2 ಅರಸುಗಳು 17 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲ್‍ರಾಜ್ಯದ ಕಡೇ ಅರಸನೂ ಅದರ ನಾಶನವೂ 1 ಯೆಹೂದದ ಅರಸನಾದ ಆಹಾಜನ ಆಳಿಕೆಯ ಹನ್ನೆರಡನೆಯ ವರುಷದಲ್ಲಿ ಏಲನ ಮಗನಾದ ಹೋಶೇಯನು ಇಸ್ರಾಯೇಲ್ಯರ ಅರಸನಾಗಿ ಸಮಾರ್ಯದಲ್ಲಿ ಒಂಭತ್ತು ವರುಷ ಆಳಿದನು. 2 ಇವನು ತನ್ನ ಪೂರ್ವಿಕರಾದ ಇಸ್ರಾಯೇಲ್ಯರ ಅರಸರಷ್ಟು ಕೆಟ್ಟವನಾಗಿರಲಿಲ್ಲವಾದರೂ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು. 3 ಅಶ್ಶೂರದ ಅರಸನಾದ ಶಲ್ಮನೆಸೆರನು ಇವನಿಗೆ ವಿರೋಧವಾಗಿ ಬಂದಾಗ ಇವನು ಅವನಿಗೆ ಅಧೀನನಾಗಿ ಕಪ್ಪಕೊಡುವವನಾದನು. 4 ಕೆಲವು ವರುಷಗಳಾದನಂತರ ಇವನು ಪ್ರತಿವರ್ಷವೂ ಕೊಡಬೇಕಾದ ಕಪ್ಪವನ್ನು ಕೊಡದೆ ಹೋದದರಿಂದಲೂ ಐಗುಪ್ತದ ಅರಸನಾದ ಸೋ ಎಂಬವನ ಬಳಿಗೆ ರಾಯಭಾರಿಗಳನ್ನು ಕಳುಹಿಸಿದದರಿಂದಲೂ ಅಶ್ಶೂರದ ಅರಸನು ಇವನನ್ನು ದ್ರೋಹಿಯೆಂದು ತಿಳಿದು ಬಂಧಿಸಿ ಸೆರೆಯಲ್ಲಿಟ್ಟನು. 5 ಇದಲ್ಲದೆ ಅವನು ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡು ಸಮಾರ್ಯಕ್ಕೆ ಬಂದು ಮೂರು ವರುಷಗಳವರೆಗೂ ಅದಕ್ಕೆ ಮುತ್ತಿಗೆಹಾಕಿದನು. 6 ಅದು ಹೋಶೇಯನ ಆಳಿಕೆಯ ಒಂಭತ್ತನೆಯ ವರುಷದಲ್ಲಿ ಅವನ ಸ್ವಾಧೀನವಾಗಲು ಅವನು ಎಲ್ಲಾ ಇಸ್ರಾಯೇಲ್ಯರನ್ನು ಅಶ್ಶೂರ್‍ದೇಶಕ್ಕೆ ಒಯ್ದು ಹಲಹು ಪ್ರಾಂತದಲ್ಲಿಯೂ ಹಾಬೋರ್ ಹೊಳೆಯಿರುವ ಗೋಜಾನ್ ಪ್ರಾಂತದಲ್ಲಿಯೂ ಮೇದ್ಯರ ಪಟ್ಟಣಗಳಲ್ಲಿಯೂ ಇರಿಸಿದನು. 7 ಇಸ್ರಾಯೇಲ್ಯರ ಈ ದುರ್ಗತಿಗೆ ಅವರ ದುರ್ನಡತೆಯೇ ಕಾರಣ; ಹೇಗಂದರೆ - ಅವರು ತಮ್ಮನ್ನು ಐಗುಪ್ತದ ಅರಸನಾದ ಫರೋಹನ ಕೈಯಿಂದ ಬಿಡಿಸಿ ಅವನ ರಾಜ್ಯದಿಂದ ಹೊರತಂದ ದೇವರಾದ ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿ ಅನ್ಯದೇವತೆಗಳನ್ನು ಸೇವಿಸಿದರು. 8 ಯೆಹೋವನು ತಮ್ಮ ಎದುರಿನಿಂದ ಹೊರಡಿಸಿಬಿಟ್ಟ ಜನಾಂಗಗಳ ಮತ್ತು ಇಸ್ರಾಯೇಲ್‍ರಾಜರ ದುರಾಚಾರಗಳನ್ನು ಅನುಸರಿಸಿದರು; 9 ಗುಪ್ತವಾಗಿ ತಮ್ಮ ದೇವರಾದ ಯೆಹೋವನಿಗೆ ವಿರೋಧವಾದ ಕೃತ್ಯಗಳನ್ನು ನಡಿಸಿದರು; ಕಾವಲುಗಾರರ ಬುರುಜುಳ್ಳ ಚಿಕ್ಕ ಊರು ಮೊದಲುಗೊಂಡು ಕೋಟೆಕೊತ್ತಲುಗಳುಳ್ಳ ಪಟ್ಟಣದವರೆಗಿರುವ ಎಲ್ಲಾ ಊರುಗಳಲ್ಲಿ ತಮಗೋಸ್ಕರ ಪೂಜಾಸ್ಥಳಗಳನ್ನು ಏರ್ಪಡಿಸಿಕೊಂಡರು; 10 ಎಲ್ಲಾ ದಿನ್ನೆಗಳ ಮೇಲೆ ಮತ್ತು ಎಲ್ಲಾ ಹಸುರು ಮರಗಳ ಕೆಳಗೆ ಕಲ್ಲುಕಂಬ, ಅಶೇರವಿಗ್ರಹ ಸ್ತಂಭ ಇವುಗಳನ್ನು ನಿಲ್ಲಿಸಿದರು; 11 ಯೆಹೋವನು ತಮ್ಮ ಎದುರಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳಂತೆ ಎಲ್ಲಾ ಪೂಜಾಸ್ಥಳಗಳಲ್ಲಿ ಧೂಪಸುಟ್ಟು ತಮ್ಮ ದುಷ್ಕೃತ್ಯಗಳಿಂದ ಆತನನ್ನು ರೇಗಿಸಿದರು; 12 ಯೆಹೋವನ ಆಜ್ಞೆಯನ್ನು ಮೀರಿ ವಿಗ್ರಹಗಳನ್ನು ಆರಾಧಿಸಿದರು; 13 ಯೆಹೋವನು ದರ್ಶಿಗಳೆನಿಸಿಕೊಂಡ ತನ್ನ ಪ್ರವಾದಿಗಳ ಮುಖಾಂತರವಾಗಿ ಇಸ್ರಾಯೇಲ್ಯ ಯೆಹೂದ್ಯರಿಗೆ - ನೀವು ನಿಮ್ಮ ದುರಾಚಾರವನ್ನು ಬಿಟ್ಟು ನಾನು ನಿಮ್ಮ ಪಿತೃಗಳಿಗೂ ನನ್ನ ಸೇವಕರಾದ ಪ್ರವಾದಿಗಳ ಮುಖಾಂತರವಾಗಿ ನಿಮಗೂ ಕೊಟ್ಟಂಥ ನನ್ನ ಎಲ್ಲಾ ಆಜ್ಞಾನಿಯಮವಿಧಿಗಳನ್ನು ಕೈಕೊಂಡು ನಡೆಯಿರಿ ಎಂದು ಖಂಡಿತವಾಗಿ ಹೇಳಿದಾಗ 14 ಅವರು ದೇವರಾದ ಯೆಹೋವನನ್ನು ನಂಬದೆ ಆತನ ಆಜ್ಞೆಗಳಿಗೆ ಮಣಿಯದೆ ಇದ್ದ ತಮ್ಮ ಹಿರಿಯರಂತೆ ಆತನಿಗೆ ಕಿವಿಗೊಡದೆ ಹೋದರು; 15 ಆತನು ತಮ್ಮ ಪಿತೃಗಳಿಗೆ ಕೊಟ್ಟ ವಿಧಿನಿಬಂಧನೆಗಳನ್ನೂ ತಮಗೆ ಹೇಳಿಸಿದ ಬುದ್ಧಿ ವಾಕ್ಯಗಳನ್ನೂ ತಿರಸ್ಕರಿಸಿ ವಿುಥ್ಯಾದೇವತೆಗಳನ್ನು ಸೇವಿಸಿ ನಿಷ್ಪ್ರಯೋಜಕರಾದರು; ಸುತ್ತಣ ಜನಾಂಗಗಳನ್ನು ಅನುಸರಿಸಬಾರದೆಂದು ಯೆಹೋವನು ಆಜ್ಞಾಪಿಸಿದರೂ ಅವರು ಕೇಳದೆ ಅವರನ್ನು ಅನುಸರಿಸಿದರು; 16 ತಮ್ಮ ದೇವರಾದ ಯೆಹೋವನ ಆಜ್ಞೆಗಳನ್ನೆಲ್ಲಾ ಮೀರಿ ಎರಡು ಎರಕದ ಬಸವಮೂರ್ತಿಗಳು, ಅಶೇರವಿಗ್ರಹಸ್ತಂಭ ಇವುಗಳನ್ನು ಮಾಡಿಕೊಂಡರು; ಆಕಾಶಸೈನ್ಯ ಬಾಳ್‍ದೇವತೆ ಇವುಗಳನ್ನು ಪೂಜಿಸಿದರು; 17 ತಮ್ಮ ಗಂಡು ಹೆಣ್ಣು ಮಕ್ಕಳನ್ನು ಆಹುತಿಕೊಟ್ಟರು; ಯೆಹೋವನ ದೃಷ್ಟಿಯಲ್ಲಿ ಕೆಟ್ಟವುಗಳಾಗಿರುವ ಕಣಿಹೇಳುವದು, ಯಂತ್ರಮಂತ್ರಗಳನ್ನು ಮಾಡುವದು ಮೊದಲಾದ ದುಷ್ಕೃತ್ಯಗಳಿಗೆ ತಮ್ಮನ್ನು ಮಾರಿಬಿಟ್ಟು ಆತನಿಗೆ ಕೋಪವನ್ನೆಬ್ಬಿಸಿದರು. 18 ಅವರು ಈ ಪ್ರಕಾರ ನಡೆದದರಿಂದ ಯೆಹೋವನು ಅವರ ಮೇಲೆ ಬಹಳವಾಗಿ ಕೋಪಗೊಂಡು ಯೆಹೂದಕುಲದವರ ಹೊರತು ಉಳಿದ ಎಲ್ಲಾ ಕುಲಗಳವರನ್ನು ತನ್ನ ಸನ್ನಿಧಿಯಿಂದ ತಳ್ಳಿಬಿಟ್ಟನು. 19 ಯೆಹೂದ್ಯರು ಸಹ ತಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಕೈಕೊಳ್ಳದೆ ಇಸ್ರಾಯೇಲ್ಯರ ಪದ್ಧತಿಯನ್ನು ಅನುಸರಿಸಿದದರಿಂದ 20 ಆತನು ಇಸ್ರಾಯೇಲ್‍ಕುಲಗಳಲ್ಲಿ ಉಳಿದಿದ್ದ ಇವರನ್ನೂ ಹೇಸಿ ತನ್ನ ಸನ್ನಿಧಿಯಿಂದ ತಳ್ಳಿಬಿಟ್ಟು ಸೂರೆಮಾಡುವವರಿಗೆ ಒಪ್ಪಿಸಿ ಬಾಧಿಸಿದನು. 21 ಆತನು ಇಸ್ರಾಯೇಲ್ ರಾಜ್ಯವನ್ನು ದಾವೀದಸಂತಾನದವರ ಕೈಯಿಂದ ಕಿತ್ತುಕೊಂಡನಂತರ ಇಸ್ರಾಯೇಲ್ಯರು ನೆಬಾಟನ ಮಗನಾದ ಯಾರೊಬ್ಬಾಮನನ್ನು ಅರಸನನ್ನಾಗಿ ಮಾಡಿಕೊಳ್ಳಲು ಅವನು ಅವರನ್ನು 22 ಯೆಹೋವನ ಭಕ್ತಿಯಿಂದ ಬೀಳಿಸಿ ಮಹಾ ಪಾಪಕ್ಕೆ ಒಳಪಡಿಸಿದನು. ಅವರು ಯಾರೊಬ್ಬಾಮನ 23 ದುರ್ಮಾರ್ಗದಲ್ಲಿ ನಡೆಯುವದನ್ನು ಬಿಡಲಿಲ್ಲವಾದದರಿಂದ ಯೆಹೋವನು ತನ್ನ ಸೇವಕರಾದ ಎಲ್ಲಾ ಪ್ರವಾದಿಗಳ ಮುಖಾಂತರವಾಗಿ ಮುಂತಿಳಿಸಿದಂತೆ ಅವರನ್ನು ತನ್ನ ಸನ್ನಿಧಿಯಿಂದ ತಳ್ಳಿಬಿಟ್ಟನು. ಅವರು ಸೆರೆಯವರಾಗಿ ತಮ್ಮ ದೇಶದಿಂದ ಅಶ್ಶೂರ್ ದೇಶಕ್ಕೆ ಒಯ್ಯಲ್ಪಟ್ಟು ಇಂದಿನವರೆಗೂ ಅಲ್ಲೇ ಇರುತ್ತಾರೆ. ಸಮಾರ್ಯದವರೆನಿಸಿಕೊಳ್ಳುವ ವಿುಶ್ರಜನಾಂಗದವರ ಉತ್ಪತ್ತಿ 24 ಅಶ್ಶೂರದ ಅರಸನು ಸಮಾರ್ಯಪಟ್ಟಣಗಳಲ್ಲಿ ವಾಸವಾಗಿದ್ದ ಇಸ್ರಾಯೇಲ್ಯರನ್ನು ಸೆರೆಯಾಗಿ ಒಯ್ದನಂತರ ಅವರಿಗೆ ಬದಲಾಗಿ ಆ ಪಟ್ಟಣಗಳಿಗೆ ಬಾಬೆಲ್, ಕೂತಾ, ಅವ್ವಾ, ಹಮಾತ್, ಸೆಫರ್ವಯಿಮ್ ಎಂಬ ಊರುಗಳವರನ್ನು ಕಳುಹಿಸಿದನು. ಅವರು ಸಮಾರ್ಯದೇಶವನ್ನು ಸ್ವತಂತ್ರಿಸಿಕೊಂಡು ಅದರ ಪಟ್ಟಣಗಳಲ್ಲಿ ವಾಸಿಸಿದರು. 25 ಅವರಿಗೆ ಆರಂಭದಲ್ಲಿ ಯೆಹೋವನ ಭಯಭಕ್ತಿ ಇರಲಿಲ್ಲವಾದದರಿಂದ ಆತನು ಸಿಂಹಗಳನ್ನು ಕಳುಹಿಸಿದನು; ಅವು ಅವರಲ್ಲಿ ಅನೇಕರನ್ನು ಕೊಂದವು. 26 ಅಶ್ಶೂರದ ಅರಸನ ಸೇವಕರು ತಮ್ಮ ಅರಸನಿಗೆ - ನೀನು ಸಮಾರ್ಯಪಟ್ಟಣಗಳಿಗೆ ಕಳುಹಿಸಿದ ಆಯಾ ಊರುಗಳ ಜನರು ಆ ದೇಶದ ದೇವರಿಗೆ ನಡೆಯತಕ್ಕ ರೀತಿಯನ್ನು ಅರಿಯದವರಾಗಿದ್ದಾರೆ. ಆದದರಿಂದ ಅಲ್ಲಿನ ದೇವರು ಸಿಂಹಗಳನ್ನು ಕಳುಹಿಸಿ ಅವರನ್ನು ಸಂಹರಿಸುತ್ತಿರುತ್ತಾನೆ ಎಂದು ತಿಳಿಸಿದರು. 27 ಆಗ ಅವನು ಅವರಿಗೆ - ಅಲ್ಲಿಂದ ಇಲ್ಲಿಗೆ ಸೆರೆಯವರಾಗಿ ಬಂದಿರುವ ಯಾಜಕರಲ್ಲೊಬ್ಬನನ್ನು ಅಲ್ಲಿಗೆ ಕಳುಹಿಸಿರಿ. ಅವನು ಹೋಗಿ ಅಲ್ಲಿ ವಾಸವಾಗಿದ್ದು ಆ ದೇಶದ ದೇವರಿಗೆ ನಡೆಯತಕ್ಕ ರೀತಿಯನ್ನು ಅವರಿಗೆ ಕಲಿಸಲಿ ಎಂದು ಆಜ್ಞಾಪಿಸಿದನು. 28 ಅವರು ಸಮಾರ್ಯದಿಂದ ಸೆರೆಯವನಾಗಿ ಬಂದಿದ್ದ ಒಬ್ಬ ಯಾಜಕನನ್ನು ಅಲ್ಲಿಗೆ ಕಳುಹಿಸಿದರು. ಇವನು ಬೇತೇಲಿನಲ್ಲಿ ವಾಸವಾಗಿದ್ದು ಜನರಿಗೆ ಯೆಹೋವಭಕ್ತಿಯನ್ನು ಬೋಧಿಸಿದನು. 29 ಆದರೂ ಆ ಜನಾಂಗಗಳವರು ತಮ್ಮ ದೇವತೆವಿಗ್ರಹಗಳನ್ನು ಮಾಡಿಕೊಂಡು ತಾವು ವಾಸಿಸುವ ಊರುಗಳೊಳಗೆ ಸಮಾರ್ಯದವರು ಏರ್ಪಡಿಸಿದ್ದ ಪೂಜಾಸ್ಥಳಗಳಲ್ಲಿ ಅವುಗಳನ್ನಿಟ್ಟು ಪೂಜಿಸುತ್ತಿದ್ದರು. 30 ಬಾಬೆಲಿನವರು ಸುಕ್ಕೋತ್ಬೆನೋತ್, ಕೂತದವರು ನೇರ್ಗಲ್, 31 ಹಮಾತಿನವರು ಅಷೀಮಾ, ಅವ್ವೀಯರು ನಿಭಜ್ ಮತ್ತು ತರ್ತಕ್ ಎಂಬ ದೇವತೆಗಳನ್ನು ಪೂಜಿಸುತ್ತಿದ್ದರು. ಸೆಫರ್ವಯಿವಿುನವರು ತಮ್ಮ ಕುಲದೇವತೆಗಳಾಗಿರುವ ಅದ್ರಮ್ಮೆಲೆಕ್, ಅನಮ್ಮೆಲೆಕ್ ಎಂಬವುಗಳಿಗೋಸ್ಕರ ತಮ್ಮ ಮಕ್ಕಳನ್ನು ಆಹುತಿಕೊಡುತ್ತಿದ್ದರು. 32 ಅವರು ಯೆಹೋವನ ಭಕ್ತರಾಗಿ ಕನಿಷ್ಠಜನರಲ್ಲಿ ಕೆಲವರನ್ನು ಪೂಜಾಸ್ಥಳಗಳ ಯಾಜಕರನ್ನಾಗಿ ನೇವಿುಸಿಕೊಂಡು ಅವರ ಮುಖಾಂತರವಾಗಿ ಪೂಜಾಸ್ಥಳದ ಗುಡಿಗಳಲ್ಲಿ ಆರಾಧನೆ ನಡಿಸುತ್ತಿದ್ದರು. 33 ಯೆಹೋವನ ಭಕ್ತರಾಗಿದ್ದರೂ ತಾವು ಬಿಟ್ಟುಬಂದ ದೇಶಗಳ ಪದ್ಧತಿಯ ಪ್ರಕಾರ ತಮ್ಮ ಕುಲದೇವತೆಗಳ ಆರಾಧನೆಯನ್ನೂ ಮಾಡುತ್ತಿದ್ದರು. 34 ಅವರು ಆ ಕಾಲದಲ್ಲಿ ರೂಢಿಯಾದ ಪದ್ಧತಿಯಂತೆ ಇಂದಿನವರೆಗೂ ನಡೆಯುತ್ತಾರೆ. ಅವರು ಯೆಹೋವನಲ್ಲಿ ಭಯಭಕ್ತಿಯುಳ್ಳವರಲ್ಲ; ಆತನಿಂದ ಇಸ್ರಾಯೇಲನೆಂಬ ಹೆಸರು ಹೊಂದಿದ ಯಾಕೋಬನ ಸಂತಾನದವರಿಗೆ ಕೊಡಲ್ಪಟ್ಟ ಆಜ್ಞಾನಿಯಮ ವಿಧಿಧರ್ಮಶಾಸ್ತ್ರಗಳನ್ನು ಅನುಸರಿಸುವದಿಲ್ಲ. 35 ಯೆಹೋವನು ಇಸ್ರಾಯೇಲ್ಯರಿಗೆ ನೀವು ಅನ್ಯದೇವತೆಗಳನ್ನು ಆರಾಧಿಸಬಾರದು, ಅವುಗಳಿಗೆ ಕೈಮುಗಿಯಲೂ ಬಾರದು, ಸೇವೆಮಾಡಲೂ ಯಜ್ಞವರ್ಪಿಸಲೂಬಾರದು. 36 ನಿಮ್ಮನ್ನು ಮಹಾಶಕ್ತಿ ಭುಜಪರಾಕ್ರಮ ಇವುಗಳ ಮೂಲಕವಾಗಿ ಐಗುಪ್ತದೇಶದಿಂದ ಕರಕೊಂಡುಬಂದ ಯೆಹೋವನಾದ ನನ್ನಲ್ಲಿ ಭಯಭಕ್ತಿಯುಳ್ಳವರಾಗಿ ನನಗೊಬ್ಬನಿಗೇ ಕೈ ಮುಗಿದು ಯಜ್ಞವರ್ಪಿಸಬೇಕು, 37 ನಾನು ನಿಮಗೆ ಬರೆಯಿಸಿಕೊಟ್ಟ ಆಜ್ಞಾನಿಯಮವಿಧಿ ಧರ್ಮಶಾಸ್ತ್ರಗಳನ್ನು ತಪ್ಪದೆ ಕೈಕೊಳ್ಳಬೇಕು, 38 ಅನ್ಯದೇವತೆಗಳನ್ನು ಪೂಜಿಸಬಾರದು, ನನ್ನ ನಿಬಂಧನೆಯನ್ನು ಮರೆತು ಅನ್ಯದೇವತೆಗಳನ್ನು ಪೂಜಿಸಬಾರದು. 39 ನಿಮ್ಮ ದೇವರಾಗಿರುವ ಯೆಹೋವನಾದ ನನ್ನಲ್ಲಿ ಭಯಭಕ್ತಿಯುಳ್ಳವರಾಗಿರಬೇಕು; ಆಗ ನಿಮ್ಮನ್ನು ಎಲ್ಲಾ ಶತ್ರುಗಳ ಕೈಗೆ ಸಿಕ್ಕದಂತೆ ತಪ್ಪಿಸುವೆನು ಎಂದು ಹೇಳಿ ಅವರೊಡನೆ ಒಡಂಬಡಿಕೆ ಮಾಡಿಕೊಂಡನು; 40 ಅವರು ಅದನ್ನು ಲಕ್ಷಿಸದೆ ತಮ್ಮ ಮುಂಚಿನ ಪದ್ಧತಿಗಳನ್ನೇ ಅನುಸರಿಸಿದರು. 41 ಆ ಜನಾಂಗಗಳವರು ಯೆಹೋವ ಭಕ್ತರಾಗಿದ್ದರೂ ತಮ್ಮ ವಿಗ್ರಹಗಳನ್ನೂ ಆರಾಧಿಸುತ್ತಿದ್ದರು. ಅವರ ಸಂತಾನದವರು ಇಂದಿನವರೆಗೂ ಹಾಗೆಯೇ ಮಾಡುತ್ತಿರುತ್ತಾರೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India