Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಅರಸುಗಳು 18 - ಕನ್ನಡ ಸತ್ಯವೇದವು J.V. (BSI)


ಇಸ್ರಾಯೇಲ್‍ರಾಜ್ಯವು ನಾಶವಾದನಂತರ ಯೆಹೂದರಾಜ್ಯದಲ್ಲಿ ಆಳಿದ ಅರಸರು ( 18—25 ) ಅರಸನಾದ ಹಿಜ್ಕೀಯನು

1 ಇಸ್ರಾಯೇಲ್ಯರ ಅರಸನೂ ಏಲನ ಮಗನೂ ಆದ ಹೋಶೇಯನ ಆಳಿಕೆಯ ಮೂರನೆಯ ವರುಷದಲ್ಲಿ ಯೆಹೂದರಾಜನಾದ ಆಹಾಜನ ಮಗ ಹಿಜ್ಕೀಯನು ಆಳತೊಡಗಿದನು.

2 ಇವನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸಲೇವಿುನಲ್ಲಿ ಇಪ್ಪತ್ತೊಂಭತ್ತು ವರುಷ ಆಳಿದನು. ಜೆಕರ್ಯನ ಮಗಳಾದ ಅಬೀ ಎಂಬಾಕೆಯು ಇವನ ತಾಯಿ.

3 ಇವನು ಎಲ್ಲಾ ವಿಷಯಗಳಲ್ಲಿಯೂ ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನ ಚಿತ್ತಾನುಸಾರವಾಗಿ ನಡೆದನು.

4 ಪೂಜಾಸ್ಥಳಗಳನ್ನು ಹಾಳುಮಾಡಿ ಕಲ್ಲುಕಂಬಗಳನ್ನು ಒಡೆದು ಅಶೇರವಿಗ್ರಹ ಸ್ತಂಭಗಳನ್ನು ಕಡಿದುಹಾಕಿದನು; ಮೋಶೆಯು ಮಾಡಿಸಿದ ತಾಮ್ರಸರ್ಪವನ್ನು ಚೂರು ಚೂರು ಮಾಡಿದನು. ಇಸ್ರಾಯೇಲ್ಯರು ಅದಕ್ಕೆ ಆವರೆಗೂ ಧೂಪಸುಡುತ್ತಿದ್ದರು. ಅದಕ್ಕೆ ನೆಹುಷ್ಟಾನ್ ಎಂಬ ಹೆಸರಿತ್ತು;

5 ಇವನು ಇಸ್ರಾಯೇಲ್ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದನು. ಯೆಹೂದ್ಯರಲ್ಲಿ ಇವನಿಗೆ ಸಮಾನನಾದ ಅರಸನು ಮುಂಚೆಯೂ ತರುವಾಯವೂ ಇರಲಿಲ್ಲ.

6 ಇದಲ್ಲದೆ ಇವನು ಯೆಹೋವನನ್ನೇ ಹೊಂದಿಕೊಂಡು ಆತನನ್ನು ಬಿಡದೆ ಹಿಂಬಾಲಿಸಿ ಆತನು ಮೋಶೆಯ ಮುಖಾಂತರವಾಗಿ ಅನುಗ್ರಹಿಸಿದ ಆಜ್ಞೆಯನ್ನು ಕೈಕೊಂಡನು.

7 ಯೆಹೋವನು ಇವನ ಸಂಗಡ ಇದ್ದದರಿಂದ ಎಲ್ಲಿಗೆ ಹೋದರೂ ಕೃತಾರ್ಥನಾಗಿ ಬರುತ್ತಿದ್ದನು. ಇವನು ಅಶ್ಶೂರದ ಅರಸನಿಗೆ ವಿರೋಧವಾಗಿ ತಿರುಗಿಬಿದ್ದು ಸ್ವತಂತ್ರನಾದನು.

8 ಗಾಜಪ್ರಾಂತದವರೆಗೆ ವಾಸವಾಗಿದ್ದ ಫಿಲಿಷ್ಟಿಯರನ್ನು ಸೋಲಿಸಿ ಕಾವಲುಗಾರರ ಬುರುಜಿರುವ ಚಿಕ್ಕ ಹಳ್ಳಿ ಮೊದಲುಗೊಂಡು ಕೋಟೆಕೊತ್ತಲುಗಳುಳ್ಳ ಮಹಾನಗರಗಳವರೆಗೂ ಎಲ್ಲಾ ಊರುಗಳನ್ನು ಹಾಳುಮಾಡಿದನು.

9 ಇಸ್ರಾಯೇಲ್ಯರ ಅರಸನೂ ಏಲನ ಮಗನೂ ಆದ ಹೋಶೇಯನ ಆಳಿಕೆಯ ಏಳನೆಯ ವರುಷದಲ್ಲಿ ಅಂದರೆ ಹಿಜ್ಕೀಯನ ಆಳಿಕೆಯ ನಾಲ್ಕನೆಯ ವರುಷದಲ್ಲಿ ಅಶ್ಶೂರದ ಅರಸನಾದ ಶಲ್ಮನೆಸೆರನು ಸಮಾರ್ಯಕ್ಕೆ ವಿರೋಧವಾಗಿ ಬಂದು

10 ಮೂರು ವರುಷಗಳವರೆಗೂ ಅದಕ್ಕೆ ಮುತ್ತಿಗೆಹಾಕಿ ಅದು ತನಗೆ ಇಸ್ರಾಯೇಲ್ಯರ ಅರಸನಾದ ಹೋಶೇಯನ ಆಳಿಕೆಯ ಒಂಭತ್ತನೆಯ ವರುಷದಲ್ಲಿ ಅಂದರೆ ಹಿಜ್ಕೀಯನ ಆಳಿಕೆಯ

11 ಆರನೆಯ ವರುಷದಲ್ಲಿ ಸ್ವಾಧೀನವಾಗಲು ಇಸ್ರಾಯೇಲ್ಯರನ್ನು ಸೆರೆಹಿಡಿದು ಹಲಹು, ಹಾಬೋರ್ ಹೊಳೆಯಿರುವ ಗೋಜಾನ್ ಪ್ರಾಂತ, ಮೇದ್ಯರ ಪಟ್ಟಣಗಳು ಇವುಗಳಿಗೆ ಕಳುಹಿಸಿದನು.

12 ಅವರು ತಮ್ಮ ದೇವರಾದ ಯೆಹೋವನ ಮಾತನ್ನು ಕೇಳದೆಹೋದದ್ದೂ ಆತನ ನಿಬಂಧನೆಯನ್ನು ಉಲ್ಲಂಘಿಸಿದ್ದೂ ಆತನ ಸೇವಕನಾದ ಮೋಶೆಯ ಆಜ್ಞೆಗಳಿಗೆ ಅವಿಧೇಯರಾಗಿ ನಡೆದದ್ದೂ ಇದಕ್ಕೆ ಕಾರಣ.


ಹಿಜ್ಕೀಯನೂ ಅಶ್ಶೂರದ ಅರಸನಾದ ಸನ್ಹೇರೀಬನೂ

13 ಅರಸನಾದ ಹಿಜ್ಕೀಯನ ಆಳಿಕೆಯ ಹದಿನಾಲ್ಕನೆಯ ವರುಷದಲ್ಲಿ ಅಶ್ಶೂರದ ಅರಸನಾದ ಸನ್ಹೇರೀಬನು ಬಂದು ಯೆಹೂದ ಪ್ರಾಂತದ ಕೋಟೆಕೊತ್ತಲುಗಳುಳ್ಳ ಎಲ್ಲಾ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.

14 ಆಗ ಯೆಹೂದದ ಅರಸನಾದ ಹಿಜ್ಕೀಯನು ಲಾಕೀಷಿನಲ್ಲಿದ್ದ ಅಶ್ಶೂರದ ಅರಸನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ - ನಾನು ಅಪರಾಧಿ; ನೀನು ನನ್ನನ್ನು ಬಿಟ್ಟುಹೋಗು, ನೀನು ನನಗೆ ವಿಧಿಸುವಷ್ಟನ್ನು ಕೊಡುತ್ತೇನೆ ಎಂದು ಹೇಳಿ ಕಳುಹಿಸಿದನು. ಅಶ್ಶೂರದ ಅರಸನು ಮುನ್ನೂರು ತಲಾಂತು ಬೆಳ್ಳಿಯನ್ನೂ ಮೂವತ್ತು ತಲಾಂತು ಬಂಗಾರವನ್ನೂ ಕೊಡಬೇಕೆಂದು ಆಜ್ಞಾಪಿಸಿದನು.

15 ಆಗ ಹಿಜ್ಕೀಯನು ಯೆಹೋವನ ಆಲಯದಲ್ಲಿಯೂ ಅರಮನೆಯ ಭಂಡಾರದಲ್ಲಿಯೂ ಸಿಕ್ಕಿದ ಬೆಳ್ಳಿಯನ್ನೂ

16 ತಾನು ಯೆಹೋವನ ಆಲಯದ ಕದಗಳಿಗೂ ಕಂಬಗಳಿಗೂ ಹೊದಿಸಿದ್ದ ಬಂಗಾರದ ತಗಡನ್ನೂ ತೆಗೆದುಕೊಂಡು ಅಶ್ಶೂರದ ಅರಸನಿಗೆ ಕಳುಹಿಸಿದನು.

17 ಅಶ್ಶೂರದ ಅರಸನು ಲಾಕೀಷಿನಿಂದ ಮಹಾಸೈನ್ಯ ಸಹಿತರಾದ ತರ್ತಾನ್, ರಬ್ಸಾರೀಸ್, ರಬ್ಷಾಕೆ ಎಂಬವರನ್ನು ಯೆರೂಸಲೇವಿುನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಇವರು ಗಟ್ಟಾ ಹತ್ತಿ ಯೆರೂಸಲೇವಿುಗೆ ಬಂದು ಮಡಿವಾಳರ ಹೊಲದ ಮೇಲೆ ಹೋಗುವ ರಾಜಮಾರ್ಗದ ಹತ್ತಿರ ಅಲ್ಲಿನ ಕೆರೆಯ ಕಾಲುವೆಯ ಬಳಿಯಲ್ಲಿ ಪಾಳೆಯಮಾಡಿಕೊಂಡು ಅರಸನನ್ನು ಕೂಗಿ ಕರೆದರು.

18 ಆಗ ಹಿಲ್ಕೀಯನ ಮಗನೂ ರಾಜಗೃಹಾಧಿಪತಿಯೂ ಆದ ಎಲ್ಯಾಕೀಮ್, ಲೇಖಕನಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬವರು ಬಂದರು.

19 ರಬ್ಷಾಕೆಯು ಅವರಿಗೆ - ನೀವು ಹೋಗಿ ಹಿಜ್ಕೀಯನಿಗೆ ಮಹಾರಾಜನಾದ ಅಶ್ಶೂರದ ಅರಸನ ಮಾತುಗಳನ್ನು ತಿಳಿಸಿರಿ.

20 ಅವನು - ನಿನ್ನ ಭರವಸಕ್ಕೆ ಯಾವ ಆಧಾರವುಂಟು? ಬರೀ ಒಂದು ಬಾಯಿಮಾತಿನ ಮೇಲೆ ಯುದ್ಧಕ್ಕೆ ಬೇಕಾದ ವಿವೇಕವೂ ಬಲವೂ ಉಂಟೆಂದು ಅಂದುಕೊಳ್ಳುತ್ತೀ; ನೀನು ಯಾರನ್ನು ನಂಬಿಕೊಂಡು ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದೀ?

21 ಜಜ್ಜಿದ ದಂಟಿಗೆ ಸಮಾನವಾಗಿರುವ ಐಗುಪ್ತದಲ್ಲಿ ಭರವಸವಿಟ್ಟಿರುತ್ತೀಯಷ್ಟೆ. ಒಬ್ಬನು ಅಂಥ ದಂಟಿನ ಮೇಲೆ ಕೈಯೂರಿಕೊಳ್ಳುವದಾದರೆ ಅದು ಅವನ ಕೈಯನ್ನು ತಿವಿದು ಒಳಗೆ ಹೋಗುತ್ತದಲ್ಲವೇ! ಐಗುಪ್ತದ ಅರಸನಾದ ಫರೋಹನಲ್ಲಿ ಭರವಸವಿಟ್ಟವರಿಗೆ ಅದೇ ಗತಿಯಾಗುವದು.

22 ಒಂದು ವೇಳೆ ನೀವು - ನಮ್ಮ ದೇವರಾದ ಯೆಹೋವನನ್ನು ನಂಬಿಕೊಂಡಿದ್ದೇವೆಂದು ಹೇಳಬಹುದು. ಹಿಜ್ಕೀಯನು ಯೆರೂಸಲೇವಿುನ ಯಜ್ಞವೇದಿಯ ಮುಂದೆಯೇ ಆರಾಧನೆ ಮಾಡಬೇಕೆಂಬದಾಗಿ ಯೆಹೂದ್ಯರಿಗೂ ಯೆರೂಸಲೇವಿುನವರಿಗೂ ಆಜ್ಞಾಪಿಸಿ ಆ ಯೆಹೋವನ ಪೂಜಾಸ್ಥಳಗಳನ್ನೂ ಬೇರೆ ಎಲ್ಲಾ ಯಜ್ಞವೇದಿಗಳನ್ನೂ ಹಾಳುಮಾಡಿದನಲ್ಲಾ!

23 ನನ್ನ ಒಡೆಯನಾದ ಅಶ್ಶೂರದ ಅರಸನೊಂದಿಗೆ ಪಂಥಹಾಕುವದಕ್ಕೆ ನಿನಗೆ ಮನಸ್ಸುಂಟೋ? ಹಾಗಾದರೆ ಅವನು ನಿನಗೆ ಎರಡು ಸಾವಿರ ಕುದುರೆಗಳನ್ನು ಕೊಡುತ್ತಾನೆ; ನೀನು ಎಷ್ಟು ಮಂದಿ ಸವಾರರನ್ನು ಅವುಗಳ ಮೇಲೆ ಕುಳ್ಳಿರಿಸುವಿಯೋ?

24 ಇದೂ ನಿನಗೆ ಅಸಾಧ್ಯವಾಗುವದಾದರೆ ನನ್ನ ಒಡೆಯನ ಸೇನಾಪತಿಗಳಲ್ಲಿ ಅತ್ಯಲ್ಪನನ್ನಾದರೂ ಸೋಲಿಸುವದು ಹೇಗೆ? ರಥಾಶ್ವಬಲಗಳ ವಿಷಯವಾಗಿ ಐಗುಪ್ತ್ಯರನ್ನು ನಂಬಿರುತ್ತೀಯೆಂದು ಕಾಣುತ್ತದೆ.

25 ಈ ದೇಶವನ್ನು ಹಾಳುಮಾಡುವದಕ್ಕೆ ಯೆಹೋವನ ಚಿತ್ತವಿಲ್ಲದೆ ಬಂದೆನೆಂದು ನೆನಸುತ್ತೀಯೋ? ಇಲ್ಲಿಗೆ ಬಂದು ಇದನ್ನು ಹಾಳುಮಾಡಿಬಿಡು ಎಂದು ಯೆಹೋವನೇ ನನಗೆ ಆಜ್ಞಾಪಿಸಿದನು ಅನ್ನುತ್ತಾನೆ ಎಂದನು.

26 ಆಗ ಹಿಲ್ಕೀಯನ ಮಗನಾದ ಎಲ್ಯಾಕೀಮ್, ಶೆಬ್ನ, ಯೋವ ಎಂಬವರು ರಬ್ಷಾಕೆಗೆ - ನೀನು ಮಾತಾಡುವದು ಪೌಳಿಗೋಡೆಯ ಮೇಲಿರುವವರಿಗೆ ಕೇಳಿಸುತ್ತದೆ. ಆದದರಿಂದ ದಯವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಅರಾಮ್ಯ ಭಾಷೆಯಲ್ಲಿ ಮಾತಾಡು; ಅದು ನಮಗೆ ತಿಳಿಯುತ್ತದೆ. ಆದರೆ ಯೂದಾಯ ಭಾಷೆಯಲ್ಲಿ ಮಾತಾಡಬೇಡ ಎಂದು ಹೇಳಿದರು.

27 ಅದಕ್ಕೆ ರಬ್ಷಾಕೆಯು - ನನ್ನ ಯಜಮಾನನು ನಿಮ್ಮ ಸಂಗಡವಾಗಲಿ ನಿಮ್ಮ ಒಡೆಯನ ಸಂಗಡವಾಗಲಿ ಮಾತಾಡಬೇಕೆಂದು ನನ್ನನ್ನು ಕಳುಹಿಸಲಿಲ್ಲ. ಈ ಗೋಡೆಯ ಮೇಲೆ ಕೂತಿರುವ ಜನರ ಸಂಗಡ ಮಾತಾಡುವದಕ್ಕೋಸ್ಕರ ಕಳುಹಿಸಿದ್ದಾನೆ. ಅವರು ನಿಮ್ಮೊಡನೆ ಇದ್ದರೆ ಸ್ವಂತ ಮಲವನ್ನು ತಿಂದು ಸ್ವಂತ ಮೂತ್ರವನ್ನು ಕುಡಿಯಬೇಕಾಗುವದು ಎಂದು ಉತ್ತರಕೊಟ್ಟು ಎದ್ದು

28 ಗೋಡೆಯ ಮೇಲೆ ನಿಂತವರಿಗೆ ಯೂದಾಯ ಭಾಷೆಯಲ್ಲಿ - ಅಶ್ಶೂರದ ಮಹಾರಾಜನ ಮಾತನ್ನು ಕೇಳಿರಿ;

29 ಅವನು ನಿಮಗೆ - ಹಿಜ್ಕೀಯನಿಂದ ಮೋಸಹೋಗಬೇಡಿರಿ. ಅವನು ನಿಮ್ಮನ್ನು ನನ್ನ ಕೈಯಿಂದ ಬಿಡಿಸಲಾರನು.

30 ಹಿಜ್ಕೀಯನು ನಿಮಗೆ - ಯೆಹೋವನನ್ನು ನಂಬಿರಿ; ಆತನು ನಮ್ಮನ್ನು ಹೇಗೂ ರಕ್ಷಿಸುವನು; ಈ ಪಟ್ಟಣವು ಅಶ್ಶೂರದ ಅರಸನ ವಶವಾಗುವದಿಲ್ಲ ಎಂಬದಾಗಿ ಹೇಳಿದರೆ ಅವನಿಗೆ ಕಿವಿಗೊಡಬೇಡಿರಿ, ಒಪ್ಪಬೇಡಿರಿ.

31 ಅಶ್ಶೂರದ ಅರಸನಾದ ನನ್ನ ಮಾತನ್ನು ಕೇಳಿರಿ; ನನ್ನೊಡನೆ ಒಡಂಬಡಿಕೆಮಾಡಿಕೊಂಡು ನನ್ನ ಆಶ್ರಯದಲ್ಲಿ ಸೇರಿರಿ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಅಂಜೂರಮರ, ದ್ರಾಕ್ಷಾಲತೆ ಇವುಗಳ ಹಣ್ಣುಗಳನ್ನು ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವನು.

32 ಸ್ವಲ್ಪ ಕಾಲವಾದನಂತರ ನಾನು ಬಂದು ನಿಮ್ಮನ್ನು ಧಾನ್ಯ ದ್ರಾಕ್ಷಾರಸ ಆಹಾರ ದ್ರಾಕ್ಷೇತೋಟ ಎಣ್ಣೇಮರ ಜೇನುತುಪ್ಪ ಇವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾದ ಇನ್ನೊಂದು ದೇಶಕ್ಕೆ ಕರಕೊಂಡುಹೋಗುವೆನು; ನೀವು ಸಾಯುವದಿಲ್ಲ, ಬದುಕುವಿರಿ. ಯೆಹೋವನು ನಮ್ಮನ್ನು ರಕ್ಷಿಸುವನು ಎಂದು ನಂಬಿಕೆಯನ್ನು ನಿಮ್ಮಲ್ಲಿ ಹುಟ್ಟಿಸುವದಕ್ಕೆ ಪ್ರಯತ್ನಿಸುವ ಹಿಜ್ಕೀಯನಿಗೆ ಕಿವಿಗೊಡಬೇಡಿರಿ.

33 ಯಾವ ಜನಾಂಗದ ದೇವತೆಯು ತನ್ನ ದೇಶವನ್ನು ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿ ಕಾಪಾಡಿತು?

34 ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ, ಇವ್ವಾ ಎಂಬ ಪಟ್ಟಣಗಳ ದೇವತೆಗಳೇನಾದವು? ಅವು ಸಮಾರ್ಯವನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಿದವೋ?

35 ಯಾವ ಜನಾಂಗದ ದೇವತೆಯಾದರೂ ತನ್ನ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದೆ ಹೋದ ಮೇಲೆ ಯೆಹೋವನು ಯೆರೂಸಲೇಮನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಿ ಕಾಪಾಡುವನೋ ಅನ್ನುತ್ತಾನೆ ಎಂದು ಹೇಳಿದನು.

36 ಆ ಸೇನಾಪತಿಗಳಿಗೆ ಯಾವ ಉತ್ತರವನ್ನೂ ಕೊಡಬಾರದೆಂದು ಅರಸನು ತನ್ನ ಪ್ರಜೆಗಳಿಗೆ ಆಜ್ಞಾಪಿಸಿದ್ದರಿಂದ ಅವರು ಸುಮ್ಮನಿದ್ದರು; ಏನೂ ಅನ್ನಲಿಲ್ಲ.

37 ಹಿಲ್ಕೀಯನ ಮಗನೂ ರಾಜಗೃಹಾಧಿಪತಿಯೂ ಆಗಿದ್ದ ಎಲ್ಯಾಕೀಮ್, ಲೇಖಕನಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬವರು ತಮ್ಮ ಬಟ್ಟೆಗಳನ್ನು ಹರಕೊಂಡು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ ರಬ್ಷಾಕೆಯ ಮಾತುಗಳನ್ನು ತಿಳಿಸಿದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು