜ್ರೇಲಿನವನಾದ ನಾಬೋತನ ಹೊಲದಲ್ಲಿ ಅವನನ್ನು ಸಂಧಿಸಿದರು.

22 ಯೋರಾಮನು ಅವನನ್ನು ಕಂಡ ಕೂಡಲೆ - ಯೇಹುವೇ, ಶುಭವೋ ಎಂದು ಅವನನ್ನು ಕೇಳಿದನು. ಅದಕ್ಕೆ ಅವನು - ನಿನ್ನ ತಾಯಿಯ ದೇವದ್ರೋಹವೂ ಮಂತ್ರತಂತ್ರವೂ ಪ್ರಬಲವಾಗಿರುವಲ್ಲಿ ಶುಭವೆಲ್ಲಿಂದ ಬರುವದು ಎಂದು ಉತ್ತರಕೊಟ್ಟನು.

23 ಒಡನೆ ಯೋರಾಮನು ತನ್ನ ರಥವನ್ನು ತಿರುಗಿಸಿ ಅಹಜ್ಯನಿಗೆ - ಅಹಜ್ಯನೇ, ಇದು ಒಳಸಂಚು ಎಂದು ಹೇಳಿ ಓಡಿಹೋದನು.

24 ಯೇಹುವು ಪೂರ್ಣಬಲದಿಂದ ಬಿಲ್ಲನ್ನು ಬೊಗ್ಗಿಸಿ ಯೋರಾಮನ ಬೆನ್ನಿಗೆ ಬಾಣವನ್ನೆಸೆದನು; ಅದು ಅವನ ಹೃದಯದಿಂದ ಹೊರಗೆ ಬಂದಿತು. ಅವನು ಮುದುರಿಕೊಂಡು ರಥದಲ್ಲಿ ಬಿದ್ದನು.

25 ಆಗ ಯೇಹುವು ತನ್ನ ಜೊತೆಯಲ್ಲಿದ್ದ ಬಿದ್ಕರನೆಂಬ ಸೇನಾಪತಿಗೆ - ಯೋರಾಮನ ಶವವನ್ನು ಎತ್ತಿ ಇಜ್ರೇಲಿನವನಾದ ನಾಬೋತನ ಹೊಲದಲ್ಲಿ ಹಾಕು. ಒಂದು ದಿವಸ ನಾವಿಬ್ಬರೂ ಕುದುರೆಹತ್ತಿ ಇವನ ತಂದೆಯಾದ ಅಹಾಬನ ಹಿಂದಿನಿಂದ ಹೋಗುತ್ತಿರುವಾಗ ಯೆಹೋವನು ಅಹಾಬನಿಗೆ -

26 ನನ್ನ ಮಾತನ್ನು ಕೇಳು, ನೀನು ನಿನ್ನೆ ಸುರಿಸಿದ ನಾಬೋತನ ಮತ್ತು ಅವನ ಮಕ್ಕಳ ರಕ್ತವನ್ನು ನಿಶ್ಚಯವಾಗಿ ನೋಡಿದ್ದೇನೆ. ನೀನು ಅವರ ರಕ್ತವನ್ನು ಸುರಿಸಿದ ಹೊಲದಲ್ಲೇ ನಿನಗೆ ಮುಯ್ಯಿತೀರಿಸುವೆನು ಎಂದು ಪ್ರವಾದಿಯಿಂದ ಹೇಳಿಸಿದ್ದು ನಿನಗೆ ನೆನಪಿರುತ್ತದಲ್ಲಾ; ಯೆಹೋವನ ಆ ಮಾತು ನೆರವೇರುವಂತೆ ಇವನ ಶವವನ್ನು ಆ ಹೊಲದಲ್ಲಿ ಹಾಕಿಬಿಡು ಎಂದು ಹೇಳಿದನು.

27 ಯೆಹೂದ್ಯರ ಅರಸನಾದ ಅಹಜ್ಯನು ಇದನ್ನೆಲ್ಲಾ ಕಂಡು ಬೇತ್‍ಹಗ್ಗನಿನ ಮಾರ್ಗವಾಗಿ ಓಡಿಹೋದನು. ಯೇಹುವು ಅವನನ್ನು ಹಿಂದಟ್ಟಿ - ಅವನನ್ನೂ ರಥದಲ್ಲಿಯೇ ಹೊಡಿಯಿರಿ ಎಂದು ಕೂಗಲು ಅವನ ಜನರು ಇಬ್ಲೆಯಾವಿುನ ಬಳಿಯಲ್ಲಿರುವ ಗೂರ್ ಗಟ್ಟದ ಮೇಲೆ ಅವನನ್ನು ಗಾಯಪಡಿಸಿದರು. ಅಹಜ್ಯನು ಮೆಗಿದ್ದೋವಿಗೆ ಓಡಿಹೋಗಿ ಅಲ್ಲಿ ಸತ್ತನು.

28 ಅವನ ಸೇವಕರು ಅವನ ಶವವನ್ನು ರಥದಲ್ಲಿ ಹಾಕಿಕೊಂಡು ಯೆರೂಸಲೇವಿುನಲ್ಲಿರುವ ದಾವೀದ ನಗರಕ್ಕೆ ತಂದು ಅದನ್ನು ಅವನ ಕುಟುಂಬ ಶ್ಮಶಾನಭೂವಿುಯಲ್ಲಿ ಸಮಾಧಿಮಾಡಿದರು.

29 ಅಹಜ್ಯನು ಅಹಾಬನ ಮಗನಾದ ಯೋರಾಮನ ಆಳಿಕೆಯ ಹನ್ನೊಂದನೆಯ ವರುಷದಲ್ಲಿ ಯೆಹೂದ್ಯರ ಅರಸನಾಗಿದ್ದನು.

30 ಯೇಹುವು ಇಜ್ರೇಲಿಗೆ ಬಂದನು. ಈಜೆಬೆಲಳು ಅದನ್ನು ಕೇಳಿ ತಲೆಯನ್ನು ಆಭರಣಗಳಿಂದ ಅಲಂಕರಿಸಿಕೊಂಡು ಕಣ್ಣಿಗೆ ಕಾಡಿಗೆಹಚ್ಚಿಕೊಂಡು ಕಿಟಕಿಯಿಂದ ನೋಡುತ್ತಾ ನಿಂತಳು.

31 ಅನಂತರ ಅರಮನೆಯ ಪ್ರಾಕಾರದೊಳಗೆ ಬಂದ ಯೇಹುವನ್ನು ಕಂಡು ಅವನನ್ನು - ಯಜಮಾನನನ್ನು ಕೊಂದ ಜಿವ್ರಿುಗೆ ಸಮಾನನೇ, ಕ್ಷೇಮವೋ ಎಂದು ಕೇಳಿದಳು.

32 ಅವನು ಕಣ್ಣೆತ್ತಿ ಕಿಟಕಿಯ ಕಡೆಗೆ ನೋಡಿ - ಅಲ್ಲಿ ನನ್ನ ಪಕ್ಷದವರು ಯಾರು ಎಂದು ಕೂಗಿದನು. ಕೂಡಲೆ ಆ ಕಿಟಕಿಯಿಂದ ಇಬ್ಬರು ಮೂವರು ಕಂಚುಕಿಗಳು ಅವನ ಕಡೆಗೆ ನೋಡಿದರು.

33 ಅವನು ಅವರಿಗೆ - ಆಕೆಯನ್ನು ಕೆಳಗೆ ದೊಬ್ಬಿರಿ ಎಂದು ಆಜ್ಞಾಪಿಸಲು ಅವರು ದೊಬ್ಬಿದರು. ಆಕೆಯ ರಕ್ತವು ಗೋಡೆಗೂ ಕುದುರೆಗಳಿಗೂ ಸಿಡಿಯಿತು. ಅವನು ಆಕೆಯ ಶವವನ್ನು ತುಳಿಸಿಬಿಟ್ಟನು.

34 ಅನಂತರ ಅವನು ಅರಮನೆಯೊಳಗೆ ಹೋಗಿ ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಸೇವಕರಿಗೆ - ಆ ಶಾಪಗ್ರಸ್ತ ಸ್ತ್ರೀಯ ಶವವನ್ನು ನೋಡಿಕೊಂಡು ಸಮಾಧಿಮಾಡಿರಿ; ಆಕೆಯು ರಾಜಪುತ್ರಿಯಾಗಿರುತ್ತಾಳಷ್ಟೆ ಎಂದು ಆಜ್ಞಾಪಿಸಿದನು.

35 ಸೇವಕರು ಶವವನ್ನು ಸಮಾಧಿಮಾಡುವದಕ್ಕಾಗಿ ಹೋದರು; ಆದರೆ ಅವರಿಗೆ ಆಕೆಯ ತಲೆಬುರುಡೆ, ಕೈಕಾಲುಗಳು ಹೊರತಾಗಿ ಬೇರೇನೂ ಸಿಕ್ಕಲಿಲ್ಲ.

36 ಅವರು ಹಿಂದಿರುಗಿ ಯೇಹುವಿನ ಹತ್ತಿರ ಬಂದು ಆ ಸಂಗತಿಯನ್ನು ತಿಳಿಸಲು ಅವನು ಅವರಿಗೆ - ನಾಯಿಗಳು ಈಜೆಬೆಲಳ ದೇಹಮಾಂಸವನ್ನು ಇಜ್ರೇಲಿನ ಹೊಲದಲ್ಲಿ ತಿಂದು ಬಿಡುವವು;

37 ಆಕೆಯ ಶವವು ಆ ಹೊಲಕ್ಕೆ ಗೊಬ್ಬರವಾಗುವದು; ಇದು ಈಜೆಬೆಲಳ ಶವವೆಂದು ಯಾರಿಗೂ ಗುರುತು ಸಿಕ್ಕದ ಹಾಗಾಗುವದು ಎಂಬದಾಗಿ ಯೆಹೋವನು ತಿಷ್ಬೀಯನೂ ತನ್ನ ಸೇವಕನೂ ಆದ ಎಲೀಯನ ಮುಖಾಂತರವಾಗಿ ಹೇಳಿಸಿದ ಮಾತು ಈಗ ನೆರವೇರಿತು ಅಂದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು