Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಅರಸುಗಳು 14 - ಕನ್ನಡ ಸತ್ಯವೇದವು J.V. (BSI)


ಯೆಹೂದದ ಅರಸನಾದ ಅಮಚ್ಯನು

1 ಇಸ್ರಾಯೇಲ್ಯರ ಅರಸನಾದ ಯೆಹೋವಾಹಾಜನ ಮಗ ಯೋವಾಷನ ಆಳಿಕೆಯ ಎರಡನೆಯ ವರುಷದಲ್ಲಿ ಯೆಹೂದದ ಅರಸನಾದ ಯೆಹೋವಾಷನ ಮಗ ಅಮಚ್ಯ ಎಂಬವನು ಅರಸನಾದನು.

2 ಇವನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸಲೇವಿುನಲ್ಲಿ ಇಪ್ಪತ್ತೊಂಭತ್ತು ವರುಷ ಆಳಿದನು. ಯೆರೂಸಲೇವಿುನವಳಾದ ಯೆಹೋವದ್ದೀನ್ ಎಂಬಾಕೆಯು ಇವನ ತಾಯಿ.

3 ಇವನು ತನ್ನ ತಂದೆಯಾದ ಯೆಹೋವಾಷನ ಮಾರ್ಗದಲ್ಲಿ ತಪ್ಪದೆ ನಡೆದು ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾದನು; ಆದರೂ ತನ್ನ ಪೂರ್ವಿಕನಾದ ದಾವೀದನಷ್ಟು ಉತ್ತಮನಾಗಿರಲಿಲ್ಲ.

4 ಇವನ ಕಾಲದಲ್ಲಿ ಪೂಜಾಸ್ಥಳಗಳು ಇನ್ನೂ ತೆಗೆಯಲ್ಪಡಲಿಲ್ಲವಾದದರಿಂದ ಜನರು ಅವುಗಳಲ್ಲಿ ಯಜ್ಞಧೂಪಗಳನ್ನು ಅರ್ಪಿಸುತ್ತಿದ್ದರು.

5 ಇವನು ರಾಜ್ಯವನ್ನು ಭದ್ರಪಡಿಸಿಕೊಂಡ ಕೂಡಲೆ ತನ್ನ ತಂದೆಯನ್ನು ಕೊಂದ ಉದ್ಯೋಗಸ್ಥರಿಗೆ ಮರಣ ವಿಧಿಸಿದನು.

6 ಆದರೆ ಮಕ್ಕಳ ಪಾಪದ ದೆಸೆಯಿಂದ ತಂದೆಗೂ ತಂದೆಯ ಪಾಪದ ದೆಸೆಯಿಂದ ಮಕ್ಕಳಿಗೂ ಮರಣಶಿಕ್ಷೆಯಾಗಬಾರದು; ಪ್ರತಿಯೊಬ್ಬನೂ ತನ್ನ ಪಾಪಫಲವನ್ನು ತಾನೇ ಅನುಭವಿಸಬೇಕು ಎಂಬದಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿರುವ ಯೆಹೋವನ ಅಪ್ಪಣೆಯನ್ನು ನೆನಪುಮಾಡಿಕೊಂಡು ಅವರ ಮಕ್ಕಳನ್ನು ಕೊಲ್ಲಿಸಲಿಲ್ಲ.

7 ಇದಲ್ಲದೆ ಉಪ್ಪಿನತಗ್ಗಿನಲ್ಲಿ ಎದೋಮ್ಯರ ಹತ್ತು ಸಾವಿರ ಮಂದಿ ಸೈನಿಕರನ್ನು ಹೊಡೆದು ಅವರಿಂದ ಸೆಲ ದುರ್ಗವನ್ನು ಕಿತ್ತುಕೊಂಡು ಅದಕ್ಕೆ ಯೊಕ್ತೆಯೇಲ್ ಎಂಬ ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಇದೇ ಹೆಸರಿರುತ್ತದೆ.

8 ಅನಂತರ ಅಮಚ್ಯನು ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಾಯೇಲ್ಯರ ಅರಸನೂ ಆದ ಯೋವಾಷನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ - ನಾವು ಒಬ್ಬರನ್ನೊಬ್ಬರು ಎದುರುಗೊಳ್ಳೋಣ ಬಾ ಎಂದು ಹೇಳಿಸಿದನು.

9 ಆಗ ಇಸ್ರಾಯೇಲ್ಯರ ಅರಸನಾದ ಯೋವಾಷನು ಯೆಹೂದದ ಅರಸನಾದ ಅಮಚ್ಯನಿಗೆ - ಲೆಬನೋನಿನ ಮುಳ್ಳುಗಿಡವು ಅಲ್ಲಿನ ದೇವದಾರುಮರಕ್ಕೆ - ನನ್ನ ಮಗನಿಗೆ ನಿನ್ನ ಮಗಳನ್ನು ಕೊಡು ಎಂದು ಹೇಳಿಕಳುಹಿಸಿತು. ತುಸುಹೊತ್ತಾದ ಮೇಲೆ ಲೆಬನೋನಿನ ಒಂದು ಕಾಡು ಮೃಗವು ಅಲ್ಲಿಂದ ಹಾದುಹೋಗುತ್ತಿರುವಾಗ ಅದನ್ನು ತುಳಿದು ಬಿಟ್ಟಿತು.

10 ನೀನು ಎದೋಮ್ಯರನ್ನು ಸೋಲಿಸಿದದರಿಂದ ಬಹಳವಾಗಿ ಉಬ್ಬಿಕೊಂಡಿದ್ದೀ; ಆ ಕೀರ್ತಿಯು ಸಾಕೆಂದು ನೆನಸಿ ಸುಮ್ಮನೆ ಮನೆಯಲ್ಲಿ ಕೂತುಕೋ. ನನ್ನನ್ನು ಕೆಣಕಿ ನಿನ್ನ ಮೇಲೆಯೂ ನಿನ್ನ ರಾಜ್ಯದ ಮೇಲೆಯೂ ಯಾಕೆ ಕೇಡನ್ನು ಬರಮಾಡಿಕೊಳ್ಳುತ್ತೀ ಎಂದು ಉತ್ತರಕೊಟ್ಟು ಕಳುಹಿಸಿದನು.

11 ಅಮಚ್ಯನು ಇದನ್ನು ಲಕ್ಷಿಸಲಿಲ್ಲವಾದದರಿಂದ ಇಸ್ರಾಯೇಲ್ಯರ ಅರಸನಾದ ಯೋವಾಷನು ಯುದ್ಧಕ್ಕೆ ಹೊರಟನು; ಅವರು ಯೆಹೂದಪ್ರಾಂತದ ಬೇತ್ಷೆಮೆಷಿನಲ್ಲಿ ಒಬ್ಬರನ್ನೊಬ್ಬರು ಎದುರುಗೊಂಡರು.

12 ಯೆಹೂದ್ಯರು ಇಸ್ರಾಯೇಲ್ಯರಿಂದ ಸೋಲಿಸಲ್ಪಟ್ಟು ತಮ್ಮ ತಮ್ಮ ನಿವಾಸಗಳಿಗೆ ಓಡಿಹೋದರು.

13 ಇಸ್ರಾಯೇಲ್ಯರ ಅರಸನಾದ ಯೋವಾಷನು ಅಹಜ್ಯನ ಮೊಮ್ಮಗನೂ ಯೆಹೋವಾಷನ ಮಗನೂ ಯೆಹೂದದ ಅರಸನೂ ಆದ ಅಮಚ್ಯನನ್ನು ಬೇತ್ಷೆಮೆಷಿನಲ್ಲಿ ಹಿಡಿದು ಅವನನ್ನು ಯೆರೂಸಲೇವಿುಗೆ ಕರಕೊಂಡುಬಂದು ಎಫ್ರಾಯೀಮ್ ಬಾಗಲಿಗೂ ಮೂಲೆಯ ಬಾಗಲಿಗೂ ಮಧ್ಯದಲ್ಲಿದ್ದ ಯೆರೂಸಲೇವಿುನ ನಾನೂರು ಮೊಳ ಗೋಡೆಯನ್ನು ಕೆಡವಿಬಿಟ್ಟನು.

14 ಇದಲ್ಲದೆ ಅವನು ಯೆಹೋವನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿ ಸಿಕ್ಕಿದ ಎಲ್ಲಾ ಬೆಳ್ಳಿ ಬಂಗಾರವನ್ನೂ ಪಾತ್ರೆಗಳನ್ನೂ ತೆಗೆದುಕೊಂಡು ಹೊಣೆಗಾಗಿ ಕೆಲವರನ್ನು ಸೆರೆಹಿಡಿದು ಸಮಾರ್ಯಕ್ಕೆ ಹಿಂದಿರುಗಿದನು.

15 ಯೋವಾಷನ ಉಳಿದ ಚರಿತ್ರೆಯೂ ಅವನ ಶೂರಕೃತ್ಯಗಳ ಮತ್ತು ಯೆಹೂದ ರಾಜನಾದ ಅಮಚ್ಯನೊಡನೆ ನಡಿಸಿದ ಯುದ್ಧದ ವಿವರವೂ ಇಸ್ರಾಯೇಲ್‍ರಾಜಕಾಲ ವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.

16 ಅವನು ಪಿತೃಗಳ ಬಳಿಗೆ ಸೇರಲು ಅವನ ಶವವನ್ನು ಸಮಾರ್ಯದೊಳಗೆ ಇಸ್ರಾಯೇಲ್ಯರ ರಾಜಶ್ಮಶಾನಭೂವಿುಯಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಯಾರೊಬ್ಬಾಮನು ಅರಸನಾದನು.

17 ಇಸ್ರಾಯೇಲ್ಯರ ಅರಸನೂ ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತನಂತರ ಯೆಹೂದದ ಅರಸನೂ ಯೆಹೋವಾಷನ ಮಗನೂ ಆದ ಅಮಚ್ಯನು ಇನ್ನೂ ಹದಿನೈದು ವರುಷ ಬದುಕಿದನು.

18 ಅವನ ಉಳಿದ ಚರಿತ್ರೆಯು ಯೆಹೂದರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತದೆ.

19 ಯೆರೂಸಲೇವಿುನವರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿದ್ದರಿಂದ ಅವನು ಲಾಕೀಷಿಗೆ ಓಡಿಹೋದನು; ಆದರೆ ಅವರು ಅಲ್ಲಿಗೆ ಆಳುಗಳನ್ನು ಕಳುಹಿಸಿ ಅವನನ್ನು ಕೊಲ್ಲಿಸಿದರು.

20 ಅವನ ಜನರು ಅವನ ಶವವನ್ನು ಕುದುರೆಗಳಿಂದ ಯೆರೂಸಲೇವಿುಗೆ ತಂದು ದಾವೀದನಗರದೊಳಗೆ ಅವನ ಕುಟುಂಬ ಶ್ಮಶಾನಭೂವಿುಯಲ್ಲಿ ಸಮಾಧಿಮಾಡಿದರು.

21 ಅನಂತರ ಎಲ್ಲಾ ಯೆಹೂದ್ಯರು ಕೂಡಿ ಹದಿನಾರು ವರುಷದವನಾದ ಅಜರ್ಯನನ್ನು ಅವನ ತಂದೆಯಾದ ಅಮಚ್ಯನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು.

22 ಅರಸನು ಪಿತೃಗಳ ಬಳಿಗೆ ಸೇರಿದ ಮೇಲೆ ಇವನು ಏಲತ್ ಎಂಬ ಪಟ್ಟಣವನ್ನು ತಿರಿಗಿ ಯೆಹೂದರಾಜ್ಯಕ್ಕೆ ಸೇರಿಸಿ ಭದ್ರಪಡಿಸಿದನು.


ಇಸ್ರಾಯೇಲ್ಯರ ಅರಸನಾದ ಎರಡನೆಯ ಯಾರೊಬ್ಬಾಮನು

23 ಯೆಹೂದದ ಅರಸನೂ ಯೆಹೋವಾಷನ ಮಗನೂ ಆದ ಅಮಚ್ಯನ ಆಳಿಕೆಯ ಹದಿನೈದನೆಯ ವರುಷದಲ್ಲಿ ಇಸ್ರಾಯೇಲ್ಯರ ಅರಸನಾದ ಯೋವಾಷನ ಮಗ ಯಾರೊಬ್ಬಾಮನು ಅರಸನಾಗಿ ಸಮಾರ್ಯದಲ್ಲಿ ನಾಲ್ವತ್ತೊಂದು ವರುಷ ಆಳಿದನು.

24 ಇವನು ಇಸ್ರಾಯೇಲ್ಯರನ್ನು ಪಾಪಕ್ಕೆ ಪ್ರೇರಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.

25 ಇಸ್ರಾಯೇಲ್‍ದೇವರಾದ ಯೆಹೋವನು ತನ್ನ ಸೇವಕನೂ ಗತ್‍ಹೇಫೆರಿನವನಾದ ಅವಿುತ್ತೈಯ ಮಗನೂ ಆದ ಯೋನಾ ಎಂಬ ಪ್ರವಾದಿಯ ಮುಖಾಂತರವಾಗಿ ಮುಂತಿಳಿಸಿದಂತೆ ಹಮಾತಿನ ದಾರಿಯಿಂದ ಅರಾಬಾ ತಗ್ಗಿನ ಸಮುದ್ರದವರೆಗಿದ್ದ ಇಸ್ರಾಯೇಲ್ಯರ ಮೇರೆಯನ್ನು ತಿರಿಗಿ ತೆಗೆದುಕೊಂಡವನು ಇವನೇ.

26 ಇಸ್ರಾಯೇಲ್ಯರು ಘೋರಕಷ್ಟವನ್ನು ಅನುಭವಿಸುತ್ತಿರುತ್ತಾರೆ, ಅವರಲ್ಲಿದ್ದ ಸ್ವತಂತ್ರರೂ ಪರತಂತ್ರರೂ ನಾಶವಾಗಿದ್ದಾರೆ, ಅವರನ್ನು ರಕ್ಷಿಸುವವನು ಒಬ್ಬನೂ ಇಲ್ಲ ಎಂಬದನ್ನು ಯೆಹೋವನು ನೋಡಿ

27 ಅವರನ್ನು ಭೂಲೋಕದಿಂದ ನಿರ್ನಾಮ ಮಾಡುವದಕ್ಕೆ ಮನಸ್ಸಿಲ್ಲದೆ ಯೋವಾಷನ ಮಗನಾದ ಯಾರೊಬ್ಬಾಮನ ಮುಖಾಂತರವಾಗಿ ರಕ್ಷಿಸಿದನು.

28 ಯಾರೊಬ್ಬಾಮನ ಉಳಿದ ಚರಿತ್ರೆಯೂ ಅವನು ಯುದ್ಧದಲ್ಲಿ ನಡಿಸಿದ ಶೂರಕೃತ್ಯಗಳೂ ಮೊದಲು ಯೆಹೂದ್ಯರ ಸ್ವಾಧೀನದಲ್ಲಿದ್ದ ದಮಸ್ಕ ಹಮಾತ್ ಎಂಬ ಪಟ್ಟಣಗಳು ಅವನಿಂದ ಇಸ್ರಾಯೇಲ್ ರಾಜ್ಯಕ್ಕೆ ಸೇರಿಸಲ್ಪಟ್ಟ ವಿವರವೂ ಇಸ್ರಾಯೇಲ್‍ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.

29 ಅವನು ಇಸ್ರಾಯೇಲ್‍ರಾಜರಾಗಿದ್ದ ತನ್ನ ಪಿತೃಗಳ ಬಳಿಗೆ ಸೇರಲು ಅವನಿಗೆ ಬದಲಾಗಿ ಅವನ ಮಗನಾದ ಜೆಕರ್ಯನು ಅರಸನಾದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು